ADVERTISEMENT

ಒಳನೋಟ: ಸಾಕಾರವಾಗದ ಸ್ವಚ್ಛಭಾರತ

ಜಿ.ಬಿ.ನಾಗರಾಜ್
Published 12 ಏಪ್ರಿಲ್ 2025, 23:30 IST
Last Updated 12 ಏಪ್ರಿಲ್ 2025, 23:30 IST
<div class="paragraphs"><p>ಮೈಸೂರು ತಾಲ್ಲೂಕಿನ ಸಿದ್ಧಲಿಂಗಪುರ ಗ್ರಾಮ ಪಂಚಾಯತಿಯ -ಘನ ತ್ಯಾಜ್ಯ ಸಂಪನ್ಮೂಲ ನಿರ್ವಾಣ ಘಟಕದ ಪಕ್ಕ ಬಿದ್ದಿದ್ದ ಕಸದ ರಾಶಿ&nbsp; </p></div>

ಮೈಸೂರು ತಾಲ್ಲೂಕಿನ ಸಿದ್ಧಲಿಂಗಪುರ ಗ್ರಾಮ ಪಂಚಾಯತಿಯ -ಘನ ತ್ಯಾಜ್ಯ ಸಂಪನ್ಮೂಲ ನಿರ್ವಾಣ ಘಟಕದ ಪಕ್ಕ ಬಿದ್ದಿದ್ದ ಕಸದ ರಾಶಿ 

   

ಪ್ರಜಾವಾಣಿ ಚಿತ್ರ

ದಾವಣಗೆರೆ: ಘಂಟೆಯ ಸದ್ದು ಕಿವಿಗೆ ಬೀಳುತ್ತಿದ್ದಂತೆಯೇ ಮಹಿಳೆಯರು ಕಸದ ಬುಟ್ಟಿಗಳನ್ನು ಹಿಡಿದು ಮನೆಯಿಂದ ಹೊರಬರುತ್ತಿದ್ದರು. ಎಲೆಕ್ಟ್ರಿಕ್‌ ವಾಹನವನ್ನು ಮಗ ಚಾಲನೆ ಮಾಡುತ್ತಿದ್ದರೆ ತಾಯಿ ಕಸ ಸಂಗ್ರಹಿಸುತ್ತಿದ್ದರು. ದಾವಣಗೆರೆ ತಾಲ್ಲೂಕಿನ ಕೈದಾಳೆ ಗ್ರಾಮದಲ್ಲಿ ನಿತ್ಯವೂ ನಡೆಯುತ್ತಿದ್ದ ಈ ಕಾಯಕ ಈಗ ಸಂಪೂರ್ಣ ಸ್ಥಗಿತಗೊಂಡಿದೆ.

ADVERTISEMENT

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಐ.ಸಿ. ವಿದ್ಯಾವತಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೈದಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಕ್ಕೆ ಮುನ್ನುಡಿ ಬರೆದಿದ್ದರು. ಮೂರು ವರ್ಷ ನಿರಂತರವಾಗಿ ನಡೆದ ಈ ಕಾಯಕದ ಫಲವಾಗಿ ‘ಗಾಂಧಿ ಗ್ರಾಮ ಪುರಸ್ಕಾರ’ ಅರಸಿ ಬಂದಿತ್ತು. ಪಿಡಿಒ ಬೇರೆಡೆ ವರ್ಗಾವಣೆಯಾದ ಬಳಿಕ ಮನೆ–ಮನೆ ಕಸ ಸಂಗ್ರಹ ಕಾರ್ಯ ಅಲ್ಲಿಗೇ ನಿಂತುಹೋಯಿತು.

ಮೈಸೂರು ತಾಲ್ಲೂಕಿನ ನಾಗಾವಲ‌ ಗ್ರಾಮ ಪಂಚಾಯಿತಿಯಲ್ಲಿ ‘ಸ್ವಚ್ಛ ಭಾರತ ಮಿಷನ್‌’ (ಗ್ರಾಮೀಣ) ಯಶಸ್ವಿ ಆಗಿತ್ತು. ಪಿಡಿಒ ಡಾ.ಎಂ.ಶೋಭಾರಾಣಿ ಕಾಳಜಿಯಿಂದಾಗಿ ಕಸ ಸಂಗ್ರಹ ಹಾಗೂ ವಿಲೇವಾರಿ ಅತ್ಯುತ್ತಮ ವಾಗಿ ನಡೆದು ಗಮನ ಸೆಳೆದಿತ್ತು. ಅವರು ವರ್ಗಾವಣೆಯಾದ ಬಳಿಕ ಯೋಜನೆಯೂ ಕಳೆಗುಂದಿತು.

ಜಗಳೂರು ತಾಲ್ಲೂಕಿನ ಪಲ್ಲಾಗಟ್ಟೆ ಗ್ರಾಮದ ‘ವ್ಯಥೆ’ ಕೊಂಚ ಭಿನ್ನವಾಗಿದೆ. ಕಸ ಸಂಗ್ರಹ ವಾಹನ ‘ಸ್ವಚ್ಛ ವಾಹಿನಿ’ ಚಾಲನೆಯ ತರಬೇತಿ ಪಡೆದ ಲಕ್ಷ್ಮಿ 9 ತಿಂಗಳು ಗ್ರಾಮದ ನೈರ್ಮಲ್ಯ ಕಾಪಾಡಿದರು. ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ (ಎನ್‌ಆರ್‌ಎಲ್‌ಎಮ್‌) ಒತ್ತಾಸೆಯ ಮೇರೆಗೆ ಗೌರವಧನ ಇಲ್ಲದಿದ್ದರೂ ಕಸ ಸಂಗ್ರಹಿಸುವ ಕಾರ್ಯವನ್ನು ಕೈಬಿಡಲಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಕಾರಾತ್ಮಕವಾಗಿ ಸ್ಪಂದಿಸದ ಪರಿಣಾಮ ಕೆಲಸದಿಂದ ವಿಮುಖರಾದರು. ಕಸ ಮುಕ್ತವಾಗಿದ್ದ ಗ್ರಾಮದಲ್ಲಿ ಅನೈರ್ಮಲ್ಯ ಕಣ್ಣಿಗೆ ರಾಚುತ್ತಿದೆ.

ಗ್ರಾಮಗಳನ್ನು ಕಸಮುಕ್ತಗೊಳಿಸಿ ನಿರ್ಮಲ ಪರಿಸರದ ಕನಸು ಬಿತ್ತಿದ್ದ ‘ಸ್ವಚ್ಛ ಭಾರತ ಮಿಷನ್‌’ ಅಭಿವೃದ್ಧಿ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ. ಕಾಳಜಿ ಇರುವ ಕೆಲ ಪಿಡಿಒಗಳು ಕಸ ಸಂಗ್ರಹಕ್ಕೆ ಹಾಕಿದ ಅಡಿಪಾಯವೂ ಭದ್ರವಾಗಿ ಉಳಿಯುತ್ತಿಲ್ಲ. ರಾಜ್ಯದ ಕೆಲವೇ ಗ್ರಾಮ ಪಂಚಾಯಿತಿಗಳಲ್ಲಿ ಕಸ ಸಂಗ್ರಹ ಕೆಲಸ ಅತ್ಯುತ್ತಮವಾಗಿ ನಡೆಯುತ್ತಿದೆ. ಉಳಿದೆಡೆ ಈ ಯೋಜನೆ ದಾರಿ ತಪ್ಪಿದೆ.

ರಾಜ್ಯದ 5,962 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಸ್ವಚ್ಛ ಭಾರತ’ ಮಿಷನ್‌ ಅನುಷ್ಠಾನಕ್ಕೆ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ಉತ್ಪತ್ತಿಯಾಗುವ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಪಂಚಾಯಿತಿ ಮಟ್ಟದಲ್ಲೇ ರೂಪಿಸಲಾಗಿದೆ. ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ಈ ಘನತ್ಯಾಜ್ಯ ನಿರ್ವಹಣೆಯ ಹೊಣೆಯನ್ನು ಸ್ಥಳೀಯ ಸ್ವ–ಸಹಾಯ ಸಂಘಗಳಿಗೆ ನೀಡಲಾಗಿದೆ. ಕರಾವಳಿ, ಮಲೆನಾಡು ಹಾಗೂ ಬೆಂಗಳೂರು ಸುತ್ತಲಿನ ಕೆಲ ಜಿಲ್ಲೆಗಳಲ್ಲಿ ಒಂದಷ್ಟು ಮಟ್ಟಿಗೆ ಇದು ಸಾಕಾರಗೊಂಡಿದೆ. ಕಸವನ್ನು ರಸವಾಗಿ ಪರಿವರ್ತಿಸಿ ಆದಾಯದ ಮೂಲವನ್ನಾಗಿ ಮಾಡಿಕೊಳ್ಳಲಾಗಿದೆ. ಇಂತಹ ಯಶಸ್ಸು ರಾಜ್ಯದ ಎಲ್ಲೆಡೆ ಸಿಕ್ಕಿಲ್ಲ.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್‌ ಗ್ರಾಮ ಪಂಚಾಯಿತಿಗೆ ಶಶಿಕುಮಾರ್‌ ಮಂಟೂರು ಅಭಿವೃದ್ಧಿ ಅಧಿಕಾರಿಯಾಗಿ ಬಂದಾಗ ಮನೆ–ಮನೆ ಕಸ ಸಂಗ್ರಹ ಆರಂಭವಾಗಿರಲಿಲ್ಲ. ಟ್ರ್ಯಾಕ್ಟರ್‌ ಮೂಲಕ ಶುರುವಾದ ಈ ಕಾರ್ಯಕ್ಕೀಗ ಸುಸಜ್ಜಿತ ವಾಹನವಿದೆ. ಕಸ ಸಂಗ್ರಹಿಸುವ ಮಹಿಳೆಯರ ಜೊತೆಗೆ ಪಿಡಿಒ ಆಗಾಗ ಗ್ರಾಮದಲ್ಲಿ ಸಂಚರಿಸುತ್ತಾರೆ. ಕಸ ಎಲ್ಲೆಂದರಲ್ಲಿ ಎಸೆಯುವವರಿಗೆ ಎಚ್ಚರಿಕೆ ನೀಡಿ ಅರಿವು ಮೂಡಿಸಿದ್ದಾರೆ. ಆರು ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಗ್ರಾಮದಲ್ಲಿ ಸ್ವಚ್ಛ ಪರಿಸರ ನಿರ್ಮಾಣವಾಗಿದೆ. ಇಂತಹ ಉತ್ಸಾಹ ಎಲ್ಲೆಡೆ ಕಾಣದಿರುವುದರಿಂದ ‘ಸ್ವಚ್ಛ ಭಾರತ’ದ ಕನಸು ಸಾಕಾರಗೊಳ್ಳುತ್ತಿಲ್ಲ.

ಕಸ ಸಂಗ್ರಹಿಸುವ ‘ಸ್ವಚ್ಛ ವಾಹಿನಿ’, ವಿಲೇವಾರಿ ಘಟಕ ‘ಸ್ವಚ್ಛ ಸಂಕೀರ್ಣ’ ನಿರ್ಮಾಣ ಬಹುತೇಕ ಎಲ್ಲ ಗ್ರಾಮ ಪಂಚಾಯಿತಿಯಲ್ಲಿವೆ. ವಾಹನ ಚಾಲನೆ, ಕಸ ಸಂಗ್ರಹ ಹಾಗೂ ವಿಲೇವಾರಿಗೆ ಸಂಬಂಧಿಸಿದಂತೆ ಮಹಿಳೆಯರಿಗೆ ತರಬೇತಿ ಕೂಡ ನೀಡಲಾಗಿದೆ. ಹಸಿ ಕಸ, ಒಣ ಕಸ ಹಾಗೂ ಅಪಾಯಕಾರಿ ತ್ಯಾಜ್ಯಗಳನ್ನು ಮೂಲದಲ್ಲಿಯೇ ಬೇರ್ಪಡಿಸಲು ಮನೆಗಳಿಗೆ ಕಸದ ಬುಟ್ಟಿ ವಿತರಿಸಲಾಗಿದೆ. ಆದರೂ ಯೋಜನೆಯ ಅನುಷ್ಠಾನದಲ್ಲಿ ಎದುರಾದ ತೊಡಕು, ಜನರಲ್ಲಿ ಜಾಗೃತವಾಗದ ನಾಗರಿಕ ಪ್ರಜ್ಞೆ ಸೇರಿದಂತೆ ಹಲವು ಸಿಕ್ಕುಗಳ ನಡುವೆ ಸಿಲುಕಿ ಯೋಜನೆ ನಲುಗುತ್ತಿದೆ.

ಕಳೆದ ವರ್ಷ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಬಿಡುಗಡೆ ಮಾಡಿದ ವರದಿ ಪ್ರಕಾರ ರಾಜ್ಯದ 4,530 ಮಹಿಳೆಯರಿಗೆ ವಾಹನ ಚಾಲನಾ ತರಬೇತಿ ನೀಡಲಾಗಿದೆ. ಇದರಲ್ಲಿ 2,826 ಮಹಿಳೆಯರು ‘ಸ್ವಚ್ಛ ವಾಹಿನಿ’ ಚಾಲನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ದಾಖಲೆಗಳಲ್ಲಿದೆ. ವಾಸ್ತವ ಪರಿಸ್ಥಿತಿ ಹೆಚ್ಚು ಖುಷಿ ಕೊಡುವಂತೇನೂ ಇಲ್ಲ.

‘ಕಸ ಸಂಗ್ರಹಿಸಲು ವಾಹನಗಳು ವಾರಕ್ಕೊಮ್ಮೆ ಮಾತ್ರ ಬರುತ್ತಿವೆ. ಜಾಸ್ತಿ ಕಸ ಕೊಟ್ಟರೆ ಸಿಬ್ಬಂದಿ ತಕರಾರು ಮಾಡುತ್ತಾರೆ. ಕೆಲವೊಮ್ಮೆ ಮಧ್ಯಾಹ್ನದ ವೇಳೆ ಬರುವುದರಿಂದ ಕಸ ಕೊಡಲು ಯಾರೂ ಇರುವುದಿಲ್ಲ. ಆ ಸಮಯದಲ್ಲಿ ನಾವು ಕೃಷಿ ಕೆಲಸಕ್ಕೆ ಬಹುತೇಕರು ಜಮೀನುಗಳಿಗೆ ಹೋಗಿರುತ್ತೇವೆ’ ಎಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅಂಚೆಚಿಟ್ಟನಹಳ್ಳಿಯ ಮಂಗಳಾ ದೂರುತ್ತಾರೆ‌.

ಕಸ ಸಂಗ್ರಹಿಸುವ ಪ್ರತಿಯೊಬ್ಬರಿಗೆ ₹5,500 ವೇತನವನ್ನು ಗ್ರಾಮ ಪಂಚಾಯಿತಿ ನಿಗದಿಪಡಿಸಿದೆ. ಕಸ ಸಂಗ್ರಹಿಸುವ ಮನೆಗಳಿಂದ ಪ್ರತಿ ದಿನಕ್ಕೆ ₹1ರಂತೆ ತಿಂಗಳಿಗೆ ₹30 ಸಂಗ್ರಹಿಸಬೇಕಿದೆ. ‘ಕಸವನ್ನು ಕೊಟ್ಟು ಹಣವನ್ನೂ ನೀಡಬೇಕೇ?’ ಎಂಬುದು ಜನರ ಪ್ರಶ್ನೆ. ರಾಜ್ಯದ ಬೆರಳೆಣಿಕೆಯ ಗ್ರಾಮ ಪಂಚಾಯಿತಿ
ಗಳಲ್ಲಿ ಮಾತ್ರ ಪ್ರತಿ ತಿಂಗಳು ₹20 ಕಸ ಸಂಗ್ರಹದ ಶುಲ್ಕವನ್ನು ಜನರು ಪಾವತಿಸುತ್ತಿದ್ದಾರೆ.

ಸಂಪನ್ಮೂಲ ಸಂಗ್ರಹ ಕೊರತೆಯಿಂದ ‘ಸ್ವಚ್ಛ ವಾಹಿನಿ’ ಸಿಬ್ಬಂದಿಗೆ ಗೌರವಧನ ನೀಡಲು ಗ್ರಾಮ ಪಂಚಾಯಿತಿಗೆ ಆಗುತ್ತಿಲ್ಲ. ನಿಗದಿತ ವೇತನ ಸಿಗದೇ ಅನೇಕರು ಈ ಕೆಲಸದಿಂದ ವಿಮುಖ
ರಾಗಿದ್ದಾರೆ. ತುಮಕೂರು ಜಿಲ್ಲೆಯ ‘ಸ್ವಚ್ಛ ವಾಹಿನಿ’ ಚಾಲಕಿಯರು ಹಾಗೂ ಸಹಾಯಕಿಯರಿಗೆ ಗ್ರಾಮ ಪಂಚಾಯಿತಿಗಳಿಂದ ಎಂಟು ತಿಂಗಳಿಂದ ಸಂಬಳ ಪಾವತಿಯಾಗಿಲ್ಲ.

‘ಸ್ವಚ್ಛ ವಾಹಿನಿಗೆ ಡೀಸೆಲ್‌ ಹಾಕಿಸಲು ಹಣವಿಲ್ಲ. ವೇತನ ನಿಯಮಿತವಾಗಿ ಸಿಗುತ್ತಿಲ್ಲ ಎಂಬ
ಕಾರಣಕ್ಕೆ ಸಹಾಯಕಿ ಬರುತ್ತಿಲ್ಲ. ಗ್ರಾಮ ಪಂಚಾಯಿತಿಅಭಿವೃದ್ಧಿ ಅಧಿಕಾರಿ ಸರಿಯಾಗಿ ಸ್ಪಂದಿಸುತ್ತಿಲ್ಲ.
ಇದರಿಂದ ಯೋಜನೆಗೆ ಹಿನ್ನಡೆಯಾಗಿದೆ’ ಎಂದು ತುಮಕೂರು ಜಿಲ್ಲೆಯ ಸ್ವಚ್ಛ ವಾಹಿನಿ ಚಾಲಕಿಯೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತೆರಿಗೆಯಲ್ಲಿ ಕಸ ವಿಲೇವಾರಿಗೂ ನಿರ್ದಿಷ್ಟ ಭಾಗವನ್ನು ಮೀಸಲಿಡುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ವಾಣಿಜ್ಯ ಚಟುವಟಿಕೆಗಳಿಗೆ ತೆರೆದುಕೊಂಡ ಹಾಗೂ ನಗರ, ಪಟ್ಟಣದ ಸಮೀಪದಲ್ಲಿರುವ ಪಂಚಾಯಿತಿಗಳಲ್ಲಿ ಮಾತ್ರ ಕಸ ವಿಲೇವಾರಿಗೂ ವ್ಯಯ ಮಾಡುವಷ್ಟು ಹಣಕಾಸಿನ ಲಭ್ಯತೆ ಇದೆ. ಕಸದ ಶುಲ್ಕ, ಕರ ವಸೂಲಿ ಆಗದಿರುವ ಪಂಚಾಯಿತಿಗಳಲ್ಲಿ ಕಸ ಸಂಗ್ರಹಿಸುವ ಮಹಿಳೆಯರಿಗೆ ಗೌರವಧನ ನೀಡಲೂ ಸಾಧ್ಯವಾಗುತ್ತಿಲ್ಲ.

‘ಸಣ್ಣ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಸಂಗ್ರಹ ಪ್ರಮಾಣ ಕಡಿಮೆ. ಬರುವ ಆದಾಯದಲ್ಲಿ ಕಸ ಸಂಗ್ರಹ ವಾಹನಕ್ಕೆ ಇಂಧನ ಪೂರೈಕೆ, ಕಸ ವಿಂಗಡಣೆ ಮತ್ತು ಕಸ ಸಂಗ್ರಹಿಸುವ ಸ್ವ–ಸಹಾಯ ಸಂಘಗಳ ಪ್ರತಿ
ನಿಧಿಗಳಿಗೆ ಗೌರವಧನ ಪಾವತಿಸಲು ಸಾಲುತ್ತಿಲ್ಲ’ ಎಂದು ಕಾರವಾರ ತಾಲ್ಲೂಕಿನ ಕಡವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ ನಾಯ್ಕ ದೂರುತ್ತಾರೆ.

ಕಸ ಸಂಗ್ರಹಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ಪ್ರತಿ ಮನೆಗೆ ನೀಡಿದ್ದ ಎರಡು ಬಣ್ಣಗಳ ಬುಟ್ಟಿಗಳು ನಿಗದಿತ ಉದ್ದೇಶಕ್ಕೆ ಬಳಕೆ ಆಗುತ್ತಿಲ್ಲ. ಕೆಲ ಜನರು ಇವುಗಳಲ್ಲಿ ಕಾಳು, ಹಿಟ್ಟು ತುಂಬಿದ್ದಾರೆ. ನೀರು ಹಿಡಿದಿಡಲು, ಬಟ್ಟೆ ತೊಳೆಯಲು ಇವು ಉಪಯೋಗವಾಗುತ್ತಿವೆ. ಕಸದ ಬುಟ್ಟಿ, ‘ಸ್ವಚ್ಛ ವಾಹಿನಿ’ ಹಾಗೂ ‘ಸ್ವಚ್ಛ ಸಂಕೀರ್ಣ’ ನಿರ್ಮಾಣವೂ ಸೇರಿ ಹಲವು ಉದ್ದೇಶಗಳಿಗೆ ಹರಿಸಿದ ಹಣದ ಹೊಳೆಯಲ್ಲಿ ಕಸದ ಕೊಳೆ ತೊಳೆಯಲು ಸಾಧ್ಯವಾಗುತ್ತಿಲ್ಲ.

‘ಸ್ವಚ್ಛ ಸಂಕೀರ್ಣ’ದ ಪ್ರತಿ ಘಟಕಕ್ಕೆ ₹16 ಲಕ್ಷದಿಂದ ₹25 ಲಕ್ಷದ ವರೆಗೆ ವೆಚ್ಚ ಮಾಡಲಾಗಿದೆ. ವಾಹಿನಿಯ ಮೂಲಕ ತಂದ ಕಸವನ್ನು ಇಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಚನ್ನಗಿರಿ ತಾಲ್ಲೂಕಿನ ತಾವರೆಕೆರೆ ಗ್ರಾಮ ಪಂಚಾಯಿತಿ ಘಟಕ, ಮೈಸೂರು ತಾಲ್ಲೂಕಿನ ಸಿದ್ಧಲಿಂಗಪುರದಲ್ಲಿ ಘಟಕದ ಸುತ್ತ ಕಸದ ರಾಶಿ ಬಿದ್ದಿದೆ. ಈ ಕಸವನ್ನು ವಿಂಗಡಿಸಿ ವಿಲೇವಾರಿ ಮಾಡಬೇಕಾದ ಸಿಬ್ಬಂದಿ ಇದಕ್ಕೆ ಬೆಂಕಿ ಹಾಕಿ ದಹಿಸುತ್ತಿದ್ದಾರೆ.

ಒಟ್ಟಾರೆಯಾಗಿ ರಾಜ್ಯದಲ್ಲಿ ‘ಸ್ವಚ್ಛ ಭಾರತ’ ಮಿಷನ್‌ ಭಾಗಶಃ ಯಶಸ್ವಿಯಾಗುತ್ತಿದೆ. ಕೆಲವೇ ಕೆಲವು ಯಶಸ್ವಿ ಮಾದರಿಗಳೂ ಪಿಡಿಒ ವರ್ಗಾವಣೆಯ ನಂತರ ತೆವಳುತ್ತಿವೆ ಇಲ್ಲವೇ ಜೀವ ಕಳೆದುಕೊಂಡಿವೆ. ಯಶಸ್ವಿ ಮಾದರಿಗಳಲ್ಲೂ ಕಸ ಪುನರ್‌ಬಳಕೆ ತೊಡಕಾಗಿದೆ. ಎಲ್ಲಾ ಜಿಲ್ಲಾ ಪಂಚಾಯ್ತಿಗಳು ಮೆಟೀರಿಯಲ್ ರಿಕವರಿ ಫೆಸಿಲಿಟಿ (ಎಂಆರ್‌ಎಫ್) ಮೂಲಕ ಪುನರ್‌ಬಳಕೆ ಮಾಡಬಹುದಾದ ವಸ್ತುಗಳನ್ನು ಸಂಗ್ರಹಿಸಿ ಮರುಬಳಕೆ ವ್ಯವಸ್ಥೆಗೆ ನೀಡುವ ಜವಾಬ್ದಾರಿ ಹೊತ್ತರೆ ಸ್ವಚ್ಛ ಭಾರತಕ್ಕೆ ಜೀವ ಬರಬಹುದು.

ಕಾರ್ಮೋಡದ ನಡುವೆ ಕೋಲ್ಮಿಂಚು

ಸರಣಿ ಸವಾಲು ನಡುವೆಯೂ ರಾಜ್ಯದ ಹಲವು ಪಂಚಾಯಿತಿಗಳಲ್ಲಿ ಈ ಯೋಜನೆಗೆ ಯಶಸ್ಸು ಲಭಿಸಿದೆ. ಕಸ ಸಂಗ್ರಹಿಸಿ, ಅದನ್ನು ಬೇರ್ಪಡಿಸಿ, ಗುಜರಿಗೆ ಮಾರಿ ಆದಾಯ ಗಳಿಸಿ ಕಾರ್ಮೋಡಗಳ ನಡುವೆ ಕೋಲ್ಮಿಂಚಿನಂತೆ ಗಮನ ಸೆಳೆಯುತ್ತಿವೆ.

ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ‘ಎನ್‌ಆರ್‌ಎಲ್‌ಎಂ’ ಸ್ವ–ಸಹಾಯ ಸಂಘಗಳ ಮಹಿಳೆಯರು ತ್ಯಾಜ್ಯ ಸಂಗ್ರಹಕ್ಕೆ ಕೈ ಜೋಡಿಸಿದ್ದಾರೆ. ಹಲವೆಡೆ ಹಸಿ ಕಸದಿಂದ ಕಾಂಪೋಸ್ಟ್ ತಯಾರಿಕೆ ನಡೆದಿದ್ದರೆ, ಇನ್ನೂ ಕೆಲವೆಡೆ ತ್ಯಾಜ್ಯ ಸಂಸ್ಕರಣೆಯಂತಹ ಘಟಕಗಳನ್ನು ಸ್ಥಾಪಿಸಿ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಮಾರಾಟ ಮಾಡಿ ಆದಾಯ ಗಳಿಸಲಾಗುತ್ತಿದೆ.

ಕೊಪ್ಪಳ ತಾಲ್ಲೂಕಿನ ಲೇಬಗೇರಿ, ಕಾರಟಗಿ ತಾಲ್ಲೂಕಿನ ಬೆನ್ನೂರು ಸೇರಿ ಜಿಲ್ಲೆಯ 12 ಗ್ರಾಮ ಪಂಚಾಯಿತಿಗಳು ಸ್ವಚ್ಛಭಾರತ ಯೋಜನೆಯಡಿ ಆದಾಯದ ಮೂಲ ಸೃಷ್ಟಿಸಿಕೊಂಡಿವೆ. ದಾವಣಗೆರೆ ಜಿಲ್ಲೆಯ ಚೀಲೂರು, ಸಂತೆಬೆನ್ನೂರು, ಕುರ್ಕಿ, ಆವರಗೊಳ್ಳ, ಸವಳಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸವು ರಸವಾಗಿ ಪರಿವರ್ತನೆಯಾಗಿದೆ.

ಕಸ ನಿರ್ವಹಣೆಗೆ ‘ಹಸಿರು ದಳ’

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಹಸಿರು ದಳ’ವು ಗ್ರಾಮೀಣ ಕಸ ವಿಲೇವಾರಿಗೆ ಬೃಹತ್ ಯೋಜನೆಯನ್ನು ಜಾರಿಗೆ ತಂದಿದೆ. 10 ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ಸಂಗ್ರಹ ಮತ್ತು ನಿರ್ವಹಣೆ ಮಾಡುತ್ತಿರುವ ದಳ, ವಿಲೇವಾರಿ ಘಟಕಗಳನ್ನೂ ಸ್ಥಾಪಿಸಿದೆ. ತ್ಯಾಜ್ಯ ಸಂಗ್ರಹಿಸುವಾಗ ಮರುಬಳಕೆ ಸಾಧ್ಯತೆ ಇರುವ ವಸ್ತುಗಳನ್ನು ಪ್ರತ್ಯೇಕವಾಗಿಸಿ ಮಾರಾಟ ಮಾಡಲಾಗುತ್ತದೆ. ಇದರಿಂದ ಬರುವ ಆದಾಯದ ಒಂದಂಶವನ್ನು ‘ಸಂಜೀವಿನಿ’ಗೆ ನೀಡಲಾಗುತ್ತದೆ. ಇದರಿಂದ ಅವರ ಆದಾಯವೂ ಹೆಚ್ಚಾಗಿದೆ. ಹಸಿ ಕಸದಿಂದ ಗೊಬ್ಬರ ತಯಾರಿಕೆಯೂ ಆಗುತ್ತಿದೆ.

ಬಂಟ್ವಾಳ ತಾಲ್ಲೂಕಿನ ಮಾಣಿ ಸಮೀಪದ ಕಡೇಶಿವಾಲ್ಯ ಗ್ರಾಮದ ಸಂಜೀವಿನಿ ಒಕ್ಕೂಟದ ಮಹಿಳೆಯರು ಹಸಿಕಸವನ್ನು ಗೊಬ್ಬರವಾಗಿ ಪರಿವರ್ತಿಸುತ್ತಿದ್ದಾರೆ. ಇದರ ಸದುಪಯೋಗ ಮಾಡುವುದಕ್ಕಾಗಿ ವಿಲೇವಾರಿ ಘಟಕದ ಸಮೀಪದಲ್ಲೇ ಕೃಷಿ ಮಾಡುತ್ತಾರೆ.

‘ಸ್ಯಾನಿಟರಿ ಪ್ಯಾಡ್‌, ನ್ಯಾಪ್‌ಕಿನ್‌ನಂಥ ‘ರಿಜೆಕ್ಟೆಡ್‌ ವೇಸ್ಟ್‌’ ಅನ್ನು ತಾವಾಗಿಯೇ ಯಾರೂ ವಿಲೇವಾರಿ ಮಾಡುತ್ತಿಲ್ಲ. ಅದನ್ನು ಜಲಮೂಲಗಳಿಗೆ ಎಸೆಯುವುದರಿಂದ ದೊಡ್ಡ ಸಮಸ್ಯೆ ಸೃಷ್ಟಿಯಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಇನ್ನೂ ಸಾಧ್ಯವಾಗಲಿಲ್ಲ’ ಎಂದು ‘ಹಸಿರು ದಳ’ದ ವ್ಯವಸ್ಥಾಪಕ ನಾಗರಾಜ್ ಅಂಚನ್ ತಿಳಿಸಿದರು.

ಕಲಬುರಗಿ ಕಾರ್ಖಾನೆಗೆ ಕೊಡಗಿನ ಕಸ

ಕೊಡಗು ಜಿಲ್ಲೆಯಲ್ಲಿ ಸಂಗ್ರಹವಾಗುವ ಕಸ ಕಲಬುರಗಿ ತಲುಪಿ ಅಲ್ಲಿ ಮರು ಬಳಕೆಯಾಗುತ್ತಿದೆ. ಸಿಮೆಂಟ್‌ ಕಾರ್ಖಾನೆಯಲ್ಲಿ ಒಣ ತ್ಯಾಜ್ಯವನ್ನು ಬಳಸಿ ರಸ್ತೆಗೆ ಹಾಕುವ ಡಾಂಬರ್‌ ಸ್ವರೂಪದ ವಸ್ತುವನ್ನು ಉತ್ಪಾದಿಸಲಾಗುತ್ತಿದೆ.

ಕೊಡಗಿನ ಬಹುತೇಕ ಹೋಂ ಸ್ಟೇ, ರೆಸಾರ್ಟ್‌ ಹಾಗೂ ಹೋಟೆಲ್‌ಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಬರುತ್ತವೆ. ಇಲ್ಲಿ ಸೃಷ್ಟಿಯಾಗುತ್ತಿದ್ದ ಅಗಾಧ ಪ್ರಮಾಣದ ಕಸ ವಿಲೇವಾರಿ ದೊಡ್ಡ ಸವಾಲಾಗಿತ್ತು. ‘ಸ್ವಚ್ಛ ಭಾರತ್‌ ಮಿಷನ್‌’ ಶುರುವಾದ ಬಳಿಕ ಇದು ವ್ಯವಸ್ಥಿತವಾಗಿ ನಡೆಯುತ್ತಿದೆ. ಸಂಗ್ರಹವಾಗುವ ಕಸವನ್ನು ವೈಜ್ಞಾನಿಕವಾಗಿ ವಿಂಗಡಿಸಲಾಗುತ್ತದೆ. ‘ಹಸಿರು ದಳ’ ಮತ್ತು ‘ಕ್ಲೀನ್ ಕೂರ್ಗ್ ಇನ್‌ಶಿಯೆಟಿವ್‌’ ಎಂಬ ಸರ್ಕಾರೇತರ ಸಂಸ್ಥೆಗಳ ನೆರವಿನಿಂದ ಕಲಬುರಗಿಯ ಸಿಮೆಂಟ್‌ ಕಾರ್ಖಾನೆಗೆ ಕಳುಹಿಸಲಾಗುತ್ತಿದೆ.

‘ರಸ’ವಾಗದ ಕಸ

ಗೊಬ್ಬರ ತಯಾರಿಸಲು ಸಾಧ್ಯವಿರುವ ಹಸಿ ಕಸವನ್ನು ಸಾಮಾನ್ಯವಾಗಿ ಹಳ್ಳಿಗಳಲ್ಲಿ ತಿಪ್ಪೆಗೆ ಹಾಕಲಾಗುತ್ತದೆ. ಒಣ ಕಸವನ್ನು ಮಾತ್ರ ಜನರು ‘ಸ್ವಚ್ಛವಾಹಿನಿ’ಗೆ ನೀಡುತ್ತಿದ್ದಾರೆ. ಇದರಲ್ಲಿ ಪ್ಲಾಸ್ಟಿಕ್‌, ಚಪ್ಪಲಿ, ಬಾಟಲಿ, ಗಾಜು, ನಾರಿನಂತಹ ವಸ್ತುಗಳೇ ಹೆಚ್ಚಾಗಿ ಸಿಗುತ್ತಿವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ‘ಸ್ವಚ್ಛ ಸಂಕೀರ್ಣ’ದಲ್ಲಿ ಸಣ್ಣ ಪ್ರಮಾಣದಲ್ಲಿ ಲಭ್ಯವಾಗುವ ಇವನ್ನು ಖರೀದಿಸಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಒಣ ಕಸವೂ ಲಾಭದಾಯಕವಾಗುತ್ತಿಲ್ಲ ಎಂಬುದು ಸ್ವಸಹಾಯ ಸಂಘದ ಮಹಿಳೆಯರಲ್ಲೂ ನಿರಾಸಕ್ತಿ ಮೂಡಿಸಿದೆ.

ಇದನ್ನು ಅರಿತ ಸರ್ಕಾರ 10 ಟನ್ ಸಾಮರ್ಥ್ಯದ ಮೆಟೀರಿಯಲ್ ರಿಕವರಿ ಫೆಸಿಲಿಟಿ (ಎಂಆರ್‌ಎಫ್) ಘಟಕವನ್ನು ಉಡುಪಿ, ದಕ್ಷಿಣ ಕನ್ನಡ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದೆ. ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಸಂಗ್ರಹವಾಗುವ ಒಣ ಕಸವನ್ನು ಇಲ್ಲಿಗೆ ತಂದು ಸಂಸ್ಕರಿಸಿ, ಅದನ್ನು ಮರುಬಳಕೆ ಕಂಪನಿಗಳಿಗೆ ಮಾರಾಟ ಮಾಡುವುದು ಇದರ ಉದ್ದೇಶ. ಪ್ರತಿಯಾಗಿ ಪಂಚಾಯಿತಿಗಳಿಗೆ ಒಂದು ಕೆ.ಜಿ ಕಸಕ್ಕೆ 10 ಪೈಸೆಯಂತೆ ಹಣ ಪಾವತಿಸಲಾಗುತ್ತದೆ. ಇಂತಹದ್ದೇ ಘಟಕಗಳನ್ನು ಎಲ್ಲ ಜಿಲ್ಲೆಯಲ್ಲಿ ಸ್ಥಾಪಿಸುವ ಪ್ರಯತ್ನ ಆಮೆ ಗತಿಯಲ್ಲಿ ಸಾಗುತ್ತಿದೆ.

ದೆಹಲಿ ತಲುಪಿಸಿದ ಕಾಯಕನಿಷ್ಠೆ

ಕೋಲಾರ ಜಿಲ್ಲೆಯ ಬೆಗ್ಲಿಹೊಸಹಳ್ಳಿ ಗ್ರಾಮ ಪಂಚಾಯಿತಿಯ ಕಸ ಸಂಗ್ರಹ ವಾಹನ (ಸ್ವಚ್ಛತಾ ವಾಹಿನಿ) ಚಾಲಕಿ ಮಂಜುಳಾ ಮತ್ತು ಸಹಾಯಕಿ ಶಶಿಕಲಾ ಅವರು ಕಾಯಕನಿಷ್ಠೆಗಾಗಿ 2024ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ವಿಶೇಷ ಅತಿಥಿಗಳಾಗಿದ್ದರು.

‘ನಮ್ಮ ಕೆಲಸದಿಂದಾಗಿಯೇ ದೆಹಲಿಯಲ್ಲಿ ಪರೇಡ್‌ ವೀಕ್ಷಿಸಲು ಅವಕಾಶ ಸಿಕ್ಕಿತು. ಆಗ ಊರಿನವರು ನಮ್ಮ ಸಾಧನೆ ಕಂಡು ಹೆಮ್ಮೆಪಟ್ಟರು’ ಎಂದು ಇಬ್ಬರೂ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

ಸಣ್ಣ ಪ್ರಮಾಣದ ಘಟಕಗಳಿಂದ ಪುನರ್ಬಳಕೆ ವಸ್ತುಗಳನ್ನು ಮಾರಾಟ ಮಾಡುವುದು ಕಷ್ಟ. ಎಂಆರ್‌ಎಫ್‌ ಘಟಕದಲ್ಲಿ ದೊಡ್ಡ ಮಟ್ಟದಲ್ಲಿ ವಿಲೇವಾರಿ ನಡೆಯುವುದರಿಂದ ಆದಾಯ ಕೂಡ ಲಭಿಸಲಿದೆ.
-ಸುರೇಶ್‌ ಬಿ.ಇಟ್ನಾಳ್‌, ಸಿಇಒ, ದಾವಣಗೆರೆ ಜಿಲ್ಲಾ ಪಂಚಾಯಿತಿ
ಹಳ್ಳಿಗಳಲ್ಲಿ ತ್ಯಾಜ್ಯವನ್ನು ತಿಪ್ಪೆಗುಂಡಿಗೇ ಹಾಕಿಬಿಡುತ್ತಾರೆ. ಗ್ರಾಮ ಪಂಚಾಯಿತಿಯಿಂದ ನಿತ್ಯವೂ ವಾಹನ ಬರುವುದಿಲ್ಲ. ಪ್ರತಿ ಮನೆಗಳಿಗೂ ಬುಟ್ಟಿ ಕೊಡಲಾಗಿದೆ. ಆದರೆ, ಅದರಿಂದ ಪ್ರಯೋಜನ ಆಗುತ್ತಿಲ್ಲ.
-ಹುಯಿಲಾಳು ರಾಮಸ್ವಾಮಿ, ಮೈಸೂರು ತಾಲ್ಲೂಕು
ಗೌರವಧನ 5 ತಿಂಗಳಿಂದ ಬಾಕಿ ಇದೆ. ಕಸ ಸಂಗ್ರಹ ಶುಲ್ಕವನ್ನು ಯಾರೂ ಕೊಡುತ್ತಿಲ್ಲ. ಪ್ರತಿ ತಿಂಗಳು ಬ್ಯಾಂಕ್‌ ಖಾತೆಗೆ ನೇರವಾಗಿ ಗೌರವಧನ ಪಾವತಿಸಿದರೆ ಅನುಕೂಲ.
-ಸುನೀತಾ ಗಂಗಾಧರ ಹಡಪದ, ಮಹಿಳಾ ಸ್ವ–ಸಹಾಯ ಸಂಘ ಮರೇವಾಡ ಗ್ರಾಮ, ಧಾರವಾಡ

ಪೂರಕ ಮಾಹಿತಿ: ಮಹೇಶ್‌ ಭಗೀರಥ, ವಿಕ್ರಂ ಕಾಂತಿಕೆರೆ, ಕೆ.ಎಸ್. ಗಿರೀಶ, ಎಲ್‌.ಮಂಜುನಾಥ್‌, ಓದೇಶ್‌ ಸಕಲೇಶಪುರ, ಬಷೀರಅಹ್ಮದ್ ನಗಾರಿ.

ಪರಿಕಲ್ಪನೆ: ಯತೀಶ್‌ ಕುಮಾರ್‌ ಜಿ.ಡಿ

ಕಸ ಸಂಗ್ರಹಿಸುವ ‘ಸ್ವಚ್ಛ ವಾಹಿನಿ’
ಕನಕಪುರ ತಾಲ್ಲೂಕಿನ ಅಳ್ಳಿಮಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸುವ ವಾಹನದೊಂದಿಗೆ ಗ್ರಾಮಕ್ಕೆ ತೆರಳಿ ತ್ಯಾಜ್ಯ ಸಂಗ್ರಹಿಸುವ ಮಹಿಳೆ
ಮೈಸೂರು ತಾಲ್ಲೂಕಿನ ಸಿದ್ಧಲಿಂಗಪುರ ಗ್ರಾಮ ಪಂಚಾಯತಿಯ - ಸ್ವಚ್ಚ ಸಂಕಿರಣ ಘನ ತ್ಯಾಜ್ಯ ಸಂಪನ್ಮೂಲ ನಿರ್ವಾಣ ಘಟಕದ ಒಂದು ನೋಟ. ಪ್ರಜಾವಾಣಿ ಚಿತ್ರ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ‌ ಗಾರಂಪಳ್ಳಿ ಗ್ರಾಮ‌ ಪಂಚಾಯಿತಿಯ ಕಸ ವಿಲೇವಾರಿ ಘಟಕ ಬಾಗಿಲು ತೆರೆಯದಿರುವುದು
ದಾವಣಗೆರೆ ತಾಲ್ಲೂಕಿನ ಹದಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಕಸ ವಿಂಗಡಣೆ ಮಾಡುತ್ತಿರುವ ಮಹಿಳೆಯರು
ಚನ್ನಗಿರಿ ತಾಲ್ಲೂಕಿನ ತಾವರೆಕೆರೆ ಗ್ರಾಮದ ಘನ ತ್ಯಾಜ್ಯ ವಿಲೇವಾರಿ ಘಟಕದ ಮುಂಭಾಗದಲ್ಲಿ ತ್ಯಾಜ್ಯ ವಸ್ತುಗಳ ರಾಶಿಯನ್ನು ಹಾಕಿರುವುದು
ಚನ್ನಗಿರಿ ತಾಲ್ಲೂಕಿನ ತಾವರೆಕೆರೆ ಗ್ರಾಮದ ಘನ ತ್ಯಾಜ್ಯ ವಿಲೇವಾರಿ ಘಟಕದ ಮುಂಭಾಗದಲ್ಲಿ ತ್ಯಾಜ್ಯ ವಸ್ತುಗಳಿಗೆ ಬೆಂಕಿ ಹಾಕಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.