ADVERTISEMENT

ನವರಾತ್ರಿ ಸಂಭ್ರಮಕ್ಕೆ ಸಿಂಪಲ್‌ ಸಿಹಿಭಕ್ಷ್ಯ

ಋತ ರಾಘವಿ
Published 23 ಸೆಪ್ಟೆಂಬರ್ 2022, 20:00 IST
Last Updated 23 ಸೆಪ್ಟೆಂಬರ್ 2022, 20:00 IST
ಪನೀರ್ ಜಿಲೇಬಿ
ಪನೀರ್ ಜಿಲೇಬಿ   

ಒಂಬತ್ತು ದಿನಗಳ ಕಾಲ ನಡೆಯುವ ನವರಾತ್ರಿ ಹಬ್ಬದಲ್ಲಿ ಪ್ರತಿ ದಿನವೂ ಒಂದೊಂದು ಸಿಹಿ ಭಕ್ಷ್ಯ ತಯಾರಿಸುವುದು ವಾಡಿಕೆ.ಬೊಂಬೆ ಕೂರಿಸುವ ಮನೆಗಳಲ್ಲಂತೂ ತರಹೇವಾರಿ ಸಿಹಿ ಇರಲೇಬೇಕು. ಇನ್ನೇನು ಹಬ್ಬ ಶುರುವಾಗುತ್ತಿದೆ. ಏನೇನು ಸಿಹಿ ಮಾಡಬೇಕೆಂದು ಯೋಚಿಸುತ್ತಿದ್ದೀರಲ್ಲವಾ? ಇಲ್ಲಿವೆ ನೋಡಿ ಒಂದಷ್ಟು ರೆಸಿಪಿಗಳು.

ಬಾದಾಮಿ ಹಲ್ವಾ

ಬೇಕಾಗುವ ಸಾಮಗ್ರಿಗಳು: ನೆನೆಸಿ ಸಿಪ್ಪೆ ತೆಗೆದ ಬಾದಾಮಿ ಒಂದು ಕಪ್, ತುಪ್ಪ ಅರ್ಧ ಕಪ್, ರವೆ ಕಾಲು ಕಪ್‌, ಹಾಲು ಒಂದು ಲೋಟ, ಸಕ್ಕರೆ ಒಂದು ಕಪ್, ಹಾಲಿನಲ್ಲಿ ನೆನೆಸಿದ ಕೇಸರಿ ದಳ ಅರ್ಧ ಚಮಚ, ಏಲಕ್ಕಿ ಪುಡಿ ಅರ್ಧ ಚಮಚ, ಪಿಸ್ತಾ ಅಲಂಕಾರಕ್ಕೆ

ADVERTISEMENT

ಮಾಡುವ ವಿಧಾನ: ಒಂದು ಮಿಕ್ಸಿ ಜಾರಿಗೆ 1 ಕಪ್ ನೆನೆಸಿ ಸಿಪ್ಪೆ ತೆಗೆದ ಬಾದಾಮಿ, ಕಾಲು ಕಪ್ ನೀರು ಹಾಕಿ ನುಣ್ಣಗೆ ರುಬ್ಬಿ.ಈಗ ಒಂದು ಬಾಣಲೆಗೆ ಅರ್ಧ ಕಪ್ ತುಪ್ಪ, ಕಾಲು ಕಪ್ ರವೆ ಹಾಕಿ 3 ರಿಂದ 4 ನಿಮಿಷ ಹುರಿಯಿರಿ.ನಂತರ ಇದಕ್ಕೆ ರುಬ್ಬಿದ ಬಾದಾಮಿ ಹಾಕಿ ಚೆನ್ನಾಗಿ ಕಲಸಿ. ಮೂರು ನಿಮಿಷ ಮಧ್ಯಮ ಉರಿಯಲ್ಲಿ ಒಂದೇ ಸಮನೆ ಮಗುಚುತ್ತಾ ಹುರಿಯಿರಿ. ಹಾಗೆ ಕಲಸುತ್ತಾ 2 ದೊಡ್ಡ ಚಮಚ ತುಪ್ಪ ಹಾಕಿ 2 ನಿಮಿಷ ಕಲಸಿ.ನಂತರ ಇದಕ್ಕೆ ಹಾಲು ಹಾಕಿ ಚೆನ್ನಾಗಿ ಗಂಟಿಲ್ಲದಂತೆ 5 ನಿಮಿಷ ತಿರುವಬೇಕು. ಇದಕ್ಕೆ ಸಕ್ಕರೆ ಹಾಕಿ, ಸಕ್ಕರೆ ಕರಗುವವರೆಗೂ ಚೆನ್ನಾಗಿ ತಿರುವಿ. ನಂತರ ಇದಕ್ಕೆ ಹಾಲಿನಲ್ಲಿ ನೆನೆಸಿದ ಕೇಸರಿ ದಳ ಹಾಕಿ.ಮಧ್ಯಮ ಉರಿಯಲ್ಲಿ ಇಡಿ. ತಳ ಬಿಡಲು ಪ್ರಾರಂಭಿಸಿದಾಗ ಇದಕ್ಕೆ ಅರ್ಧ ಚಮಚ ಏಲಕ್ಕಿ ಪುಡಿ ಹಾಕಿ.ಈಗ ಇದನ್ನು ಬಟ್ಟಲಿಗೆ ಹಾಕಿ ಮೇಲೆ ಪಿಸ್ತಾ ಚೂರುಗಳಿಂದ ಅಲಂಕರಿಸಿದರೆ ರುಚಿಯಾದ ಬಾದಾಮಿ ಹಲ್ವಾ ಸವಿಯಲು ಸಿದ್ಧ.

****

ಪನೀರ್ ಜಿಲೇಬಿ

ಬೇಕಾಗುವ ಸಾಮಗ್ರಿಗಳು: 200 ಗ್ರಾಂ ಪನೀರ್‌, ಸಕ್ಕರೆ ಒಂದು ಲೋಟ, ಏಲಕ್ಕಿ ಪುಡಿ, ಎರಡು ಚಮಚ ಕಾರ್ನ್‌ಪ್ಲೋರ್‌, ಎರಡು ಚಮಚ ಮೈದಾ, ಒಂದು ಚಿಟಿಕೆ ಅಡುಗೆ ಸೋಡ, ಒಂದು ಬಟ್ಟಲು ಹಾಲು. ಸ್ವಲ್ಪ ಅರಿಶಿನ. ಕೇಸರಿ ದಳ.

ಮಾಡುವ ವಿಧಾನ: ಒಂದು ಲೋಟ ಸಕ್ಕರೆಗೆ ಕಾಲು ಲೋಟದಷ್ಟು ನೀರು ಹಾಕಿ. ಸಕ್ಕರೆ ಪಾಕ ಮಾಡಿಟ್ಟುಕೊಳ್ಳಬೇಕು. ಇದಕ್ಕೆ ಏಲಕ್ಕಿ ಪುಡಿ ಹಾಕಿ. ಎರಡು ಹನಿ ನಿಂಬೆರೆಸ ಹಾಗೂ ಕೇಸರಿ ದಳವನ್ನು ಹಾಕಿ.

ಪನೀರ್‌ ಅನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ಕಾರ್ನ್‌ ಪ್ಲೋರ್‌, ಮೈದಾ, ಅಡುಗೆ ಸೋಡ, ಸ್ವಲ್ಪ ಸ್ವಲ್ಪ ಹಾಲು ಹಾಕಿಕೊಂಡು ಚೆನ್ನಾಗಿ ಹದ ಮಾಡಿಟ್ಟುಕೊಳ್ಳಿ. ಅಗತ್ಯವೆನಿಸಿದರೆ ಫುಡ್‌ ಕಲರ್‌ ಬಳಸಬಹುದು. ಇಲ್ಲವಾದರೆ, ಅರಿಶಿನ ಬಳಸಿದರೂ ಸಾಕು. ಈಗ ಹದ ಮಾಡಿಟ್ಟುಕೊಂಡ ಹಿಟ್ಟನ್ನು ಸಾಸ್‌ ಡಬ್ಬಕ್ಕೆ ತುಂಬಿ, ಕಾದ ಎಣ್ಣೆಗೆ ವೃತ್ತಾಕಾರದಲ್ಲಿ ಬಿಡಿ. ಐದು ನಿಮಿಷಗಳ ಎಣ್ಣೆಯಲ್ಲಿ ಕಾಯಿಸಿದ ಮೇಲೆ ಸಿದ್ಧಗೊಂಡ ಜಿಲೇಬಿಯನ್ನು ಸಕ್ಕರೆ ಪಾಕದಲ್ಲಿ ನೆನೆಸಿಡಿ. ಗರಿ ಗರಿಯಾದ ಪನೀರ್ ಜಿಲೇಬಿ ತಿನ್ನಲು ಸಿದ್ಧ.

****

ಕೊಬ್ಬರಿ ಲಡ್ಡು

ಬೇಕಾಗುವ ಸಾಮಗ್ರಿಗಳು: 1 ಚಮಚ ತುಪ್ಪ, ಎರಡೂವರೆ ಕಪ್‌ ತುರಿದ ತೆಂಗಿನಕಾಯಿ, 1 ಕಪ್‌ ಬೆಲ್ಲ, ಕಾಲು ಚಮಚ ಏಲಕ್ಕಿ ಪುಡಿ.

ಮಾಡುವ ವಿಧಾನ: ದೊಡ್ಡ ಕಡಾಯಿಯಲ್ಲಿ ತುಪ್ಪವನ್ನು ಬಿಸಿ ಮಾಡಿ, ತೆಂಗಿನಕಾಯಿ ತುರಿ ಸೇರಿಸಿ. ತೇವಾಂಶ ಒಣಗುವವರೆಗೂ ಹುರಿಯಿರಿ. ಈ ಮಿಶ್ರಣಕ್ಕೆ ಬೆಲ್ಲ ಸೇರಿಸಿ ಮತ್ತು ಮಧ್ಯಮ ಉರಿಯಲ್ಲಿ ಬೇಯಿಸಿ. ಬೆಲ್ಲ ಕರಗುವ ತನಕ ಬೇಯಿಸಬೇಕು. ಇದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಪಾತ್ರೆ ಇಳಿಸಿ.

ಸಿದ್ಧವಾಗಿರುವ ಮಿಶ್ರಣವನ್ನು ತೆಗೆದುಕೊಂಡು ಉಂಡೆ ಮಾಡಿ. ಸವಿಯಲು ಕೊಬ್ಬರಿ ಲಡ್ಡು ಸಿದ್ಧವಾಗುತ್ತದೆ. ಈ ಲಡ್ಡುಗಳನ್ನು ಗಾಳಿಯಾಡದ ಪಾತ್ರೆಯಲ್ಲಿ ಮಚ್ಚಿಟ್ಟರೆ ವಾರಗಳ ಕಾಲ ಇಟ್ಟು, ತಿನ್ನಬಹುದು.

****

ಬಾಳೆಹಣ್ಣಿನ ಹಲ್ವಾ

ಬೇಕಾಗುವ ಸಾಮಗ್ರಿಗಳು: ಒಂದು ಕೆ.ಜಿ. ಚೆನ್ನಾಗಿ ಮಾಗಿದ ಬಾಳೆ ಹಣ್ಣು, ಕಾಲು ಕಪ್‌ ತುಪ್ಪ, ಅರ್ಧ ಕೆ.ಜಿ. ಬೆಲ್ಲ, ಕಾಲು ಕಪ್‌ ನೀರು, ಕಾಲು ಚಮಚ ಏಲಕ್ಕಿ ಪುಡಿ, 3 ಚಮಚ ಹುರಿದ ಗೋಡಂಬಿ.

ಮಾಡುವ ವಿಧಾನ: ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದು, ಹೋಳುಗಳಾಗಿ ಕತ್ತರಿಸಿ. ಮಿಕ್ಸಿಗೆ ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ.‌ ದೊಡ್ಡ ಕಡಾಯಿಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಅದಕ್ಕೆ ಈ ಪೇಸ್ಟ್‌ ಅನ್ನು ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿ. ಬಾಳೆಹಣ್ಣಿನ ಹಸಿ ವಾಸನೆ ಹೋಗುವವರೆಗೂ ಬೇಯಿಸಿ.

ನಂತರ ಮತ್ತೊಂದು ಬಾಣಲೆಯಲ್ಲಿ ಬೆಲ್ಲಕ್ಕೆ ನೀರು ಹಾಕಿ ಕರಗಿಸಿ. ಈ ಬೆಲ್ಲದ ಪಾಕವನ್ನು ಬಾಳೆಹಣ್ಣಿನ ಮಿಶ್ರಣದ ಮೇಲೆ ಹಾಕಿ, ಚೆನ್ನಾಗಿ ಬೇಯಿಸಿ. ಈಗ ಏಲಕ್ಕಿಪುಡಿ, ಗೋಡಂಬಿ ಬೆರೆಸಿ. ಹಲ್ವಾವನ್ನು ಬೇಕಿಂಗ್‌ ಪೇಪರ್‌ನಿಂದ ಮುಚ್ಚಿದ ಟ್ರೇಗೆ ವರ್ಗಾಯಿಸಿ. ಮೂರು ಗಂಟೆಗಳ ಕಾಲ ಹಾಗೆ ಇಡಿ. ನಂತರ ಬೇಕಾದ ಆಕಾರದಲ್ಲಿ ಕತ್ತರಿಸಿಕೊಂಡರೆ, ಬಾಳೆ ಹಣ್ಣಿನ ಹಲ್ವಾ ಸಿದ್ಧ.

****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.