
ಬಹುಶಃ ಇಡ್ಲಿ–ದೋಸೆ ಎಂಬೆರಡು ತಿಂಡಿಗಳನ್ನು ಮಾರುವಂತಿಲ್ಲ ಎಂದರೆ, ದಕ್ಷಿಣ ಭಾರತದ ಬಹುತೇಕ ಹೋಟೆಲ್‌ಗಳು ಬಾಗಿಲುಮುಚ್ಚಿಕೊಂಡು ಹೊಗಿಬಿಡುತ್ತೇವೇನೋ. ಭಾರತೀಯ ಆಹಾಋಪರಪಂರೆಯಲ್ಲಿ ಇಡ್ಲಿ ಇಷ್ಟು ಜನಪ್ರಿಯ. ನಮ್ಮ ಬಹುಮುಖ್ಯ ಆಹಾರವಾದ ಇಡ್ಲಿಯಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳೂ ಇವೆ ಎಂಬುದು ನಿಮಗೆ ಗೊತ್ತೇ?
ಇಡ್ಲಿಯ ಪ್ರಮುಖ ಪ್ರಯೋಜನಗಳಲ್ಲಿ ಒಂದೆಂದರೆ, ಅದರಲ್ಲಿನ ‘ಕಡಿಮೆ ಕ್ಯಾಲೋರಿ’ ಎಂಬ ಅಂಶ. ಹೀಗಾಗಿ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಹಾಗೂ ತೂಕವನ್ನು ನಿರ್ವಹಣೆ ಮಾಡಿಕೊಳ್ಳಬೇನ್ನುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಸರಾಸರಿ, 1 ಇಡ್ಲಿಯಲ್ಲಿ ಕೇವಲ 61 ಕ್ಯಾಲೋರಿಗಳಿರುತ್ತವೆ. ಸಾಮಾನ್ಯವಾಗಿ 2–3 ಇಡ್ಲಿ ತಿಂದರೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಚಟ್ನಿ ಅಥವಾ ಸಾಂಬಾರ್ ಜೊತೆಗೆ ತಿಂದರೂ 250 ಕ್ಯಾಲೋರಿಗಳು ಮೀರುವುದಿಲ್ಲ. ಹೀಗಾಗಿ ಬೆಳಗಿನ ತಿಂಡಿ ಸೇವನೆಯನ್ನು ಓವರ್‌ಲೋಡ್ ಮಾಡದೆ ರುಚಿಯನ್ನು ಆನಂದಿಸಲು ನಿಮಗೆ ಇಡ್ಲಿ ಅನುವು ಮಾಡಿಕೊಡುತ್ತದೆ. ಮಾತ್ರವಲ್ಲ ಕೊಬ್ಬು ಸಹ ನಗಣ್ಯ ಪ್ರಮಾಣದಲ್ಲಿರುವುದರಿಂದ ಸಮತೋಲಿತ ಆಹಾರವನ್ನು ಯೋಜಿಸಲು ಇದು ಸಹಾಯಕ.
ಇನ್ನು ಇಡ್ಲಿಯನ್ನು ಭೌತಿಕವಾಗಿಯೂ ಹಗುರ, ತಿಂದ ಮೇಲೂ ಹೊಟ್ಟೆ ಭಾರ ಎನಿಸುವುದಿಲ್ಲ. ಇಂಥ ಲಘು ಆಃಆರ ಪೌಷ್ಟಿಕಾಂಶದ ದೃಷ್ಟಿಯಿಂದ ಮಾಥ್ರ ಬಲು ಭಾರ. ಸಮೃದ್ಧ ಫೈಬರ್, ರಂಜಕ ಮತ್ತು ವಿಟಮಿನ್ ಡಿ ಯಂತಹ ಅಗತ್ಯ ಪೋಷಕಾಂಶಗಳನ್ನು ಇದು ಒದಗಿಸುತ್ತವೆ. ಸಾಂಬಾರ್ ಅಥವಾ ಚಟ್ನಿ ಜತೆ ಸೇರಿದರಂತೂ ಇಡ್ಲಿಯ ಪೌಷ್ಟಿಕಾಂಶದ ಮೌಲ್ಯವು ಹೆಚ್ಚಾಗುತ್ತದೆ.
ಇದಲ್ಲದೇ ಇಡ್ಲಿ ತಯಾರಿಸುವಾಗ ನಡೆಯುವ ’ಹುದುಗುವಿಕೆ’ ಪ್ರಕ್ರಿಯೆ ಜೀರ್ಣ ಕ್ರಿಯೆಗೆ ತುಂಬ ಸಹಕಾರಿ. ಇಡ್ಲಿ ಹಿಟ್ಟು ಹುಳಿ ಬಂದಾಗ ಒಳಗೊಳ್ಳುವ ಪ್ರೋಬಯಾಟಿಕ್ ಅಂಶಗಳು ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ. ಇದರಿಂದಾಗಿಯೇ ಅನಾರೋಗ್ಯಪೀಡಿತರಾಗಿದ್ದವರಿಗೆ ಇಡ್ಲಿ–ಮೊಸರನ್ನಷ್ಟೇ ಸೇವಿಸಲು ವೈದ್ಯರು ಸಲಹೆ ಮಾಡುವುದು.ಎಲ್ಲಕ್ಕಿಂತ ಮುಖ್ಯವಾಗಿ ಇಡ್ಲಿಯು ಸೆಲೆನಿಯಮ್, ಪ್ರೋಟೀನ್ ಮತ್ತು ವಿಟಮಿನ್ ಡಿ ಅನ್ನು ಒಳಗೊಂಡಿರುತ್ತದೆ. ಇವೆಲ್ಲವೂ ದೇಹದ ರೋಗನಿರೋಧಕ ವ್ಯವಸ್ಥೆಗೆ ಮಹತ್ವದ ಕೊಡುಗೆ ನೀಡುತ್ತವೆ.
ಇಂತಿಪ್ಪ ಇಡ್ಲಿ ತಯಾರಿಕೆಯ ಬಹುದೊಡ್ಡ ಸಮಸ್ಯೆ ಎಂದರೆ ಪ್ರಮಾಣದಲ್ಲಿ ಯಾಮಾರುವುದು. ಕೆಲವೊಮ್ಮೆ ಕಡಿಮೆ ಆಗಿಬಿಟ್ಟರೆ ಎಂಬ ಕಾರಣಕ್ಕೆ ಸ್ವಲ್ಪ ಹೆಚ್ಚೇ ಅಕ್ಕಿ ನೆನೆಸಿ ಇಡ್ಲಿ ಮಾಡಿದರೆ, ಅದು ಉಳಿದು ಹೋಗುತ್ತದೆ. ದೋಸೆಯಂತೆ ಬೇಕಷ್ಟೇ ಎರೆದುಕೊಂಡು ಉಳಿದ ಹಿಟ್ಟನ್ನು ಇಡುವುದು ಆಗದು. ಹಾಗೆ ಉಳಿದ ಇಡ್ಲಿಯನ್ನು ಮಧ್ಯಾಹ್ನ ಅಥವಾ ಸಂಜೆ ಮತ್ತೆ ತಿನ್ನಲು ಮನೆ ಮಂದಿ ಮೂಗು ಮುರಿಯುತ್ತಾರೆ. ಬಿಸಾಡಲು ಮನಸು ಬರುವುದಿಲ್ಲ. ಹಾಗಾದರೆ ಉಳಿದ ಇಡ್ಲಿಯನ್ನು ಏನು ಮಾಡುವುದು? ಇಲ್ಲಿದೆ ಮಜಕೂರು ಪರಿಹಾರ. ಉಳಿದ ಇಡ್ಲಿಯಿಂದ ಘಮಘಮಿಸುವ, ರುಚಿಕಟ್ಟಾದ ಉಪ್ಪಿಟ್ಟು ತಯಾರಿಸಿ ಬಿಸಿ ಬಿಸಿಯಾಗಿ ಬಡಿಸಿ ನೋಡಿ. ಖಂಡಿತಾ ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿಂದೇ ತಿನ್ನುತ್ತಾರೆ.
ಬೇಕಾಗುವ ಸಾಮಗ್ರಿ: ಒಂದು ಸಾಧಾರಣ ಗಾತ್ರದ ಈರುಳ್ಳಿ. ಕಾಲು ಕಪ್ ಹಸಿ ತೆಂಗಿನ ತುರಿ. ಕರಿಬೇವು, ಕೊತ್ತಂಬರಿ ಸೊಪ್ಪು, ಎರಡು ಸಣ್ಣ ಹಸಿಮೆಣಸು. ಅರ್ಧ ಹಿಡಿ ನೆಲಗಡಲೆ(ಶೇಂಗಾ), ಇಂಗು–ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಸೇರಿ ಒಗ್ಗರಣೆ ಸಾಮಗ್ರಿಗಳು. ಅರ್ಧ ಹೋಳು ಲಿಂಬು. ಒಂದು ಟೀ ಸ್ಪೂನ್ ಸಕ್ಕರೆ. ಚಿಟಿಕೆ ಅರಿಶಿನ ಪುಡಿ. ಉಪ್ಪು(ರುಚಿಗೆ ಬೇಕಷ್ಟು)
ಮಾಡುವ ವಿಧಾನ: ಉಳಿದ ಇಡ್ಲಿ (ನಾಲ್ಕೈದು ಎಂದುಕೊಳ್ಳೋಣ)ಗಳನ್ನು ಒಂದು ಪ್ಲೇಟ್‌ನಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ. ಹಸಿಮೆಣಸು, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಕತ್ತರಿಸಿಕೊಳ್ಳಿ. ಸಣ್ಣ ಉರಿಯ ಮೇಲೆ ಪ್ಯಾನ್ ಇಟ್ಟು ಮೂರು ಚಮಚ ಎಣ್ಣೆ ಹಾಕಿ, ಕಾದ ಬಳಿಕ, ಶೇಂಗಾ, ಉದ್ದಿನ ಬೇಳೆ, ಕಡಲೆ ಬೇಳೆಗಳನ್ನು ಹಾಕಿ ಕೆಂಪಗಾಗುವವರೆಗೆ ಕೈಯ್ಯಾಡಿ. ಸಾಸಿವೆ ಹಾಗೂ ಇಂಗು ಹಾಕಿ ಸಿಡಿದ ಬಳಿಕ ಅರಿಶಿನ ಪುಡಿ ಹಾಕಿ. ಮೇಲಿಂದ ಕರಿಬೇವು, ಕತ್ತರಿಸಿಟ್ಟುಕೊಂಡ ಹಸಿಮೆಣಸು, ಈರುಳ್ಳಿ ಹಾಕಿ ಬಾಡಿಸಿಕೊಳ್ಳಿ. ಇದಕ್ಕೆ ಪುಡಿಮಾಡಿಟ್ಟುಕೊಂಡ ಇಡ್ಲಿಯನ್ನು ಸುರಿಯಿರಿ, ಉಪ್ಪು (ನೋಡಿಕೊಂಡು ಸ್ವಲ್ಪವೇ ಹಾಕಿ, ಏಕೆಂದರೆ ಇಡ್ಲಿ ಮಾಡುವಾಗಲೇ ಉಪ್ಪು ಹಾಕಿರುತ್ತೇವೆ) ಸಕ್ಕರೆ ಹಾಕಿ ಚೆನ್ನಾಗಿ ಬಿಸಿಯಾಗುವವರೆಗೆ ಎಲ್ಲವನ್ನೂ ಸೇರಿಸಿ ಮಗುಚಿ. ಕೆಳಗಿಳಿಸಿ, ಲಿಂಬು ರಸ, ತೆಂಗಿನ ತುರಿ, ಕೊತ್ತಂಬರಿಸೊಪ್ಪು ಹಾಕಿ ಮತ್ತೊಮ್ಮೆ ಮಗುಚಿ ಬಿಸಿ, ಬಿಸಿ ಸರ್ವ್ ಮಾಡಿ. ವಿಶೇಷ ಪರಿಮಳ–ರುಚಿಯೊಂದಿಗೆ ಎಲ್ಲರಿಗೂ ಇಷ್ಟವಾಗುತ್ತೆ ಇಡ್ಲಿ ಉಪ್ಪಿಟ್ಟು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.