
ಚಿತ್ರ: ಗೆಟ್ಟಿ
ಚಳಿಗಾಲದ ಶೀತ ವಾತಾವರಣ ಹಾಗೂ ಶುಷ್ಕ ಗಾಳಿಯಿಂದಾಗಿ ಪಾದಗಳ ಚರ್ಮ ಒಣಗಿ ಬಿರುಕು ಉಂಟಾಗುತ್ತದೆ. ಈ ಬಿರುಕುಗಳು ನೋವು ಉಂಟು ಮಾಡುದರ ಜೊತೆಗೆ ಮುಜೂಗರಕ್ಕೂ ಕಾರಣವಾಗಬಹುದು. ಹಾಗಿದ್ದರೆ, ಚಳಿಗಾಲದಲ್ಲಿ ಪಾದಗಳ ಬಿರುಕಿಗೆ ಕಾರಣ ಮತ್ತು ಪರಿಹಾರಗಳೇನು ಎಂಬುದನ್ನು ತಿಳಿಯೋಣ.
ಪಾದ ಒಡೆಯಲು ಕಾರಣಗಳು:
ಚಳಿಗಾಲದಲ್ಲಿ ವಾತಾವರಣದಲ್ಲಿರುವ ತೇವಾಂಶ ಕಡಿಮೆಯಾತ್ತದೆ. ಇದರಿಂದಾಗಿ ಚರ್ಮ ತನ್ನ ನೈಸರ್ಗಿಕ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಹೆಚ್ಚು ಬಿಸಿಯುಳ್ಳ ನೀರಿನಲ್ಲಿ ಸ್ನಾನ ಮಾಡುವುದು, ದೇಹಕ್ಕೆ ಸಾಕಾಗುವಷ್ಡು ನೀರು ಕುಡಿಯದಿರುವುದು ಹಾಗೂ ಚರ್ಮದ ಆರೈಕೆಯ ಕೊರತೆ ಈ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಲ್ಲದೇ ಮಧುಮೇಹ ಅಥವಾ ಥೈರಾಯ್ಡ್ ಸಮಸ್ಯೆಗಳು ಕೂಡ ಪಾದಗಳು ಒಡೆಯಲು ಕಾರಣವಾಗಬಹುದು.
ದೈನಂದಿನ ಆರೈಕೆಯ ವಿಧಾನಗಳು:
ಪ್ರತಿದಿನ ಸಂಜೆ ಸಮಯದಲ್ಲಿ ತುಸು ಬೆಚ್ಚಗಿರುವ ನೀರಿಗೆ ಉಪ್ಪು ಅಥವಾ ಗ್ಲಿಸರಿನ್ ಹಾಕಿ 15 ರಿಂದ 20 ನಿಮಿಷಗಳ ಕಾಲ ಪಾದಗಳನ್ನು ನೆನೆಸಬೇಕು.
ನಂತರ ಮೃದುವಾದ ಟವೆಲ್‌ನಿಂದ ಪಾದಗಳನ್ನು ಒರೆಸಿ. ವಿಶೇಷವಾಗಿ ಬೆರಳುಗಳ ನಡುವಿನ ಭಾಗವನ್ನು ಸ್ವಚ್ಛಗೊಳಿಸಿ. ಬೆರಳುಗಳ ಮಧ್ಯೆ ಶಿಲೀಂಧ್ರದ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ.
ಪರಿಹಾರಗಳೇನು?
ತೆಂಗಿನ ಎಣ್ಣೆ ಮತ್ತು ಜೇನುತುಪ್ಪ: ರಾತ್ರಿ ಮಲಗುವ ಮುನ್ನ ತೆಂಗಿನ ಎಣ್ಣೆ ಮತ್ತು ಜೇನುತುಪ್ಪವನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ, ಪಾದಗಳಿಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಬೇಕು. ಈ ಮಿಶ್ರಣವು ಚರ್ಮಕ್ಕೆ ಪೋಷಣೆ ನೀಡುತ್ತದೆ ಮತ್ತು ಪಾದದ ಬಿರುಕನ್ನು ಗುಣಪಡಿಸುತ್ತದೆ.
ಪೆಟ್ರೋಲಿಯಂ ಜೆಲ್ಲಿ: ಸ್ನಾನದ ನಂತರ ಪಾದಗಳು ತುಸು ತೇವವಿರುವಾಗಲೇ ಪೆಟ್ರೋಲಿಯಂ ಜೆಲ್ಲಿ ಹಚ್ಚುವುದು ಅತ್ಯಂತ ಪರಿಣಾಮಕಾರಿ. ಇದನ್ನು ಹಚ್ಚುವುದರಿಂದ ಚರ್ಮದಲ್ಲಿ ತೇವಾಂಶ ಉಳಿಸಿಕೊಳ್ಳಲು ಸಹಾಯವಾಗುತ್ತದೆ.
ಅರಳಿ ಎಣ್ಣೆ: ಅರಳಿ ಎಣ್ಣೆಯನ್ನು ಉಗುರು ಬೆಚ್ಚಗೆ ಕಾಯಿಸಿ ಪಾದಗಳಿಗೆ ಹಚ್ಚಿ ಮಸಾಜ್ ಮಾಡಿದರೆ ಚರ್ಮವು ಮೃದುವಾಗುತ್ತದೆ. ‘ವಿಟಮಿನ್ ಇ’ ಯುಕ್ತವಾದ ಈ ಎಣ್ಣೆ ಚರ್ಮಕ್ಕೆ ಪೋಷಣೆ ನೀಡುತ್ತದೆ.
ಎಕ್ಸ್‌ಫೋಲಿಯೇಷನ್ ಮತ್ತು ಸ್ಕ್ರಬಿಂಗ್: ವಾರಕ್ಕೆ ಎರಡು, ಮೂರು ಬಾರಿ ಪಾದಗಳಿಗೆ ಸ್ಕ್ರಬಿಂಗ್ ಮಾಡುವುದು ಅಗತ್ಯ. ಅಕ್ಕಿ ಹಿಟ್ಟು, ಜೇನುತುಪ್ಪ ಮತ್ತು ನಿಂಬೆ ರಸವನ್ನು ಬೆರೆಸಿ ಮನೆಯಲ್ಲಿಯೇ ನೈಸರ್ಗಿಕ ಸ್ಕ್ರಬ್ ತಯಾರಿಸಬಹುದು. ಇದನ್ನು ವೃತ್ತಾಕಾರದ ಚಲನೆಯಲ್ಲಿ ಪಾದಗಳಿಗೆ ಹಚ್ಚಿ, ಬಳಿಕ ಉಜ್ಜಿ ತೊಳೆಯಿರಿ.
ಸೂಕ್ತ ಆಹಾರ ಸೇವನೆ ಮತ್ತು ನೀರು ಕುಡಿಯುವುದು: ಚರ್ಮದ ಆರೋಗ್ಯಕ್ಕೆ ಸರಿಯಾದ ಪೋಷಣೆ ಅತ್ಯಗತ್ಯ. ದಿನಕ್ಕೆ ಕನಿಷ್ಠ 8 ರಿಂದ 10 ಲೋಟ ನೀರು ಕುಡಿಯಬೇಕು. ‘ವಿಟಮಿನ್ ಇ’, ‘ಒಮೆಗಾ-3’ ಹಾಗೂ ‘ಕೊಬ್ಬಿನಾಮ್ಲ’ ಸಮೃದ್ಧವಾಗಿರುವ ಆಹಾರಗಳಾದ ಬೀಜಗಳು, ಒಣ ಹಣ್ಣುಗಳು, ಮೀನು ಮತ್ತು ಹಸಿರು ತರಕಾರಿಗಳನ್ನು ಸೇವಿಸಬೇಕು.
ಪಾದರಕ್ಷೆಗಳ ಆಯ್ಕೆ: ಚಳಿಗಾಲದಲ್ಲಿ ಪಾದಗಳನ್ನು ಸಂಪೂರ್ಣವಾಗಿ ಮುಚ್ಚಿದ, ಆರಾಮದಾಯಕ ಪಾದರಕ್ಷೆಗಳನ್ನು ಧರಿಸಬೇಕು. ಹತ್ತಿ ಅಥವಾ ಉಣ್ಣೆಯ ಸಾಕ್ಸ್ ಧರಿಸುವುದರಿಂದ ಪಾದಗಳು ಬೆಚ್ಚಗೆ ಇಡಲು ಸಹಾಕಾರಿಯಾಗಿದೆ.
ವೈದ್ಯಕೀಯ ಸಲಹೆ: ಒಂದು ವೇಳೆ ಪಾದದ ಬಿರುಕಿನಿಂದ ರಕ್ತಸ್ರಾವವಾದರೆ, ಸೋಂಕು ತಗುಲಿದ ಲಕ್ಷಣ ಕಂಡುಬಂದರೆ ಅಥವಾ ತೀವ್ರ ನೋವು ಇದ್ದರೆ, ತ್ವರಿತವಾಗಿ ಚರ್ಮರೋಗ ತಜ್ಞರನ್ನು ಸಂಪರ್ಕಿಸಿ.
ವಿಶೇಷವಾಗಿ ಮಧುಮೇಹ ರೋಗಿಗಳು ಪಾದಗಳ ಆರೈಕೆಯಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕು.
(ಡಾ. ಶಿರೀನ್ ಫರ್ಟಾಡೋ, ಹಿರಿಯ ಸಲಹೆಗಾರರು, ವೈದ್ಯಕೀಯ ಮತ್ತು ಸೌಂದರ್ಯ ಚರ್ಮರೋಗ ತಜ್ಞೆ, ಆಸ್ಟರ್ ಸಿಎಂಐ ಆಸ್ಪತ್ರೆ, ಬೆಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.