
ಬೆಳ್ಳುಳ್ಳಿ ಗೊಜ್ಜು
ಎಐ ಚಿತ್ರ
ಬೆಳ್ಳುಳ್ಳಿ ಕೇವಲ ಅಡುಗೆಗೆ ಮಾತ್ರವಲ್ಲ, ರೋಗನಿರೋಧಕ ಶಕ್ತಿ ಹೆಚ್ಚಿಸುವುದಕ್ಕೆ ರಾಮಬಾಣವಾಗಿದೆ. ಅಷ್ಟೇ ಅಲ್ಲ, ಹೃದಯದ ಆರೋಗ್ಯ ಕಾಪಾಡುವುದು, ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ನಿಯಂತ್ರಿಸುವುದು, ಜೀರ್ಣಕ್ರಿಯೆ ಸುಧಾರಿಸುವುದು, ಸೋಂಕುಗಳೊಂದಿಗೆ ಹೋರಾಡುವುದು ಮತ್ತು ಮೆದುಳಿನ ಕಾರ್ಯವನ್ನು ಹೆಚ್ಚಿಸುವುದು ಸೇರಿದಂತೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದನ್ನು ಹಸಿಯಾಗಿ, ಜೇನುತುಪ್ಪದೊಂದಿಗೆ ತಿನ್ನಬಹುದು.
ಹೀಗೆ ಯುವಕರು, ಯುವತಿಯರು, ಗೃಹಿಣಿಯರು ಮನೆಯಲ್ಲಿ ಕೇವಲ 2 ನಿಮಿಷದಲ್ಲೇ ನಾಲಿಗೆಗೆ ರುಚಿ ನೀಡುವ ಬೆಳ್ಳುಳ್ಳಿ ಗೊಜ್ಜು ರೆಸಿಪಿಯನ್ನು ಸುಲಭವಾಗಿ ಮಾಡುವುದನ್ನು ತಿಳಿಯೋಣ.
ಬೆಳ್ಳುಳ್ಳಿ ಗೊಜ್ಜು ಮಾಡಲು ಬೇಕಾಗುವ ಸಾಮಾಗ್ರಿಗಳು
ಬೆಳ್ಳುಳ್ಳಿ, ಅಡುಗೆ ಎಣ್ಣೆ, ಈರುಳ್ಳಿ, ಬ್ಯಾಡಗಿ ಮೆಣಸಿನಕಾಯಿ, ಉಪ್ಪು, ಹುಣಸೆಹಣ್ಣು, ಸಾಸಿವೆ, ಮೆಂತ್ಯ, ಕಾಳು ಮೆಣಸು, ಜೀರಿಗೆ, ಧನಿಯಾ, ಕಡಲೆಬೆಳೆ, ಉದ್ದಿನಬೆಳೆ, ಕರಿಬೇವು.
ಮಾಡುವ ವಿಧಾನ
ಮೊದಲು ಒಂದು ಬಾಣಲೆಯಲ್ಲಿ ಸಾಸಿವೆ, ಮೆಂತ್ಯ, ಕಾಳು ಮೆಣಸು, ಜೀರಿಗೆ, ಧನಿಯಾ, ಬ್ಯಾಡಗಿ ಮೆಣಸಿನಕಾಯಿ ಹಾಕಿ ಹುರಿಯಿರಿ. ಇದು ತಣ್ಣಗಾದ ಬಳಿಕ ಪುಡಿ ಮಾಡಿಕೊಳ್ಳಿ. ಮತ್ತೊಂದು ಬಾಣಲೆಯಲ್ಲಿ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಕೂಡಲೇ ಅದಕ್ಕೆ ಕಟ್ ಮಾಡಿದ ಈರುಳ್ಳಿ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಮತ್ತೆ ಇದಕ್ಕೆ 20 ಬಿಡಿಸಿಟ್ಟುಕೊಂಡ ಬೆಳ್ಳುಳ್ಳಿ ಹಾಕಿ ಮಿಶ್ರಣ ಮಾಡಿ. ನಂತರ ಅದಕ್ಕೆ ಹುಣಸೆಹಣ್ಣು, ಉಪ್ಪು ಹಾಕಿ. ನಂತರ ಈ ಮಿಶ್ರಣ ತಣ್ಣಗಾದ ಬಳಿಕ ರುಬ್ಬಿಕೊಳ್ಳಿ. ನಂತರ ಮತ್ತೆ ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ, ಕಡಲೆಬೆಳೆ, ಉದ್ದಿನಬೆಳೆ, ಕರಿಬೇವು, ಬ್ಯಾಡಗಿ ಮೆಣಸಿನಕಾಯಿ ಹಾಗೂ ಒಂದಿಷ್ಟು ಬೆಳ್ಳುಳ್ಳಿ ಹಾಕಿ ಹುರಿಯಿರಿ. ಬಳಿಕ ಇದಕ್ಕೆ ಪುಡಿ ಮಾಡಿಕೊಂಡ ಮಸಾಲೆ, ರುಬ್ಬಿಕೊಳ್ಳಿ ಮಿಶ್ರಣವನ್ನು ಸೇರಿಸಿ. ನಂತರ ಅದಕ್ಕೆ ಖಾರದ ಪುಡಿ, ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಂತರ ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ. ಈಗ ನಾಲಿಗೆಗೆ ರುಚಿ ಕೊಡುವ ಬೆಳ್ಳುಳ್ಳಿ ಗೊಜ್ಜು ಸವಿಯಲು ರೆಡಿ. ಈ ಬೆಳ್ಳುಳ್ಳಿ ಗೊಜ್ಜನ್ನು ಅನ್ನ, ಚಪಾತಿ ಜೊತೆಗೆ ತಿನ್ನಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.