ADVERTISEMENT

ಅಂತರಂಗ ಅಂಕಣ: ಮಗಳಿಗೆ ವಿಪರೀತ ಡಯೆಟ್‌ ಹುಚ್ಚು, ಏನು ಮಾಡಲಿ?

​ಪ್ರಜಾವಾಣಿ ವಾರ್ತೆ
Published 4 ಜನವರಿ 2025, 0:28 IST
Last Updated 4 ಜನವರಿ 2025, 0:28 IST
   

ನನ್ನ ಮಗಳಿಗೆ ವಿಪರೀತ ಡಯೆಟ್ ಹುಚ್ಚು. ಹದಿನಾಲ್ಕು ವರ್ಷ ಅವಳಿಗೆ. ಏನನ್ನೂ ತಿಂದರೂ ತೂಕ ಹೆಚ್ಚಬಹುದು ಎಂಬ ಆತಂಕ. ಹಾಗಾಗಿ ಏನು ಮಾಡಿಕೊಟ್ಟರು ತಿನ್ನಲು ಇಚ್ಛಿಸುವುದಿಲ್ಲ. ಇವಳ ಈ ಗೀಳಿಗೆ ಪರಿಹಾರವೇನು ಸರ್?

ಸಾಧಾರಣವಾಗಿ ಹದಿಹರೆಯದ ಮಕ್ಕಳಲ್ಲಿ ಕಂಡುಬರುವ ಸಮಸ್ಯೆ ಇದು. ಇದನ್ನು ನಾವು ಅನೋರೆಕ್ಸಿಯಾ ನರ್ವೋಸಾ (Anorexia Nervosa) ಎಂದು ಕರೆಯುತ್ತೇವೆ. ಈ ರೀತಿಯ ಪರಿಸ್ಥಿತಿ ಕಾಣಿಸಿಕೊಳ್ಳುವುದಕ್ಕೆ ಬೇರೆ ಬೇರೆಯ ಕಾರಣಗಳಿರಬಹುದು. ಹದಿಹರೆಯದ ವಯಸ್ಸು ಎಂಬುವುದು ಎಲ್ಲರಿಗೂ ತಿಳಿದಿರುವಂತೆಯೇ ದೈಹಿಕ ಮತ್ತು ಮಾನಸಿಕ ಬದಲಾವಣೆಯ ಸಮಯ. ದೇಹದಲ್ಲಾಗುವ ಬದಲಾವಣೆಗಳನ್ನು ಕೆಲವು ಬಾರಿ ಮಕ್ಕಳಿಗೆ ಒಪ್ಪಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಸ್ತನಗಳ ಬೆಳವಣಿಗೆ ಅವರಿಗೆ ಅಸಹ್ಯದ ಭಾವನೆಯನ್ನೂ ಉಂಟುಮಾಡಬಹುದು. ಅದರ ಜತೆಗೆ, ಇದೇ ಸಮಯದಲ್ಲಿ ಮಕ್ಕಳು ತಮ್ಮ ಐಡೆಂಟಿಟಿಯನ್ನು ಅರ್ಥೈಸಿಕೊಳ್ಳುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಅವರು ಯಾರನ್ನು ತಮ್ಮ ಆದರ್ಶ ವ್ಯಕ್ತಿಗಳನ್ನಾಗಿ ಪರಿಗಣಿಸಿದ್ದಾರೆ ಎಂಬುವುದೂ ಬಹಳ ಮುಖ್ಯವಾಗುತ್ತದೆ. ಅಂದರೆ, ಅವರು ತೀರಾ ತೆಳ್ಳಗಿದ್ದರಷ್ಟೇ ಚಂದ, ಇಲ್ಲವಾದರೆ ಕುರೂಪ ಎಂಬ ಪರಿಕಲ್ಪನೆ ಆಕೆಯ ಮನಸ್ಸಿನಲ್ಲಿ ಮೂಡಿರಬಹುದು. ಅಥವಾ ಆಕೆಯನ್ನು ಈ ಮೊದಲು ಯಾರಾದರೂ ಆಕೆಯ ದೈಹಿಕ ಅಂಗಸೌಷ್ಠವದ ಕುರಿತು ನಾಚಿಕೆಪಡುವಂತೆ ಮಾಡಿದ್ದರೆ, ಆ ಕಾರಣದಿಂದಲೂ ಆಕೆ ಈ ನಿರ್ಧಾರವನ್ನು ತೆಗೆದುಕೊಂಡಿರಬಹುದು. ಈ ನಡತೆಯ ಹಿಂದೆ ಕಾರಣಗಳು ಅನೇಕ ಇರಬಹುದು.

ಹೇಗೆ ಇದರಿಂದ ಹೊರಗೆ ಬರುವುದು?

ADVERTISEMENT

1. ಮೊದಲಿಗೆ ಸಮತೋಲಿತ ಆಹಾರದ ಬಗ್ಗೆ ಮಕ್ಕಳಿಗೆ ತಿಳಿಸಿ ಹೇಳಿ. ದೇಹಕ್ಕೆ ಎಲ್ಲಾ ಬಗೆಯ ಪೋಷಕಾಂಶಗಳೂ ಬೇಕು ಎಂಬುವುದನ್ನು ಮನವರಿಕೆ ಮಾಡಿ.

2. ಈ ವಯಸ್ಸಿನಲ್ಲಿ ಚೆನ್ನಾಗಿ ತಿನ್ನದಿದ್ದರೆ, ದೈಹಿಕ ಬೆಳವಣಿಗೆ ಕುಂಠಿತವಾಗಿ ಅದು ಅವರ ಕುಬ್ಜತೆಗೂ ಕಾರಣವಾಗಬಹುದು ಎಂಬುದನ್ನು ತಿಳಿಸಿ.

3. ಬೇಕಾದರೆ, ಬಿ. ಎಮ್. ಐ (ಬಾಡಿ ಮಾಸ್ ಇಂಡೆಕ್ಸ್) ನ ಬಗ್ಗೆಯೂ ಅರಿವನ್ನು ಮೂಡಿಸಬಹುದು. ತನ್ಮೂಲಕ, ಹೇಗೆ ಸ್ಥೂಲಕಾಯವು ಒಂದು ಸಮಸ್ಯೆಯಾಗಿ ಪರಿಣಮಿಸುತ್ತದೋ, ಅದೇ ರೀತಿ, ಅತಿಯಾದ ತೆಳ್ಳಗಿರುವುದರಿಂದಲೂ ಸಮಸ್ಯೆ ಇದೆ ಎನ್ನುವುದನ್ನು ಅರ್ಥೈಸಿ. (ಉದಾಹರಣೆಗೆ, ಸರಿಯಾಗಿ ತಿನ್ನದಿದ್ದರೆ ಮಾಂಸಖಂಡಗಳ ಬೆಳವಣಿಗೆ ಆಗುವುದಿಲ್ಲ. ಹಾಗಾದಾಗ, ಎಲುಬುಗಳಿಗೆ ನೇರವಾಗಿ ಏಟು ಬೀಳುವ ಸಾಧ್ಯತೆಗಳಿವೆ).

ಮಾತ್ರವಲ್ಲ, ಒಂದು ವೇಳೆ ಆಕೆಯ ದೇಹದ ತೂಕ ಹೆಚ್ಚಾದರೆ, ಅದನ್ನು ಆರೋಗ್ಯಕರ ರೀತಿಯಲ್ಲಿ ಕಡಿಮೆ ಮಾಡಿಸುವುದಕ್ಕೆ ಉಪಾಯಗಳಿವೆ. ಅದಕ್ಕೆಂದೇ ನ್ಯೂಟ್ರಿಷಿಯನಿಸ್ಟ್‌ ಇದ್ದಾರೆ ಎಂಬುವ ಧೈರ್ಯ ತುಂಬಿ. ಈ ರೀತಿ ಮಕ್ಕಳಿಗೆ ಅರ್ಥ ಮಾಡಿಸುವ ಮೂಲಕ ಅವರನ್ನು ಈ ಸಮಸ್ಯೆಯಿಂದ ಹೊರಗೆ ತರುವುದಕ್ಕೆ ಸಾಧ್ಯವಿದೆ. ಒಂದು ವೇಳೆ ನಿಮ್ಮಿಂದ ಸಾಧ್ಯವಾಗದಿದ್ದರೆ, ಯಾವುದಾದರೂ ತಜ್ಞರ ಬಳಿ ಕರೆದುಕೊಂಡು ಹೋಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.