ಮಕ್ಕಳಲ್ಲಿ ದೈಹಿಕ ಬೆಳವಣಿಗೆ ಎಷ್ಟು ಮುಖ್ಯವೋ ಮಾನಸಿಕ ಬೆಳವಣಿಗೆಯೂ ಅಷ್ಟೇ ಮುಖ್ಯ ಎಂದು ಮನಃಶಾಸ್ತ್ರ ಹೇಳುತ್ತದೆ. ನಿಮ್ಮ ಮಗು ಸಣ್ಣ ಸಣ್ಣ ವಿಷಯಗಳಿಗೆ ಸಿಟ್ಟಾಗುತ್ತಿದ್ದರೆ ಅದಕ್ಕೆ ಮನಃಶಾಸ್ತ್ರದಲ್ಲಿ ಉತ್ತರವಿದೆ. ಹಾಗಿದ್ದರೆ, ನಿಮ್ಮ ಮಗು ಸಿಟ್ಟಾಗಲು ಕಾರಣಗಳೇನು? ಮತ್ತು ಅದಕ್ಕಿರುವ ಪರಿಹಾರದ ಮಾರ್ಗಗಳು ಏನೆಂಬುದನ್ನು ನೋಡೋಣ ಬನ್ನಿ.
ಕೋಪವು ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಮಾರ್ಗ ಎಂದು ಮನಃಶಾಸ್ತ್ರ ಹೇಳುತ್ತದೆ. ಅದರಲ್ಲಿಯೂ ಮಕ್ಕಳಲ್ಲಿ ಕೋಪದ ಪ್ರಮಾಣ ಹೆಚ್ಚಾಗಿ ಕಂಡುಬರುತ್ತದೆ. ಮನಃಶಾಸ್ತ್ರದ ಪ್ರಕಾರ, ಮಕ್ಕಳಲ್ಲಿ ಕೋಪ ಹೆಚ್ಚಾಗಿ ಕಾಣಿಸಿಕೊಳ್ಳಲು ಕಾರಣವೇನು ಎಂಬ ಮಾಹಿತಿ ಇಲ್ಲಿದೆ.
ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಅಸಮರ್ಥತೆ
ಮಕ್ಕಳು ತಮ್ಮ ದುಃಖ, ಬೇಸರ, ಭಯ ಹಾಗೂ ಅಸಮಾಧಾನವನ್ನು ಮಾತಿನಲ್ಲಿ ಹೇಳಲು ಸಾಧ್ಯವಾಗದೆ ಇದ್ದಾಗ ಅದನ್ನು ಕೋಪದ ಮೂಲಕ ತೋರಿಸುತ್ತಾರೆ.
ಗಮನ ಸೆಳೆಯುವ ಬಯಕೆ
ಪೋಷಕರ ಅಥವಾ ಶಿಕ್ಷಕರ ಗಮನ ತಕ್ಷಣ ತಮ್ಮತ್ತ ಸೆಳೆಯಬೇಕು ಎಂಬ ಬಯಕೆ ಮಕ್ಕಳಿಗೆ ಇರುತ್ತದೆ. ಅದು ಆಗದಿದ್ದಾಗ ಅವರು ಕೋಪದಿಂದ ವರ್ತಿಸುತ್ತಾರೆ.
ಮಾಧ್ಯಮದ ಪ್ರಭಾವ
ಟಿವಿ, ಮೊಬೈಲ್ ಗೇಮ್, ಕಾರ್ಟೂನ್, ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿದಂತಹ ಹಿಂಸಾತ್ಮಕ ದೃಶ್ಯಗಳನ್ನು ಮಕ್ಕಳು ಅನುಕರಣೆ ಮಾಡುವುದರಿಂದ ಕೋಪವನ್ನು ಹೆಚ್ಚಿಸಿಕೊಂಡಿರುತ್ತಾರೆ.
ಒತ್ತಡ ಮತ್ತು ಆತಂಕ
ಶಾಲೆಯ ಯೋಜನಾ ಕಾರ್ಯಗಳು, ಪರೀಕ್ಷೆಗಳ ಒತ್ತಡ, ಸ್ನೇಹಿತರ ಸಮಸ್ಯೆಗಳು, ಮನೆಯಲ್ಲಿ ತಂದೆ ತಾಯಿಯರ ಕಲಹಗಳು ಕೋಪವನ್ನು ಹೆಚ್ಚಿಸುತ್ತದೆ.
ಸ್ವಾತಂತ್ರ್ಯದ ಬಯಕೆ
ನನ್ನ ಇಷ್ಟದಂತೆ ಇರಬೇಕು ಎಂಬ ಹಠಕ್ಕೆ ಬಿದ್ದಾಗ ಮಕ್ಕಳು ಕೋಪವನ್ನು ವ್ಯಕ್ತಪಡಿಸುತ್ತಾರೆ.
ಶಿಸ್ತಿನ ಗೊಂದಲ
ಪೋಷಕರು ತಮ್ಮ ಮಕ್ಕಳನ್ನು ಕೆಲವೊಮ್ಮೆ ಗದರಿಸುವುದು, ಅವರ ಇಷ್ಟಕ್ಕೆ ತಕ್ಕಂತೆ ಬಿಟ್ಟು ಬಿಡುವುದು ಇಂತಹ ಅಸಮರ್ಪಕ ಶಿಸ್ತು ಮಕ್ಕಳಲ್ಲಿ ಗೊಂದಲ ಮತ್ತು ಕೋಪ ಹೆಚ್ಚಿಸುತ್ತದೆ.
ಕಡಿಮೆ ಸಹನೆ
ಮಕ್ಕಳಿಗೆ ತಕ್ಷಣ ಬಯಸಿದ್ದು ಸಿಗದೆ ಹೋದಾಗ ಸಹನೆ ಕಳೆದುಕೊಂಡು ಕೋಪಗೊಳ್ಳುತ್ತಾರೆ.
ಹಿಂಸಾತ್ಮಕ ದೃಶ್ಯಗಳು
ಇತರರು ಜಗಳವಾಡುವುದನ್ನು ನೋಡಿದಾಗ, ಕ್ರೈಮ್ ಶೋಗಳನ್ನು ನೋಡುವುದರಿಂದ ಮಕ್ಕಳ ಮನಸ್ಸಿನಲ್ಲಿ ತೀವ್ರ ಪ್ರಭಾವ ಬೀರುತ್ತವೆ. ಕೋಪ ತೋರಿಸುವುದರಿಂದ ಗುರಿ ತಲುಪಬಹುದು ಎಂಬ ತಪ್ಪು ಕಲ್ಪನೆಗೆ ಮಕ್ಕಳ ಬಂದು ಬಿಡುತ್ತಾರೆ.
ಆನ್‌ಲೈನ್ ಗೇಮ್‌ಗಳಲ್ಲಿ ಅಥವಾ ಚಲನಚಿತ್ರಗಳಲ್ಲಿ ನಾಯಕರು ಕೋಪದಿಂದ ಎಲ್ಲವನ್ನು ಗೆಲ್ಲುತ್ತಾರೆ ಎಂದು ತೋರಿಸುವುದನ್ನು ಮಕ್ಕಳು ತಮ್ಮ ನಿತ್ಯ ಜೀವನದಲ್ಲಿ ಆಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
ಮಕ್ಕಳ ಕೋಪವನ್ನು ನಿಯಂತ್ರಿಸುವ ಸಲಹೆಗಳು ಹೀಗಿವೆ:
ಶಾಂತವಾಗಿ ಪ್ರತಿಕ್ರಿಯಿಸುವುದು
ಮಗು ಕೋಪಗೊಂಡಾಗ ಪೋಷಕರೂ ಕೋಪಗೊಂಡರೆ ಪರಿಸ್ಥಿತಿ ಹದಗೆಡುತ್ತದೆ. ಆದ್ದರಿಂದ ಪೋಷಕರು ಶಾಂತ ಧ್ವನಿಯಲ್ಲಿ ಮಾತನಾಡಬೇಕು. ಮಕ್ಕಳ ಮೇಲೆ ಸಿಟ್ಟಾಗಿ ಕೂಗಬಾರದು. ಮಗುವಿಗೆ ಸ್ವಲ್ಪ ಸಮಯ ನೀಡಿ, ನಿಧಾನವಾಗಿ ಕೋಪ ಕಡಿಮೆಯಾಗುತ್ತದೆ.
ಪ್ರೀತಿ ಮತ್ತು ಗೌರವದಿಂದ ವರ್ತಿಸುವುದು
ಮಕ್ಕಳನ್ನು ವ್ಯಕ್ತಿಯಾಗಿ ಗೌರವಿಸಿ, ಅವರ ಭಾವನೆಗಳನ್ನು ತಿರಸ್ಕರಿಸಬೇಡಿ. ‘ನೀನು ಈಗ ಕೋಪಗೊಂಡಿದ್ದೀಯ, ನಾನು ನಿನ್ನನ್ನು ಅರ್ಥಮಾಡಿಕೊಳ್ಳುತ್ತಿದ್ದೇನೆ‘ ಎಂದು ಮಕ್ಕಳಿಗೆ ಹೇಳಿ. ಅವರ ತಪ್ಪನ್ನು ತಿದ್ದಿ. ಆದರೆ ಮಗುವನ್ನು ನಕಾರಾತ್ಮಕವಾಗಿ ಟೀಕಿಸಬೇಡಿ.
ಆರೋಗ್ಯಕರ ವಾತಾವರಣ ನಿರ್ಮಿಸಿ
ಮನೆಯಲ್ಲಿ ಅದರಲ್ಲಿಯೂ ಮಕ್ಕಳ ಎದುರು ಜಗಳ, ಕೂಗುವುದನ್ನು ಹಾಗೂ ಬೈಗುಳ ಕಡಿಮೆ ಮಾಡಿ. ಅವರೊಂದಿಗೆ ಪ್ರೀತಿ, ಗೌರವ ಹಾಗೂ ಸಹಕಾರದೊಂದಿಗೆ ಮಾತನಾಡಿ. ಮನೆಯ ವಾತಾವರಣ ಶಾಂತವಾಗಿದ್ದರೆ ಮಗುವೂ ಶಾಂತ ವರ್ತನೆ ಅಳವಡಿಸಿಕೊಳ್ಳುತ್ತದೆ.
ವರ್ತನೆಯ ಮೂಲಕ ಕಲಿಕೆ
ಮಕ್ಕಳು ಪೋಷಕರ ನಡೆನುಡಿಗಳನ್ನು ಅನುಸರಿಸುತ್ತಾರೆ. ಪೋಷಕರು ತಮ್ಮ ಕೋಪವನ್ನು ನಿಯಂತ್ರಿಸಿಕೊಂಡರೆ ಮಗು ಸಹ ಅದನ್ನೇ ಕಲಿಯುತ್ತದೆ. ದಿನನಿತ್ಯದ ಮಾತುಗಳಲ್ಲಿ ಶಾಂತಿ ಮತ್ತು ಗೌರವವನ್ನು ತೋರಿಸುವುದು ಮುಖ್ಯ.
ಶಿಸ್ತಿನ ವಿಧಾನ:
ಮಕ್ಕಳಿಗೆ ಶಿಕ್ಷೆ ಕೊಡಬೇಡಿ, ಬದಲಾಗಿ ಅವರೊಂದಿಗೆ ಸಹನೆಯಿಂದ ಮಾತನಾಡಿ ಅವರ ತಪ್ಪುಗಳನ್ನು ತಿದ್ದಿ. ಒಳ್ಳೆಯ ವರ್ತನೆ ತೋರಿದಾಗ ಪ್ರಶಂಸೆ ನೀಡಿ. ಇದು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಕೋಪ ನಿಯಂತ್ರಣ ತಂತ್ರಗಳನ್ನು ಕಲಿಸುವುದು ಹೇಗೆ?
ಮಗುವಿಗೆ ಕೋಪ ಬಂದಾಗ ದೀರ್ಘ ಉಸಿರು ತೆಗೆದುಕೊಳ್ಳುವುದು.
1 ರಿಂದ 10 ರವರೆಗೆ ಸಂಖ್ಯೆಗಳನ್ನು ಎಣಿಸುವುದು,
ಸ್ವಲ್ಪ ನೀರು ಕುಡಿಯುವುದು.
ಮಗು ಶಾಂತವಾದ ಮೇಲೆ, ‘ನೀನು ಕೋಪದಲ್ಲಿ ಹೇಳಿದ ವಿಷಯವನ್ನು ಶಾಂತವಾಗಿ ಇನ್ನೊಂದು ರೀತಿಯಲ್ಲಿ ಹೇಳಬಹುದಿತ್ತು‘ ಎಂದು ತಿಳಿಸಿಕೊಡುವುದು.
ಬೆಂಬಲ ಮತ್ತು ಪ್ರೋತ್ಸಾಹ:
ಮಗು ತನ್ನ ಭಾವನೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ
ಶಾಂತವಾಗಿ ವರ್ತಿಸಿದಾಗ ಪ್ರಶಂಸಿಸಿ ‘ನೀನು ಕೋಪವನ್ನು ಸರಿಯಾದ ಕ್ರಮದಲ್ಲಿ ನಿಯಂತ್ರಿಸಿಕೊಂಡೆ‘ ಎಂದು ಹೇಳುವುದು. ಮಕ್ಕಳಿಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸುರಕ್ಷಿತ ವಾತಾವರಣ ಒದಗಿಸುವುದು.
ಮನುಷ್ಯನಿಗೆ ಕೋಪ ಬರುವುದು ಸಹಜ. ಅದರಲ್ಲಿಯೂ ಮಕ್ಕಳು ಕೋಪಗೊಳ್ಳುವುದು ಸಹಜವೇ. ಆದರೆ ಕೋಪವನ್ನು ಸರಿಯಾಗಿ ನಿಯಂತ್ರಿಸುವುದು ಮುಖ್ಯ. ಪೋಷಕರು ಶಾಂತವಾಗಿ, ಪ್ರೀತಿಯಿಂದ, ಗೌರವದಿಂದ ವರ್ತಿಸಿದರೆ ಮಕ್ಕಳು ಕೋಪವನ್ನು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸಲು ಕಲಿಯುತ್ತಾರೆ. ಮನೆಯ ವಾತವಾರಣ ಶಾಂತವಾಗಿದ್ದರೆ ಮಕ್ಕಳೂ ಅದನ್ನೇ ಪಾಲಿಸುತ್ತಾರೆ. ಮನೆಯೇ ಮಗುವಿನ ಮೊದಲ ಪಾಠ ಶಾಲೆಯಾಗಿರುವುದರಿಂದ ಪೋಷಕರೇ ಹೊಣೆಗಾರರಾಗಿರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.