
ಚಿತ್ರ: ಗೆಟ್ಟಿ
ಇತ್ತೀಚಿಗೆ ಮಕ್ಕಳು ಹಾಗೂ ಹದಿಹರೆಯದವರಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆ ಗಂಭೀರವಾಗುತ್ತಿದೆ. ಇಂದಿನ ಯುವ ಸಮುದಾಯದವರಲ್ಲಿ ಖಿನ್ನತೆ, ಒತ್ತಡ ಹಾಗೂ ಮಾನಸಿಕ ಅಸ್ವಸ್ಥತೆಯಂತಹ ಮುಂತಾದ ಸಮಸ್ಯೆಗಳು ಹೆಚ್ಚುತ್ತಿವೆ.
ಮಾನಸಿಕ ಆರೋಗ್ಯ ಸಮಸ್ಯೆಗೆ ಕಾರಣಗಳು:
ಕುಟುಂಬದ ಹಿನ್ನೆಲೆ: ಒತ್ತಡ ಎಂಬುದು ಕುಟುಂಬದಿಂದಲೂ ಎರವಲು ಆಗಿ ಬರಬಹುದು.
ಮಿದುಳಿನಲ್ಲಿ ರಾಸಾಯನಿಕ ಅಸಮತೋಲನದಂತಹ ಜೈವಿಕ ಅಂಶಗಳು: ಭಾವನೆ ಮತ್ತು ನಡವಳಿಕೆಗಳು ನಿಯಂತ್ರಣ ತಪ್ಪಿದಂತೆ ತೋರುವ ಮಕ್ಕಳಲ್ಲಿ ಮಾನಸಿಕ ಆರೋಗ್ಯದ ಬಿಕ್ಕಟ್ಟು ಕಠಿಣವಾಗಿರುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ.
ಬಾಲ್ಯದಲ್ಲಿ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು ಗೋಚರಿಸಲು ಪ್ರಾರಂಭವಾಗುತ್ತವೆ. ಮಗು ಶಾಲೆಗೆ ಹೋಗುವ ಸಮಯದಲ್ಲಿ ಈ ಸಮಸ್ಯೆಯನ್ನು ಪತ್ತೆ ಮಾಡಬಹುದು. ಬಾಲ್ಯದಲ್ಲಿಯೇ ಮಾನಸಿಕ ಅಸ್ವಸ್ಥತೆ ಪ್ರಾರಂಭವಾಗಬಹುದು. ಉದಾಹರಣೆಗೆ ಆತಂಕ, ಏಕಾಗ್ರತೆಯ ಕೊರತೆ, ಅತಿಯಾದ ಚಟುವಟಿಕೆ, ಆಟಿಸಂಸ್ಪೆಕ್ಟ್ರಮ್, ಖಿನ್ನತೆ ಹಾಗೂ ಅತಿಯಾಗಿ ತಿನ್ನುವುದು ಮಾನಸಿಕ ಆರೋಗ್ಯ ಸಮಸ್ಯೆಯ ಸೂಚಕಗಳಾಗಿವೆ.
ಮಾನಸಿಕ ಆರೋಗ್ಯ ಸಮಸ್ಯೆಗಳು ಮಗುವಿನ ಜೀವನದ ಮೇಲೆ ಪರಿಣಾಮ ಬೀರಬಹುದು. ಮಾನಸಿಕ ಆರೋಗ್ಯದ ಸಮಸ್ಯೆಗಳಿರುವ ಯುವಕರು ಶಾಲೆಗೆ ಗೈರು ಹಾಜರಾಗುವ ಸಾಧ್ಯತೆ ಇರುತ್ತದೆ. ಏಕಾಗ್ರತೆ ಕೊರತೆ, ಚಂಚಲತೆ, ಅರ್ಥ ಮಾಡಿಕೊಳ್ಳುವಲ್ಲಿ ವಿಫಲತೆ, ಗೆಳೆಯರೊಂದಿಗೆ ಗಲಾಟೆ ಮತ್ತು ಆಕ್ರಮಣಕಾರಿ ನಡವಳಿಕೆಯಿಂದಾಗಿ ಅವರ ಕಲಿಕೆ ಕುಂಠಿತಗೊಳ್ಳುತ್ತದೆ.
ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರ ಪೈಕಿ ಶೇ 50ರಷ್ಟು14 ವರ್ಷದೊಳಗಿನವರು ಇದ್ದಾರೆ. ಶೇ 75ರಷ್ಟು 24 ವರ್ಷ ವಯಸ್ಸಿನವರು ಇದ್ದಾರೆ. ಶೇ 10ರಷ್ಟು ಮಾತ್ರ ಮಕ್ಕಳಿದ್ದಾರೆ. ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಅನುಭವಿಸುವ ಶೇ 70ರಷ್ಟು ಮಕ್ಕಳು ಮತ್ತು ಹದಿಹರೆಯದವರ ಪೈಕಿ ಚಿಕ್ಕ ವಯಸ್ಸಿನಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದಿರುವುದಿಲ್ಲವೆಂಬುದು ಆತಂಕಕಾರಿ ಸಂಗತಿ.
ಮಕ್ಕಳಲ್ಲಿ ಮಾನಸಿಕ ಅಸ್ವಸ್ಥತೆಯ ಸೂಚನೆಗಳು:
ಸಾಮಾಜಿಕ ಸಂವಹನದಿಂದ ಹಿಂದೆ ಸರಿಯುವುದು ಅಥವಾ ದೂರ ಉಳಿಯುವುದು
ತನ್ನ ಬಗ್ಗೆ ತಾನೇ ಹೀಯಾಳಿಸಿಕೊಂಡು ನೋವು ಮಾಡಿಕೊಳ್ಳುವುದು.
ಸಾವು ಅಥವಾ ಆತ್ಮಹತ್ಯೆಯ ಬಗ್ಗೆ ಮಾತನಾಡುವುದು.
ತೀವ್ರ ಕಿರಿಕಿರಿಗೆ ಒಳಗಾಗುವುದು.
ಮಕ್ಕಳು ಸಾಮಾಜಿಕ ಭಯ ಹಾಗೂ ಖಿನ್ನತೆಯಂತಹ ಸಮಸ್ಯೆಗಳಿಂದ ಬಳಲಬಹುದು. ಗಮನದ ಕೊರತೆ, ಹೈಪರ್ ಆಕ್ಟಿವಿಟಿ, ಅಸ್ವಸ್ಥತೆ, ಎನ್ಯುರೆಸಿಸ್, ಎನ್‌ಕೊರ್ಪ್ರಸಿಸ್ ಅಥವಾ ಕಲಿಕೆ, ಸಂವಹನ ಮತ್ತು ಸಮನ್ವಯದ ಅಸ್ವಸ್ಥತೆಗಳಂತಹ ಕಾಯಿಲೆಗಳು ಬಾಲ್ಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸಮಸ್ಯೆಗಳಾಗಿವೆ. ಎನ್ಯುರೆಸಿಸ್ ಮತ್ತು ಎನ್‌ಕೊರ್ಪ್ರಸಿಸ್‌ನಂತಹ ಕೆಲವು ಅಸ್ವಸ್ಥತೆಗಳು, ವಯಸ್ಸಾದಂತೆ ವಿಶೇಷವಾಗಿ ಚಿಕಿತ್ಸೆಗಳಿಂದ ಗುಣಮುಖವಾಗುತ್ತವೆ.
ಮಾನಸಿಕ ಆರೋಗ್ಯ ನಮ್ಮ ಭಾವನಾತ್ಮಕ, ಮಾನಸಿಕ ಮತ್ತು ಸಾಮಾಜಿಕ ಯೋಗ ಕ್ಷೇಮವನ್ನು ಒಳಗೊಂಡಿದೆ. ನಾವು ಹೇಗೆ ಯೋಚಿಸುತ್ತೇವೆ, ಅನುಭವಿಸುತ್ತೇವೆ ಮತ್ತು ವರ್ತಿಸುತ್ತೇವೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಬಾಲ್ಯ ಮತ್ತು ಹದಿಹರೆಯದಿಂದ ಹಿಡಿದು ಪ್ರೌಢಾವಸ್ಥೆಯವರೆಗೆ ಜೀವನದ ಪ್ರತಿಯೊಂದು ಹಂತದಲ್ಲೂ ಮಾನಸಿಕ ಆರೋಗ್ಯವು ಮುಖ್ಯವಾಗಿರುತ್ತದೆ.
ಲೇಖಕರು: ಡಾ.ಸುಗಮಿ ರಮೇಶ್, ಹಿರಿಯ ಮನಃಶಾಸ್ತ್ರಜ್ಞ, ಅಪೊಲೊ ಆಸ್ಪತ್ರೆ, ಬೆಂಗಳೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.