ADVERTISEMENT

Eye Care: ಕಣ್ಣಿನ ರಕ್ಷಣೆಯತ್ತ ದೃಷ್ಟಿ ಹಾಯಿಸಿ

ಡಾ.ವಿಜಯಲಕ್ಷ್ಮಿ ಪಿ.
Published 28 ಏಪ್ರಿಲ್ 2025, 23:30 IST
Last Updated 28 ಏಪ್ರಿಲ್ 2025, 23:30 IST
   

ತಲೆಯನ್ನು ಉತ್ತಮಾಂಗವೆಂದರೂ, ಉತ್ತಮಾಂಗದಲ್ಲಿರುವ ನಯನವು ಅತ್ಯುತ್ತಮಾಂಗವೂ ಎಂದೆನಿಸುತ್ತದೆ. ಯಾವುದೇ ಅಂಗವಿಕೃತಿ ಆದರೂ ಜೀವನ ದುರ್ಭರವೇ. ಆದರೆ ಕಣ್ಣು ಅಥವಾ ದೃಷ್ಟಿಯಲ್ಲಿ ವಿಕೃತಿ ಕಂಡುಬಂದರೆ ಜೀವನ ದುರ್ಭರದಲ್ಲಿಯೇ ದುರ್ಭರವಾಗುತ್ತದೆ. ಆದ್ದರಿಂದ ಕಣ್ಣಿನ ರಕ್ಷಣೆ ಅತಿ ಮುಖ್ಯ.

ರೆಪ್ಪೆ, ರೆಪ್ಪೆಯ ಕೂದಲು, ಕಣ್ಣಿನ ಬಿಳಿಯ ಭಾಗ (ಸ್ಕ್ಲೀರ), ಕಣ್ಣಿನ ಕಪ್ಪುಭಾಗ (ಐರಿಸ್), ಕಾರ್ನಿಯಾ, ದೃಷ್ಟಿಯ ಭಾಗ, ಇವುಗಳು ಸೇರುವ ಸಂಧಿಭಾಗಗಳು – ಹೀಗೆ ಕಣ್ಣು ಅನೇಕ ಅವಯವಗಳಿಂದ ಕೂಡಿದೆ. ಈ ಭಾಗಗಳಿಗೆ ಸಂಬಂಧಪಟ್ಟಂತೆ ಸುಮಾರು 90ಕ್ಕೂ ಹೆಚ್ಚು ರೋಗಗಳ ಪಟ್ಟಿಯನ್ನು ಆಯುರ್ವೇದಶಾಸ್ತ್ರ ತಿಳಿಸುತ್ತದೆ. ಈ ಎಲ್ಲ ರೋಗಗಳಿಗೆ ಕಾರಣ, ಲಕ್ಷಣ, ಚಿಕಿತ್ಸೆಗಳನ್ನೂ ಅದು ತಿಳಿಸುತ್ತದೆ.

ಕಣ್ಣಿನ ಅನಾರೋಗ್ಯಕ್ಕೆ ಪ್ರಧಾನವಾದ ಕಾರಣಗಳೆಂದರೆ: ತಲೆಗೆ, ಕಣ್ಣಿಗೆ ಯಾವುದೇ ರಕ್ಷಣೆಯನ್ನು ಧರಿಸದೆ ಅತಿಯಾಗಿ ಬಿಸಿಲಿನಲ್ಲಿ ತಿರುಗಾಡುವುದು; ಅತಿ ಸಣ್ಣ ಅಕ್ಷರಗಳಿರುವ ಪುಸ್ತಕಗಳನ್ನು ನಿರಂತರವಾಗಿ ಓದುವುದು; ಅತಿ ಕಡಿಮೆ ಬೆಳಕಿನಲ್ಲಿ, ಅಥವಾ ಅತಿ ಹೆಚ್ಚು ಪ್ರಖರವಾದ ಬೆಳಕಿನಲ್ಲಿ ನೋಡುವುದು, ಓದುವುದು, ಕೆಲಸ ಮಾಡುವುದು; ನಿರಂತರವಾಗಿ ಮೊಬೈಲ್ ಅಥವಾ ಕಂಪ್ಯೂಟರ್ ವೀಕ್ಷಣೆ; ಅತಿ ಸೂಕ್ಷ್ಮವಸ್ತುಗಳನ್ನು ನಿರಂತರವಾಗಿ ವೀಕ್ಷಿಸುವುದು; ಬಿಸಿಲಿನಲ್ಲಿ ಸಂಚರಿಸಿದ ತಕ್ಷಣವೇ ತಂಪಾದ ನೀರಿನಲ್ಲಿ ಮುಖವನ್ನು ತೊಳೆಯುವುದು ಅಥವಾ ಸ್ನಾನ ಮಾಡುವುದು; ಅತಿಯಾದ ಮದ್ಯ–ಮಾಂಸಗಳ ಸೇವನೆ; ಅತಿಯಾದ ವಿರುದ್ಧಾಹಾರಗಳ ಸೇವನೆ; ಅತಿಯಾದ ಸಂಭೋಗ; ದುಃಖದಿಂದ ಸತತವಾಗಿ ಕಣ್ಣೀರು ಸುರಿಸುತ್ತಿರುವುದು; ಕಣ್ಣಿಗೆ ಪೋಷಣೆ ನೀಡುವ ದ್ರವ್ಯಗಳನ್ನು ಸೇವಿಸದಿರುವುದು – ಹೀಗೆ ಅನೇಕ ಕಾರಣಗಳಿಂದ ಕಣ್ಣಿಗೆ ಸಂಬಂಧಿಸಿದ ರೋಗಗಳು ಬರಬಹುದು. ಕೆಲವು ಸಂದರ್ಭಗಳಲ್ಲಿ ಸಾಂಕ್ರಾಮಿಕವಾಗಿ, ಅಥವಾ ಯಾವುದಾದರೂ ಸೋಂಕಿಗೆ ಒಳಗಾಗಿ ಕಣ್ಣಿನ ರೋಗಗಳು ಬರಬಹುದು.

ADVERTISEMENT

ಕೆಲವೊಮ್ಮೆ ಕಣ್ಣಿನ ರೋಗಗಳಿಗೆ ಬಾಹ್ಯ ಚಿಕಿತ್ಸೆ ಮಾತ್ರವೇ ಸಾಕಾಗಬಹುದು. ಕೆಲವೊಮ್ಮೆ ಬಾಹ್ಯ ಮತ್ತು ಆಭ್ಯಂತರ ಚಿಕಿತ್ಸೆ ಮತ್ತು ಔಷಧ ಪ್ರಯೋಗಗಳೂ ಅವಶ್ಯಕವಾಗಿರುತ್ತವೆ.

ಬೇಸಿಗೆಯಲ್ಲಿ ಸಾಮಾನ್ಯವಾಗಿರುವ ಕಣ್ಣಿನ ರೋಗಗಳೆಂದರೆ ಕಣ್ಣು ಕೆಂಪಾಗುವುದು, ಕಣ್ಣುರಿ, ಕಣ್ಣಿನ ರೆಪ್ಪೆ ಮೆತ್ತಿಕೊಳ್ಳುವುದು, ರೆಪ್ಪೆಯ ಬುಡದಲ್ಲಿ ಊತ. ಇವುಗಳಿಗೆ ಮನೆಯಲ್ಲಿ ದೊರಕುವ ವಸ್ತುಗಳಿಂದ ಚಿಕಿತ್ಸೆ ಮಾಡಬಹುದಾದರೂ, ಈ ಚಿಕಿತ್ಸೆ ಒಂದು ಅಥವಾ ಎರಡು ದಿನದಲ್ಲಿ ಪರಿಣಾಮ ಬೀರದಿದ್ದರೆ ತಜ್ಞವೈದ್ಯರನ್ನು ಕಂಡು ಚಿಕಿತ್ಸೆಯನ್ನು ಪಡೆಯಬೇಕು.

ದೇಹದಲ್ಲಿ ಪಿತ್ತದ ಅಂಶ ಅಥವಾ ಉಷ್ಣತೆ ಹೆಚ್ಚಾದಾಗ ಸಾಮಾನ್ಯವಾಗಿ ಕಣ್ಣಿನ ಉರಿ, ಕಣ್ಣು ಕೆಂಪಾಗುವುದು ಇತ್ಯಾದಿ ತೊಂದರೆಗಳಾಗುತ್ತವೆ. ಬೇಸಿಗೆಯಲ್ಲಿ ಇಂಥ ಬಾಧೆಗಳು ಹೆಚ್ಚು. ಆದ್ದರಿಂದ ಈ ಸಂದರ್ಭದಲ್ಲಿ ನೀರನ್ನು ಹೆಚ್ಚಾಗಿ ಕುಡಿಯುವುದು, ಎಳೆನೀರು, ಬಾರ್ಲಿನೀರು, ಸೊಗದೇಬೇರಿನ ಶರಬತ್ತು, ಪುನರ್ಪುಳಿ/ಮುರುಗನ ಹುಳಿ - ಇವುಗಳನ್ನು ಉಪಯೋಗಿಸುವುದು ಸೂಕ್ತ. ಹಾಗೆಯೇ ತ್ರಿಫಲಾಕಷಾಯದಿಂದ ಕಣ್ಣನ್ನು ತೊಳೆದುಕೊಳ್ಳುವುದು, ಕೊತ್ತುಂಬರಿಬೀಜದ ಕಷಾಯ, ಅಥವಾ ಕೊತ್ತುಂಬರಿಬೀಜವನ್ನು ನೆನೆಸಿಟ್ಟ ನೀರಿನಿಂದ ಕಣ್ಣನ್ನು ಆಗಾಗ ತೊಳೆಯುವುದರಿಂದ ಕಣ್ಣುರಿ ಕಡಿಮೆಯಾಗುತ್ತದೆ. ಕಣ್ಣು ಕೆಂಪಾಗುವಿಕೆಯನ್ನು ತಡೆಯಲು ಗುಲಾಬಿಜಲವನ್ನು ಕಣ್ಣಿಗೆ ಹಾಕುವುದು, ಅಥವಾ ಗುಲಾಬಿಜಲದಲ್ಲಿ ಹತ್ತಿಯನ್ನು ಅದ್ದಿ, ಅದನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳಬಹುದು. ಹರಳೆಣ್ಣೆ, ತುಪ್ಪ, ಅಥವಾ ಹಾಲಿನ ಕೆನೆಯನ್ನು ಕಣ್ಣಿಗೆ ಹಚ್ಚುವುದೂ ಸೂಕ್ತ ಉಪಾಯವಾಗಿದೆ.

ಕಣ್ಣುನೋವು ಇದ್ದಲ್ಲಿ, ಬಿಲ್ವಪತ್ರೆಯಿಂದ ಅಥವಾ ನಂದಿಬಟ್ಟಲು ಹೂವಿನಿಂದ ಅಥವಾ ಹೊನಗೊನ್ನೆ ಸೊಪ್ಪಿನಿಂದ ತಯಾರಿಸಿದ ಕಾಡಿಗೆಯನ್ನು ಕಣ್ಣಿಗೆ ಹಚ್ಚುವುದು ಉಪಯುಕ್ತವಾಗುತ್ತದೆ. ಗರಿಕೆಯನ್ನು ಅರೆದು ಕಣ್ಣಿನ ಮೇಲೆ ಇಟ್ಟುಕೊಳ್ಳುವುದರಿಂದಲೂ ಕಣ್ಣಿನ ನೋವುಗಳು ಕಡಿಮೆಯಾಗುತ್ತವೆ.

ಕಣ್ಣುನೋವು, ನವೆ ಎರಡೂ ಇದ್ದ ಸಂದರ್ಭದಲ್ಲಿ ಕೊತ್ತುಂಬರಿಬೀಜವನ್ನು ತೆಳ್ಳಗಿನ ಬಟ್ಟೆಯಲ್ಲಿ ಕಟ್ಟಿ, ಅದನ್ನು ನೀರಿನಲ್ಲಿ ನೆನೆಸಿ ಆ ಗಂಟನ್ನು ಕಣ್ಣಿನ ಮೇಲೆ ಆಗಾಗ ಆಡಿಸುತ್ತಿದ್ದರೆ ಕಣ್ಣಿನ ನವೆ ಕಡಿಮೆಯಾಗುತ್ತದೆ. ಹಾಗೆಯೇ ಕೊತ್ತುಂಬರಿ ಬೀಜವನ್ನು ನೆನೆಸಿಟ್ಟು ಆ ನೀರನ್ನು ಕುಡಿಯುತ್ತಿದ್ದರೂ ಕಣ್ಣುರಿ, ಊತ, ನವೆಗಳನ್ನು ತಡೆಗಟ್ಟಬಹುದು.

ತಾಯಿಯ ಎದೆಹಾಲು ಸಹಿತ ಕಣ್ಣಿನ ಬಾಧೆಗಳಿಗೆ ರಾಮಬಾಣವಾಗಿದೆ. ಕಣ್ಣಿನ ರೆಪ್ಪೆಗಳು ಮೆತ್ತಿಕೊಳ್ಳುತ್ತಿದ್ದರೆ ತಾಯಿಯ ಹಾಲನ್ನು ಕಣ್ಣಿಗೆ ಹಾಕುವುದರಿಂದ ಕಡಿಮೆಯಾಗುತ್ತದೆ. ತ್ರಿಫಲಾಚೂರ್ಣವನ್ನು ಬಿಸಿನೀರಿನಲ್ಲಿ ನೆನೆಸಿ, ಬಟ್ಟೆಯಲ್ಲಿ ಸೋಸಿ, ಕಷಾಯದಿಂದ ಕಣ್ಣು ತೊಳೆಯುವುದರಿಂದಲೂ ರೆಪ್ಪೆ ಮೆತ್ತಿಕೊಳ್ಳುವುದು ಕಡಿಮೆಯಾಗುತ್ತದೆ. ಅಲ್ಲದೆ ರಾತ್ರಿ ಮಲಗುವಾಗ ತ್ರಿಫಲಾಚೂರ್ಣಕ್ಕೆ ಜೇನು ಮತ್ತು ತುಪ್ಪವನ್ನು ಬೆರೆಸಿ ಸೇವಿಸುವುದರಿಂದಲೂ ಕಣ್ಣಿಗೆ ಸಂಬಂಧಿಸಿದ ಅನೇಕ ರೋಗಗಳು ಪರಿಹಾರವಾಗುತ್ತವೆ.

ನಿತ್ಯವೂ ಅಂಗಾಲಿಗೆ ತುಪ್ಪ ಅಥವಾ ಹರಳೆಣ್ಣೆಯನ್ನು ತಿಕ್ಕುವುದರಿಂದಲೂ ಕಣ್ಣಿನ ಅನೇಕ ರೋಗಗಳು ಪರಿಹಾರವಾಗುತ್ತವೆ. ದುಃಖದಿಂದ ಅತಿಯಾಗಿ ಅಳುತ್ತಿದ್ದಲ್ಲಿ ಬರುವ ಕಣ್ಣಿನ ನೋವು ಮತ್ತು ತಲೆನೋವಿಗೆ ದುಃಖವನ್ನು ಪ್ರಶಮನ ಮಾಡುವುದು, ಅಳುವನ್ನು ನಿಲ್ಲಿಸುವುದು ಮೊದಲ ಮಾರ್ಗ. ಜತೆಗೆ ಶಾಂತವಾದ ಮನಸ್ಸಿನಿಂದ ನಿದ್ರೆ ಮಾಡುವುದರಿಂದ ಕಣ್ಣಿನ ನೋವು, ತಲೆನೋವು, ಕಣ್ಣುಕೆಂಪ–ಇವು ಕಡಿಮೆಯಾಗುತ್ತವೆ. ಇದರೊಡನೆ ಕಣ್ಣಿಗೆ ಹಾಲಿನ ಕೆನೆಯನ್ನು ಆಗಾಗ ಹಚ್ಚುತ್ತಿರುವುದು ಸೂಕ್ತ. ಒಂದೆಲಗ, ಲಾವಂಚ, ಶ್ರೀಗಂಧ ಸೇರಿಸಿ ನೀರನ್ನು ಕಾಯಿಸಿಟ್ಟುಕೊಂಡು ಆಗಾಗ ಈ ನೀರಿನ ಸೇವಿಸಬಹುದು. ಇದರಿಂದ ತಲೆನೋವು, ಕಣ್ಣುನೋವುಗಳು ಕಡಿಮೆಯಾಗುತ್ತವೆ.

ಬಿಸಿಲಿನಲ್ಲಿ, ದೂಳಿನಲ್ಲಿ ಓಡಾಡುವಾಗ ಅವಶ್ಯವಾಗಿ ಕನ್ನಡಕವನ್ನು ಧರಿಸಬೇಕು. ತಲೆಗೆ ಯಾವುದೇ ಬಗೆಯ ಶಿರಸ್ತ್ರಾಣವನ್ನು ಧರಿಸುವ ಅಭ್ಯಾಸವನ್ನು ಇಟ್ಟುಕೊಳ್ಳಬೇಕು. ಕಣ್ಣಿನ ತೊಂದರೆ ಇರುವಾಗ ಈಜಾಡಬಾರದು. ಸಕಾಲದಲ್ಲಿ ನಿದ್ರೆ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.