
ಚಿತ್ರ: ಎಐ
ಆಧುನಿಕ ಜಗತ್ತಿನ ಔದ್ಯೋಗಿಕ ದಿನನಿತ್ಯದ ಕೆಲಸ ಕಾರ್ಯಗಳ ನಿರಂತರ ಒತ್ತಡಗಳ ಕಾರಣಗಳಿಂದ-ಕಚೇರಿಯ ಉದ್ಯೋಗಿಗಳು ಸಾಮಾನ್ಯವಾಗಿ ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಬೆನ್ನು ನೋವು ಹಾಗೂ ಬೆನ್ನು ಹುರಿಯ ಪ್ರಕರಣಗಳು ಅಗ್ರ ಸ್ಥಾನದಲ್ಲಿದೆ.
ಈ ಸಮಸ್ಯೆಯ ಮೂಲ ಕಾರಣವೇ ದೀರ್ಘಕಾಲ ಕುಳಿತು ಕೆಲಸ ಮಾಡುವುದು, ನಿರಂತರ ಪ್ರಯಾಣ, ದೇಹದ ತೂಕ, ದೇಹದ ಭಂಗಿಯ ಸ್ಥಿರತೆಯಲ್ಲಿ ಅಸಮರ್ಪಕ ನಿರ್ವಹಣೆ, ಬೆನ್ನು ಮೂಳೆ ಆರೋಗ್ಯ, ಆಯಾಸ ಪ್ರೇರಿತ ಕೆಲಸ ಕಾರ್ಯಗಳು ಸೇರಿದಂತೆ ಇನ್ನಿತರ ಕಾರಣಗಳಿಂದ ಬೆನ್ನಿನ ಮೂಳೆ, ಸ್ನಾಯು ಹಾಗೂ ಅದರ ಚಲನಶೀಲತೆಯಲ್ಲಿ ಏರುಪೇರು ಹಾಗೂ ನೋವಿನ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಬೆನ್ನು ಮೂಳೆ, ಬೆನ್ನು ಹುರಿ, ಸ್ನಾಯು ಹಾಗೂ ಅದರ ಆರೋಗ್ಯ, ಚಲನಶೀಲತೆ ವೃದ್ಧಿಗಾಗಿ, ನೋವಿನಿಂದ ಚೇತರಿಕೆಗಳನ್ನು ತಪ್ಪದೆ ಪಾಲಿಸಿ.
ಬೆನ್ನಿನ ಮೇಲೆ ಹೆಚ್ಚಿನ ಒತ್ತಡವನ್ನು ಸೃಷ್ಟಿಸುವ ಆಸನ ವಿಧಾನಗಳು ಅಥವಾ ದೀರ್ಘಕಾಲ ಒಂದೇ ಭಂಗಿಯಲ್ಲಿ ಕುಳಿತು ಮಾಡುವಂತಹ ಕೆಲಸ ಕಾರ್ಯಗಳ ಬದಲಾಗಿ, ಹೆಚ್ಚಾಗಿ ನೇರವಾಗಿ ಕುಳಿತು ಬೆನ್ನಿನ ಭಂಗಿಯ ಸ್ಥಿರತೆ ಕಾಪಾಡುವುದು, ಗಂಟೆಗೆ ಒಮ್ಮೆಯಾದರೂ ಅತ್ತಿತ್ತ ಓಡಾಡಿ, ನಿಯಮಿತ ವಿರಾಮಗಳನ್ನು ತೆಗೆದುಕೊಳ್ಳುವುದು ಮತ್ತು ಭಂಗಿ ಬದಲಾಯಿಸುವುದನ್ನು ಮರೆಯದಿರಿ.
ದಿನ ನಿತ್ಯ ದೈಹಿಕ ವ್ಯಾಯಾಮ, ಅದರಲ್ಲೂ ಬೆನ್ನಿನ ಆರೋಗ್ಯ ವರ್ಧನೆಗೆ ಸಂಭಂಧಪಟ್ಟ ಯೋಗಾಭ್ಯಾಸಗಳ ನಿತ್ಯ ಪರಿಪಾಲನೆ ಅತ್ಯಗತ್ಯ.
ದೇಹದ ತೂಕದ ಸಮರ್ಪಕ ನಿರ್ವಹಣೆ
ದೈಹಿಕ ಹಾಗೂ ಮಾನಸಿಕ ತೊಂದರೆಗಳ ನಿರ್ವಹಣೆ
ಜೀವನ ಶೈಲಿಯಲ್ಲಿ (ಆಹಾರ ಹಾಗೂ ವಿಹಾರ) ಅಗತ್ಯಕ್ಕೆ ತಕ್ಕಂತೆ ಬದಲಾವಣೆ.
ಬೆನ್ನು ನೋವಿನಿಂದ ಬಳಲುತ್ತಿರುವವರು ಸೊಂಟದ ಬೆಂಬಲ ಪಟ್ಟಿಗಳನ್ನು ಧರಿಸುವದರಿಂದ ಕೆಳ ಬೆನ್ನಿನ ಪ್ರದೇಶಕ್ಕೆ ನಿಖರವಾದ ಬೆಂಬಲವನ್ನು ನೀಡಲು ಹಾಗೂ ಸೊಂಟದ ಬೆನ್ನು ಮೂಳೆಗೆ ಸ್ಥಿರತೆಯನ್ನು ಒದಗಿಸುವ ಮೂಲಕ, ಸ್ನಾಯುವಿನ ಒತ್ತಡವನ್ನು ಪರಿಣಾಮಕಾರಿಯಾಗಿ ನಿವಾರಿಸಲು ಸಹಕಾರಿ.
ಹೆಚ್ಚಾಗಿ ಭಾರ ಎತ್ತುವುದು, ಬಗ್ಗಿಕೊಂಡು ಕೆಲಸ ಮಾಡುವ ಚಟುವಟಿಕೆಗಳಿಗೆ ಸಂಬಂಧಿಸಿದ ಅಸ್ವಸ್ಥತೆ ಬದಲಿಗೆ ಸೂಕ್ತ ಪರ್ಯಾಯ ವಿಧಾನದ ಮೂಲಕ ಪರಿಹಾರವನ್ನು ಕಂಡುಕೊಳ್ಳುವುದು.
ಬೆನ್ನಿನ ಮೂಳೆಗಳ, ಸ್ನಾಯುಗಳ ಉತ್ತಮ ಬೆಳವಣಿಗೆ ಹಾಗೂ ಸದೃಢತೆ ಕಾಪಾಡಲು ಸಹಕಾರಿಯಾಗುವಂತಹ ವಿಟಮಿನ್ ಡಿ, ಕ್ಯಾಲ್ಸಿಯಂ ಇನ್ನಿತರ ಖನಿಜಾಂಶ ಕೊರತೆ ನೀಗಿಸಲು ಹಾಗೂ ಮೂಳೆಗಳ ಸಾಂದ್ರತೆ ಇಳಿ ಮುಖ ಬಾರದಂತೆ, ನಿತ್ಯ ನೈಸರ್ಗಿಕವಾಗಿ ವಿಟಮಿನ್ ಡಿ ಹೇರಳವಾಗಿ ದೊರಕುವಂತಹ ಸೂರ್ಯನ ಕಿರಣಗಳಿಗೆ ಮೈಯೊಡ್ಡುವುದು ಹಾಗೂ ಆಹಾರದಲ್ಲಿ ಹೆಚ್ಚಾಗಿ ಕ್ಯಾಲ್ಸಿಯಂ, ಖನಿಜಾಂಶ, ಉತ್ತಮ ಮಿತವಾದ ಪ್ರೋಟೀನ್ ಯುಕ್ತ ಆಹಾರ, ಹಾಲು, ಹಣ್ಣು, ಬೇಳೆ ಕಾಳುಗಳು, ಮೊಟ್ಟೆ, ಒಣ ಹಣ್ಣು, ಹಸಿರು ತರಕಾರಿ ಹಾಗೂ ಅಗತ್ಯ ಪದಾರ್ಥಗಳ ಸೇವನೆ ಜೊತೆಗೆ ಸೂಕ್ತ ಜೀವನ ಕ್ರಮಗಳನ್ನು ಕೈ ಗೊಳ್ಳುವುದು.
ಬೆನ್ನು ಮೂಳೆಯ ಆರೋಗ್ಯದಲ್ಲಿ ನಿದ್ರೆ ಹಾಗೂ ವಿಶ್ರಾಂತಿಯು ಮಹತ್ವದ ಪಾತ್ರವನ್ನು ವಹಿಸುತ್ತದೆ.
ಕಾಲ ಕಾಲಕ್ಕೆ ಸರಿಯಾಗಿ ಸಂಬಂಧಪಟ್ಟ ನುರಿತ ವೈದ್ಯರಲ್ಲಿ ಸಲಹೆ ಹಾಗೂ ಆರೋಗ್ಯ (ಮುಖ್ಯವಾಗಿ ಮೂಳೆಗಳ ಆರೋಗ್ಯ ತಪಾಸಣೆ) ನಡೆಸಿ ಬೆನ್ನು ಮೂಳೆ ಆರೋಗ್ಯ ಸಂಬಂಧಿ ಸಲಹೆಗಳನ್ನು ತೆಗೆದುಕೊಳ್ಳುವುದು.
ಅಸುರಕ್ಷಿತ ಹಾಗೂ ಅಪಘಾತದಿಂದ ದೈಹಿಕವಾಗಿ ಹೆಚ್ಚಾಗಿ ಹಾನಿಯಾಗುವಂತಹ ಅಪಾಯಕಾರಿ ಕಾರ್ಯಕ್ಷೇತ್ರಗಳಲ್ಲಿ ಆದಷ್ಟು ಜಾಗರೂಕತೆಯನ್ನು ವಹಿಸುವುದು.
(ಲೇಖಕರು: ಡಾ. ಸದಾನಂದ ಭಟ್, ಸಹಾಯಕ ಪ್ರಾಧ್ಯಾಪಕರು, ರೋಗನಿಧಾನ ವಿಭಾಗ, ಎಸ್‌ಡಿಎಂ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕುತ್ಪಾಡಿ, ಉಡುಪಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.