ರೋಗನಿರೋಧಕ ಶಕ್ತಿಯು ಯಾವುದೇ ಮಾರಣಾಂತಿಕ ಕಾಯಿಲೆಗಳನ್ನು ಎದುರಿಸುವಲ್ಲಿ ದೇಹಕ್ಕೆ ಅತ್ಯಗತ್ಯವಾಗಿರುತ್ತದೆ. ಶಿಶುಗಳ ಅಂಗಾಂಗಗಳು ನಾಜೂಕಾಗಿರುವ ಕಾರಣದಿಂದ ಮತ್ತು ಅವರಲ್ಲಿ ರೋಗನಿರೋಧಕ ಶಕ್ತಿಯು ಕಡಿಮೆಯಿರುವ ಕಾರಣದಿಂದ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವುದು ಅತ್ಯಗತ್ಯ.
ನವಜಾತ ಶಿಶುಗಳು, ಅವು ಹುಟ್ಟಿದ ಒಂದು ತಿಂಗಳಲ್ಲಿ ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಕಾರಣದಿಂದಾಗಿ ಅವರ ಜೀವನದ ಮೊದಲಿನ ಕೆಲವು ವಾರಗಳಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸಬೇಕು. ನವಜಾತಶಿಶುವಿಗೆ ಹುಟ್ಟಿದ ದಿನದಂದೇ ಪೋಲಿಯೋ ಲಸಿಕೆ, ಹೆಪಟೈಟಿಸ್ ಬಿ ಲಸಿಕೆ ಮತ್ತು ಬಿಸಿಜಿ ಲಸಿಕೆಗಳನ್ನು ನೀಡಲಾಗುತ್ತದೆ. ವಯಸ್ಕರು ತಮ್ಮ ದೇಹಕ್ಕೆ ಬೇಕಾದ ವಿಟಮಿನ್ ಕೆ ಪದಾರ್ಥವನ್ನು ನಮ್ಮ ಕರುಳಿನಲ್ಲಿರುವ ಸೂಕ್ಷ್ಮಾಣುಜೀವಿಗಳ ಮೂಲಕವೇ ತಯಾರಿಸಲು ಸಶಕ್ತರಾಗಿರುತ್ತೇವೆ. ಆದರೆ ನವಜಾತಶಿಶುಗಳಿಗೆ ಆ ಸಾಮರ್ಥ್ಯವಿಲ್ಲದಿರುವ ಕಾರಣದಿಂದಾಗಿ ಅವರಿಗೆ ಹುಟ್ಟಿದ ತಕ್ಷಣ ವಿಟಮಿನ್ ಕೆ ಚುಚ್ಚುಮದ್ದನ್ನು ನೀಡುತ್ತೇವೆ.
ಶಿಶುಗಳಿಗೆ ಆಯಾ ವಯಸ್ಸಿಗೆ ಅನುಗುಣವಾಗಿ ವಿವಿಧ ಲಸಿಕೆಗಳನ್ನು ನೀಡಬೇಕಾಗಿರುತ್ತದೆ. ಹುಟ್ಟಿದ ದಿನದಂದು ಲಸಿಕೆ ಪಡೆದ ನಂತರ ಆರನೇ ವಾರದಂದು, ಹತ್ತನೇ ವಾರದಂದು ಮತ್ತು ಹದಿನಾಲ್ಕನೆಯ ವಾರದಂದು ಕ್ರಮವಾಗಿ ಹಲವು ಲಸಿಕೆಗಳನ್ನು ಭಾರತದಲ್ಲಿ ನೀಡಲಾಗುತ್ತದೆ. ಡಿಫ್ತೀರಿಯಾ, ಟೆಟೆನಸ್, ಪರ್ಟುಸಿಸ್, ಪೋಲಿಯೊಮೈಲೈಟಿಸ್, ಹಿಮೋಫೀಲಸ್ ಬಿ, ಹಿಪಟೈಟಿಸ್ ಬಿ ಸೋಂಕಿನಿಂದ ರಕ್ಷಿಸಲು ಕೊಡಬೇಕಾದ ಲಸಿಕೆಯನ್ನು ಒಂದೇ ಚುಚ್ಚುಮದ್ದಿನ ಮೂಲಕ ನೀಡಬಹುದು. ಹುಟ್ಟಿದ ಮಕ್ಕಳಿಗೆ ಸುಮಾರು ಒಂದೂವರೆ ವರ್ಷಗಳಾಗುವ ತನಕ ಮಾರಣಾಂತಿಕ ಅತಿಸಾರವನ್ನು ಉಂಟುಮಾಡುವ ರೋಟಾವೈರಸ್ಸ್ ಸೋಂಕನ್ನು ತಡೆಯುವ ಲಸಿಕೆಯನ್ನು ಇದರ ಜೊತೆಗೆ ಕೊಡಿಸಲಾಗುತ್ತದೆ. ‘ಸ್ಟ್ರೆಪ್ಟೊಕಾಕಲ್ ನ್ಯೂಮೋನಿಯೆ’ ಎಂಬ ಬ್ಯಾಕ್ಟೀರಿಯಾವು ಮಕ್ಕಳಲ್ಲಿ ನ್ಯುಮೋನಿಯಾದ ಜೊತೆಗೆ ಮಿದುಳಿನಲ್ಲಿ ಮತ್ತು ಕಿವಿಯೊಳಗೆ ಗಂಭೀರವಾದ ಸೋಂಕನ್ನು ಉಂಟುಮಾಡಬಲ್ಲದು. ಹಾಗಾಗಿ ಇದರ ಲಸಿಕೆಯನ್ನೂ ಮೇಲೆ ಉಲ್ಲೇಖಿಸಿದ ಮೂರು ವಾರಗಳಲ್ಲಿ ನೀಡಲಾಗುತ್ತದೆ. ಶ್ವಾಸಕೋಶದ ಸೋಂಕು ಮತ್ತು ಅತಿಸಾರದಿಂದ ಹೆಚ್ಚು ಶಿಶುಗಳು ಮರಣಹೊಂದುವುದರಿಂದ ಈ ಮೇಲಿನ ಲಸಿಕೆಗಳನ್ನು ರಾಷ್ಟ್ರೀಯ ಲಸಿಕಾ ಕಾರಣದ ವೇಳಾಪಟ್ಟಿಯಲ್ಲಿ ಸೇರಿಸಲಾಗಿದೆ. ಮಕ್ಕಳಿಗೆ ಅನಂತರದಲ್ಲಿ ಬಹಳಷ್ಟು ಲಸಿಕೆಗಳನ್ನು ನೀಡಬೇಕಾಗುತ್ತದೆ ಎನ್ನುವುದನ್ನು ಮರೆಯುವಂತಿಲ್ಲ.
ಮಕ್ಕಳಿಗೆ ಶೀತ, ಜ್ವರ ಮತ್ತು ಸೋಂಕನ್ನು ಹಲವು ಬ್ಯಾಕ್ಟೀರಿಯಾ, ವೈರಸ್ ಮತ್ತು ಇತರ ಸೂಕ್ಷ್ಮಾಣು ಜೀವಿಗಳು ಉಂಟುಮಾಡುತ್ತವೆ. ಆದರೆ ಪ್ರತಿಯೊಂದು ಸೋಂಕು ಮಾರಣಾಂತಿಕವಾಗಿರುವುದಿಲ್ಲದ ಕಾರಣ ಎಲ್ಲಾ ಸೋಂಕುಗಳಿಗೆ ಲಸಿಕೆಗಳು ಲಭ್ಯವಿರುವುದಿಲ್ಲ. ಅಂಕಿಅಂಶಗಳ ಆಧಾರದ ಮೇಲೆ ಮಾರಣಾಂತಿಕ ಕಾಯಿಲೆಗಳಿಗೆ ಮಾತ್ರ ಲಸಿಕೆಯನ್ನು ತಯಾರು ಮಾಡಲಾಗುತ್ತದೆ ಮತ್ತು ಅದನ್ನು ಮಕ್ಕಳಿಗೆ ನೀಡುವ ಕಾರ್ಯಕ್ರಮವನ್ನು ನಿಗದಿಪಡಿಸಲಾಗುತ್ತದೆ.
ಮೊದಲ ಆರು ವಾರಗಳ ಕಾಲ ಮಗುವಿಗೆ ಮೇಲಿನ ಲಸಿಕೆಗಳನ್ನು ನೀಡದಿದ್ದಾಗ, ಅಂಥ ಮಗುವನ್ನು ಸಾರ್ವಜನಿಕ ಸ್ಥಳಗಳಿಗೆ ಕರೆದುಕೊಂಡು ಹೋಗುವುದು ಸೂಕ್ತವಲ್ಲ. ಆರನೇ ವಾರದ ಲಸಿಕೆಯನ್ನು ಕೊಡಿಸಿದ ನಂತರವೇ, ಅಗತ್ಯಬಿದ್ದಲ್ಲಿ ಮಾತ್ರ, ಜನಸಂದಣಿ ಜಾಸ್ತಿಯಿರುವ ಕಡೆ ಪ್ರಯಾಣ ಬೆಳೆಸಬಹುದು. ಆರನೇ ವಾರದ ಲಸಿಕೆಗೆ ಮೊದಲು ಮಗುವಿನ ರೋಗನಿರೋಧಕ ಶಕ್ತಿಯು ತಾಯಿಯ ಹಾಲಿನ ಮೂಲಕ ಮಗುವಿಗೆ ದೊರಕುವ ‘ಇಮ್ಯುನೊಗ್ಲಾಬ್ಯುಲಿನ್ಸ್’ ಮುಂತಾದ ರೋಗನಿರೋಧಕ ಕಣಗಳ ಮೇಲೆ ಅವಲಂಬಿತವಾಗಿರುತ್ತದೆ. ಎದೆಹಾಲನ್ನು ಕುಡಿಸದೆ ಕೇವಲ ಪೌಡರ್ ಹಾಲಿನ ಮೇಲೆ ಅವಲಂಬಿತವಾಗಿರುವ ಮಗುವಿನ ರೋಗನಿರೋಧಕ ಶಕ್ತಿಯು ಬಹಳ ಕಡಿಮೆ ಮಟ್ಟದಲ್ಲಿರುತ್ತದೆ.
ಲಸಿಕೆಯನ್ನು ಬಾಯಿಯ ಮೂಲಕ ಅಥವಾ ಚುಚ್ಚುಮದ್ದಿನ ಮೂಲಕ ದೇಹಕ್ಕೆ ನೀಡಬಹುದು. ರೋಟಾ ಮತ್ತು ಪೋಲಿಯೋ ಲಸಿಕೆಯನ್ನು ಬಾಯಿಯ ಮೂಲಕ ನೀಡಲಾಗುತ್ತದೆ; ನ್ಯುಮೋನಿಯಾ, ಟೈಫಾಯ್ಡ್ ಮುಂತಾದ ಲಸಿಕೆಯನ್ನು ಚುಚ್ಚುಮದ್ದಿನ ಮೂಲಕ ನೀಡಲಾಗುತ್ತದೆ. ಲಸಿಕೆಯಲ್ಲಿ ನಿಷ್ಕ್ರಿಯಗೊಳಿಸಿದ ಸೂಕ್ಷ್ಮಾಣು ಅಥವಾ ಸೂಕ್ಷ್ಮಾಣುವಿನ ಭಾಗವಿರುತ್ತದೆ. ದೇಹವು ಆ ಸೂಕ್ಷ್ಮಾಣುವಿನ ವಿರುದ್ಧ ಆ್ಯಂಟಿಬಾಡಿಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ; ಆಗ ದೇಹದೊಳಗಡೆ ಆ್ಯಂಟಿಬಾಡಿಗಳ ಸಂಗ್ರಹವಾಗುತ್ತದೆ. ಕಾಯಿಲೆಯನ್ನು ಉಂಟುಮಾಡುವ ಸೂಕ್ಷ್ಮಾಣುಗಳು ಮುಂದೆ ದೇಹದೊಳಗೆ ಪ್ರವೇಶಿಸಿದಾಗ ದೇಹದೊಳಗೆ ಈಗಾಗಲೇ ಲಭ್ಯವಿರುವ ಆ್ಯಂಟಿಬಾಡಿಗಳು ಸೂಕ್ಷ್ಮಾಣುಜೀವಿಗಳನ್ನು ನಿಷ್ಕ್ರಿಯಗೊಳಿಸುತ್ತವೆ. ಹೀಗಾಗಿ ಸೂಕ್ಷ್ಮಾಣುಜೀವಿಗಳಿಗೆ ಸೋಂಕನ್ನು ಉಂಟುಮಾಡಲು ಆಗುವುದಿಲ್ಲ.
ಲಸಿಕೆಯನ್ನು ಪಡೆದಾಗ ಸಣ್ಣಪುಟ್ಟ ಅಡ್ಡಪರಿಣಾಮಗಳಾಗಿ ನೋವು ಮತ್ತು ಜ್ವರ ಕೆಲವೊಮ್ಮೆ ಕಾಣಿಸಿಕೊಳ್ಳಬಹುದು. ಆದರೆ ಲಸಿಕೆಯು ನೀಡುವ ಸುರಕ್ಷತಾ ದೃಷ್ಟಿಯಿಂದ ಈ ಸಣ್ಣ ಅಡ್ಡಪರಿಣಾಮಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಆಯಾ ದೇಶಗಳಲ್ಲಿ ಅಲ್ಲಿ ಪ್ರಚಲಿತವಿರುವ ಕಾಯಿಲೆಗಳ ಅನುಗುಣವಾಗಿ ಲಸಿಕೆಗಳನ್ನು ನೀಡುತ್ತಾರೆ. ಆ ಕಾರಣದಿಂದಾಗಿ ವಿದೇಶಕ್ಕೆ ಪ್ರಯಾಣಿಸುವವರು ಅಲ್ಲಿ ಪ್ರಚಲಿತವಿರುವ ಕಾಯಿಲೆಗಳಿಗೆ ಲಸಿಕೆಯನ್ನು ಪಡೆದು ವಿದೇಶ ಪ್ರಯಾಣವನ್ನು ಆರಂಭಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.