
ಚಿತ್ರ:ಗೆಟ್ಟಿ
ಭಾರತದಲ್ಲಿ ದೊಡ್ಡ ಆತಂಕವಾಗಿ ಹೊರಹೊಮ್ಮಿದ ಆ್ಯಂಟಿಬಯಾಟಿಕ್‌ನ ದುರುಪಯೋಗ ಮತ್ತುಆ್ಯಂಟಿಬಯಾಟಿಕ್ ಸೇವನೆ ಈಗ ಚರ್ಚಿಸಬೇಕಾದ ವಿಷಯವಾಗಿ ಮಾತ್ರ ಉಳಿದಿಲ್ಲ. ಇದೊಂದು ಬಹಳ ಯೋಚನಾರ್ಹ ಹಾಗೂ ವೈದ್ಯಕೀಯ ಸಮಸ್ಯೆಯಾಗಿ ಬದಲಾಗಿದೆ. ಆಂಟಿಮೈಕ್ರೋಬಯಲ್ ರೆಸಿಸ್ಟೆನ್ಸ್ (ಎಎಂಆರ್) ಎಂಬ ಈ ಸಮಸ್ಯೆಯು ಬಹಳ ಆತಂಕಕಾರಿಯಾಗಿ ಬದಲಾಗುತ್ತಿದೆ. ಈ ಸಮಸ್ಯೆ ಆತಂಕಕಾರಿಯಾಗುವುದಕ್ಕೆ ಮುಖ್ಯ ಕಾರಣ ವೈದ್ಯರ ಸಲಹೆ ಇಲ್ಲದೆ ಆ್ಯಂಟಿಬಯಾಟಿಕ್‌ಗಳ ವ್ಯಾಪಕ ಬಳಕೆಯಾಗಿದೆ.
ಸ್ವಯಂ ಚಿಕಿತ್ಸೆ, ತಪ್ಪು ಬಳಕೆ, ಪೂರ್ತಿ ಕೋರ್ಸ್ ಮುಗಿಸದಿರುವುದು ಇವೆಲ್ಲವೂ ಔಷಧಕ್ಕೆ ಬಗ್ಗದ ಸೋಂಕುಗಳನ್ನು ರಹಸ್ಯವಾಗಿ ಜಾಸ್ತಿ ಮಾಡುತ್ತಿವೆ. ಹಾಗಾಗಿ ಭಾರತ ದೇಶ ಈಗ ಸೂಪರ್ ಬಗ್ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದು ಆಧುನಿಕ ವೈದ್ಯಕೀಯ ವ್ಯವಸ್ಥೆಯ ಅಡಿಪಾಯವನ್ನು ಅಲ್ಲಾಡಿಸಬಹುದು ಎಂಬುದು ಇದರ ತೀವ್ರತೆಯನ್ನು ತಿಳಿಸುತ್ತದೆ.
ಭಾರತದ ಎಎಂಆರ್ ಸಮಸ್ಯೆ ಈಗ ನಿಚ್ಚಳ:
ಸಾಮಾನ್ಯ ಆ್ಯಂಟಿಬಯಾಟಿಕ್‌ಗಳಿಗೆ ಬಗ್ಗದ ಸೋಂಕುಗಳು ಈಗ ಹೆಚ್ಚು ಕಾಣ ತೊಡಗಿವೆ. ಮೊದಲು ಸಾಮಾನ್ಯವಾಗಿ ಗುಣವಾಗುತ್ತಿದ್ದ ಸೋಂಕುಗಳು ಈಗ ತುಂಬಾ ಸಂಕೀರ್ಣ, ಗುಣವಾಗಲು ದೀರ್ಘಕಾಲಿಕ ತೆಗೆದುಕೊಳ್ಳುತ್ತಿವೆ. ರೋಗಿಗಳಿಗೆ ಈಗ ಹೆಚ್ಚು ಕಾಂಬಿನೇಷನ್‌ನ ಮಾತ್ರೆಗಳ ಅಗತ್ಯ ಬೀಳುತ್ತಿವೆ. ದೀರ್ಘಕಾಲ ಆಸ್ಪತ್ರೆ ವಾಸ್ತವ್ಯ, ಹೆಚ್ಚು ನಿಗಾ ವಹಿಸಬೇಕಾದ ಅವಶ್ಯಕತೆ ಬೀಳುತ್ತಿವೆ ಎಂದು ವೈದ್ಯರು ತಿಳಿಸುತ್ತಾರೆ. ಯಾಕೆಂದರೆ ಈಗ ಆರಂಭದಲ್ಲಿ ನೀಡುತ್ತಿದ್ದ ಆ್ಯಂಟಿಬಯಾಟಿಕ್‌ಗಳು ಕೆಲಸ ಮಾಡುತ್ತಿಲ್ಲ. ದೇಶದ ನಗರ-ಪಟ್ಟಣಗಳ ಚಿಕ್ಕ ಕ್ಲಿನಿಕ್‌ಗಳಲ್ಲಿ, ಪ್ರಸೂತಿ ವಾರ್ಡ್‌ಗಳಲ್ಲಿ, ಐಸಿಯುಗಳಲ್ಲಿ ಹಾಗೂ ಹೋಮ್ ಕೇರ್ ಸಂದರ್ಭದಲ್ಲಿಯೂ ಈ ಸಮಸ್ಯೆ ಎದ್ದು ಕಾಣಿಸುತ್ತಿದೆ. ಆ್ಯಂಟಿಬಯಾಟಿಕ್ ಪ್ರತಿರೋಧದ ಹೆಚ್ಚುತ್ತಿರುವ ಪ್ರಮಾಣ ಈ ಸಮಸ್ಯೆಯ ಕುರಿತು ಗಂಭೀರವಾಗಿ ಆಲೋಚಿಸಬೇಕಾದ ಅಗತ್ಯವನ್ನು ಸೂಚಿಸುತ್ತದೆ.
ಭಾರತದಲ್ಲಿ ಸ್ವಯಂ ಔಷಧಿ ಸಂಸ್ಕೃತಿ:
ಭಾರತದಲ್ಲಿ ಎಎಂಆರ್‌ಗೆ ಮುಖ್ಯ ಕಾರಣ, ಆಂಟಿಬಯಾಟಿಕ್ ತೆಗೆದುಕೊಳ್ಳುವ ಅಭ್ಯಾಸ. ಸ್ವಲ್ಪ ಜ್ವರ, ಗಂಟಲು ನೋವು ಬಂದರೂ ತಕ್ಷಣ ಆ್ಯಂಟಿಬಯಾಟಿಕ್ ತೆಗೆದುಕೊಳ್ಳುವ ಸಂಸ್ಕೃತಿ ಇದೆ. ಹಾಗಾಗಿ ಡಾಕ್ಟರ್ ಭೇಟಿ ಮಾಡದೇ ಆ್ಯಂಟಿಬಯಾಟಿಕ್ ತೆಗೆದುಕೊಳ್ಳಲಾಗುತ್ತದೆ. ಕಾನೂನಿನ ನಿರ್ಬಂಧವಿದ್ದರೂ ಅನೇಕ ಔಷಧ ಅಂಗಡಿಗಳು ಪ್ರಿಸ್ಕ್ರಿಪ್ಷನ್ ಇಲ್ಲದೇ ಆ್ಯಂಟಿಬಯಾಟಿಕ್ ಕೊಡುತ್ತವೆ. ತಮ್ಮ ಹಳೆಯ ಅನುಭವ, ಕುಟುಂಬದವರ ಸಲಹೆ, ಇಂಟರ್ನೆಟ್ ಜ್ಞಾನ ಇದೆಲ್ಲದರಿಂದ ಜನರು ತಮ್ಮ ಚಿಕಿತ್ಸೆ ತಾವೇ ಮಾಡಿಕೊಳ್ಳುತ್ತಾರೆ.
ಎಲ್ಲಾ ಸೋಂಕುಗಳಿಗೂ ಆ್ಯಂಟಿಬಯಾಟಿಕ್ ಬೇಕು ಎಂಬ ತಪ್ಪು ಗ್ರಹಿಕೆ ಇದಕ್ಕೆ ಇನ್ನೊಂದು ಕಾರಣ. ನಿಜವಾಗಿ ಜ್ವರ, ಕೆಮ್ಮು, ಶೀತ ಇವೆಲ್ಲಾ ವೈರಲ್ ಸೋಂಕುಗಳು, ಆ್ಯಂಟಿಬಯಾಟಿಕ್ ಇವುಗಳ ಮೇಲೆ ಒಂದು ಪೈಸೆಯೂ ಕೆಲಸ ಮಾಡುವುದಿಲ್ಲ. ಆದರೂ ‘ಏನಾದರೂ ತೆಗೆದುಕೊಂಡ್ರೆ ಬೇಗ ಗುಣವಾಗುತ್ತದೆ’ ಎಂಬ ನಂಬಿಕೆಯಿಂದ ತಪ್ಪು ಬಳಕೆ ಮಾಡಲಾಗುತ್ತದೆ.
ಡಾಕ್ಟರ್ ಸರಿಯಾಗಿ ಔಷಧಿ ಬರೆದರೂ ಅನೇಕರು ಅದನ್ನು ಪೂರ್ತಿ ಕೋರ್ಸ್ ಮುಗಿಸುವುದಿಲ್ಲ. ಲಕ್ಷಣ ಕಡಿಮೆಯಾದ ತಕ್ಷಣ ಮಾತ್ರೆ ನಿಲ್ಲಿಸುತ್ತಾರೆ. ಇದು ತುಂಬಾ ಅಪಾಯಕಾರಿ ಮತ್ತು ಮೂರ್ಖತನದ ಕೆಲಸವಾಗಿದೆ. ಆ್ಯಂಟಿಬಯಾಟಿಕ್ ಬ್ಯಾಕ್ಟೀರಿಯಾವನ್ನು ಕೊಲ್ಲಲು ಕೊಡಲಾಗುತ್ತದೆ. ಮೊದಮೊದಲು ಬಹಳಷ್ಟು ಬ್ಯಾಕ್ಟೀರಿಯಾ ಸಾಯುತ್ತದೆ. ಆದರೆ ಪೂರ್ತಿ ಕೋರ್ಸ್ ಮುಗಿಸದಿದ್ದರೆ ಅದರಲ್ಲಿ ಕೆಲವು ಬದುಕಿಕೊಳ್ಳುತ್ತವೆ. ಆ ಉಳಿದ ಬ್ಯಾಕ್ಟೀರಿಯಾಗಳು ಆ ಮಾತ್ರೆಗೆ ಬಗ್ಗದಂತೆ ಬದಲಾಗಿ, ಮುಂದೆ ಚಿಕಿತ್ಸೆ ಕೊಡುವುದು ಕಷ್ಟವಾಗುವಂತೆ ಮಾಡುತ್ತವೆ.
ಆ ಉಳಿದ ಮಾತ್ರೆಗಳನ್ನು ಮನೆಯಲ್ಲಿ ಇಟ್ಟುಕೊಂಡು ಮತ್ತೊಮ್ಮೆ ಬಳಸುವುದು ಅಥವಾ ಕುಟುಂಬದವರಿಗೆ ಕೊಡುವುದು ಇತ್ಯಾದಿ ಇಲ್ಲಿ ಮಾಡಲಾಗುತ್ತದೆ. ಹೀಗೆ ತಪ್ಪು ಮಾತ್ರೆ, ತಪ್ಪು ಡೋಸ್, ತಪ್ಪು ಅವಧಿ ಇತ್ಯಾದಿ ಸಮಸ್ಯೆ ಉಂಟಾಗುತ್ತದೆ. ಈ ಥರದ ಪ್ರತಿಯೊಂದು ತಪ್ಪು ಹೆಜ್ಜೆಯೂ ಬ್ಯಾಕ್ಟೀರಿಯಾಗಳಿಗೆ ಪ್ರತಿರೋಧ ಬೆಳೆಸಿಕೊಳ್ಳಲು ಒತ್ತಡ ಹೇರುತ್ತದೆ.
ಸಾಮಾನ್ಯ ಆ್ಯಂಟಿಬಯಾಟಿಕ್‌ಗಳು ಈಗ ಯಾಕೆ ಕೆಲಸ ಮಾಡುತ್ತಿಲ್ಲ!:
ದುರುಪಯೋಗ ಮತ್ತು ಅತಿಯಾದ ಬಳಕೆಯಿಂದ ಹಲವು ಸಾಮಾನ್ಯ ಬ್ಯಾಕ್ಟೀರಿಯಾಗಳು ಈ ಹಿಂದೆ ಚೆನ್ನಾಗಿ ಕೆಲಸ ಮಾಡುತ್ತಿದ್ದ ಬಹಳಷ್ಟು ಮಾತ್ರೆಗಳಿಗೆ ಬಗ್ಗದಂತಾಗಿವೆ. ಇ.ಕೊಲಿ, ಕ್ಲೆಬ್ಸಿಯೆಲ್ಲಾ, ಸ್ಟ್ಯಾಫಿಲೋಕಾಕಸ್, ಸೂಡೋಮೋನಾಸ್ ನಂತಹ ರೋಗಕಾರಕಗಳು ಈಗ ಹಲವು ಬಗೆಯ ಆಂಟಿಬಯಾಟಿಕ್‌ಗಳಿಗೆ ಪ್ರತಿಕ್ರಿಯಿಸುವುದನ್ನು ಕಡಿಮೆ ಮಾಡಿವೆ.
ಹೊಸ ಆ್ಯಂಟಿಬಯಾಟಿಕ್ ತಯಾರಿಕೆ ತುಂಬಾ ನಿಧಾನ ಪ್ರಕ್ರಿಯೆಯಾಗಿದ್ದು, ಕಳೆದ ಕೆಲವು ದಶಕಗಳಲ್ಲಿ ಕೇವಲ ಕೈಬೆರಳೆಣಿಕೆಯಷ್ಟು ಹೊಸ ಮಾತ್ರೆಗಳು ಮಾತ್ರ ಮಾರುಕಟ್ಟೆಗೆ ಬಂದಿವೆ. ಹೊಸ ಆಯ್ಕೆಗಳು ಕಡಿಮೆ ಇರುವ ಈ ಸಂದರ್ಭದಲ್ಲಿ ಆಂಟಿ ಬಯಾಟಿಕ್ ಪ್ರತಿರೋಧ ಏರುತ್ತಿರುವುದು ತುಂಬಾ ಅಪಾಯಕಾರಿಯಾಗಿದೆ. ಗುಣಪಡಿಸಬಹುದಾದ ರೋಗಗಳನ್ನು ಆಂಟಿ ಬಯಾಟಿಕ್ ಬಳಸಿ ಗುಣಪಡಿಸಬಹುದು ಎಂದು ಡಾಕ್ಟರ್‌ಗಳು ನಂಬಿದ್ದರು. ಆದರೆ ಈಗ ಈ ಮಾತ್ರೆಗಳು ಗುಣಪಡಿಸಬಹುದಾದ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನೂ ಕಳೆದುಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ.
ಭಾರತದಲ್ಲಿ ಈ ಸಮಸ್ಯೆ ಯಾಕೆ ಜಾಸ್ತಿ ಕಾಡುತ್ತದೆ?
ಸೋಂಕುಗಳ ಹೊರೆ ಇಲ್ಲಿ ತುಂಬಾ ಜಾಸ್ತಿಯಾಗಿದೆ ಮತ್ತು ಅದರಿಂದ ಆ್ಯಂಟಿಬಯಾಟಿಕ್‌ಗಳ ಬೇಡಿಕೆಯೂ ಜಾಸ್ತಿ ಇದೆ.
ಆ್ಯಂಟಿಬಯಾಟಿಕ್‌ಗಳು ತುಂಬಾ ಸುಲಭವಾಗಿ ಸಿಗುತ್ತವೆ. ಬಹುತೇಕ ಮಾತ್ರೆಗಳು ಪ್ರಿಸ್ಕ್ರಿಪ್ಷನ್ ಇಲ್ಲದೇ ದೊರೆಯುತ್ತವೆ.
ಶುಚಿತ್ವ- ನೈರ್ಮಲ್ಯ ಕಡಿಮೆ ಇದ್ದು, ಸೋಂಕುಗಳು ಪದೇ ಪದೇ ಬರುತ್ತವೆ. ಹಾಗಾಗಿ ಆ್ಯಂಟಿಬಯಾಟಿಕ್ ಮರುಬಳಕೆಯೂ ಜಾಸ್ತಿಯಾಗಿದೆ.
ರೋಗ ನಿರೋಧಕ ಶಕ್ತಿಯ ಮೇಲಿನ ನಿಗಾ ವ್ಯವಸ್ಥೆ ಎಲ್ಲೆಡೆ ಒಂದೇ ರೀತಿಯಲ್ಲಿ ಇಲ್ಲ.
ಜನರಲ್ಲಿ ಆ್ಯಂಟಿಬಯಾಟಿಕ್ ಬಗ್ಗೆ ತಿಳುವಳಿಕೆ ಕಡಿಮೆ ಇದೆ, ತಪ್ಪು ಗ್ರಹಿಕೆಗಳು ಇನ್ನೂ ಬಹಳಷ್ಟಿವೆ.
ಈ ಎಲ್ಲಾ ಅಂಶಗಳು ಒಟ್ಟಿಗೆ ಸೇರಿ ತಪ್ಪು ಬಳಕೆ ಸಾಮಾನ್ಯವಾಗಿದೆ ಮತ್ತು ಆ್ಯಂಟಿಬಯಾಟಿಕ್ ಪ್ರತಿರೋಧ ವೇಗವಾಗಿ ಬೆಳೆಯುತ್ತಿದೆ.
ಆ್ಯಂಟಿಬಯಾಟಿಕ್ ಕುರಿತು ಕಟ್ಟುನಿಟ್ಟಿನ ನಿಯಮ ಅಗತ್ಯ
ಇದಕ್ಕೆ ಸರಿಯಾದ ಪ್ರಿಸ್ಕ್ರಿಪ್ಷನ್ ಇಲ್ಲದೇ ಆ್ಯಂಟಿಬಯಾಟಿಕ್ ಕೊಡದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕು. ಆಸ್ಪತ್ರೆಗಳಲ್ಲಿ ಆ್ಯಂಟಿಬಯಾಟಿಕ್ ಬಳಕೆಯ ಮೇಲೆ ನಿಗಾ ಇಡಲು, ಚಿಕಿತ್ಸಾ ಮಾರ್ಗದರ್ಶನ, ಸಿಬ್ಬಂದಿಗೆ ತರಬೇತಿ ಮುಂತಾದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಸೋಂಕು ಬ್ಯಾಕ್ಟೀರಿಯಾದ ಅಥವಾ ವೈರಲ್ ನದ್ದ ಎಂದು ಸರಿಯಾಗಿ ಗುರುತಿಸಲು ಉತ್ತಮ ಡಯಾಗ್ನೋಸ್ಟಿಕ್ ಸಾಧನಗಳು ಅತ್ಯಗತ್ಯವಾಗಿದೆ.
ಇನ್ನು ಎಎಂಆರ್ ಮೇಲೆ ನಿಗಾ ಇಡುವ ಜಾಲವನ್ನು ದೇಶವ್ಯಾಪಿ ವಿಸ್ತರಿಸುವುದು, ಪ್ರತಿರೋಧದ ಮೇಲೆ ಕಣ್ಣಿಡುವುದು, ತುರ್ತು ಕ್ರಮಕ್ಕೆ ಸಿದ್ಧವಾಗಿರುವುದು ಬಹಳ ಮುಖ್ಯ. ಅಷ್ಟೇ ಅಲ್ಲ, ‘ವನ್ ಹೆಲ್ತ್’ ವಿಧಾನ ಅಳವಡಿಸಿಕೊಂಡು ಮನುಷ್ಯ, ಪಶುವೈದ್ಯಕೀಯ, ಕೃಷಿ, ಪರಿಸರ ಎಲ್ಲೆಡೆ ಆ್ಯಂಟಿಬಯಾಟಿಕ್ ದುರುಪಯೋಗ ತಡೆಯುವುದು ಅತ್ಯಗತ್ಯವಾಗಿದೆ. ಆ್ಯಂಟಿಬಯಾಟಿಕ್ ನಿಯಮಗಳನ್ನು ಕೇವಲ ಆಸ್ಪತ್ರೆ ಮಟ್ಟದ್ದಲ್ಲಿ ಪಾಲಿಸುವುದು ಮಾತ್ರವಲ್ಲ, ಇದು ಇಡೀ ದೇಶದ ಜವಾಬ್ದಾರಿಯಾಗಿದೆ. ಅದಕ್ಕಾಗಿ ಎಲ್ಲರ ಒಗ್ಗಟ್ಟಿನ ಕ್ರಮ ತೆಗೆದುಕೊಳ್ಳಬೇಕಾಗಿದೆ.
ಸಾರ್ವಜನಿಕರಿಗೆ ಏನೇನು ಮಾಹಿತಿ ಇರಬೇಕು!
ಸೂಪರ್‌ಬಗ್‌ಗಳ ಹರಡುವಿಕೆ ತಡೆಯಲು ಸಮಾಜದ ಪಾತ್ರ ತುಂಬಾ ಮುಖ್ಯ. ಅದರ ಮೊದಲ ಹೆಜ್ಜೆ ಏನೆಂದರೆ ತಾವೇ ಮಾತ್ರೆ ತೆಗೆದುಕೊಳ್ಳದೇ ಇರುವುದು. ಆ್ಯಂಟಿಬಯಾಟಿಕ್ ತೆಗೆದುಕೊಳ್ಳುವ ಮೊದಲು ಖಂಡಿತಾ ಡಾಕ್ಟರ್ ಸಲಹೆ ತೆಗೆದುಕೊಳ್ಳುವುದು. ಪೂರ್ತಿ ಕೋರ್ಸ್ ಮುಗಿಸುವುದು ಕೂಡ ಅತಿ ಮುಖ್ಯ. ಮಧ್ಯದಲ್ಲಿ ಮಾತ್ರೆ ನಿಲ್ಲಿಸಿದ್ರೆ ಉಳಿದ ಬ್ಯಾಕ್ಟೀರಿಯಾಗಳು ಪ್ರತಿರೋಧ ಬೆಳೆಸಿಕೊಳ್ಳುತ್ತವೆ. ಮಾತ್ರೆಗಳನ್ನು ಬೇರೆಯವರಿಗೆ ಕೊಡಬೇಡಿ. ಒಬ್ಬರಿಗೆ ಕೆಲಸ ಮಾಡಿದ ಮಾತ್ರೆ ಬೇರೊಬ್ಬರಿಗೆ ಅಪಾಯಕಾರಿಯಾಗಬಹುದು.
ಶೀತ, ವೈರಲ್ ಜ್ವರ, ಫ್ಲೂ, ಗಂಟಲು ಸೋಂಕುಗಳಿಗೆ ಆ್ಯಂಟಿಬಯಾಟಿಕ್ ಒಂದು ಪೈಸೆಯೂ ಕೆಲಸ ಮಾಡುವುದಿಲ್ಲ ಎಂದು ತಿಳಿಯಿರಿ. ಕೈ ಆಗಾಗ ತೊಳೆಯುವುದು, ಸ್ಯಾನಿಟೈಸರ್ ಬಳಕೆ, ಶುದ್ಧ ನೀರು ಕುಡಿಯುವುದು, ಸರಿಯಾದ ನೈರ್ಮಲ್ಯ ಪಾಲನೆ ಇವೆಲ್ಲವೂ ಸೋಂಕನ್ನು ಕಡಿಮೆ ಮಾಡಿ, ಆ್ಯಂಟಿಬಯಾಟಿಕ್ ಅವಶ್ಯಕತೆಯನ್ನು ಕಡಿಮೆ ಮಾಡುತ್ತವೆ.
ಭಾರತದ ಆಂಟಿಮೈಕ್ರೋಬಯಲ್ ರೆಸಿಸ್ಟೆನ್ಸ್ ವಿರೋಧಿ ಹೋರಾಟ ಈಗ ಮಹತ್ವದ ಘಟ್ಟಕ್ಕೆ ತಲುಪಿದೆ. ಸ್ವಯಂ ಚಿಕಿತ್ಸೆ, ಸುಲಭ ಲಭ್ಯತೆ, ಪೂರ್ತಿ ಕೋರ್ಸ್ ಮುಗಿಸದಿರುವುದು ಇವೆಲ್ಲವೂ ಸಣ್ಣ ಸೋಂಕುಗಳಿಗೂ ಚಿಕಿತ್ಸೆ ಇಲ್ಲದಂತಾಗುವ ಸೂಪರ್‌ಬಗ್‌ಗಳನ್ನು ಉಂಟು ಮಾಡುತ್ತಿವೆ. ಕಟ್ಟುನಿಟ್ಟಿನ ನಿಯಮ ಜಾರಿಗೆ ತರುವುದು, ಜವಾಬ್ದಾರಿಯುತ ಪ್ರಿಸ್ಕ್ರಿಪ್ಷನ್ ಬಳಕೆ, ಉತ್ತಮ ಡಯಾಗ್ನೋಸ್ಟಿಕ್ಸ್ ಸೌಲಭ್ಯ, ಜನ ಜಾಗೃತಿ ಇವೆಲ್ಲ ಒಟ್ಟಿಗೆ ಸೇರಿ ಕೆಲಸ ಮಾಡುವುದೇ ಇದಕ್ಕೆ ಪರಿಹಾರವಾಗಿದೆ. ಈ ಪ್ರವೃತ್ತಿಯನ್ನು ಈಗಲೇ ನಿಲ್ಲಿಸದಿದ್ದರೆ, ಒಂದು ಕಾಲದಲ್ಲಿ ಲಕ್ಷಾಂತರ ಜೀವ ಉಳಿಸಿದ್ದ ಆ್ಯಂಟಿಬಯಾಟಿಕ್‌ಗಳು ಶಕ್ತಿಹೀನವಾಗಿ, ಜನರನ್ನು ಅಪಾಯಕ್ಕೆ ತಳ್ಳುವ ಅಪಾಯವಿದೆ. ಅಷ್ಟೇ ಅಲ್ಲ, ಅದರಿಂದ ಭಾರತದ ವೈದ್ಯಕೀಯ ವ್ಯವಸ್ಥೆಯ ಭವಿಷ್ಯಕ್ಕೇ ಅಪಾಯ ಉಂಟಾಗಲಿದೆ.
(ಡಾ. ನಿಧಿನ್ ಮೋಹನ್, ಸಲಹೆಗಾರ, ಆಂತರಿಕ ಔಷಧ, ನಾರಾಯಣ ಹೆಲ್ತ್ ಸಿಟಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.