ADVERTISEMENT

ಬೆಂಡೆಯ ತೊಟ್ಟನ್ನು ಕತ್ತರಿಸಿ ಬಿಸಾಕ್ತಿದೀರಾ? ಹಾಗಾದ್ರೆ ಈ ರೆಸಿಪಿ ನಿಮಗಾಗಿಯೇ

ಪೃಥೆಮುನ್ನಿ
Published 7 ಫೆಬ್ರುವರಿ 2026, 9:56 IST
Last Updated 7 ಫೆಬ್ರುವರಿ 2026, 9:56 IST
<div class="paragraphs"><p>ಬೆಂಡೆಕಾಯಿ</p></div>

ಬೆಂಡೆಕಾಯಿ

   

ಬಹುಶಃ ದೇಹಕ್ಕೆ ಬೇಕಿರುವ ಪೌಷ್ಟಿಕಾಂಶಗಳ ದೃಷ್ಟಿಯಿಂದ ನೋಡಿದರೆ ಅತ್ಯಂತ ಶ್ರೀಮಂತ ತರಕಾರಿಗಳ ಪಟ್ಟಿಯಲ್ಲಿ ಟಾಪ್‌ಟೆನ್‌ನಲ್ಲಿ ಇರುವಂಥದ್ದು ಬೆಂಡೆಕಾಯಿ. ಬಹುಶಃ ಇಂಥದ್ದೊಂದು ತರಕಾರಿ ಅಸ್ತಿತ್ವದಲ್ಲೇ ಇರದಿದ್ದರೆ ದೈನಂದಿನ ಅಗತ್ಯ ಜೀವಸತ್ವಗಳ ಸಮತೋಲನವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಆದರೆ ಅದರಲ್ಲಿ ಲೋಳೆ (ನೋಳೆ) ಅಂಶ ಇರುತ್ತದೆ ಎಂಬ ಕಾರಣಕ್ಕೆ ಒಂದಷ್ಟು ಮಂದಿಗೆ ಅದರಲ್ಲೂ ಮಕ್ಕಳಿಗೆ ಬೆಂಡೇ ಕಾಯಿ ಇಷ್ಟವಾಗುವುದಿಲ್ಲ. ಹಾಗೊಂದೊಮ್ಮೆ ನೀವು ಬೆಂಡೆಯ ಬಗೆಗೆ ಮೂಗು ಮುರಿದರೆ, ಬಹಳ ದೊಡ್ಡ ನಷ್ಟ ಮಾಡಿಕೊಂಡಂತೆಯೇ ಸರಿ.

ಮೊದಲಿಗೆ, ನಮ್ಮ ದೇಹಕ್ಕೆ ಪ್ರತಿದಿನ ಶಿಫಾರಸು ಮಾಡಲಾದ ವಿಟಮಿನ್‌-ಸಿ ಯ ಶೇ 40ರಷ್ಟು (ಒಂದು ಬೆಂಡೆಯಲ್ಲಿ 75 ಮಿಲಿಗ್ರಾಂ) ಪಾಲು ಕೇವಲ 100 ಗ್ರಾಂ ಬೆಂಡೆಕಾಯಿಯಿಂದಲೇ ಸಿಕ್ಕುಬಿಡುತ್ತದೆ ಎಂದರೆ ನಂಬುತ್ತೀರಾ? ದೇಹದ ದೃಷ್ಟಿ, ಚರ್ಮದ ಆರೋಗ್ಯ, ರೋಗನಿರೋಧಕ ಶಕ್ತಿಯನ್ನು ನಿರ್ಧರಿಸುವುದು ವಿಟಮಿನ್‌–ಸಿ. ಜೊತೆಗೆ ಕ್ಯಾಲ್ಶಿಯಂ ಸಹ ಇವುಗಳಿಗೆ ಅಗತ್ಯ. ಇವೆರಡೂ ಬೆಂಡೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿದೆ. ಹೀಗಾಗಿ ದೃಷ್ಟಿಯ ಸಮಸ್ಯೆ ಇದ್ದವರಿಗೆ ಬೆಂಡೆ ಸೇವನೆ ತೀರಾ ಸಹಕಾರಿ. ಕಾಂತಿಯುತ ಚರ್ಮೆ ಇರಬೇಕೆಂಬುದು ಎಲ್ಲರ ಬಯಕೆ. ಅದರಲ್ಲೂ ಹೆಣ್ಣುಮಕ್ಕಳು ಮುಖದ ಕಾಂತಿಗೆ ಏನೇನೋ ಸರ್ಕಸ್‌ ಮಾಡುತ್ತಿರುತ್ತಾರೆ. ಅವೆಲ್ಲಕ್ಕಿಂಥ ಉತ್ತಮ ಬೆಂಡೆಯ ಸೇವನೆ. ಅಲ್ಲದೇ, ತುರಿಕೆಯಂಥ ಸಣ್ಣಪುಟ್ಟ ಚರ್ಮದ ಸೋಂಕು ನಿವಾರಣೆಗೂ ತಜ್ಞರು ಬೆಂಡೆಯನ್ನು ಶಿಫಾರಸು ಮಾಡುತ್ತಾರೆ. ಬೆಂಡೆಯಿಂದಾಗಿ ನಮ್ಮ ರೋಗ ನಿರೋಧಕ ಶಕ್ತಿಯೂ ವೃದ್ಧಿಸಿ, ವೈರಾಣು ಸೋಂಕಿನಂಥ ಸಮಸ್ಯೆಯಿಂದ ದೂರವಿರಬಹುದು.

ADVERTISEMENT

ವಿಟಮಿನ್‌–ಸಿ ಒಂದೇ ಅಲ್ಲ, ಅತ್ಯಂತ ಕಡಿಮೆ ಕ್ಯಾಲೋರಿಯ (ಕೇವಲ 30 ಕ್ಯಾಲೋರಿ) ಈ ತರಕಾರಿಯಲ್ಲಿ ನಿಮಗೆ ಶೇ 7.6ರಷ್ಟು ಕಾರ್ಬೋಹೈಡ್ರೇಟ್ಸ್, ಶೇ 3.2 ನಾರಿನಂಶ, ಶೇ 2 ಪ್ರೊಟೀನ್, 75 ಮಿಲಿಗ್ರಾಂ ಸುಣ್ಣ, ಮೆಗ್ನೀಶಿಯಂ, ಫೋಲೆಟ್‌ಗಳ ಜತೆಗೆ 57 ಮಿಲಿಗ್ರಾಂ ‘ಎ’ ಜೀವಸತ್ವವೂ ಇದೆ.

ನೀವೊಂದೊಮ್ಮೆ ಸ್ಥೂಲಕಾಯದವರಾಗಿದ್ದು, ತೂಕ ಕಡಿಮೆ ಮಾಡಿಕೊಳ್ಳಬೇಕೆಂದಿದ್ದರೆ ಬೆಂಡೆಯನ್ನು ನಿರಾಕರಿಸುವಂತೆಯೇ ಇಲ್ಲ. ಏಕೆಂದರೆ ಇದರಲ್ಲಿ ಹೇರಳವಾಗಿರುವ ಫೈಬರ್ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಫೈಬರ್‌ ಜೀರ್ಣಕ್ರಿಯೆಯನ್ನು ಪ್ರಚೋದಿಸಿ, ಗ್ಲೂಕೋಸ್‌ ಅನ್ನು ಒಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ ಮಧುಮೇಹಿಗಳಿಗೆ ಹೇಳಿ ಮಾಡಿಸಿದ ತರಕಾರಿ. ಇಷ್ಟಕ್ಕೇ ಮುಗಿಯುವುದಿಲ್ಲ. ಬೆಂಡೆಯಲ್ಲಿನ ಆ್ಯಂಟಿ ಆಕ್ಸಿಡೆಂಟ್‌ಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ನಿಮ್ಮ ಹೃದಯವನ್ನು ಆರೋಗ್ಯವಾಗಿಡುತ್ತದೆ.

ಹೀಗೆ ಪಟ್ಟಿ ಮಾಡುತ್ತ ಹೋದರೆ ಇದು ಅಡುಗೆ ಟಿಪ್ಸ್‌ನೀಡುವ ಲೇಖನದ ಬದಲು ಆರೋಗ್ಯದ ಬರಹವಾದೀತು. ಒಂದೇ ಮಾತಲ್ಲಿ ಹೇಳುವುದಾದರೆ, ಆರೋಗ್ಯವನ್ನು ಪ್ರೀತಿಸುವವರು ಬೆಂಡೆಯನ್ನು ಹೇಗೆ ನಿರಾಕರಿಸಿಯಾರು? ಇಂತಿಪ್ಪ ಬೆಂಡೆಯ ಎಲ್ಲ ಪೋಷಕಾಂಶಗಳೂ ಹೆಚ್ಚಾಗಿ ಅಡಗಿರುವುದು ನಾವು ತುಂಡರಿಸಿ ಬಿಸಾಡುವ ಬೆಂಡೆಕಾಯಿಯ ತೊಟ್ಟಿನ ಭಾಗದಲ್ಲೇ. ಅಯ್ಯೋ ಹಾಗಾದರೆ, ಇಷ್ಟು ದಿನ ನಾವು ಎಷ್ಟು ಲಾಸ್‌ ಮಾಡಿಕೊಂಡಿದ್ದೀವಲ್ಲಾ ಅಂತ ಯೋಚಿಸ್ತಿದೀರಾ? ಇನ್ನು ಅದಕ್ಕೆ ಛಾನ್ಸೇ ಇಲ್ಲ. ಏಕೆಂದರೆ ಹಾಗೆ ಕತ್ತರಿಸಿ ಬಿಸಾಡುವ ತೊಟ್ಟು – ಮೂತಿ (ತುದಿ)ಯಲ್ಲೇ ಅತ್ಯದ್ಭುತ, ರುಚಿಕರ ರೆಸಿಪಿಯೊಂದನ್ನು ಇವತ್ತು ನಿಮಗೆ ಹೇಳಿ ಕೊಡ್ತೀನಿ. ಆಹ್ಮಾಂ, ಬೆಂಡೆ ತೊಟ್ಟಿನಲ್ಲಿ ರೆಸಿಪೀನಾ? ಅಂತ ಮೂಗು ಮುರಿಯಬೇಡಿ. ನೀವು ಒಮ್ಮೆ ಬೆಂಡೆ ತೊಟ್ಟಿನ ಚಟ್ನಿ ಮಾಡಿಕೊಂಡು ರುಚಿ ನೋಡಿದರೆ, ಇನ್ಯಾವತ್ತೂ ಬೆಂಡೆ ತೊಟ್ಟನ್ನು ಬಿಸಾಡಲ್ಲ.

ಬೇಕಾಗುವ ಸಾಮಗ್ರಿ: ಒಂದು ಹಿಡಿಯಷ್ಟು ಬೆಂಡೆಕಾಯಿಯ ತೊಟ್ಟು–ಮೂತಿ. ಸ್ಪಲ್ಪ ಹಸಿ ತೆಂಗಿನ ತುರಿ, ನಾಲ್ಕೆಂಟು ಮೆಣಸಿನಕಾಳು, ಅರ್ಧ ಚಮಚ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪವೇ ಸ್ವಲ್ಪ ಹುಣಸೆಹಣ್ಣು. ಎರಡು ಟೇಬಲ್‌ಸ್ಪೂನ್‌ಅಡುಗೆ ಎಣ್ಣೆ. ಇಂಗು–ಸಾಸಿವೆ–ಉದ್ದಿನ ಬೇಳೆ ಸೇರಿದಂತೆ ಒಗ್ಗರಣೆ ಸಾಮಗ್ರಿ.

ಮಾಡುವ ವಿಧಾನ: ಮೊದಲಿಗೆ ಸಣ್ಣ ಪ್ಯಾನ್‌ನಲ್ಲಿ ಒಂದು ಚಮಚ ಎಣ್ಣೆ ಹಾಕಿಕೊಂಡು, ಸ್ವಚ್ಛಗೊಳಿಸಿಕೊಂಡ ಬೆಂಡೆಯ ತೊಟ್ಟು ಹಾಗೂ ತುದಿಯನ್ನು ಸಣ್ಣ ಉರಿಯಲ್ಲಿ ಚೆನ್ನಾಗಿ ಬಾಡಿಸಿಕೊಳ್ಳಿ. ಹಸಿರು ಭಾಗ ಅಲ್ಲಲ್ಲಿ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿದುಕೊಳ್ಳಬೇಕು. ಇಲ್ಲದಿದ್ದರೆ, ಚಟ್ಟಣಿ ಒಗರು ಬರುತ್ತದೆ. ಅದು ತಣ್ಣಗಾದ ಬಳಿಕ, ತೆಂಗಿನ ತುರಿ, ಮೆಣಸಿನಕಾಳು, ಜೀರಿಗೆ, ಹುಣಸೆ, ಉಪ್ಪು ಎಲ್ಲವನ್ನೂ ಮಿಕ್ಸಿ ಜಾರ್‌ಗೆ ಹಾಕಿಕೊಂಡು, ತುಸುವೇ ನೀರು ಸೇರಿಸಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ್ದನ್ನು ಸಣ್ಣ ಬೌಲ್‌ಗೆ ಹಾಕಿ, ಮೇಲಿಂದ ಇಂಗಿನ ಒಗ್ಗರಣೆಯನ್ನು ಕೊಟ್ಟುಕೊಂಡರೆ ಬೆಂಡೆ ಗೊಜ್ಜು ಅಥವಾ ಚಟ್ನಿ ಸಿದ್ಧ.

ದೋಸೆ, ರೊಟ್ಟಿ, ಚಪಾತಿಗಳಿಗೆ ಮಾತ್ರವೇ ಅಲ್ಲ, ಬಿಸಿ ಬಿಸಿ ಅನ್ನಕ್ಕೂ ಕಲೆಸಿಕೊಂಡು ಊಟ ಮಾಡಿದರೆ ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.