ಮಧುಮೇಹದಿಂದ (ಸಕ್ಕರೆಕಾಯಿಲೆ, ಡಯಾಬಿಟಿಸ್) ಭಾರತದಲ್ಲಿ ಬಳಲುವವರ ಸಂಖ್ಯೆ ಸುಮಾರು ಹತ್ತು ಕೋಟಿಗೂ ಅಧಿಕ. ಮಧುಮೇಹಕ್ಕೆ ಸೂಕ್ತ ಚಿಕಿತ್ಸೆ ದೊರಕದೆ ರಕ್ತದಲ್ಲಿ ಸಕ್ಕರೆಯ ಪ್ರಮಾಣವು ಬಹಳ ಸಮಯದ ಕಾಲ ಅಧಿಕವಾಗಿದ್ದರೆ ಅದು ದೇಹದ ಎಲ್ಲ ಅಂಗಾಂಗಗಳ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಪ್ಯಾಂಕ್ರಿಯಾಸ್ ಗ್ರಂಥಿಯು ‘ಇನ್ಸುಲಿನ್’ ಎಂಬ ಹಾರ್ಮೋನನ್ನು ಉತ್ಪಾದನೆ ಮಾಡುತ್ತದೆ. ರಕ್ತದಲ್ಲಿ ಸಕ್ಕರೆಯ ಅಂಶ ಜಾಸ್ತಿಯಾದಾಗ ಅದನ್ನು ದೇಹವು ಬಳಸುವಂತೆ ಮಾಡುವುದರ ಜೊತೆಗೆ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವುದು ಇನ್ಸುಲಿನ್ ಹಾರ್ಮೋನಿನ ಕೆಲಸವಾಗಿದೆ. ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ನಿಂತುಹೋದರೆ ಅಥವಾ ದೇಹದೊಳಗೆ ಇನ್ಸುಲಿನ್ ಕೆಲಸ ಮಾಡಿದಂತಹ ವಾತಾವರಣ ನಿರ್ಮಾಣವಾದಾಗ ಮಧುಮೇಹ ಕಾಯಿಲೆಯು ಬರುತ್ತದೆ. ಮಧುಮೇಹವನ್ನು ಶೀಘ್ರವಾಗಿ ಪತ್ತೆಹಚ್ಚುವುದು ಮತ್ತು ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರಿಂದ ದೇಹದ ಇತರ ಅಂಗಾಂಗಗಳು ವೈಫಲ್ಯವಾಗದಂತೆ ತಡೆಯಬಹುದು.
ಮಧುಮೇಹವು ನಡುವಯಸ್ಸಿನ ನಂತರ ಬರುವ ಕಾಯಿಲೆಯೆಂಬ ಕಲ್ಪನೆಯು ಜನಸಾಮಾನ್ಯರಿಗೆ ಇದೆ. ನಿವೃತ್ತಿಯ ವಯೋಮಾನದಲ್ಲಿ ರಕ್ತದೊತ್ತಡ ಮತ್ತು ಮಧುಮೇಹ ಬರುವ ಸಮಯವೆಂದು ಯುವಕ-ಯುವತಿಯರು ತಮ್ಮ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಪತ್ತೆ ಹಚ್ಚಲು ಹಿಂದೇಟು ಹಾಕುತ್ತಾರೆ. ಇತ್ತೀಚಿನ ವರದಿಗಳ ಪ್ರಕಾರ ಇಪ್ಪತ್ತು ವರ್ಷ ವಯೋಮಾನದ ಸುಮಾರು ಮೂರು ಲಕ್ಷ ಭಾರತೀಯರು ಮಧುಮೇಹದಿಂದ ಬಳಲುತ್ತಿದ್ದಾರೆ.
ಮಧುಮೇಹವು ಚಿಕ್ಕಮಕ್ಕಳಲ್ಲಿಯೂ ಬರಬಹುದಾಗಿದೆ. ವೈದ್ಯರು ಮತ್ತು ಹೆತ್ತವರು ಮಕ್ಕಳಲ್ಲಿ ಬರುವ ಮಧುಮೇಹವನ್ನು ಪತ್ತೆಹಚ್ಚಲು ತಡಮಾಡುತ್ತಾರೆ. ಇಂತಹ ಮಕ್ಕಳ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಅತ್ಯಧಿಕವಾಗಿ ಮಗುವಿನ ಆರೋಗ್ಯವು ಬಹಳ ನಾಜೂಕಾಗಿರುವ ಹಂತದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಮಕ್ಕಳಲ್ಲಿ ಕಂಡುಬರುವ ಮಧುಮೇಹವನ್ನು ನಾವು ‘ಟೈಫ್ ಒನ್’ ಮಧುಮೇಹ ಎಂದು ವಿಭಾಗಿಸುತ್ತೇವೆ. ಈ ಕಾಯಿಲೆಯಲ್ಲಿ ಮಕ್ಕಳ ದೇಹದ ಪ್ಯಾಂಕ್ರಿಯಾಸ್ ಗ್ರಂಥಿಯು ನಾಶವಾಗಿ ದೇಹವು ಇನ್ಸುಲಿನ್ ಉತ್ಪಾದಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ದೇಹದ ರೋಗನಿರೋಧಕ ಶಕ್ತಿಯು ಕೆಲವೊಮ್ಮೆ ಇನ್ಸುಲಿಲ್ ಉತ್ಪಾದನೆ ಮಾಡುವ ಕಣಗಳನ್ನು ನಾಶಗೊಳಿಸುತ್ತದೆ.
ಇದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಏರುತ್ತಹೋಗುತ್ತದೆ. ದೇಹದಲ್ಲಿ ಸಕ್ಕರೆಯ ಪ್ರಮಾಣ ಜಾಸ್ತಿಯಾದಂತೆ ಹೆಚ್ಚಿನ ಮೂತ್ರವು ಉತ್ಪಾದನೆಯಾಗುತ್ತದೆ ಮತ್ತು ಸಕ್ಕರೆಯು ಮೂತ್ರದ ಮೂಲಕ ದೇಹದ ಹೊರಗೆ ಹೋಗುತ್ತದೆ. ದೇಹದಲ್ಲಿ ನಿರ್ಜಲೀಕರಣ ಉಂಟಾಗುವುದರಿಂದ ದಾಹವು ಹೆಚ್ಚಾಗಬಹುದು. ದೇಹದ ತೂಕವು ಕಡಿಮೆಯಾಗುತ್ತಾ ಹೋಗುತ್ತದೆ. ಇಂತಹ ಮಕ್ಕಳ ದೇಹದಲ್ಲಿ ಇನ್ಸುಲಿನ್ ಸಂಪೂರ್ಣವಾಗಿ ಖಾಲಿಯಾದಾಗ ‘ಡಯಾಬಿಟಿಕ್ ಕಿಟೋಎಸಿಡೋಸಿಸ್’ ಎಂಬ ಚಿಂತಾಜನಕ ಸ್ಥಿತಿಗೆ ಮಕ್ಕಳು ಬರುತ್ತಾರೆ. ಇಂತಹ ಸ್ಥಿತಿಯಲ್ಲಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾಗುವ ಮಕ್ಕಳನ್ನು ಪರೀಕ್ಷೆ ಮಾಡಿದಾಗ ರಕ್ತದಲ್ಲಿ ಸಕ್ಕರೆಯು ಏರಿರುವುದು ಕಂಡುಬರುತ್ತದೆ.
ಮೊದಲಿಗೆ ಡಯಾಬಿಟಿಕ್ ಕಿಟೋಎಸಿಡೋಸಿಸ್ ಸ್ಥಿತಿಯಲ್ಲಿರುವ ಮಗುವಿನ ದೇಹವನ್ನು ನಿರ್ಜಲೀಕರಣದ ಸ್ಥಿತಿಯಿಂದ ಹೊರತಂದು ಕೃತಕ ಇನ್ಸುಲಿನ್ ನೀಡಲು ಪ್ರಾರಂಭಿಸುತ್ತಾರೆ. ಚಿಕ್ಕ ಮಕ್ಕಳ ದೇಹದೊಳಗೆ ಇನ್ಸುಲಿನ್ ತಯಾರಿಸುವ ಕಣಗಳು ನಾಶವಾದ ಕಾರಣ ಮಧುಮೇಹ ಬಂದಿದೆಯೆಂಬ ವಿಚಾರವನ್ನು ಹೆತ್ತವರಿಗೆ ತಿಳಿಸುವುದು ಕೂಡ ಸವಾಲಿನ ಸಂಗತಿಯಾಗಿದೆ. ಹೆತ್ತವರು ಅಷ್ಟು ಸಣ್ಣ ಪ್ರಾಯದಲ್ಲಿ ತಮ್ಮ ಮಕ್ಕಳಿಗೆ ಮಧುಮೇಹ ಬಂದಿದೆಯೆಂದು ಮೊದಲ ಬಾರಿಗೆ ವೈದ್ಯರು ಹೇಳಿದಾಗ ಒಪ್ಪಲು ತಾಯಾರಿರುವುದಿಲ್ಲ. ಸಿಹಿತಿಂಡಿಗಳನ್ನು ತಿನ್ನುವುದರಿಂದ ಮಕ್ಕಳಿಗೆ ಮಧುಮೇಹ ಬರುವುದಿಲ್ಲ ಮತ್ತು ಸಿಹಿತಿಂಡಿಗಳನ್ನು ತಿನ್ನುವುದು ಬಿಟ್ಟರೆ ಮಧುಮೇಹ ಗುಣವಾಗುವುದಿಲ್ಲ ಎಂಬುದನ್ನು ಹೆತ್ತವರಿಗೆ ತಿಳಿಸಬೇಕಾಗುತ್ತದೆ. ತಮ್ಮ ಮಕ್ಕಳ ದೇಹದಲ್ಲಿ ಮಾತ್ರ ಇನ್ಸುಲಿನ್ ಉತ್ಪಾದನೆ ನಿಂತು ಹೋಗಿರುವುದು ಹೆತ್ತವರಿಗೆ ಯಕ್ಷಪ್ರಶ್ನೆಯಾಗಿ ಕಾಡುತ್ತದೆ. ಮಗುವಿಗೆ ಜೀವನಪರ್ಯಂತ ಇನ್ಸುಲಿನ್ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳುವ ಅಗತ್ಯ ಬರುವ ಕಾರಣ ಹೆತ್ತವರಿಗೆ ಸೂಕ್ತತರಬೇತಿ ಮತ್ತು ಮಾರ್ಗದರ್ಶನಗಳನ್ನು ನೀಡಬೇಕಾಗಿ ಬರುತ್ತದೆ.
ಕೆಲವು ದಶಕಗಳ ಹಿಂದೆ ಮಕ್ಕಳಲ್ಲಿ ಟೈಪ್ ಒನ್ ಮಧುಮೇಹ ಕಂಡುಬಂದಾಗ ಚಿಕಿತ್ಸೆ ನೀಡುವುದು ಬಹಳ ತ್ರಾಸದಾಯಕವಾಗಿತ್ತು. ಹೆತ್ತವರು ಮಗುವಿನ ತೂಕಕ್ಕೆ ಅನುಗುಣವಾಗಿ ಇನ್ಸುಲಿನ್ ಚುಚ್ಚುಮದ್ದನ್ನು ಸಿರಿಂಜಿನಲ್ಲಿ ತುಂಬಿ ದಿನಕ್ಕೆ ಎರಡು–ಮೂರು ಬಾರಿ ಮಕ್ಕಳಿಗೆ ಚುಚ್ಚಬೇಕಾಗಿತ್ತು. ಇದರ ಜೊತೆಗೆ ಮಕ್ಕಳ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ದಿನಕ್ಕೆ ಒಂದೆರಡು ಬಾರಿ ಪರೀಕ್ಷೆ ಮಾಡಬೇಕಿತ್ತು. ಇದು ಮಗುವಿಗೆ ನೋವು ಮತ್ತು ಹೆತ್ತವರಿಗೆ ಕಿರಿಕಿರಿಯನ್ನು ಉಂಟುಮಾಡುತ್ತಿತ್ತು. ಈಗ ಇನ್ಸುಲಿನ್ ತುಂಬಿದ ಪೆನ್ ಮಾದರಿಯ ಸಲಕರಣೆಗಳ ಸಹಾಯದಿಂದ ನೋವಿಲ್ಲದೆ ಇನ್ಸುಲಿನ್ ದೇಹಕ್ಕೆ ನೀಡಬಹುದು. ದೇಹದೊಳಗೆ ಅಳವಡಿಸಿಕೊಳ್ಳುವ ಸಾಧನಗಳಿಂದ ರಕ್ತದ ಸಕ್ಕರೆಯ ಪ್ರಮಾಣವನ್ನು ಚುಚ್ಚದೆಯೆ ತಿಳಿಯಬಹುದು. ರಕ್ತದ ಸಕ್ಕರೆಯ ಪ್ರಮಾಣವನ್ನು ಆಧರಿಸಿ ಅದರ ಆಧಾರದಲ್ಲಿ ಇನ್ಸುಲಿನ್ ಬಿಡುಗಡೆ ಮಾಡುವ ಕೃತಕ ಸಾಧನಗಳನ್ನು ಮಕ್ಕಳ ದೇಹದೊಳಗೆ ಜೋಡಿಸಬಹುದಾಗಿದೆ. ವೈಜ್ಞಾನಿಕ ತಂತ್ರಜ್ಞಾನ ಮುಂದುವರಿದಂತೆ ಗಂಭೀರ ಕಾಯಿಲೆಗಳ ಚಿಕಿತ್ಸೆಗಳು ರೋಗಿಯ ಅನುಕೂಲತೆಯ ದೃಷ್ಟಿಯಿಂದ ಸುಧಾರಿಸಿದೆ.
ಒಲಿಂಪಿಕ್ಸ್ ಕೂಟದ ಈಜು ಸ್ಪರ್ಧೆಯಲ್ಲಿ ಹತ್ತು ಪದಕ ಪಡೆದ ಅಮೆರಿಕ ಗ್ಯಾರಿ ಹಾಲ್ ಮತ್ತು ವಿಶ್ವ ಕಂಡ ಶ್ರೇಷ್ಠ ವೇಗದ ಬಾಲರ್ ವಸೀಂ ಅಕ್ರಮ್ ಕೂಡ ಇನ್ಸುಲಿನ್ ಪಡೆಯುತ್ತ ತಮ್ಮ ಕ್ರೀಡಾಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದವರು. ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಇನ್ಸುಲಿನ್ ಮೂಲಕ ನಿಯಂತ್ರಿಸಿದ್ದಲ್ಲಿ ಡಯಾಬಿಟಿಸ್ ಇರುವ ಮಕ್ಕಳು ಇತರ ಮಕ್ಕಳಂತೆಯೇ ಬಾಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.