ADVERTISEMENT

ಮೊಬೈಲ್‌ ಅತಿಯಾದ ಬಳಕೆಯಿಂದ ಆರೋಗ್ಯದ ಮೇಲೆ ಆಗುವ ಪರಿಣಾಮವೇನು?

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 11:14 IST
Last Updated 31 ಡಿಸೆಂಬರ್ 2025, 11:14 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಿತ್ರ: ಗೆಟ್ಟಿ

ಪ್ರಸ್ತುತ ದಿನಗಳಲ್ಲಿ ಮೊಬೈಲ್‌ ಬಳಸುವುದೇ ದೊಡ್ಡ ಸಾಂಕ್ರಾಮಿಕ ಖಾಯಿಲೆಯಾಗಿದೆ. ಸ್ವಲ್ಪ ಬಿಡುವಾದರು ಸಾಕು ಮೊಬೈಲ್‌ ಹಿಡಿದು ಕೂರುವವರೇ ಹೆಚ್ಚು. ಅತಿಯಾದ ಮೊಬೈಲ್‌ ಬಳಕೆ ಹೊಸ ಸಾಂಕ್ರಾಮಿಕ ರೋಗಕ್ಕೆ ಎಡೆಮಾಡಿಕೊಡುತ್ತಿದೆ ಎಂದು ಸಂಶೋಧನೆಗಳು ಹೇಳುತ್ತವೆ.

ADVERTISEMENT

ಅತಿಯಾದ ಮೊಬೈಲ್ ಬಳಕೆಯು ಕುತ್ತಿಗೆ ಮತ್ತು ಕೈ ಭಾಗದ ಮಸ್ಕ್ಯುಲೋಸ್ಕೆಲಿಟಲ್ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳು ಹಾಗೂ ಗೃಹಿಣಿಯರು ಅತಿಯಾಗಿ ಮೊಬೈಲ್‌ ಬಳಕೆಯಲ್ಲಿ ತೊಡಗಿರುವವರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಕುತ್ತಿಗೆಯನ್ನು ದೀರ್ಘಕಾಲದವರೆಗೆ ಅಸಹಜ ಭಂಗಿಯಲ್ಲಿ ಇಡುವುದರಿಂದ, ಉಳುಕಿಗೆ ಅಥವಾ ಬೆನ್ನಿನ ಮೂಳೆಯ ದುರ್ಬಲತೆಗೆ ಕಾರಣವಾಗುತ್ತದೆ. ಇಂದು ಯುವ ಜನತೆಯಲ್ಲಿ ಎಂಆರ್‌ಐ ಸ್ಕ್ಯಾನ್‌ ಮಾಡಿದರೆ, ಬೆನ್ನುಮೂಳೆಯ ಉತ್ಪ್ರೇಕ್ಷಿತ ಸವೆತ ಕಂಡುಬರುತ್ತಿದೆ.

ಈ ಹಿಂದೆ ಈ ರೀತಿಯ ಸಮಸ್ಯೆಗಳು ವಯಸ್ಸಾದವರಲ್ಲಿ ಮಾತ್ರ ಹೆಚ್ಚಾಗಿ ಕಂಡುಬರುತ್ತಿತ್ತು. ಈ ಸಮಸ್ಯೆ ಕೇವಲ ಮೊಬೈಲ್ ಬಳಕೆಗೆ ಸಿಮೀತವಾಗಿಲ್ಲ. ಕಂಪ್ಯೂಟರ್‌ನೊಂದಿಗೆ ದೀರ್ಘಕಾಲ ಕೆಲಸ ಮಾಡುವ ಐಟಿ ವಲಯದ ಉದ್ಯೋಗಿಗಳಲ್ಲೂ ಕಂಡು ಬರುತ್ತಿದೆ. ಇದನ್ನು ವಿಡಿಟಿ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ.

ಹೆಬ್ಬೆರಳನ್ನು ಬಳಸಿಕೊಂಡು ನಿರಂತರವಾಗಿ ಸಂದೇಶ ಕಳುಹಿಸುವ ಅಥವಾ ಆಟವಾಡುವವರು ‘ಕಾರ್ಪಲ್ ಟನಲ್ ಸಿಂಡ್ರೋಮ್‌‘ ಹಾಗೂ ‘ಡೆಕರ್ವೈನ್ ಟೆನೊಸೈನೋವಿಟಿಸ್‘ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಇದರಿಂದ ಹೆಬ್ಬೆರಳಿನ ಕೀಲು ನೋವು, ಮಣಿಕಟ್ಟು ಊತ, ಜುಮ್ಮೆನಿಸುವಿಕೆ ಮತ್ತು ನರಗಳಿಗೆ ಹಾನಿ ಉಂಟಾಗುತ್ತದೆ.

ಟ್ಯಾಪಿಂಗ್ ಅಥವಾ ಸ್ಕ್ರೋಲಿಂಗ್‌ನಂತಹ ಚಟುವಟಿಕೆಗಳಿಗೆ ಹೆಬ್ಬೆರಳನ್ನು ಪದೇ ಪದೇ ಬಳಸುವುದರಿಂದ, ಹೆಬ್ಬೆರಳಿನ ಸ್ನಾಯುರಜ್ಜುಗಳಲ್ಲಿ ಉರಿಯೂತ ಸಂಭವಿಸುತ್ತದೆ. ನಂತರದ ದಿನಗಳಲ್ಲಿ ನರಗಳ ಸಂಕುಚಿತಕ್ಕೆ ಕಾರಣವಾಗಬಹುದು. ಈ ಬದಲಾವಣೆಗಳು ಪರಿಹರಿಸದಿದ್ದರೆ ಶಾಶ್ವತವಾಗಿ ಉಳಿಯುತ್ತವೆ.

ಅತಿಯಾದ ಮೊಬೈಲ್ ಬಳಕೆಯಿಂದ ಪ್ರತಿ ಒಂದು ಗಂಟೆಗೆ ‘ಕಾರ್ಪಲ್ ಟನಲ್ ಸಿಂಡ್ರೋಮ್‌ನ ಪ್ರಮಾಣ 1.3 ಪಟ್ಟು ಹೆಚ್ಚಾಗುತ್ತಿದೆ ಎಂದು ಅಧ್ಯಯನಗಳು ಹೇಳುತ್ತವೆ. ಹೆಬ್ಬೆರಳನ್ನು ನಿರಂತರವಾಗಿ ಅಸಹಜ ಬಾಗಿದ ಭಂಗಿಯಲ್ಲಿ ಬಳಸುವುದು ‘ಜಾಯಿಂಟ್‌ ಸೈನೋವಿಟಿಸ್‌ಗೆ ಕಾರಣವಾಗಬಹುದು.

ರೋಗನಿರ್ಣಯ ಹೇಗೆ?

ನೋವು, ಊತ ಅಥವಾ ಸಂವೇದನಾ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಬೇಕು. ರೋಗನಿರ್ಣಯವು ಸಾಮಾನ್ಯವಾಗಿ ವೈದ್ಯರ ಭೇಟಿಯಿಂದ ತಿಳಿದು ಬರುತ್ತದೆ. ಹೆಚ್ಚಿನ ಅಲ್ಟ್ರಾಸೌಂಡ್ ಮತ್ತು ಎಂಆರ್‌ಐನಂತಹ ಸ್ಕ್ಯಾನ್‌ ಮೂಲಕ ಸಮಸ್ಯೆಯನ್ನು ಪತ್ತೆ ಹಚ್ಚಬಹುದು.

ತಡೆಗಟ್ಟುವುದು ಹೇಗೆ?

ಮೊಬೈಲ್ ಬಳಕೆಯ ಸಮಯವನ್ನು ಸೀಮಿತಗೊಳಿಸುವುದು ಮುಖ್ಯ. ಕೆಲಸದ ನಡುವೆ ಆಗಾಗ ವಿರಾಮ ತೆಗೆದುಕೊಳ್ಳುವುದು, ಬೆರಳನ್ನು ಮಸಾಜ್ ಮಾಡುವುದು, ಸ್ನಾಯುಗಳ ಬಲವನ್ನು ಹೆಚ್ಚಿಸಲು ವ್ಯಾಯಾಮ ಮಾಡುವುದು ಅಗತ್ಯ. ಮೊಬೈಲ್‌ ಬಳಕೆಯ ಮೇಲೆ ಅವಲಂಬಿತವಾಗಿರುವ ವ್ಯಕ್ತಿಗಳು ಮೊಬೈಲ್‌ ಹೋಲ್ಡರ್ ಅಥವಾ ಕ್ಲಾಂಪ್‌ಗಳಂತಹ ಸಾಧನಗಳನ್ನು ಬಳಸಬಹುದು.

(ಲೇಖಕರು: ಡಾ.ಅರುಣ್‌ ಆರ್‌.ಪಾಟೀಲ್‌ ,ಹಿರಿಯ ರೇಡಿಯೋಲಜಿಸ್ಟ್‌, ಅಪೊಲೊ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.