
ಬೀಟ್‌ರೂಟ್
ಗೆಟ್ಟಿ ಚಿತ್ರ
ಹೆಣ್ಣು ಸೌಂದರ್ಯದ ಆರಾಧಕಿ. ಅನಾದಿ ಕಾಲದಿಂದಲೂ ಮಹಿಳೆಯರು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ನಾನಾ ಬಗೆಯ ಸೌಂದರ್ಯ ಪ್ರಸಾದಕ ವಿಧಾನಗಳ ಮೊರೆಹೋಗುತ್ತಿದ್ದಾರೆ. ಹೆಣ್ಣು ದೊಡ್ಡವಳಾದಾಗ, ಗರ್ಭಾವಸ್ಥೆಯ ಸಂದರ್ಭದಲ್ಲಿ, ಬಾಣಂತಿಯಾದಾಗ ಹಾಗೂ ರಜೋನಿವೃತ್ತಿಯ ಸಮಯದಲ್ಲಿ ಆಹಾರ ಮತ್ತು ಜೀವನ ಶೈಲಿಯಲ್ಲಿ ವ್ಯತ್ಯಾಸವಾದಾಗ ಮಾನಸಿಕ ಒತ್ತಡಗಳಿಂದಲೂ ಮುಖದ ಕಾಂತಿಯು ಕುಂದುತ್ತದೆ. ಅಲ್ಲದೆ ಮೊಡವೆಗಳು, ಕಪ್ಪು ಕಲೆಗಳು ಉಂಟಾಗುತ್ತದೆ.
ಮನೆಮದ್ದಿನಂಥಹ ಸರಳ ಉಪಕ್ರಮಗಳಿಂದ ಶುರುಮಾಡಿ ಸೌಂದರ್ಯ ಪ್ರಸಾದಕ ಶಸ್ತ್ರಚಿಕಿತ್ಸೆಗಳವರೆಗೂ ಸೌಂದರ್ಯದ ಬೇಡಿಕೆ ನಿಂತಿಲ್ಲ. ದುಂದುವೆಚ್ಚ ಮಾಡುವ ಬದಲು ಮಹಿಳೆಯರು ಸುಲಭವಾಗಿ ಸಿಗುವ ಹಣ್ಣು –ತರಕಾರಿಗಳನ್ನು ಉಪಯೋಗಿಸಿಕೊಂಡು ಸೌಂದಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಈ ಹಣ್ಣು–ತರಕಾರಿಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳ ಪ್ರಮಾಣದಲ್ಲಿ ಲಭ್ಯವಿದ್ದು, ತ್ವಚೆಯ ಕಾಂತಿಯನ್ನು ಕಾಪಾಡುವಲ್ಲಿ ಸಹಕರಿಸುತ್ತದೆ.
ತರಕಾರಿಗಳು
ಟೊಮೆಟೊ, ಆಲೂಗಡ್ಡೆ, ಸೌತೆಕಾಯಿ, ಬೀಟ್‌ರೂಟ್, ಜೇನುತುಪ್ಪ, ತುಪ್ಪ ಮೊದಲಾದವು ಅಡುಗೆ ಮನೆಯಲ್ಲಿ ಸುಲಭವಾಗಿ ದೊರಕುವ ಸಾಮಾಗ್ರಿಗಳಾಗಿದ್ದು, ಸೌಂದರ್ಯ ಪ್ರಸಾದನೆಯಲ್ಲಿ ಇವುಗಳ ಪಾತ್ರ ಅಪಾರವಾದುದು. ಇವುಗಳ ಕೇವಲ ಮೌಖಿಕ ಸೇವನೆಯಿಂದ ಅಷ್ಟೇ ಅಲ್ಲದೆ ಬಾಹ್ಯ ಪ್ರಯೋಗದಿಂದಲೂ ಬಹಳಷ್ಟು ಲಾಭವಿದೆ. ಇವುಗಳಲ್ಲಿ ಬೀಟ್‌ರೂಟ್ ಅಗ್ರ ಸ್ಥಾನದಲ್ಲಿದೆ.
ಬೀಟ್‌ರೂಟ್‌ನಲ್ಲಿ ಕಬ್ಬಿಣಾಂಶ, ಫೋಲಿಕ್ ಆ್ಯಸಿಡ್ ಹಾಗೂ ವಿಟಮಿನ್ ಸಿ ಯಥೇಚ್ಛವಾಗಿದೆ. ಬೀಟ್‌ರೂಟ್ ಸೇವನೆಯಿಂದ ಶರೀರದಲ್ಲಿ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಹಾಗಾಗಿ ದೇಹದ ಎಲ್ಲಾ ಜೀವಕೋಶಗಳಿಗೆ ಆಮ್ಲಜನಕದ ಪೂರೈಕೆಯು ಸರಿಯಾಗಿ ಆಗುತ್ತದೆ. ದೇಹದ ರಕ್ತದಲ್ಲಿನ ವಿಷವಸ್ತುಗಳನ್ನು ತೆಗೆದು ರಕ್ತವನ್ನು ಶುದ್ಧೀಕರಣಗೊಳಿಸುವುದರಿಂದ ಮೊಡವೆಗಳು ಕಡಿಮೆಯಾಗಿ ಮುಖದಲ್ಲಿ ಕಾಂತಿ ತರುತ್ತದೆ.
ಬೀಟ್‌ರೂಟ್‌ನಲ್ಲಿ ಇರುವ ಬಿಟಾಲಾನಿನ್ ಎನ್ನುವ ಅಂಶವು ಮುಖದಲ್ಲಿ ಸುಕ್ಕು ಉಂಟಾಗದಂತೆ, ಗೆರೆಗಳು ಏಳದಂತೆ ತಡೆಯುತ್ತದೆ. ಬೀಟ್‌ರೂಟ್‌ನಲ್ಲಿ ಹೆಚ್ಚಿನ ನೀರಿನ ಅಂಶ ಇರುವುದರಿಂದ ಚರ್ಮ ಒಣಗುವಿಕೆಯನ್ನು ತಡೆಯುತ್ತದೆ. ಪ್ರತಿದಿನವೂ ಇದನ್ನು ಸೇವಿಸುವುದರಿಂದ ಮುಖದಲ್ಲಿನ ಕಪ್ಪು ಕಲೆಗಳು ನಿವಾರಣೆಯಾಗಿ ಮುಖದಲ್ಲಿ ಕೋಮಲತೆ ಉಂಟಾಗುತ್ತದೆ. ಇಷ್ಟೇ ಅಲ್ಲದೆ ನೆತ್ತಿ ಮತ್ತು ಕೂದಲಿಗೆ ಹಚ್ಚುವುದರಿಂದ ರಕ್ತ ಸಂಚಾರವು ಸರಾಗವಾಗಿ ಆಗುವುದರಿಂದ ಕೂದಲಿನ ಬೆಳವಣಿಗೆಗೆ ಸಹಕರಿಸುತ್ತದೆ. ಜೊತೆಗೆ ಕೂದಲಿಗೆ ಸ್ನಿಗ್ದತೆ ಮತ್ತು ಹೊಳಪನ್ನು ನೀಡುತ್ತದೆ.
ಬೀಟ್‌ರೂಟ್
ಸೇವಿಸುವ ವಿಧಾನ:
• ಬೇಯಿಸಿದ ಪಲ್ಯ, ಸೂಪ್, ಚಟ್ನಿ, ಹಬೆಯಿಂದ ಬೇಯಿಸಿದ ಹೋಳುಗಳನ್ನು ಸೇವಿಸಬೇಕು.
• ಬೀಟ್‌ರೂಟ್ ರಸದೊಂದಿಗೆ ಜೇನುತುಪ್ಪವನ್ನು ಬೆರೆಸಿ ಫೇಸ್ ಪ್ಯಾಕ್ ಹಚ್ಚಬಹುದು.
• ಬೀಟ್‌ರೂಟ್ ರಸದೊಂದಿಗೆ ಮುಲ್ತಾನಿ ಮಿಟ್ಟಿಯನ್ನು ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಉಂಟಾಗುವ ಮೊಡವೆ ಸಮಸ್ಯೆಯನ್ನು ನಿವಾರಿಸಬಹುದು.
• ಬೀಟ್‌ರೂಟ್ ರಸದೊಂದಿಗೆ ಜೇನುತುಪ್ಪ ಮತ್ತು ಜೇನು ಮೇಣವನ್ನು ಸೇರಿಸಿ ಪ್ರತಿನಿತ್ಯವೂ ತುಟಿಗೆ ಹಚ್ಚುವುದರಿಂದ, ತುಟಿಯ ಬಣ್ಣ ವೃದ್ಧಿಸುತ್ತದೆ.
• ಬೀಟ್‌ರೂಟ್ ರಸವನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ವಾರಕೊಮ್ಮೆ ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಕುದಲು ಉದುವುರುದನ್ನು ತಡೆಹಿಡಿಯುತ್ತದೆ.
• ಬೀಟ್‌ರೂಟ್ ರಸದೊಂದಿಗೆ ದಾಸವಾಳದ ಎಲೆಯನ್ನು ಸೇರಿಸಿ ಪೇಸ್ಟ್ ಮಾಡಿ ಹಚ್ಚುವುದರಿಂದ ಕೂದಲಿಗೆ ಕಾಂತಿ ನೀಡುತ್ತದೆ.
• ಬೀಟ್‌ರೂಟ್ ರಸದೊಂದಿಗೆ ಗುಲಾಬಿ ಜಲವನ್ನು ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ವರ್ಧಿಸುತ್ತದೆ.
ಆಯುರ್ವೇದದ ಪ್ರಕಾರ, ಬೀಟ್‌ರೂಟ್ ಬಳಕೆಯಿಂದ ರಕ್ತ ಶುದ್ಧಿ ಆಗುತ್ತದೆ. ಆ ಮೂಲಕ ತ್ವಚೆಯ ಪ್ರಸಾದನವಾಗುತ್ತದೆ. ಹಾಗೆಯೇ ನಿಯಮಿತ ಬೀಟ್‌ರೂಟ್ ಬಳಕೆಯಿಂದ ಪಿತ್ತ ಶಮನವಾಗುತ್ತದೆ. ಆ ಮೂಲಕ ಪಿತ್ತ ಸಂಬಂಧಿ ಚರ್ಮದ ತೊಂದರೆಗಳಾದ ಮೊಡವೆಗಳು, ಸುಕ್ಕುಗಟ್ಟುವುದು, ಕಾಂತಿಹೀನತೆ, ರಕ್ತಹೀನತೆ ಮೊದಲಾದ ತೊಂದರೆಗಳನ್ನು ನಿವಾರಿಸುತ್ತದೆ. ಆದ್ದರಿಂದ ಮಹಿಳೆಯರು ನಿಯಮಿತವಾಗಿ ಬೀಟ್‌ರೂಟ್ ಅನ್ನು ಬಳಸಿ, ಅಪೂರ್ವ ಸೌಂದರ್ಯವನ್ನು ನಿಮ್ಮದಾಗಿಸಿಕೊಳ್ಳಿ.
(ಲೇಖಕರು: ಡಾ. ಗಾಯತ್ರಿ ಭಟ್ ಎನ್ ವಿ. ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗ. ಎಸ್‌ಡಿಎಂ ಆಯುರ್ವೇದ ಮತ್ತು ಆಸ್ಪತ್ರೆ, ಹಾಸನ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.