ಎಐ ಚಿತ್ರ: ಕಣಕಾಲಮಠ
ಬೆಂಗಳೂರು: ಅವರಿಬ್ಬರೂ ವೃತ್ತಿಯಲ್ಲಿ ಪ್ರತಿಷ್ಠಿತ ವೈದ್ಯರು. ಹಗಲು–ರಾತ್ರಿ ಎನ್ನದೇ ರೋಗಿಗಳ ಸೇವೆಯಲ್ಲಿ ನಿರತರಾಗಿದ್ದರು. ಆದರೆ, ಇರುವ ಒಬ್ಬಳೇ ಮಗಳೊಂದಿಗೆ ಕಾಲ ಕಳೆಯಲು ಪುರುಸೊತ್ತಿಲ್ಲ. ಮಗಳಿಗೆ ಬೇಕಾದ್ದನ್ನು ಕೊಡಿಸಿದರೆ ಆಕೆ ಸುಖವಾಗಿರುತ್ತಾಳೆ ಎನ್ನುವ ಭ್ರಮೆಯಲ್ಲಿದ್ದ ಪೋಷಕರು ಒಂದು ದಿನ ಮಗಳು ನಾಪತ್ತೆಯಾದಾಗ ಕಂಗಾಲಾದರು.
ಪೊಲೀಸರಿಗೆ ತಿಳಿಸಿ ಎಲ್ಲೆಡೆ ಹುಡುಕಿದರೂ ಮಗಳ ಸುಳಿವಿಲ್ಲ. ಕೊನೆಗೆ ಪೊಲೀಸರೇ ವೇಶ್ಯಾವಾಟಿಕೆಯ ಸ್ಥಳದಲ್ಲಿ ಹುಡುಕಿದಾಗ ಮಗಳು ಅಲ್ಲಿ ಪತ್ತೆಯಾಗಿದ್ದಳು. ಕಾಲೇಜಿಗೆ ಹೋಗುತ್ತಿದ್ದ ಆ ಯುವತಿಗೆ ಯುವಕನೊಬ್ಬ ಪ್ರೀತಿಸುವ ಹೆಸರಿನಲ್ಲಿ ವಂಚಿಸಿದ್ದ. ನಾಪತ್ತೆಯಾಗಿದ್ದ ಮಗಳು ಸಿಕ್ಕಮೇಲೆ ಪೋಷಕರು ಆಕೆಯನ್ನು ಮನೆಗೆ ಕರೆದೊಯ್ದು, ಉನ್ನತ ಶಿಕ್ಷಣ ಕೊಡಿಸಿ, ಮುಂದೆ ಉತ್ತಮ ಭವಿಷ್ಯ ಕಲ್ಪಿಸಿಕೊಟ್ಟರು.
* ಕೊಪ್ಪಳದ ಆ ಯುವತಿ ಕಾಲೇಜಿನಿಂದ ಮನೆಗೆ ಬರುತ್ತಿದ್ದಳು. ದಾರಿಯಲ್ಲಿ ಯಾರೋ ಒಬ್ಬ ಮಹಿಳೆ ವಿಳಾಸ ಕೇಳಿದ್ದಷ್ಟೇ ನೆನಪು. ಆಕೆಗೆ ಎಚ್ಚರವಾದಾಗ ಇದ್ದದ್ದು ಪಕ್ಕದ ಮಹಾರಾಷ್ಟ್ರದ ಪುಣೆಯಲ್ಲಿ. ಅಲ್ಲಿ ನಿತ್ಯವೂ ಲೈಂಗಿಕ ದೌರ್ಜನ್ಯ. ಬಂದ ಗಿರಾಕಿಗಳೊಂದಿಗೆ ಮಲಗಿದರಷ್ಟೇ ಊಟ. ಇಲ್ಲದಿದ್ದರೆ ನಿದ್ದೆಯೂ ಇಲ್ಲ. ಯುವತಿ 19ಕ್ಕೆ ಕಾಲಿಡುವಷ್ಟರಲ್ಲಿ ಒಂದು ಮಗುವಿನ ತಾಯಿಯೂ ಆದಳು. ಅಂತೂ ಇಂತೂ ತಾನಿದ್ದ ಹಾಳುಕೊಂಪೆಯಲ್ಲಿ ಒಮ್ಮೆ ಯಾರೂ ಇಲ್ಲದಿದ್ದ ಸಂದರ್ಭದಲ್ಲಿ ಹೇಗೋ ಮನೆಗೆ ಫೋನ್ ಮಾಡಿದ್ದಳು ಆ ಯುವತಿ. ಪೊಲೀಸರ ಸಹಾಯದಿಂದ ಆಕೆ ಇದ್ದ ವಿಳಾಸಕ್ಕೆ ಬಂದಿದ್ದ ಮನೆಯವರಿಗೆ ಮಗಳ ಸ್ಥಿತಿ ಕಂಡು ಧರೆಯೇ ಕುಸಿದಷ್ಟು ದುಃಖ, ಸಂಕಟ. ಯಾರಿಗೋ ಹುಟ್ಟಿದ ಮಗುವಿನ ಜೊತೆ ಮಗಳು ತಮಗೆ ಬೇಡವೆಂದು ಕೊನೆಗೆ ಆ ಯುವತಿಯನ್ನು ಮಹಿಳಾ ನಿಲಯದಲ್ಲಿ ಇರಿಸಲಾಯಿತು.
* ಹಳ್ಳಿಯೊಂದರ ಹದಿನೆಂಟರ ಆ ಯುವತಿಯನ್ನು ನಗರವೊಂದರ ಪರಿಚಿತರೊಬ್ಬರ ಮನೆಯಲ್ಲಿ ಮನೆಗೆಲಸಕ್ಕೆ ಅಪ್ಪ ಸೇರಿಸಿದ್ದ. ಅಲ್ಲಿಗೆ ಬಂದ ಬಂಧುವೊಬ್ಬ ಆ ಯುವತಿಗೆ ಬೆಂಗಳೂರಿನಲ್ಲಿ ಒಳ್ಳೆಯ ಕೆಲಸ ಕೊಡಿಸುವ ಆಸೆ ಹುಟ್ಟಿಸಿ, ಮನೆಯವರಿಗೆ ಗೊತ್ತಿಲ್ಲದಂತೆ ಕರೆದೊಯ್ದು ದೆಹಲಿಯ ವೇಶ್ಯಾವಾಟಿಕೆ ಯೊಂದಕ್ಕೆ ಮಾರಿದ್ದ. ಬೇರೆ ಪ್ರಕರಣವೊಂದರಲ್ಲಿ ಕಣ್ಮರೆಯಾದ ಯುವತಿಯೊಬ್ಬಳನ್ನು ಹುಡುಕಲೆಂದು ದೆಹಲಿಯ ಕೆಂಪು ದೀಪ ಪ್ರದೇಶಕ್ಕೆ ಬಂದಿದ್ದ ಕರ್ನಾಟಕದ ಪೊಲೀಸರಿಗೆ ಹಳ್ಳಿಯ ಯುವತಿಯೊಂದಿಗೆ ಇನ್ನೂ ನಾಲ್ವರು ಯುವತಿಯರು ಸಿಕ್ಕಿ ಅವರನ್ನೂ ವಾಪಸ್ ರಾಜ್ಯಕ್ಕೆ ಕರೆತಂದಿದ್ದರು. ಮಾನಸಿಕ ಅಸ್ವಸ್ಥೆಯಾಗಿದ್ದ ತಾಯಿ, ಕಾಮುಕ ತಂದೆಯ ಕಾಟ ತಾಳಲಾರದೇ, ಆ ಹಳ್ಳಿಯ ಯುವತಿಯು ರಾಜ್ಯ ಮಹಿಳಾ ನಿಲಯದಲ್ಲಿ (ಸ್ಟೇಟ್ ಹೋಂ ಫಾರ್ ವುಮನ್) ಆಶ್ರಯ ಪಡೆದಳು.
–ಇದು ನಾಪತ್ತೆಯಾದ ಹಲವು ಮಹಿಳೆಯರ ವ್ಯಥೆಯ ಕಥೆ. ವ್ಯವಸ್ಥೆಯ ದೋಷಕ್ಕೆ ಬಲಿಯಾದವರದ್ದು ಒಂದು ಕಥೆಯಾದರೆ, ತಾವೇ ಮನೆಬಿಟ್ಟು ಹೋದ ಮಹಿಳೆಯರ ಕಥನಗಳು ಒಂದಕ್ಕಿಂತ ಒಂದು ವಿಭಿನ್ನ.
ಹೆತ್ತವರ ಪ್ರೀತಿಯಿಂದ ವಂಚಿತರಾದ ವರು, ಲೈಂಗಿಕ ಶೋಷಣೆಗೊಳ ಗಾದ ವರು, ಬಡತನ, ಅನಕ್ಷರತೆ, ಇತರರಂತೆ ಚೆನ್ನಾಗಿ ಬಾಳುವ ಆಸೆ, ಕುಡುಕ ಗಂಡನ ಕಿರುಕುಳ, ಪ್ರೀತಿ–ಪ್ರೇಮದ ಹೆಸರಲ್ಲಿ ವಂಚನೆ, ಉದ್ಯೋಗಾವಕಾಶ, ಟಿವಿ, ಸಿನಿಮಾಗಳಲ್ಲಿ ನಟನೆಯ ಹಂಬಲ... ಇವು ಮಹಿಳೆಯರು ನಾಪತ್ತೆಯಾಗುವ ಹಿಂದಿರುವ ಕಾರಣಗಳು.
ರಾಜ್ಯದಲ್ಲಿ 2021ರಿಂದ 2024ರ ಜೂನ್ ಅವಧಿಯಲ್ಲಿ 42,237 ಮಹಿಳೆಯರು ನಾಪತ್ತೆಯಾಗಿದ್ದಾರೆ. ಅವರಲ್ಲಿ ಪತ್ತೆಯಾದ ಮಹಿಳೆಯರ ಸಂಖ್ಯೆ 39,389. ಆದರೆ, ಇದುವರೆಗೆ 2,848 ಮಹಿಳೆಯರು ಇನ್ನೂ ಪತ್ತೆಯಾಗಿಲ್ಲ. 2024ರ ಜನವರಿಯಿಂದ ಜೂನ್ವರೆಗೆ 7,550 ಹೆಣ್ಣುಮಕ್ಕಳು ನಾಪತ್ತೆ ಆಗಿದ್ದು, ಅವರಲ್ಲಿ ಪತ್ತೆಯಾದವರ ಸಂಖ್ಯೆ 5,855. ಇನ್ನೂ 1,695 ಹೆಣ್ಣುಮಕ್ಕಳು ಎಲ್ಲಿ ಹೋಗಿದ್ದಾರೆ ಎಂಬುದು ಪತ್ತೆಯೇ ಆಗಿಲ್ಲ. ಇದು ಕೇವಲ ಆರು ತಿಂಗಳ ಅಂಕಿಸಂಖ್ಯೆ ಯಷ್ಟೇ. ಈ ಸಂಖ್ಯೆ ಹೆಚ್ಚಳವಾಗುವ ಆತಂಕವಿದೆ.
ಕಾನೂನಿನ ಕಣ್ಣಿಗೆ ಮಣ್ಣು ಎರಚಿ ಮಹಿಳೆಯರನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡುವ, ಅಪಹರಿಸುವ, ಪ್ರೀತಿ–ಪ್ರೇಮದ ನೆಪದಲ್ಲಿ ವಂಚಿಸುವ ದುರುಳರು ಕಣ್ಣೆದುರೇ ಇದ್ದರೂ ಸಾಕ್ಷಿಯ ಕೊರತೆಯಿಂದ ಶಿಕ್ಷಿಸಲಾಗದ ಅಸಹಾಯಕತೆ ವ್ಯವಸ್ಥೆಯಿದೆ. ನಾಪತ್ತೆಯಾದವರಲ್ಲಿ ಎಲ್ಲರೂ ಮಾನವ ಕಳ್ಳಸಾಗಾ ಣಿಕೆಗೆ ಒಳಗಾಗುತ್ತಾರೆ ಎಂದು ಹೇಳಲಾಗದು. ಕೆಲವರು ಸಂಬಂಧಿಕರ ಮನೆಗಳಲ್ಲೋ ಅಥವಾ ಇಷ್ಟಪಟ್ಟವರೊಂದಿಗೆ ಮದುವೆಯಾಗಿ ಇತರೆಡೆ ನೆಲಸಿರಬಹುದು. ಆದರೆ, ಬಹುತೇಕ ಪ್ರಕರಣಗಳಲ್ಲಿ ಮನೆಯಿಂದ ನಾಪತ್ತೆಯಾಗುವ ಹೆಣ್ಣುಮಕ್ಕಳು ಒಂದಲ್ಲ ಒಂದು ರೀತಿಯಲ್ಲಿ ಲೈಂಗಿಕ ಶೋಷಣೆಗೆ ಒಳಗಾಗುತ್ತಿರುವುದು ಆತಂಕಕಾರಿ ಸಂಗತಿ.
ಕೆಲ ಪ್ರಕರಣಗಳಲ್ಲಿ ಮನೆಗೆ ವಾಪಸ್ ಬಂದ ಮಹಿಳೆಯರು ಇಲ್ಲವೇ ಪೊಲೀಸರು ಪತ್ತೆ ಹಚ್ಚಿ ವಾಪಸ್ ಕರೆತಂದ ಪ್ರಕರಣಗಳಲ್ಲಿ ಇಂಥ ಹೆಣ್ಣುಮಕ್ಕಳನ್ನು ಕುಟುಂಬಸ್ಥರೇ ಮನೆಗೆ ಸೇರಿಸುವುದಿಲ್ಲ. ಇಷ್ಟು ದಿನ ಎಲ್ಲಿದ್ದಳೋ, ಯಾರ ಜತೆಗಿದ್ದಳೋ ಎಂಬ ಜನರ ಕುಹಕ ನುಡಿಗಳಿಗೆ ಅಂಜಿಯೇ ಮನೆಗೆ ಸೇರಿಸದಿರುವ ನಿದರ್ಶನಗಳು ನೂರಾರು. ಹಾಗಾಗಿ, ಕುಟುಂಬದ ಮರ್ಯಾದೆಗಂಜಿ ಮನೆಗೆ ಬರಲು ಹಿಂಜರಿಯುವ ಮಹಿಳೆಯರು ಮತ್ತೆ ನಾಪತ್ತೆಯಾಗಿ ನರಕ ಸದೃಶ್ಯ ವ್ಯವಸ್ಥೆಗೆ ಬಲಿಪಶುಗಳಾಗುತ್ತಿದ್ದಾರೆ.
‘ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಸಾಲ ತೀರಿಸಲಾಗದೇ ಹಲವು ಮಹಿಳೆಯರು ನಾಪತ್ತೆಯಾದ ಪ್ರಕರಣ ಗಳಿವೆ. ಕೋವಿಡ್ ನಂತರದಲ್ಲಿ ಇಂಥ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಮುಖ್ಯವಾಗಿ ಮನೆಗೆಲಸಕ್ಕೆ ಆಧುನಿಕ ಯಂತ್ರಗಳ ಬಳಕೆ ಹೆಚ್ಚಾದಂತೆ ಈ ವೃತ್ತಿಯನ್ನೇ ನಂಬಿಕೊಂಡಿದ್ದ ಆರ್ಥಿಕವಾಗಿ ಕೆಳವರ್ಗದ ಮಹಿಳೆಯರು ಉದ್ಯೋಗ ವಂಚಿತರಾಗುತ್ತಿದ್ದಾರೆ. ಉದ್ಯೋಗಕ್ಕಾಗಿ ವಲಸೆ ಹೋಗುವ ಅನಿವಾರ್ಯತೆ ಉಂಟಾಗಿದ್ದು, ಇಂಥ ಮಹಿಳೆಯರನ್ನೇ ಗುರಿಯಾಗಿಸಿಕೊಂಡ ದುರುಳರು ಉದ್ಯೋಗದ ಆಮಿಷ ಒಡ್ಡಿ ಅವರನ್ನು ಅಕ್ರಮವಾಗಿ ಸಾಗಿಸಿ ಅನೈತಿಕ ಚಟುವಟಿಕೆಗಳಿಗೆ ತಳ್ಳುತ್ತಿದ್ದಾರೆ. ಹೊರರಾಜ್ಯಗಳಿಂದ ಇಲ್ಲಿಗೆ ಉದ್ಯೋಗಕ್ಕಾಗಿ ವಲಸೆ ಬಂದವರು ಇಲ್ಲಿನ ಮಹಿಳೆಯರನ್ನು ವಿವಾಹವಾಗಿ ತಮ್ಮ ರಾಜ್ಯಗಳಿಗೆ ಕರೆದೊಯ್ಯುತ್ತಾರೆ. ಅದರಲ್ಲಿ ಎಷ್ಟೋ ಮಹಿಳೆಯರು ಏನಾದರು ಎಂಬುದೇ ತಿಳಿಯುವುದಿಲ್ಲ’ ಎನ್ನುತ್ತಾರೆ ಮೈಸೂರಿನ ‘ಒಡನಾಡಿ’ ಸಂಸ್ಥೆಯ ಪರಶುರಾಂ.
‘ನಾಪತ್ತೆಯಾಗುವ ಮಹಿಳೆಯರ ಪೈಕಿ ಶೇ 60ರಿಂದ 70ರಷ್ಟು ಮಹಿಳೆಯರು ತಳಸಮುದಾಯಕ್ಕೆ ಸೇರಿದವರೇ ಆಗಿರುತ್ತಾರೆ. ನಾಪತ್ತೆ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಹುಡುಕುವ ಪ್ರಯತ್ನ ಮಾಡುತ್ತಿಲ್ಲ. ಆದ್ದರಿಂದ ಕಾನೂನಿನ ಹೇಬಿಯಸ್ ಕಾರ್ಪಸ್ ನಿಯಮವನ್ನು ಇಲ್ಲಿ ಅಳವಡಿಸುವ ಸಾಧ್ಯತೆ ಬಗ್ಗೆ ತುರ್ತಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸುತ್ತಾರೆ ಸಾಮಾಜಿಕ ಕಾರ್ಯಕರ್ತೆ ರೂಪ ಹಾಸನ.
ಚಿತ್ರ: ಭಾವು ಪತ್ತಾರ್
ಸಾಮಾಜಿಕ ಜಾಲತಾಣಗಳ ಆಕರ್ಷಣೆ: ‘ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗಿ ಮದುವೆಯಾಗುತ್ತೇನೆಂಬ ಭರವಸೆ ನೀಡುವ ಪುರುಷರ ಆಮಿಷಕ್ಕೆ ಮನೆಬಿಟ್ಟು ಹೋದ ಹೆಣ್ಣುಮಕ್ಕಳ ಸಂಖ್ಯೆಯೂ ಕಡಿಮೆಯಿಲ್ಲ. ಪ್ರೀತಿಪ್ರೇಮ, ಒಳ್ಳೆಯ ಬಟ್ಟೆ, ಮೊಬೈಲ್ ಕೊಡಿಸ್ತೀವಿ ಅಂತ ಆಮಿಷ ಒಡ್ಡಿ ಹೆಣ್ಣುಮಕ್ಕಳನ್ನು ಆಕರ್ಷಿಸಲಾಗುತ್ತದೆ. ‘ಫ್ರೆಶ್ ಫ್ಲೆಶ್’ ಹೆಸರಿನಲ್ಲಿ ದಿನನಿತ್ಯ ವೇಶ್ಯಾವಾಟಿಕೆ ಜಾಲಕ್ಕೆ ಬಾಲಕಿಯರನ್ನು ನೂಕುವ ಜಾಲವೇ ಕಾರ್ಯಪ್ರವೃತ್ತವಾಗಿದೆ. ಅದನ್ನು ಮೊದಲು ಹುಡುಕಿ ನಾಶಮಾಡಬೇಕು’ ಎನ್ನುತ್ತಾರೆ ರೂಪ ಹಾಸನ.
ತಂದೆಯೋ, ಸಹೋದರನೋ ಅಥವಾ ಸಂಬಂಧಿಯಿಂದಲೇ ಲೈಂಗಿಕ ಶೋಷಣೆ ಒಳಗಾದ ಸಂದರ್ಭಗಳಲ್ಲೂ ಹೆಣ್ಣುಮಕ್ಕಳು ಮನೆಬಿಟ್ಟು ಹೋಗುತ್ತಾರೆ. ಬಡತನದ ಕಾರಣಕ್ಕಾಗಿಯೇ ಹೆತ್ತವರೇ ತಮ್ಮ ಹೆಣ್ಣುಮಕ್ಕಳನ್ನು ಮಾರಾಟ ಮಾಡಿದ ನಿದರ್ಶನಗಳೂ ಇವೆ. ಇನ್ನು ಗುಜ್ಜರ್ ಮದುವೆಗಳಲ್ಲಿ ಹೆಸರಿಗಷ್ಟೇ ಮದುವೆ. ಪಂಜಾಬ್, ಹರಿಯಾಣದಂಥ ಲಿಂಗಾನುಪಾತ ಕಡಿಮೆ ಇರುವ ರಾಜ್ಯಗಳಿಗೆ ಮದುವೆಯಾಗಿ ಹೋದ ಹೆಣ್ಣುಮಕ್ಕಳು ಹಗಲು ಹೊಲಮನೆ ಕೆಲಸ ಮಾಡಿ, ರಾತ್ರಿ ಗಂಡ ಮತ್ತು ಆತನ ಕುಟುಂಬದ ಇತರ ಪುರುಷರ ಲೈಂಗಿಕ ದಾಹಕ್ಕೆ ಬಲಿಯಾಗುತ್ತಿದ್ದಾರೆ ಎನ್ನುತ್ತಾರೆ ಅವರು.
‘ಕಾಲೇಜು ಹುಡುಗಿಯರನ್ನು ಪಿಕ್‌ನಿಕ್ ನೆಪದಲ್ಲಿ ಗುಂಪಾಗಿ ಕರೆಸಿಕೊಳ್ಳುವ ದುರುಳರು ಅವರನ್ನು ಲೈಂಗಿಕವಾಗಿ ಬಳಸಿಕೊಂಡು ಬಿಟ್ಟು ಹೋಗುತ್ತಾರೆ. ಮರ್ಯಾದೆಗೆ ಅಂಜುವ ಯುವತಿಯರು ವಾಪಸ್ ಬಾರದೇ ಅಡ್ಡದಾರಿ ಹಿಡಿಯುವುದುಂಟು. ಲೈಂಗಿಕ ಕಾರ್ಯಕರ್ತೆಯರಲ್ಲಿ ಶೇ 50ರಷ್ಟು ಮಹಿಳೆಯರು ಮನೆಬಿಟ್ಟು ಬಂದವರೇ ಆಗಿರುತ್ತಾರೆ. ಕೆಲವರು ಅಪಹರಣಕ್ಕೊಳಗಾಗಿದ್ದರೆ ಮತ್ತೆ ಕೆಲವರು ಅಕ್ರಮ ಮಾನವ ಕಳ್ಳಸಾಗಣೆಯಿಂದ ಬಂದವರಾಗಿರುತ್ತಾರೆ. ಕಳ್ಳಸಾಗಾಣಿಕೆಗೆ ಈಡಾದವರಲ್ಲಿ ಶೇ 99ರಷ್ಟು ಮಹಿಳೆಯರನ್ನು ಸೆಕ್ಸ್ ಟೂರಿಸಂಗೆ ಬಳಸಲಾಗುತ್ತದೆ. ಇವರ ಪತ್ತೆಯೂ ಆಗುವುದಿಲ್ಲ ಎಂಬ ಆತಂಕ ಅವರದ್ದು.
‘ಕೊರೊನಾ ನಂತರದಲ್ಲಿ ಹೆಣ್ಣುಮಕ್ಕಳ ಕಾಣೆ ಪ್ರಕರಣಗಳು ಹೆಚ್ಚಿವೆ. ಹೈಸ್ಕೂಲ್–ಕಾಲೇಜು ವಿದ್ಯಾರ್ಥಿನಿಯರು ಮೊಬೈಲ್ ಬಳಸುವುದು ಹೆಚ್ಚಿದ್ದು, ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳಲ್ಲಿ ಯುವಕನ ಫೋಟೊ ನೋಡಿ, ನೀಡುವ ವಿವರ ನಂಬಿ ಮೋಸ ಹೋಗುತ್ತಾರೆ. ವಾಸ್ತವದಲ್ಲಿ ಕೆಲ ಯುವಕರು ಆರ್ಥಿಕವಾಗಿ ಸಬಲರಾಗಿರದ ಆಟೊ ಅಥವಾ ಕಾರು ಚಾಲನೆ, ಗಾರೆ ಕೆಲಸ ಮಾಡುವವರಾಗಿರುತ್ತಾರೆ. ಪ್ರಕರಣಗಳ ಬೆನ್ನುಹತ್ತಿ ಹೋದಾಗ ಯುವತಿಯರು ಬಿಹಾರ, ಉತ್ತರಪ್ರದೇಶ, ಮಹಾರಾಷ್ಟ್ರ ಮುಂತಾದೆಡೆ ಪತ್ತೆಯಾಗಿರುವ ನಿದರ್ಶನಗಳಿವೆ. ಕೆಲವರು ಹುಡುಗನೊಂದಿಗೆ ಹೋದ ಬಳಿಕ ಭಿನ್ನಾಭಿಪ್ರಾಯ ಉಂಟಾದಾಗ ವಾಪಸ್ ಬರಲು ಅಂಜುತ್ತಾರೆ. ಕುಟುಂಬದವರಿಗೆ ಮುಖ ತೋರಿಸಲಾಗದೆ ಹೋದಲ್ಲಿಯೇ ಏನೋ ಕೆಲಸ ಮಾಡಿಕೊಂಡು ಬದುಕುತ್ತಾರೆ ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ’ ಎಂದು ವಿವರಿಸುತ್ತಾರೆ ದಾವಣಗೆರೆ ಮಹಿಳಾ ಠಾಣೆ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಡಿ.ಮಂಜುಳಾ.
ಹೊರ ರಾಜ್ಯದವರು ಎಂಬ ತಾತ್ಸಾರ: ಮುಂಬೈ, ಪುಣೆ, ಹೈದರಾಬಾದ್‌ನಂತಹ ಮಹಾನಗರಗಳಿಗೆ ಗುಳೆ ಹೋದ ಉತ್ತರ ಕರ್ನಾಟಕದ ಕೂಲಿಕಾರ್ಮಿಕರ ಕುಟುಂಬಗಳ ಯುವತಿಯರ ನಾಪತ್ತೆ, ಅಪಹರಣ ಪ್ರಕರಣಗಳ ದೂರು ದಾಖಲಿಸಿಕೊಳ್ಳಲು ಅಲ್ಲಿನ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಹೊರ ರಾಜ್ಯದವರು ಎಂಬ ತಾತ್ಸಾರವೇ ಇದಕ್ಕೆ ಮುಖ್ಯ ಕಾರಣ.
‘ಕಲಬುರಗಿ, ಯಾದಗಿರಿ, ಬೀದರ್, ಬಾಗಲಕೋಟೆ ಮತ್ತು ವಿಜಯಪುರ ಮೂಲದ ಬಂಜಾರ ಸಮುದಾಯದವರು ಬಹುದೊಡ್ಡ ಸಂಖ್ಯೆಯಲ್ಲಿ ಮುಂಬೈನಾದ್ಯಂತ ಸಣ್ಣ–ಸಣ್ಣ ಗುಂಪಾಗಿ ಹಬ್ಬಿಕೊಂಡಿದ್ದಾರೆ. ಕೂಲಿಯನ್ನೇ ನಂಬಿ ದಶಕಗಳಿಂದ ನೆಲೆ ಕಂಡು ನೆಮ್ಮದಿಯ ಜೀವನ ನಡೆಸುತ್ತಿರುವಾಗಲೇ ಹೆಣ್ಣು ಮಕ್ಕಳ ರಕ್ಷಣೆಯ ಚಿಂತೆ ಬೆನ್ನತ್ತಿದೆ. ಮಗಳನ್ನು ಸ್ವಗ್ರಾಮ ದಲ್ಲಾಗಲಿ, ವಲಸೆ ಬಂದ ಜೋಪಡಿಯಲ್ಲಾಗಲಿ ಬಿಟ್ಟು ಕೆಲಸಕ್ಕೆ ಹೋಗಲು ಪೋಷಕರಿಗೆ ಮನಸ್ಸಾಗುತ್ತಿಲ್ಲ. ಸ್ಥಳೀಯ ಪುಂಡರು ಯುವತಿಯರಲ್ಲಿ ಇಲ್ಲ ಸಲ್ಲದ ಆಸೆ ಹುಟ್ಟಿಸಿ, ಅವರನ್ನು ಪುಸಲಾಯಿಸಿ ಅಪಹರಿಸುತ್ತಿರುವ ವೇದನೆಯೂ ಅವರನ್ನು ಬಹುವಾಗಿ ಕಾಡುತ್ತಿದೆ’ ಎನ್ನುತ್ತಾರೆ ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಮುಂಬೈ ಅಧ್ಯಕ್ಷ ರಾಮು ರಾಠೋಡ.
‘ಕಾಣೆಯಾದ ಮಗಳನ್ನು ಪತ್ತೆ ಹಚ್ಚುವಂತೆ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ ಪೋಷಕರಿಗೆ ನಿರಾಸೆಯ ಮಾತುಗಳೇ ಕೇಳಿಬರುತ್ತವೆ. ‘ನಿಮ್ಮ ಮಗಳಿಗೆ 18 ವರ್ಷವಾಗಿದೆ. ಅವಳಿಷ್ಟದಂತೆ ಹೋಗಿದ್ದಾಳೆ. ಅದಕ್ಕೆ ನಾವೇನು ಮಾಡೋಣ? ಮದುವೆಯಾದ ಮೇಲೆ ಬರುತ್ತಾರೆ, ಸುಮ್ಮನೆ ಹೋಗಿ’ ಎಂದು ಪೊಲೀಸರು ವಾಪಸ್ ಕಳುಹಿಸುತ್ತಾರೆ. ಎಫ್‌ಐಆರ್ ಸಹ ಮಾಡಿಕೊಳ್ಳುವುದಿಲ್ಲ. ಕೆಲವು ಪೋಷಕರು ನಾಲ್ಕು ದಿನ ಸ್ಟೇಷನ್‌ಗೆ ಅಲೆದು ಸುಮ್ಮನಾಗುತ್ತಾರೆ. ಮತ್ತೆ ಕೆಲವರು, ‘ಮಗಳ ಹಣೆ ಬರಹದಲ್ಲಿ ಬರೆದಂತೆ ಆಗುತ್ತದೆ, ಹಾಳಾಗಿ ಹೋಗಲಿ’ ಎಂದು ಕೈಚೆಲ್ಲುತ್ತಾರೆ. ದೂರು ಕೊಟ್ಟರೆ ಕೆಲಸ ಬಿಟ್ಟು ಪೊಲೀಸ್ ಸ್ಟೇಷನ್, ಕೋರ್ಟ್ ಅಲೆಯಬೇಕಾಗುತ್ತದೆ ಎಂದೂ ಹಿಂದೇಟು ಹಾಕುತ್ತಾರೆ. ಕೂಲಿಕಾರರ ಅಸಹಾಯಕತೆ ಮತ್ತು ಪೊಲೀಸರ ಅಸಡ್ಡೆ ಕರ್ನಾಟಕದ ಯುವತಿಯರ ಬದುಕನ್ನು ಆಪೋಶನ ತೆಗೆದು ಕೊಳ್ಳುತ್ತಿದೆ’ ಎನ್ನುತ್ತಾರೆ ರಾಮು.
ಮೈಕ್ರೋಫೈನಾನ್ಸ್ ಸಂಸ್ಥೆ ಮತ್ತು ಪ್ರೀತಿಯ ಉರುಳು: ಗ್ರಾಮೀಣ ಭಾಗದಲ್ಲಿ ಕೆಲ ಮೈಕ್ರೋಫೈನಾನ್ಸ್ ಸಂಸ್ಥೆಗಳು ಸುಮಾರು ಶೇ 28 ಬಡ್ಡಿಯಲ್ಲಿ ಮಹಿಳೆಯರಿಗೆ ಸಾಲ ನೀಡುತ್ತಿವೆ. ಕೋವಿಡ್ ನಂತರ ಕೆಲಸ ಸಿಗದೆ, ಸಾಲ ಪಾವತಿಸಲು ಆಗದೆ, ಹಲವು ಮಹಿಳೆಯರು ಊರು ಬಿಟ್ಟು ಹೋಗಿದ್ದಾರೆ. ಕೆಲವು ಪ್ರಕರಣಗಳಲ್ಲಿ ಸಾಲ ತೀರಿಸಲಾಗದ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದೂ ಇದೆ. ಈ ವಿಚಾರ ಮನೆಯಲ್ಲಿ ಗೊತ್ತಾಗುತ್ತಿದ್ದಂತೆ ಆ ಮಹಿಳೆಯರು ಮರ್ಯಾದೆಗೆ ಅಂಜಿ ಮನೆ ಬಿಡುತ್ತಾರೆ’ ಎಂದು ಪರಶುರಾಂ ಹೇಳಿದರು.
‘ಆದಿವಾಸಿ ಕುಟುಂಬವೊಂದರ 18 ವರ್ಷದೊಳಗಿನ ಯುವತಿ ಪ್ರೀತಿಸಿ ಗರ್ಭಿಣಿಯಾಗಿದ್ದಳು. ಆಸ್ಪತ್ರೆಯಲ್ಲಿ ವೈದ್ಯರಿಂದ ದೊರೆತ ಮಾಹಿತಿ ಆಧರಿಸಿ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ಯುವಕನನ್ನು ಜೈಲಿಗೆ ಹಾಕಿದರು. ಆ ಸಮಯದಲ್ಲಿ ಹುಡುಗಿ ಮನೆಯವರಿಗೆ ಹೆದರಿ ಕಾಣೆಯಾಗಿದ್ದಳು. ಇಂಥ ಹಲವು ಪ್ರಕರಣಗಳಿವೆ’ ಎನ್ನುತ್ತಾರೆ ಅವರು.
ಪೊಲೀಸರ ಕ್ರಮ ಏನು?
ರಾಜ್ಯದ ಗಡಿ ಪ್ರದೇಶಗಳಲ್ಲಿ ಮತ್ತು ಬಸ್ ನಿಲ್ದಾಣ/ ರೈಲ್ವೆ ನಿಲ್ದಾಣಗಳಲ್ಲಿ ಭಿತ್ತಿ ಪತ್ರಗಳನ್ನು ಹಾಗೂ ಫೋಟೋಗಳನ್ನು ಅಂಟಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಪೊಲೀಸ್ ಅಧಿಕಾರಿಗಳ ತಂಡವನ್ನು ನಿರ್ಮಿಸಿ ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸುವುದು, ಅಕ್ಕಪಕ್ಕದ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಅಪರಿಚಿತ ಶವಗಳ ಪ್ರಕರಣಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಮಾನವ ಕಳ್ಳಸಾಗಣಿಕೆ ಮಾಡುವವರ ವಿರುದ್ಧ ಮಾಹಿತಿ ಸಂಗ್ರಹಿಸಿ ಪ್ರಕರಣ ದಾಖಲಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿಧಾನಸಭೆಯಲ್ಲಿ ಶಾಸಕ ರಿಜ್ವಾನ್ ಅರ್ಷದ್ ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಗೃಹ ಇಲಾಖೆ ಉತ್ತರಿಸಿತ್ತು.
‘ಮಹಿಳೆ ಅಥವಾ ಬಾಲಕಿಯರು ಕಾಣೆಯಾದ ಬಳಿಕ ಪೊಲೀಸ್, ಮಹಿಳಾ ಮತ್ತು ಕಲ್ಯಾಣ ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವರ ಪತ್ತೆ ಸಾಧ್ಯವಾಗುತ್ತಿಲ್ಲ. ಸಿಬ್ಬಂದಿ ಕೊರತೆಯಿಂದ ಪ್ರಕರಣದ ಪತ್ತೆ ಕಷ್ಟಸಾಧ್ಯವಾದರೆ, ಇನ್ನೊಂದೆಡೆ ಕೆಲ ಅಧಿಕಾರಿಗಳೇ ನೇರವಾಗಿ ದಂಧೆಕೋರರೊಂದಿಗೆ ಸಂಪರ್ಕದಲ್ಲಿರುವುದರಿಂದ ಸಮಸ್ಯೆಯಾಗುತ್ತಿದೆ. ಪತ್ತೆಯಾದ ಮಹಿಳೆಯರ ಪುನಶ್ಚೇತನಕ್ಕೆ ಯಾವುದೇ ಯೋಜನ ಇಲ್ಲ. ಅವರಿಗೆ ಆತ್ಮಸ್ಥೈರ್ಯ ತಂಬುವ ಕೆಲಸ ಸರ್ಕಾರದಿಂದ ಆಗಬೇಕು’ ಎಂಬುದು ಒಡನಾಡಿಯ ಪರಶುರಾಂ ಮತ್ತು ಸ್ಟ್ಯಾನಿ ಅವರ ಆರೋಪ.
ರೈಲ್ವೆಯಲ್ಲಿ ಕಾಣೆಯಾದ ಮಕ್ಕಳು, ಮಹಿಳೆಯರ ಪತ್ತೆಗೆ ಇರುವ ವ್ಯವಸ್ಥೆಯಂತೆಯೇ, ಬಸ್ ನಿಲ್ದಾಣ ಗಳಲ್ಲೂ ಇಂತಹ ವ್ಯವಸ್ಥೆ ಬರಬೇಕು. ಅಪಹರಣ, ಮೋಸದ ಜಾಲದ ಬಗ್ಗೆ ಶಾಲಾ–ಕಾಲೇಜು ಮಟ್ಟದಲ್ಲೇ ತಿಳಿವಳಿಕೆ ಮತ್ತು ಸ್ವರಕ್ಷಣೆಯ ತರಬೇತಿ ನೀಡುವುದು ಅಗತ್ಯ. ಪ್ರತಿ ಪ್ರಕರಣವನ್ನೂ ವಿವರವಾಗಿ ತನಿಖೆ ಕೈಗೊಂಡಲ್ಲಿ ಹೆಣ್ಣುಮಕ್ಕಳನ್ನು ಅಕ್ರಮವಾಗಿ ಸಾಗಿಸುವ ಜಾಲವನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಕಷ್ಟವೇನಲ್ಲ. ತಪ್ಪಿತಸ್ಥ ರಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ಸಾಮಾಜಿಕ ಕಾರ್ಯಕರ್ತರ ಹಾಗೂ ನಾಪತ್ತೆಯಾದ ಕುಟುಂಬಸ್ಥರ ಅಭಿಪ್ರಾಯ.
ವಿಳಂಬ ದೂರು: ಪತ್ತೆಗೆ ತೊಂದರೆ
ನಾಪತ್ತೆಯಾದ ಮಾಹಿತಿ ಲಭಿಸಿದ ಕೂಡಲೇ ದೂರು ನೀಡಿದರೆ ಮಹಿಳೆಯರನ್ನು ಪತ್ತೆ ಮಾಡಬಹುದು. ಕೆಲವರು ಒಂದೆರಡು ದಿನ ಕಾಯುತ್ತಾರೆ. ಆದರೆ, ಹಾಗೇ ಮಾಡದೇ ನಾಪತ್ತೆಯಾದ ಮೊದಲ 24 ಗಂಟೆಗಳ ಅವಧಿಯಲ್ಲಿ (ಗೋಲ್ಡರ್ ಅವರ್) ಪೊಲೀಸರಿಗೆ ದೂರು ಸಲ್ಲಿಸುವುದು ಅಗತ್ಯ.
ಹೆಣ್ಣುಮಕ್ಕಳು ಕಾಣೆಯಾದ ತಕ್ಷಣವೇ ಪಾಲಕರು ಬಂದು ದೂರು ದಾಖಲಿಸಬೇಕು. ಹೆಣ್ಣುಮಕ್ಕಳ ಫೋಟೊ, ಇತರೆ ಮಾಹಿತಿಯ ಗೋಪ್ಯತೆ ಕಾಪಾಡಲಾಗುವುದು. ಹೆಣ್ಣಮಕ್ಕಳ ಪತ್ತೆಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಇಲಾಖೆಯ ಅಧಿಕೃತ ಗ್ರೂಪ್‌ನಲ್ಲಿ ಮಾತ್ರವೇ ಹೆಣ್ಣುಮಕ್ಕಳ ವಿವರ ಶೇರ್ ಮಾಡಲಾಗುವುದು. ಹೆಣ್ಣುಮಕ್ಕಳು ಪತ್ತೆಯಾದಲ್ಲಿ ವಿಚಾರಿಸಿ ಕುಟುಂಬದವರೊಂದಿಗೆ ಸೇರಿಸಲು ಕ್ರಮ ವಹಿಸಲಾಗುತ್ತದೆ ಎನ್ನುತ್ತಾರೆ ಪೊಲೀಸರು.
ಸ್ವರಕ್ಷಣೆ ತರಬೇತಿ ಅಗತ್ಯ
ಮಹಿಳೆಯರ ಸುರಕ್ಷತಾ ಕ್ರಮಕ್ಕಾಗಿ ನನ್ನ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿತ್ತು. ಮಹಿಳಾ ಸಹಾಯವಾಣಿ 112ಕ್ಕೆ ಕರೆ ಮಾಡಿದರೆ ನಗರ ಪ್ರದೇಶದಲ್ಲಿ ನಾಲ್ಕೈದು ನಿಮಿಷದೊಳಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಎಂಟರಿಂದ ಹತ್ತು ನಿಮಿಷದೊಳಗೆ ಪೊಲೀಸರು ತಲುಪುವ ವ್ಯವಸ್ಥೆ ಇದೆ. ಅಷ್ಟೇ ಅಲ್ಲ, ಅಲ್ಲಲ್ಲಿ ಮಹಿಳಾ ಪೊಲೀಸರ ಬೀಟ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಕಿತ್ತೂರು ಚೆನ್ನಮ್ಮ ಪಡೆಯನ್ನು ರೂಪಿಸಲಾಗಿದೆ.
ಆಯೋಗದ ಸದಸ್ಯೆಯಾಗಿದ್ದಾಗ ಮಹಿಳೆಯ ನಾಪತ್ತೆ ಪ್ರಕರಣಗಳ ಅಧ್ಯಯನ ನಡೆಸಿ ವರದಿಯನ್ನೂ ಸಲ್ಲಿಸಲಾಗಿತ್ತು. ಶಿಕ್ಷಣ ಇಲಾಖೆ, ಸರ್ಕಾರ ಹಾಗೂ ಮಹಿಳಾ ಆಯೋಗ, ಪೊಲೀಸ್ ಇಲಾಖೆ ಸಹಯೋಗದಲ್ಲಿ ಶಾಲಾ–ಕಾಲೇಜುಗಳಲ್ಲಿ ಹೆಣ್ಣುಮಕ್ಕಳ ಸ್ವರಕ್ಷಣೆಯ ತರಬೇತಿ ನೀಡಬೇಕಿದೆ.
ಆರ್. ಪ್ರಮೀಳಾ ನಾಯ್ಡು, ನಿಕಟಪೂರ್ವ ಅಧ್ಯಕ್ಷೆ, ರಾಜ್ಯ ಮಹಿಳಾ ಆಯೋಗ
ನಾಪತ್ತೆಯಾಗುವ ಹೆಣ್ಣುಮಕ್ಕಳು ಲೈಂಗಿಕವಾಗಿ ಶೋಷಣೆಗೀಡಾಗಿದ್ದರೆ, ಅವರನ್ನು ಹುಡುಕಿ ವಾಪಸ್ ಕರೆತಂದ ನಂತರ, ಅತ್ಯಾಚಾರ ಸಂತ್ರಸ್ತೆಗೆ ನೀಡುವ ಸಮರ್ಪಕ, ಪುನರ್ವಸತಿ ಜೊತೆಗೆ ಪರಿಹಾರ ಮೊತ್ತವನ್ನೂ ನೀಡಬೇಕು. ಒತ್ತಾಯಿಸುತ್ತಲೇ ಬಂದಿದ್ದರೂ ಇನ್ನೂ ಕಾರ್ಯಗತವಾಗಿಲ್ಲ.ರೂಪ ಹಾಸನ, ಸಾಮಾಜಿಕ ಕಾರ್ಯಕರ್ತೆ
ಬುಡಕಟ್ಟು ಸಮುದಾಯದ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ನಾಪತ್ತೆ ಆಗುತ್ತಿರುವುದು ಆತಂತಕಕಾರಿ. ಹಲವು ಪ್ರಕರಣಗಳಲ್ಲಿ ದೂರೇ ನೀಡದಿರುವುದರಿಂದ ಕಾಣೆಯಾದ ಮಕ್ಕಳು, ಮಹಿಳೆಯರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ.ಪರಶುರಾಂ, ಒಡನಾಡಿ ಸಂಸ್ಥೆ, ಮೈಸೂರು
ಯಾರಿಗೆ ಕರೆ ಮಾಡಬೇಕು?
ಪೊಲೀಸ್ ಸಹಾಯವಾಣಿ (ಪಿಂಕ್ ಹೊಯ್ಸಳ) 112
ಪೊಲೀಸ್ ಕಂಟ್ರೋಲ್ ರೂಂ 100
ಒಡನಾಡಿ ಸಂಸ್ಥೆ: 99863 63897
ಪೂರಕ ಮಾಹಿತಿ: ಮಲ್ಲಿಕಾರ್ಜುನ ನಾಲವಾರ, ಶಿವಪ್ರಸಾದ ರೈ, ಅನಿತಾ ಎಚ್., ಆದಿತ್ಯ ಕೆ.ಎ.
ಪರಿಕಲ್ಪನೆ: ಯತೀಶ್ ಕುಮಾರ್ ಜಿ.ಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.