ADVERTISEMENT

ಮೂಗಿನ ಮೇಲೆ ಕಪ್ಪು ಮಚ್ಚೆ: ಹೆಚ್ಚಳಕ್ಕೆ ಕಾರಣ, ಪರಿಹಾರಗಳೇನು?

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 10:05 IST
Last Updated 5 ಡಿಸೆಂಬರ್ 2025, 10:05 IST
<div class="paragraphs"><p>ಚಿತ್ರ: ಗೆಟ್ಟಿ</p></div>
   

ಚಿತ್ರ: ಗೆಟ್ಟಿ

ಮೂಗಿನ ಮೇಲೆ ಕಪ್ಪು ಮಚ್ಚೆಗಳು (ಬ್ಲ್ಯಾಕ್‌ಹೆಡ್ಸ್) ಬಹುತೇಕ ಎಲ್ಲರೂ ಎದುರಿಸುವ ಸಮಸ್ಯೆಯಾಗಿದೆ. ಇವು ನಿರಾಸೆ ಅಥವಾ ಮುಜುಗರ‌ ಉಂಟುಮಾಡಬಹುದು. ಮುಖದ ಇತರ ಭಾಗಗಳಿಗಿಂತ ಮೂಗಿನ ಮೇಲೆ ಹೆಚ್ಚು ಎಣ್ಣೆ ಗ್ರಂಥಿಗಳಿವೆ. ಈ ಕಾರಣದಿಂದ ಮೂಗಿನ ಮೇಲೆ ಕಪ್ಪು ಮಚ್ಚೆ‌‌ ಹೆಚ್ಚಾಗಿ ಕಂಡುಬರುತ್ತವೆ.

ನಿಯಮಿತವಾಗಿ ಮುಖವನ್ನು ಸ್ವಚ್ಛಗೊಳಿಸಿದರೂ ಇವು ಕಾಣಿಸಿಕೊಳ್ಳುತ್ತವೆ. ಕಪ್ಪು ಮಚ್ಚೆ ಕೇವಲ ಕೊಳಕಿನಿಂದ ಮಾತ್ರವಲ್ಲ, ಚರ್ಮದ ರಂಧ್ರಗಳ ಒಳಗೆ ಏನಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಅವು ಏಕೆ ಸಂಭವಿಸುತ್ತವೆ, ಹೇಗೆ ನಿರ್ವಹಿಸುವುದು ಎಂಬುದನ್ನು ತಿಳಿಯುವುದು ಅಗತ್ಯ.

ಅತಿಯಾದ ಎಣ್ಣೆ (ಸೀಬಮ್), ಸತ್ತ ಚರ್ಮದ ಕೋಶ ಹಾಗೂ ಬ್ಯಾಕ್ಟೀರಿಯಾದಿಂದಾಗಿ ಕಪ್ಪು ಮಚ್ಚೆ ರೂಪುಗೊಳ್ಳುತ್ತವೆ. ಇವು ತ್ವಚೆಯ ಮೇಲ್ಮೈಯಲ್ಲಿ ಕುಳಿತು ಗಾಳಿಗೆ ಒಡ್ಡಿಕೊಂಡಾಗ, ಇವು ಆಕ್ಸಿಡೀಕರಣಗೊಂಡು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಅದಕ್ಕಾಗಿಯೇ ಕಪ್ಪು ಮಚ್ಚೆಗಳು ಮೂಗಿನ ಮೇಲೆ ಸಣ್ಣ ಕಪ್ಪು ಚುಕ್ಕೆಗಳಂತೆ ಕಾಣುತ್ತವೆ.

ಸಾಕಷ್ಟು ಎಕ್ಸ್‌ಫೋಲಿಯೇಟ್ ಮಾಡದಿರುವುದು ಕಪ್ಪು ಮಚ್ಚೆಗೆ ಮತ್ತೊಂದು ಕಾರಣವಾಗಿದೆ. ಆಗಾಗ ಮುಖ ಸ್ವಚ್ಛಗೊಳಿಸುವುದರಿಂದ ಮುಖದಲ್ಲಿನ ಕೊಳಕು ಮತ್ತು ಬೆವರನ್ನು ತೆಗೆದುಹಾಕುತ್ತದೆ. ಆದರೆ ಅದು ಸತ್ತ ಚರ್ಮ ಕೋಶಗಳನ್ನು ತೊಡೆದು ಹಾಕುವುದಿಲ್ಲ. ಈ ಸತ್ತ ಚರ್ಮ ಕೋಶಗಳು ಸಂಗ್ರಹವಾದಾಗ ಅವು ಎಣ್ಣೆಯೊಂದಿಗೆ ಬೆರೆತು ಚರ್ಮದ ರಂಧ್ರಗಳನ್ನು ತಡೆಯುತ್ತವೆ. ಅದಕ್ಕಾಗಿಯೇ ನಿಯಮಿತವಾಗಿ ಎಕ್ಸ್‌ಫೋಲಿಯೇಟ್ ಮಾಡದ ಜನರು ಮೂಗಿನ ಮೇಲೆ ಹೆಚ್ಚು ಕಪ್ಪು ಮಚ್ಚೆಗಳನ್ನು ಗಮನಿಸುತ್ತಾರೆ.

ಕೊಮೆಡೊಜೆನಿಕ್ ಮೇಕಪ್ ಅಥವಾ ತ್ವಚೆಯ ಪೋಷಣೆ ಉತ್ಪನ್ನಗಳನ್ನು ಬಳಸುವುದು ಕಪ್ಪು ಮಚ್ಚೆ ಹೆಚ್ಚಾಗಲು ಮತ್ತೊಂದು ಕಾರಣವಾಗಿದೆ. ಅನೇಕ ಮಾಯ್ಚರೈಸರ್‌ಗಳು, ಸನ್‌ಸ್ಕ್ರೀನ್‌ಗಳು ಅಥವಾ ಫೌಂಡೇಶನ್‌ಗಳು ರಂಧ್ರಗಳ ಒಳಗೆ ಪ್ಲಗ್‌ನಂತೆ ಕುಳಿತುಕೊಳ್ಳುತ್ತವೆ. ವಿಶೇಷವಾಗಿ ಮೂಗಿನ ಮೇಲೆ ಅವುಗಳನ್ನು ಸರಿಯಾಗಿ ತೆಗೆದುಹಾಕದಿದ್ದರೆ, ಕಪ್ಪುಮಚ್ಚೆಗೆ ಕಾರಣವಾಗಬಹುದು. ಹಾರ್ಮೋನಿನ ಬದಲಾವಣೆ, ಹದಿಹರೆಯದ ಅವಧಿ, ಮುಟ್ಟಿನ ಸಮಯ, ಒತ್ತಡ ಅಥವಾ ಕೆಲವು ಔಷಧಿಗಳ ಸೇವನೆ ಹೆಚ್ಚು ಎಣ್ಣೆ ಉತ್ಪಾದನೆಯನ್ನು ಪ್ರಚೋದಿಸಬಹುದು. 

ಕಪ್ಪು ಮಚ್ಚೆ ಕಡಿಮೆ ಮಾಡಲು ಸರಳ ಮಾರ್ಗಗಳು: 

  • ದಿನಕ್ಕೆ ಎರಡು ಬಾರಿ ಸೌಮ್ಯವಾದ ಕ್ಲೆನ್ಸರ್‌ನೊಂದಿಗೆ ಮುಖವನ್ನು ಸ್ವಚ್ಛಗೊಳಿಸುವುದು.

  • ವಾರಕ್ಕೆ ಎರಡರಿಂದ ಮೂರು ಬಾರಿ ಎಕ್ಸ್‌ಫೋಲಿಯೇಟ್ ಮಾಡುವುದು.

  • ಸ್ಯಾಲಿಸಿಲಿಕ್ ಆಸಿಡ್ ಹೊಂದಿರುವ ಮೇಕಪ್‌ ಉತ್ಪನ್ನಗಳ ಬಳಸುವುದು ಸೂಕ್ತ.

  • ವಾರಕ್ಕೆ 1 ರಿಂದ 2 ಬಾರಿ ಕ್ಲೇ ಮಾಸ್ಕ್ ಬಳಸುವುದು.

  • ನಾನ್-ಕೊಮೆಡೊಜೆನಿಕ್ (ರಂಧ್ರ-ಮುಚ್ಚದ) ಉತ್ಪನ್ನಗಳನ್ನು ಬಳಸುವುದು ಅವಶ್ಯಕವಾಗಿದೆ. ಹಗುರವಾದ ಜೆಲ್‌ಗಳನ್ನು ಆಯ್ಕೆ ಮಾಡುವುದು ಮೂಗಿನ ಮೇಲಿನ ಕಪ್ಪು ಮಚ್ಚೆಗಳನ್ನು ಕಡಿಮೆ ಮಾಡಬಹುದು. 

  • ಮೂಗನ್ನು ಆಗಾಗ್ಗೆ ಮುಟ್ಟುವುದರಿಂದ, ನಿಮ್ಮ ಕೈಗಳಲ್ಲಿರುವ ಎಣ್ಣೆ, ಬೆವರು ಮತ್ತು ಬ್ಯಾಕ್ಟೀರಿಯಾವನ್ನು ವರ್ಗಾಯಿಸುತ್ತದೆ. 

  • ನಿಯಮಿತವಾಗಿ ದಿಂಬಿನ ಬಟ್ಟೆಗಳನ್ನು ಬದಲಾಯಿಸುವುದು.

  • ವ್ಯಾಯಾಮದ ನಂತರ ನಿಮ್ಮ ಮುಖವನ್ನು ಮೃದುವಾಗಿ ಒರೆಸುವುದು.

ಈ ಮೇಲಿನ ಸಲಹೆ ಪಾಲಿಸಿದರೆ, ಮೂಗಿನ ಮೇಲಿನ ಕಪ್ಪು ಮಚ್ಚೆಗಳು ನಿಧಾನವಾಗಿ ಕಡಿಮೆಯಾಗುತ್ತವೆ. 

(ಡಾ. ಸುನಿಲ್ ಕುಮಾರ್ ಪ್ರಭು, ಸಲಹೆಗಾರ - ಚರ್ಮರೋಗ ವೈದ್ಯ, ಆಸ್ಟರ್ ಆರ್‌ವಿ ಆಸ್ಪತ್ರೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.