
ಪ್ರಾತಿನಿಧಿಕ ಚಿತ್ರ
ಭಾರತೀಯ ಮಹಿಳೆಯರಲ್ಲಿ ಹೆಚ್ಚು ಕಂಡುಬರುವ ಕ್ಯಾನ್ಸರ್ ಸಮಸ್ಯೆಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಕೂಡ ಒಂದು. 30 ರಿಂದ 50 ವರ್ಷದ ವಯಸ್ಸಿನ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ ಎನ್ನುತ್ತಿವೆ ವರದಿಗಳು.
ಹ್ಯೂಮನ್ ಪ್ಯಾಪಿಲೋಮವೈರಸ್ ಅಥವಾ HPV ಎಂಬ ವೈರಸ್ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗಿದೆ. ಆರಂಭದ ಒಂದು ಅಥವಾ ಎರಡು ವರ್ಷಗಳಲ್ಲಿ ದೇಹ ಕ್ಯಾನ್ಸರ್ ವೈರಸ್ ವಿರುದ್ಧ ನೈಸರ್ಗಿಕವಾಗಿ ಹೋರಾಡುತ್ತದೆ. ಆದರೆ ಕಾಲಾನಂತರ ಗರ್ಭಕಂಠದಲ್ಲಿನ ಕೋಶಗಳ ಬದಲಾವಣೆಗೆ ಕಾರಣವಾಗುತ್ತದೆ. ಇದನ್ನು ಪತ್ತೆ ಹಚ್ಚದಿದ್ದರೆ ಅವು ಕ್ಯಾನ್ಸರ್ ಆಗಿ ಬದಲಾಗುತ್ತವೆ.
ಮಾರಣಾಂತಿಕ ಕಾಯಿಲೆ ಕ್ಯಾನ್ಸರ್ ವಿರುದ್ಧ ಹೋರಾಡಲು ಮತ್ತು ಜಾಗೃತಿ ಮೂಡಿಸಲು ಪ್ರತಿ ವರ್ಷ ಫೆಬ್ರುವರಿ 04ರಂದು ‘ವಿಶ್ವ ಕ್ಯಾನ್ಸರ್ ದಿನ’ ಆಚರಣೆ ಮಾಡಲಾಗುತ್ತದೆ.
ಗರ್ಭಕಂಠದ ಕ್ಯಾನ್ಸರ್‌ಗೆ ಹಲವು ಕಾರಣ
ಎಳೆ ವಯಸ್ಸಿನಲ್ಲಿ ವಿವಾಹ ಅಥವಾ ಚಿಕ್ಕ ವಯಸ್ಸಿನಲ್ಲಿ ಲೈಂಗಿಕ ಕ್ರಿಯೆಗೆ ಒಳಪಡುವುದು, ಪದೇ ಪದೇ ಗರ್ಭಧಾರಣೆ, ದೇಹದ ಖಾಸಗಿ ಭಾಗಗಳಲ್ಲಿ ನೈರ್ಮಲ್ಯದ ಕೊರತೆ, ಧೂಮಪಾನ ಅಥವಾ ದುರ್ಬಲ ರೋಗನಿರೋಧಕ ಶಕ್ತಿ (ಎಚ್‌ಐವಿ ಅಥವಾ ದೀರ್ಘಕಾಲೀನ ಕಾಯಿಲೆಗಳಂತೆ) ಇವೆಲ್ಲವೂ ಗರ್ಭಕಂಠ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ.
ನಿಯಮಿತ ತಪಾಸಣೆ ಮತ್ತು ಅರಿವಿನ ಕೊರತೆಯೂ ಈ ಮಾರಣಾಂತಿಕ ಕ್ಯಾನ್ಸರ್ ಉಲ್ಬಣಕ್ಕೆ ಕಾರಣವಾಗಿದೆ.
ಆರಂಭಿಕ ಲಕ್ಷಣಗಳಿಲ್ಲದಿರುವುದೇ ಸಮಸ್ಯೆ
ಆರಂಭಿಕ ಗರ್ಭಕಂಠದ ಕ್ಯಾನ್ಸರ್ ಅಥವಾ ಕ್ಯಾನ್ಸರ್ ಪೂರ್ವದ ಬದಲಾವಣೆಗಳು ಎಂದಿಗೂ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ನೋವು, ಎಚ್ಚರಿಕೆ ನೀಡದೆ ಆಕ್ರಮಿಸುವ ಕಾಯಿಲೆಯಿದು. ಮಹಿಳೆಯಲ್ಲಿ ಅನಿಯಮಿತ ರಕ್ತಸ್ರಾವ, ಸಂಭೋಗದ ನಂತರ ರಕ್ತಸ್ರಾವ, ಕೆಟ್ಟ ವಾಸನೆಯ ಅಸಾಮಾನ್ಯ ಸ್ರಾವ ಅಥವಾ ಸೊಂಟದಲ್ಲಿ ನೋವು ಕ್ಯಾನ್ಸರ್‌ನ ಬಗ್ಗೆ ಎಚ್ಚರಿಸುತ್ತವೆ. ಹೀಗಾಗಿಯೇ ನಿಯಮಿತವಾಗಿ ತಪಾಸಣೆಗೆ ಒಳಗಾಗುವುದು ಮುಖ್ಯವಾಗಿರುತ್ತದೆ.
ದೈನಂದಿನ ಅಭ್ಯಾಸಗಳ ಬಗ್ಗೆ ಇರಲಿ ಗಮನ
ದೇಹದ ಖಾಸಗಿ ಭಾಗಗಳನ್ನು ಸ್ಚಚ್ಛವಾಗಿರಿಸಿಕೊಳ್ಳಿ. ವಿಶೇಷವಾಗಿ ಮುಟ್ಟಿನ ಸಂದರ್ಭದಲ್ಲಿ ಶುಚಿತ್ವ ಆದ್ಯತೆಯಾಗಿರಲಿ. ಅನಿಯಮಿತ ರಕ್ತಸ್ರಾವ ಅಥವಾ ಅಸಾಮಾನ್ಯ ಸ್ರಾವದ ಬಗ್ಗೆ ಗಮನವಿರಲಿ. ಸುರಕ್ಷಿತ ಲೈಂಗಿಕ ಕ್ರಿಯೆ ಇರಲಿ, ಧೂಮಪಾನದಿಂದ ದೂರವಿರಿ, ಸಣ್ಣ ಸೋಂಕುಗಳು ಕಾಣಿಸಿಕೊಂಡರೂ ವೈದ್ಯರನ್ನು ಭೇಟಿಯಾಗುವುದನ್ನು ಮರೆಯದಿರಿ. ಜಾಗೃತಿ, ಲಸಿಕೆ, ನಿಯಮಿತ ತಪಾಸಣೆಗಳಿಂದ ಗರ್ಭಕಂಠದ ಕ್ಯಾನ್ಸರ್ ಅನ್ನುತಡೆಗಟ್ಟಬಹುದು.
(ಲೇಖಕ: –ಡಾ.ವಿಶ್ವನಾಥ್ ಸತ್ಯನಾರಾಯಣನ್ ಹಿರಿಯ ಸಲಹೆಗಾರರು, ವೈದ್ಯಕೀಯ ಆಂಕೊಲಾಜಿ, ಅಪೋಲೋ ಆಸ್ಪತ್ರೆ, ಬೆಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.