ಪ್ರಾತಿನಿಧಿಕ ಚಿತ್ರ
ಕೆಲವರಿಗೆ ಮಧ್ಯಾಹ್ನ ಊಟವಾದ ತಕ್ಷಣ ಕಣ್ಣು ತೆರೆಯಲಾರದಷ್ಟು ನಿದ್ದೆ, ತೂಕಡಿಕೆ ಕಾಡುತ್ತದೆ. ಅರ್ಧ ಗಂಟೆ ನಿದ್ದೆ ಮಾಡಿದರೆ ಏಳುವಷ್ಟರಲ್ಲಿ ದೇಹಕ್ಕೆ ಹೊಸ ಚೈತನ್ಯ ಸಿಕ್ಕಂತಾಗುತ್ತದೆ. ಆದರೆ ಮಧ್ಯಾಹ್ನದ ನಿದ್ದೆ ರಾತ್ರಿ ನಿದ್ದೆಗೆ ಭಂಗವನ್ನುಂಟು ಮಾಡಬಾರದು.
ಹೆಚ್ಚಿನ ಜನರಿಗೆ ಮಧ್ಯಾಹ್ನ 1 ರಿಂದ 4 ಗಂಟೆಯವರೆಗೆ ನಿದ್ದೆ ಕಾಡುತ್ತದೆ. ಅತಿಯಾದ ಊಟದಿಂದ ಮಾತ್ರವಲ್ಲ, ಮಧ್ಯಾಹ್ನದ ವೇಳೆಗೆ ದೇಹದಲ್ಲಾಗುವ ದಣಿವು ಅಥವಾ ಆಯಾಸ ಕೂಡ ಮಧ್ಯಾಹ್ನದ ನಿದ್ದೆಗೆ ಕಾರಣವಾಗುತ್ತದೆ.
ಬಹಳ ಹಿಂದಿನಿಂದಲೂ ನಿದ್ರೆಯನ್ನು ಜಾಗರೂಕ ಮನಸ್ಥಿತಿಯನ್ನು ಕಾಯ್ದುಕೊಳ್ಳಲು, ಮಾನಸಿಕ ಸ್ಥಿತಿಯನ್ನು ಸುಧಾರಿಸಲು, ಸ್ಮರಣೆಯನ್ನು ಉತ್ತಮಗೊಳಿಸಲು, ಉತ್ಪಾದಕತೆಯನ್ನು ಹೆಚ್ಚಿಸಲು ಒಂದು ಸಾಧನವೆಂದೇ ಪರಿಗಣಿಸಲಾಗಿದೆ.
ಮಧ್ಯಾಹ್ನದ ನಿದ್ದೆ ಶಕ್ತಿಯೂ ಹೌದು, ಆಲಸ್ಯತನಕ್ಕೆ ದಾರಿಯೂ ಹೌದು. ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡಿದರೆ ದೇಹ ಚೈತನ್ಯಗೊಳ್ಳುತ್ತದೆ, ಏಕಾಗ್ರತೆ ಸುಧಾರಿಸಿ, ಮಾನಸಿಕ, ದೈಹಿಕ ಆರೋಗ್ಯಕ್ಕೆ ವರದಾನವಾಗಲಿದೆ. ಅದೇ ಅತಿಯಾದರೆ ರಾತ್ರಿ ನಿದ್ದೆಗೆ ಭಂಗವನ್ನುಂಟು ಮಾಡಿ, ಅನಾರೋಗ್ಯ, ಜಡತ್ವಕ್ಕೆ ಕಾರಣವಾಗಲಿದೆ.
ಅಧ್ಯಯನದ ಪ್ರಕಾರ ಅರ್ಧ ಗಂಟೆಗಿಂತ ಹೆಚ್ಚು ಹೊತ್ತು ನಿದ್ದೆ ಮಾಡಿದವರಿಗೆ ಎದ್ದ ಮೇಲೆ ಒಂದು ಗಂಟೆಗಳಿಗೂ ಹೆಚ್ಚು ಕಾಲ ಜಡ ಅನುಭವ ಕಾಡುತ್ತದೆ. ಪೂರ್ತಿಯಾಗಿ ಎಚ್ಚರವಾಗಲೂ ಕಷ್ಟವಾಗಬಹುದು. ಇದು ಮಹತ್ವದ ಕೆಲಸಗಳನ್ನು ಪೂರ್ಣಗೊಳಿಸಲು, ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದಂತೆ ಮಾಡುತ್ತದೆ.
ಯಾವ ಸಂದರ್ಭಗಳಲ್ಲಿ ಮಧ್ಯಾಹ್ನದ ನಿದ್ದೆ ಅತ್ಯಗತ್ಯ?
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಮಧ್ಯಾಹ್ನದ ನಿದ್ದೆ ಅತ್ಯಗತ್ಯವಾಗಿರುತ್ತದೆ. ಇದರಿಂದ ಅವರು ರಾತ್ರಿ ಜಾಗರೂಕರಾಗಿ ಇರಬಹುದು. ಅದೇ ರೀತಿ ಕೆಲಸದ ಒತ್ತಡದಲ್ಲಿರುವವರು, ತಾಯಂದಿರು ಸೇರಿ ರಾತ್ರಿ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗದವರಿಗೆ ಕಡಿಮೆಯಾದ ನಿದ್ದೆಯನ್ನು ಸರಿದೂಗಿಸಲು ಮಧ್ಯಾಹ್ನದ ನಿದ್ದೆ ಬೆಸ್ಟ್.
ದೀರ್ಘಕಾಲದಿಂದ ನಿದ್ರಾಹೀನತೆ ಸಮಸ್ಯೆ ಎದುರಿಸುತ್ತಿರುವವರು ಮಧ್ಯಾಹ್ನದ ನಿದ್ದೆಯನ್ನು ತಪ್ಪಿಸುವುದು ಒಳಿತು ಎನ್ನುತ್ತಾರೆ ತಜ್ಞರು.
ಕ್ರೀಡಾಪಟುಗಳು ನಿದ್ದೆಯನ್ನು ಅಸ್ತ್ರವನ್ನಾಗಿ ಬಳಸುತ್ತಾರೆ. ಸ್ನಾಯುಗಳ ಚೇತರಿಕೆಯನ್ನು ವೇಗಗೊಳಿಸಲು ಮತ್ತು ಕಠಿಣ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ತಮ್ಮ ತರಬೇತಿ ವೇಳಾಪಟ್ಟಿಯಲ್ಲಿ ಮಧ್ಯಾಹ್ನದ ನಿದ್ದೆಯನ್ನೂ ಸೇರಿಸಿಕೊಳ್ಳುತ್ತಾರೆ.
ಇದಲ್ಲದೆ, ಅತಿ ಏಕಾಗ್ರತೆ ಬಯಸುವ ಕೆಲಸಗಳಾದ ಆರೋಗ್ಯ ಕ್ಷೇತ್ರದಲ್ಲಿ ದುಡಿಯುವವರು, ವಿಮಾನದ ಸಿಬ್ಬಂದಿ ಸೇರಿ ಹಲವರಿಗೆ ಮಧ್ಯಾಹ್ನದ ನಿದ್ದೆ ಮದ್ದಾಗಿರುತ್ತದೆ.
ಮಧ್ಯಾಹ್ನದ ನಿದ್ದೆ ಹೇಗಿರಬೇಕು?
ಮಧ್ಯಾಹ್ನದ ನಿದ್ದೆ ದೇಹಕ್ಕೆ ಚೈತನ್ಯ ನೀಡುವಂತಾಗಲು ಸಮಯ ಮತ್ತು ಮಲಗುವ ಪರಿಸರ ಮಹತ್ವದ ಪಾತ್ರವಹಿಸುತ್ತದೆ. ಮಧ್ಯಾಹ್ನ 2 ಗಂಟೆಯ ಒಳಗೆ 10 ರಿಂದ 20 ನಿಮಿಷ ನಿದ್ದೆ ಮಾಡುವುದು ದೇಹಕ್ಕೆ ಒಳಿತು.
ಆದಷ್ಟು ತಣ್ಣಗಿನ, ಪ್ರಶಾಂತ ವಾತಾವರಣದಲ್ಲಿ ಮಲಗಿ.
ಒಟ್ಟಿನಲ್ಲಿ ಮಧ್ಯಾಹ್ನದ ನಿದ್ದೆ ಕೆಲವರಿಗೆ ವರದಾನವಾದರೆ ಇನ್ನೂ ಕೆಲವರಿಗೆ ರಾತ್ರಿ ನಿದ್ದೆಯ ಅಡಚಣೆಗೆ ಕಾರಣವಾಗುತ್ತದೆ. ಹೀಗಾಗಿ ವಯಸ್ಸು, ಜೀವನ ಶೈಲಿ, ನಿದ್ದೆಯ ವೇಳಾಪಟ್ಟಿಯ ಅನುಸಾರ ಪಾಲಿಸುವುದು ಒಳಿತು. ನಿದ್ದೆಯನ್ನು ಅಮೂಲ್ಯ ಸಾಧನಾಗಿಸಿಕೊಳ್ಳಿ ಎನ್ನುವುದು ತಜ್ಞರ ಸಲಹೆ.
ಆಧಾರ: ಪಿಟಿಐ ಸುದ್ದಿ ವಾಹಿನಿಯ ಮಾಹಿತಿಯನ್ನು ಆಧರಿಸಿ ಲೇಖನ ಬರೆಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.