ADVERTISEMENT

ಕಾಳಜಿ | ಆರೋಗ್ಯಕರ ಚರ್ಮಕ್ಕೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2025, 0:30 IST
Last Updated 22 ಫೆಬ್ರುವರಿ 2025, 0:30 IST
   

ಹೊಳೆಯುವ ಚರ್ಮ ಯಾರಿಗೆ ತಾನೇ ಬೇಡ. ದೇಹದ ಒಳಗಿನ ಆರೋಗ್ಯವು ಹೊರಗಿನ ಚರ್ಮದಲ್ಲಿ ವ್ಯಕ್ತವಾಗುತ್ತದೆ. ಹಾಗಾಗಿ ಹೊಳೆಯುವ ಮೈಕಾಂತಿ ಬೇಕಾದರೆ ದೇಹದ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. 

ಚರ್ಮ ಕಳೆಗುಂದಲು ಮೊಡವೆ, ಕಲೆ, ವೈಟ್‌ಹೆಡ್‌, ಬ್ಲ್ಯಾಕ್‌ಹೆಡ್‌ಗಳು ಪ್ರಮುಖ ಕಾರಣಗಳು. ಇದರ ಜತೆಗೆ ದೂಳು, ಮಾಲಿನ್ಯಯುಕ್ತ ಪರಿಸರದಿಂದಲೂ ಚರ್ಮ ಹಾನಿಯಾಗಬಹುದು. ಇದರ ಜತೆಗೆ ಅವೈಜ್ಞಾನಿಕ ಆಹಾರಪದ್ಧತಿಯಿಂದ, ಜೀವನಶೈಲಿಯಿಂದ ಹಲವು ಬಗೆಯ ಚರ್ಮದ ಸಮಸ್ಯೆಗಳು ಉಂಟಾಗಬಹುದು.

ಸಮತೋಲಿತ ಹಾಗೂ ಸತ್ವಯುತ ಆಹಾರವು ಚರ್ಮವನ್ನು ನಳನಳಿಸುವಂತೆ ಮಾಡಲು ನೆರವಾಗುತ್ತದೆ.

ADVERTISEMENT

ಮೊಡವೆಯಾಗದಂತೆ ಏನು ಮಾಡಬಹುದು?

ಹೈನು ಉತ್ಪನ್ನಗಳ ಸೇವನೆಯಿಂದ ಇದರಲ್ಲಿರುವ ಗೈಸೆಮಿಕ್ಸ್‌ ಕಾರ್ಬೋಹೈಡ್ರೇಟ್‌ಗಳು ಹಾರ್ಮೋನ್‌ಗಳ ಮೇಲೆ ಪ್ರಭಾವ ಬೀರುತ್ತವೆ. ಇದು ತೈಲಗ್ರಂಥಿ ಹಾಗೂ ಮೇದೋಗ್ರಂಥಿಗಳ ಸ್ರಾವವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಂಕೀರ್ಣ ಕಾರ್ಬೋಹೈಡ್ರೇಟ್‌ ಹೊಂದಿರುವ ಮತ್ತು ಕಡಿಮೆ ಗ್ಲೈಸೆಮಿಕ್‌ ಅಂಶಗಳಿರುವ ಆಹಾರವನ್ನು ಹೇರಳವಾಗಿ ಸೇವಿಸುವುದರಿಂದ ಮೊಡವೆ ಉಂಟಾಗುವುದನ್ನು ತಪ್ಪಿಸಬಹುದು. ಹಣ್ಣುಗಳು, ತರಕಾರಿಗಳು, ಧಾನ್ಯಗಳು, ದ್ವಿದಳ ಧಾನ್ಯಗಳಂಥ ಆಹಾರಗಳಲ್ಲಿ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಹೇರಳವಾಗಿವೆ.

ಇನ್ಸುಲಿನ್‌ ಹಾರ್ಮೋನ್‌ (IGF-1) ಹೆಚ್ಚಿನ ಮಟ್ಟದಲ್ಲಿ ಬಿಡುಗಡೆಯಾದರೆ, ತೈಲ ಗ್ರಂಥಿ ಹಾಗೂ ಮೇದೋಗ್ರಂಥಿಗಳಲ್ಲಿ ಸ್ರಾವ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದರಿಂದ ಚರ್ಮದಲ್ಲಿ ಮೊಡವೆ, ಕಲೆ ಉಂಟಾಗಬಹುದು. ಇನ್ನು, ಚರ್ಮಕ್ಕೂ ಕರುಳಿನ ಆರೋಗ್ಯಕ್ಕೂ ನಂಟಿದೆ. ಕರುಳಿನ ಮೈಕ್ರೋಬಯೋಟಾದಿಂದ ಉತ್ಪತ್ತಿಯಾಗುವ ಮೆಟಾಬಾಲೈಟ್‌ಗಳು ಚರ್ಮದ ಮೇಲೆ ಪರಿಣಾಮ ಬೀರುವುದಲ್ಲದೇ ಮೊಡವೆ ಉಂಟಾಗುವಂತೆ ಮಾಡಬಹುದು. ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳು, ಅಗಸೆಬೀಜಗಳು ಉತ್ತಮ ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದು, ನಾರಿನಂಶ ಇರುವ ಆಹಾರ ಸೇವನೆಯಿಂದ ದೇಹದ ತ್ಯಾಜ್ಯವನ್ನು ಸುಲಭವಾಗಿ ಹೊರಹಾಕಬಹುದು. ಒಮೆಗಾ–3 ಕೊಬ್ಬಿನಾಮ್ಲಗಳ ಸೇವನೆಯಿಂದ ಇನ್ಸುಲಿನ್‌ ಹಾರ್ಮೋನ್‌ ನಿಯಂತ್ರಣದಲ್ಲಿರುತ್ತದೆ.

ಇದರಿಂದ ಚರ್ಮದಲ್ಲಿ ಊರಿಯೂತ ಮತ್ತು ಮೊಡವೆ, ಗಾಯಗಳು ಕಡಿಮೆಯಾಗುತ್ತವೆ. ಹಾಲನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದ ತೈಲಗ್ರಂಥಿಗಳು ಹೆಚ್ಚಿನ ಪ್ರಮಾಣದಲ್ಲಿ ಚರ್ಮದಲ್ಲಿ ಜಿಡ್ಡನ್ನು ಉತ್ಪಾದಿಸುತ್ತವೆ. ರಕ್ತಶುದ್ಧೀಕರಣಕ್ಕೆ ಸುಲಭ ತಂತ್ರವೆಂದರೆ ಸಾಕಷ್ಟು ನೀರು ಕುಡಿಯುವುದು. ಅತಿ ಹೆಚ್ಚು ನೀರಿನ ಸೇವನೆಯಿಂದ ಚರ್ಮ ತೇವಯುಕ್ತವಾಗಿರುತ್ತದೆ. ವಿಷಯುಕ್ತ ಅಂಶಗಳನ್ನು ದೇಹದಿಂದ ಹೊರಹಾಕಲು ನೀರು ಸಹಾಯ ಮಾಡುತ್ತದೆ.

ಗಿಡಮೂಲಿಕೆ ಬೆರೆಸಿ ಮಾಡಿದ ನೀರಿನ ಸೇವನೆ ಉತ್ತಮ. ನಿಂಬೆ, ಚಿಯಾ ಬೀಜಗಳೊಂದಿಗೆ ಬೆಚ್ಚಗಿನ ನೀರನ್ನು ಆಗಾಗ್ಗೆ ಸೇವಿಸಿ. ಪುದೀನಾ ಮತ್ತು ಸೌತೆಕಾಯಿ ಬೆರೆಸಿದ ನೀರು, ಶಂಖಪುಷ್ಪ ಬೆರೆಸಿದ ನೀರನ್ನೂ ಸೇವಿಸುವುದು ಚರ್ಮದ ಹಿತದೃಷ್ಟಿಯಿಂದ ಒಳ್ಳೆಯದು.

ಪದೇ ಪದೇ ಚರ್ಮದಲ್ಲಿ ಅಲರ್ಜಿ ಉಂಟಾಗುತ್ತಿದ್ದರೆ, ಸಾಧ್ಯವಾದಷ್ಟು ಜಂಕ್‌ಫುಡ್‌ಗಳಿಂದ ದೂರವಿರಲು ಪ್ರಯತ್ನಿಸಿ. ಸಂಸ್ಕರಿಸಿದ ಸಿಹಿತಿಂಡಿಗಳು, ಕರಿದ ಪದಾರ್ಥಗಳು, ಹಾಲು ಹಾಗೂ ಇತರೆ ಹೈನು ಉತ್ಪನ್ನಗಳ ಸೇವನೆಯಿಂದ ದೂರ ಉಳಿಯುವುದು ಒಳಿತು. ಮದ್ಯ ಹಾಗೂ ಮಸಾಲೆಯುಕ್ತ ಆಹಾರ, ಅತಿಯಾದ ಉಪ್ಪಿನ ಬಳಕೆಯೂ ಮೊಡವೆಗಳು ಉಂಟಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಆಹಾರ ಹೀಗಿರಲಿ

*ಕಡಿಮೆ ಗ್ಲುಕೋಸ್‌ ಅಂಶವನ್ನು ಹೊಂದಿರುವ ಆಹಾರವನ್ನು ಆಯ್ಕೆ ಮಾಡಿಕೊಳ್ಳಿ. ಆಹಾರದಲ್ಲಿ ಎ, ಸಿ, ಡಿ ಹಾಗೂ ಬಿ ಮತ್ತು ಇ ವಿಟಮಿನ್‌ಗಳು ಇರುವಂತೆ ನೋಡಿಕೊಳ್ಳಿ. ಸೆಲೆನಿಯಮ್‌, ಸತು, ಬಯೋಟಿನ್‌ ಮತ್ತು ಕರ್ಕ್ಯುಮಿನ್‌ ಅಂಶ ಇರುವಂತೆ ನೋಡಿಕೊಳ್ಳಿ. ಪ್ರೋಬಯಾಟಿಕ್‌ಗಳು ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳ ಸೇವನೆ ಹೆಚ್ಚಿರಲಿ.

*ಮೊಟ್ಟೆಯ ಹಳದಿ ಲೋಳೆ, ಮೀನು, ಯೀಸ್ಟ್ ಮತ್ತು ಬೀಟಾ-ಕ್ಯಾರೋಟಿನ್ ಅಂಶವಿರುವ ಕ್ಯಾರೆಟ್‌, ಕುಂಬಳಕಾಯಿ, ಮೆಣಸು, ಕಲ್ಲಂಗಡಿ, ಪಪ್ಪಾಯಿ, ಏಪ್ರಿಕಾಟ್‌ ಹಣ್ಣುಗಳು, ಹಸಿರು ಎಲೆಗಳು ಹಾಗೂ ತರಕಾರಿಯನ್ನು ಯಥೇಚ್ಛವಾಗಿ ಸೇವಿಸಿ. ಟೊಮೆಟೊ, ವಾಲ್‌ನಟ್‌, ಕುಂಬಳಕಾಯಿ, ಸೂರ್ಯಕಾಂತಿ ಬೀಜಗಳ ಸೇವನೆ ಚರ್ಮದ ಆರೋಗ್ಯಕ್ಕೆ ಉತ್ತಮ.

ಲೇಖಕಿ: ಆಹಾರತಜ್ಞೆ, ಸಾಕ್ರಾ ವರ್ಲ್ಡ್‌ ಆಸ್ಪತ್ರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.