
ಹೊಸ ಪೀಳಿಗೆಯ ಅಚಾತುರ್ಯ ಮತ್ತು ಹೊಸ ಹೊಸ ಕಾರಣಗಳ ಸರಮಾಲೆ ಇದೀಗ ಏರುಮುಖ. ಅತಿ ಎಳವೆಯಲ್ಲಿಯೇ ಕಿವುಡು ಉಂಟಾಗುವ ಸಾಧ್ಯತೆ ಹೆಚ್ಚುತ್ತಿದೆ. ಇಯರ್ ಫೋನ್ ಅತಿ ಬಳಕೆ ಖಂಡಿತ ಸಾಧುವಲ್ಲ. ಇಂತಹ ಕಾರಣಗಳೇ ಹಿಯರ್ ಏಡ್ ಬಳಕೆಯ ಹೆದ್ದಾರಿ. ಶಾಶ್ವತ ಕಿವುಡಿಗೆ ನಾಂದಿ ಹಾಡುವ ಮೊದಲು ಎಚ್ಚತ್ತುಕೊಳ್ಳುವಾ. ಆಯುರ್ವೇದದ ಪ್ರಕಾರ ಕಿವಿಯ ರಚನೆ, ಸಮಸ್ಯೆಗಳ ಮೂಲ ಕಾರಣ ಮತ್ತು ಕಿವಿರೋಗಗಳ ತಡೆಯ ಮಾರ್ಗೋಪಾಯಗಳನ್ನು ತಿಳಿಯೋಣ.
ಕವಿತಾಳಿಗೆ ಹದಿನೆಂಟರ ಏರು ಯೌವನದ ಹರೆಯ. ಹಾದಿ ಬದಿಯ ಹಾಲು ಮಾರುವ ಕಾಯಕ. ನಸುಕಿನ ಜಾವವೇ ಅಮ್ಮನ ಸಂಗಡ ಪಾದಚಾರಿ ರಸ್ತೆಯಲ್ಲ ಹಾಲಿನ ಪೊಟ್ಟಣ ಗುಡ್ಡೆಹಾಕಿ ಮಾರುವ ಜೀವನೋಪಾಯ. ಶೀತವಿರಲಿ, ಬಿಸಿಲುಗಾಲವಿರಲಿ, ಮಳೆಯಿರಲಿ ಕವಿತಾಳ ಸಂಸಾರದ ದಿನಚರಿ ಅನೂಚಾನ. ಮೊಬೈಲ್‌ಗೆ ಇಯರ್ ಫೋನ್ ಸಿಕ್ಕಿಸಿ ಸಂಗೀತ, ಹಾಡು ಕೇಳುವ ಚಾಳಿ ಬೆಳೆಸಿಕೊಂಡಳು. ಅನುದಿನದ ಏಕತಾನತೆಯ ಬದುಕಿಗೆ ಇದು ಕಡಿವಾಣವೇನೋ ನಿಜ. ಆದರೆ ಕಿವಿಯಾಲಿಕೆಗೆ ಸಜಾವಣೆಗೊಳ್ಳುವ ಇಯರ್ ಫೋನ್, ಹೆಡ್ ಫೋನ್ ಹೊಸ ಸಮಸ್ಯೆಗಳ ಮೂಲ ಎಂಬುದು ಕವಿತಾಳಿಗೆ ಮಾತ್ರವಲ್ಲ. ದೊಡ್ಡ ಹುದ್ದೆಯ ಟೆಕಿಗಳಿಗೆ ಸಹ ತಿಳಿಯದು. ಯೋಚಿಸಿ ನೋಡಿ. ಹೊರಗಣ ಸದ್ದು ಕೇಳದೆ ನೇರವಾಗಿ ಕಿವಿಗೊಳವೆಗೆ ಅದು ಸದ್ದು, ಸಪ್ಪಳ, ಸಂಗೀತ, ಸಂಭಾಷಣೆ ರವಾನಿಸಲು ಖಂಡಿತ ಸಹಕಾರಿ. ಆದರೆ ಅದು ಉಂಟುಮಾಡುವ ದನಿತರಂಗಗಳ ಕಂಪನವಂತೂ ಎಡ–ಬಲದ ಮಿದುಳಿನವರೆಗೆ ನಿರಂತರ ಪ್ರವಹಿಸುವ ರೇಡಿಯೇಷನ್ ಬಗೆಬಗೆ ಊಹಿಸಿ ನೋಡಿರಿ. ಅದರ ದುಷ್ಪರಿಣಾಮದಿಂದ ಕೆಡುಕು ಕಟ್ಟಿಟ್ಟ ಬುತ್ತಿ.
ಆಯುರ್ವೇದ ಮೂಲ ಸಂಹಿತೆಕಾರ ಸುಶ್ರುತರ ಪ್ರಕಾರ ಕಿವಿಯ ರೋಗಗಳು ಇಪ್ಪತ್ತೆಂಟು ಬಗೆಯವು. ಚರ್ಮ ಸಹ ಒಂದು ಇಂದ್ರಿಯ. ಇಡಿಯ ದೇಹದ ಹೊರ ಕವಚ. ಉಳಿದಂತೆ ಪಂಚ ಇಂದ್ರಿಯಗಳ ಪೈಕಿ ನಾಲ್ಕು ಇರುವುದು ಕುತ್ತಿಗೆಯ ಮೇಲಣ ಇರುವ ಮುಂಡ(ಮಂಡೆ) ಭಾಗದಲ್ಲಿ. ಇದು ಕಫದೋಷದ ಪ್ರಧಾನ ಸ್ಥಾನ. ಇದನ್ನು ಕೆಡಿಸಲು ಸದಾ ಕಾಲ ವಾತ ಮತ್ತು ಪಿತ್ತ ದೋಷಗಳು ಕಾಯುತ್ತಲೇ ಇರುತ್ತವೆ. ಅವು ಮೂರರ ಸಮಸ್ಥಿತಿಯಿದ್ದರೆ ಆರೋಗ್ಯ. ವಿಷಮತ್ವದಿಂದ ಸದಾ ಕಾಲ ಕಾಯಿಲೆಗಳ ಸರಮಾಲೆ.
ಹಾಲುಮಾರುವ ಕವಿತಾಳು ಅನುದಿನವೂ ನಸುಕಿನ ಗಾಳಿ, ಚಳಿಗೆ ಒಡ್ಡಿಕೊಳ್ಳುತ್ತಾಳೆ. ಇದು ಕಫದ ಉಲ್ಬಣತೆಗೆ ಕಾರಣ. ಕೈಬೆರಳುಗಳು ಅತಿ ಥಂಡಿಯ ಹಾಲು ಪೊಟ್ಟಣದ ತೇವ ಮತ್ತು ಶೀತಕ್ಕೆ ಒಡ್ಡಿಕೊಳ್ಳುವ ಸಂದರ್ಭ. ಇದು ಅವಳ ಶರೀರದ ವಾತವೃದ್ಧಿಗೆ ಕಾರಣ. ಈಗ ಅವಳಿಗೆ ಅಂತಹ ತೊಂದರೆ ಕಾಣದು. ಏಕೆಂದರೆ ಅವಳ ಯೌವನದ ವಯಸ್ಸು ಪಿತ್ತ, ವಾತಗಳ ಕೆಡುವಿಕೆಗೆ ಕಡಿವಾಣ ಹಾಕೀತು. ಆದರೆ ನಿರಂತರತೆಯ ಅವಳ ಉದ್ಯೋಗ ಪರ್ವದ ದೆಸೆಯಿಂದ ಕ್ರಮೇಣ ಕಿವಿಯ ತೊಂದರೆಗೆ ಹೆಬ್ಬಾಗಿಲು. ಇದೇನು, ನಮ್ಮ ದೇಹ ಇಷ್ಟು ನಾಜೂಕಿನದೇ? ಈ ಪ್ರಶ್ನೆ ಓದುಗರಿಗೆ ಖಂಡಿತ ಚಿತ್ತದಲ್ಲಿ ಮೂಡಬಹುದು. ನಿಜ. ದೇಹ ಗೇಹ ಎನ್ನುತ್ತದೆ ಆಯುರ್ವೇದ. ಗೇಹ ಎಂದರೆ ಮನೆ. ಮನೆಯ ಮರದ ಜಂತಿ, ತೊಲೆಯೋ, ಗೋಡೆಯ ಪುಟ್ಟ ಬಿರುಕೋ ಕ್ರಮೇಣ ಹಿರಿದಾಗಿ ಮನೆ ಶಿಥಿಲವಾಗಿ ತೊಂದರೆಗೀಡಾಗುವುದಲ್ಲ. ಹಾಗೆಯೇ ಕಾಯಿಲೆಯ ಅವಕಾಶಗಳು ಸಹ ಕ್ರಮೇಣ ಹಾದಿಗಾಯುತ್ತವೆ. ಬೆಂಕಿಯ ಕಿಡಿಯೊಂದು ಹುಲ್ಲು ಬಣವೆ ಸುಡಬಹುದಲ್ಲ. ಅಂತೆಯೇ ದೇಹದ ಕುಪಿತ ತ್ರಿದೋಷಗಳೂ ಹೊಸ ಕಾಯಿಲೆಗಳಿಗೆ ಹೆದ್ದಾರಿ.
ಕಿವಿ ಕಡಿತ,ಒಳಗೆ ಕೇಳುವ ಸಮುದ್ರ ಅಲೆಯ ಭೋರ್ಗರೆತ, ಕುರ, ಅದು ಒಡೆದು ಕೀವು ಸುರಿತ ಅಥವಾ ನೀರು ಮಾತ್ರ ಸೋರುವಿಕೆ, ದೊಡ್ಡ ನಗಾರಿಯ ಸದ್ದಿನ ಸಪ್ಪಳ, ಒಳದ್ರವ ಏರುಪೇರಿನಿಂದ ನಡಿಗೆಯಲ್ಲಿ ತಲೆ ತಿರುಗು, ಅತಿಯಾದ ಮಲ(ಗುಗ್ಗೆ) ಸಂಗ್ರಹ, ಪರದೆಯ ಛಿದ್ರದ ಮೂಲಕ ನಿರಂತರ ಸ್ರಾವ ಇಂತಹ ಸಾಮಾನ್ಯ ಕಿವಿ ತೊಂದರೆಗಳು ಎಳವೆಯಿಂದ ಹಿರಿ ಹರೆಯದ ತನಕ ಸಹಜ. ಕ್ರಮೇಣ ಹಿರಿ ಹರೆಯದ ಕಿವುಡುತನ ವಯೋಸಹಜ ಜಾಯಮಾನ. ಶೈಶವದ ನಡುರಾತ್ರಿಯ ಕಿವಿನೋವು ಮುಗಿಲು ಮುಟ್ಟುವ ಹಸುಗೂಸಿನ ಆಕ್ರಂದನ ಬಗ್ಗೆ ಹೆತ್ತವರ ಆತಂಕ ಇಂದು ಅತಿ ಸಾಮಾನ್ಯದ ವಿದ್ಯಮಾನ.
ಬಿಲ್ವಪತ್ರೆಯ ತೈಲ, ಬೆಳ್ಳುಳ್ಳಿ ಕಾಸಿದ ತೆಂಗಿನೆಣ್ಣೆಯ ಹದ ಬಿಸಿ ಬಿಂದು ಕಿವಿಗೆ ಬಿಡುವ ಚಿಕಿತ್ಸೆಗೆ ಆಯುರ್ವೇದ ಮನ್ನಣೆಯಿದೆ. ವಾರಕ್ಕೆರಡು ಬಾರಿ ಸೌಟಿನಲ್ಲಿ ಹದ ಬಿಸಿಮಾಡಿದ ಎಳ್ಳೆಣ್ಣೆ ಮತ್ತು ತುಪ್ಪವನ್ನು ನೆತ್ತಿಗೆ ಹಚ್ಚಿರಿ. ಐದು ನಿಮಿಷ ಬಿಟ್ಟು ಹದ ಬಿಸಿ ನೀರಿನ ಸ್ನಾನದಿಂದ ದೇಹಕ್ಕೆ ಉಲ್ಲಾಸ. ಇಂದ್ರಿಯಗಳಿಗೆ ಹೊಸ ಹುರುಪು. ತ್ರಿಫಲೆ ಎಂದರೆ ಅಳಲೆಕಾಯಿ, ನೆಲ್ಲಿ ಕಾಯಿ ಮತ್ತು ತಾರೆಕಾಯಿಯ ಮಿಶ್ರಣ. ಅದನ್ನು ತುಸು ಬಿಸಿ ಮಾಡಿರಿ. ನೆತ್ತಿಗೆ ಕಟ್ಟಿರಿ. ಮಿದುಳೊಳಗೆ ಅದರ ಮದ್ದಿನ ಗುಣ ಇಳಿದು ದೋಷಗಳ ವಿಷಮತೆಗೆ ಕಡಿವಾಣ. ನುಗ್ಗೆ ಎಲೆ, ಕಾಯಿಯ ಬಳಕೆಯಿಂದ ಕಿವಿಯ ತೊಂದರೆಗೆ ಕಡಿವಾಣ. ಹುರುಳಿ ಮತ್ತು ಹೆಸರು ಬಳಕೆಯಿಂದ ಕಿವಿಯ ಆರೋಗ್ಯಪಾಲನೆ ಸಾಧ್ಯ. ದಶಮೂಲದ ಕಷಾಯ, ಅರಿಷ್ಟಗಳನ್ನು ಬಾಣಂತಿಯ ಆರೋಗ್ಯಕ್ಕೆ ಮಾತ್ರ ಅಲ್ಲ. ಚಳಿ ಮತ್ತು ಮಳೆಗಾಲದಲ್ಲಿ ಅನುದಿನವೂ ಬಳಸುವ ವಿಧಾನ ಮರೆಯದಿರಿ. ಮೂಗು, ಗಂಟಲು ಮತ್ತು ಕಿವಿಯ ಪರಸ್ಪರ ಸಂಬಂಧಗಳು ಅವಿನಾಭಾವದವು. ಹಾಗಾಗಿ ಇವುಗಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಉಣ್ಣುವ ಆಹಾರ ಮೇಕೆಯಂತೆ ಚೆನ್ನಾಗಿ ಅಗಿದು ತಿನ್ನುವಾ. ಎಲ್ಲ ಅವಯವಗಳಿಗೆ ರಕ್ತ ಪರಿಚಲನೆ ಹೆಚ್ಚಿ ತೊಂದರೆಗಳಿಗೆ ವಿದಾಯ ಹೇಳುವಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.