
‘ಫೋಮೊ’ ಎಂಬುದು ‘ಫಿಯರ್ ಆಫ್ ಮಿಸ್ಸಿಂಗ್ ಔಟ್’ ಎಂಬುದರ ಹ್ರಸ್ವರೂಪ. ನಮಗೆ ಸೋಶಿಯಲ್ ಮೀಡಿಯಾದ ಇಂತಿಂತಹ ಸುದ್ದಿ ತಪ್ಪಿ ಹೋದರೆ ಅಥವಾ ನಾವು ಯಾವುದಾದರೂ ಒಂದು ಸುದ್ದಿಯನ್ನು ಹಾಕಲು ಮರೆತು ಆ ಸುದ್ದಿ ಇತರರನ್ನು ತಲುಪದೆ ಹೋದರೆ ಎಂಬ ಭಯವೇ ‘ಫೋಮೋ’. ಮನುಷ್ಯನಿಗೆ ಆಹಾರ, ನೀರು, ನಿದ್ರೆಗಳಂತೆ ಇತರರೊಡನೆ ಬೆರೆಯುವುದೂ ಮನುಷ್ಯನಿಗೊಂದು ಆವಶ್ಯಕತೆ. ಇತರರು ತನ್ನನ್ನು ಗುರುತಿಸಬೇಕು, ಹೊಗಳಬೇಕು, ತಾನು ಮಾಡುವುದನ್ನು ಗಮನಿಸಬೇಕು ಎನ್ನುವುದು ಈ ಅವಶ್ಯಕತೆಯ ವಿವಿಧ ಮುಖಗಳು. ಅದರೊಂದಿಗೆ ಇದರ ಜೊತೆ ಹೊಂದಿಕೊಂಡಿರುವ ಮತ್ತೊಂದು ಅಗತ್ಯವೆಂದರೆ ಇತರರ ಜೀವನದ ಬಗ್ಗೆ ಕುತೂಹಲ. ಮನುಷ್ಯನ ಈ ಪ್ರವೃತ್ತಿಗಳಿಂದ ಹುಟ್ಟಿಕೊಂಡದ್ದು ಪತ್ರಿಕೆ, ರೇಡಿಯೋ, ಟಿವಿ, ಈಗ ಸಾಮಾಜಿಕ ಮಾಧ್ಯಮಗಳೆಂಬ ವ್ಯಾಪಕವಾಗಿ ಬಿತ್ತರಿಸುವ ಮಾಧ್ಯಮಗಳು. ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಹೊಸ ಹಂತವನ್ನೇ ಈ ಸಹಜ ಹಂಬಲ ತಲುಪಿದೆ.
ಹಿಂದೆಲ್ಲಾ ದಿನಪತ್ರಿಕೆಗಳನ್ನು ಓದುವುದರಿಂದಲೇ ನಮ್ಮ ದಿನ ಆರಂಭವಾಗುತ್ತಿತ್ತು. ಆದರೆ ಪತ್ರಿಕೆಗಳಲ್ಲಿ ದೇಶದ, ರಾಜ್ಯದ, ನಮ್ಮ ಊರಿನ ಸುದ್ದಿಗಳು ಬರುತ್ತಿದ್ದವೇ ವಿನಾ ನಮ್ಮದೇ ಸುದ್ದಿ ಬರುವ ಸಾಧ್ಯತೆಯೇನೂ ಇರುತ್ತಿರಲಿಲ್ಲ. ಈಗ ಹಾಗಲ್ಲ. ಎಫ್‍ಬಿ, ಇನ್ಸ್ಟಾ, ಟ್ವಿಟ್ಟರ್, ಎಕ್ಸ್ ಮೊದಲಾದ ಮಾಧ್ಯಮಗಳ ಮೂಲಕ ಇತರರು ಬರೆದದ್ದನ್ನು ಓದುವುದು, ನಮ್ಮ ಸುದ್ದಿ–ಫೋಟೊಗಳನ್ನು ಅವುಗಳ ಮೂಲಕ ಹಂಚಿಕೊಳ್ಳುವುದು ನಮ್ಮ ದಿನಚರಿಯ ಮುಖ್ಯ ಭಾಗವೇ ಆಗಿಬಿಟ್ಟಿದೆ. ಇದರ ಪರಿಣಾಮವೇ ‘ಫೋಮೋ’ ಎಂಬ ಸಮಸ್ಯೆ ಗಂಭೀರವಾಗಿ ನಮಗೆ ಎದುರಾದದ್ದು. ಮತ್ತೆ ಮತ್ತೆ ನಮ್ಮ ಫೋನ್‍ಗಳನ್ನು ಚೆಕ್ ಮಾಡುತ್ತಾ, ನೋಡುತ್ತಾ ಇದ್ದಂತೆ ನಮ್ಮನ್ನು ಬಿಟ್ಟು ಉಳಿದವರೆಲ್ಲ ನಮ್ಮ ತಮ್ಮ ಸುದ್ದಿಗಳನ್ನು ಹಂಚುತ್ತಿದ್ದಾರೆ; ಅವರು ಮಾತ್ರ ಸಂತಸ ಪಡುತ್ತಿದ್ದಾರೆ; ನಮಗೇನೋ ಮಿಸ್ಸಾಗುತ್ತಿದೆ ಎಂಬ ಭಾವನೆ ಕಾಡತೊಡಗಿತು ಎಂದರೆ ಅದೇ ಫೋಮೋದ ಆರಂಭ.
ಸಾಮಾಜಿಕ ಮಾಧ್ಯಮಗಳು ಬರುವ ಮೊದಲೇ ಈ ಭಾವನೆಯನ್ನು ನಾವು ಅನುಭವಿಸಿದ್ದೆವಲ್ಲ! ಎಲ್ಲಿ? ಜಾಹಿರಾತುಗಳನ್ನು ನೋಡುವಾಗ! ಒಮ್ಮೆ ನೆನಪಿಸಿಕೊಳ್ಳಿ, ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ/ ಕೆಲವೇ ಸೀಟುಗಳು ಉಳಿದಿವೆ /ಇನ್ನೆರಡೇ ದಿನ ಇಂತಹ ಸಿನಿಮಾ ಇರುತ್ತದೆ/ ಲಿಮಿಟೆಡ್ ಸ್ಟಾಕ್ ಮಾತ್ರ - ಇಂತಹ ಎಲ್ಲಾ ಜಾಹೀರಾತು ಹೇಳಿಕೆಗಳು ನೋಡುಗರಲ್ಲಿ ನಾವು ಏನನ್ನು ತಪ್ಪಿಸಿಕೊಳ್ಳಲಿದ್ದೇವೆ ಎಂಬ ಭಯವನ್ನು ಮೂಡಿಸಿಯೇ ತಕ್ಷಣ ಅವರು ಜಾಹೀರಾತನ್ನು ಅನುಸರಿಸಿ, ಕೊಳ್ಳುವಂತೆ ಮಾಡುತ್ತಿದ್ದದ್ದು.
ಸುಮಾರು 30 ವರ್ಷಗಳ ಹಿಂದೆ, ಆರ್ಥಿಕ ವ್ಯವಹಾರಗಳ ತಜ್ಞ ಡ್ಯಾನ್ ಹರ್ಮನ್ ಈ ಭಯವನ್ನು ಮೊಟ್ಟಮೊದಲು ತನ್ನ ಸಂಶೋಧನಾ ಪ್ರಬಂಧ ಒಂದರಲ್ಲಿ ಉಲ್ಲೇಖಿಸಿ ಅದಕ್ಕೆ ‘ಫೋಮೋ’ ಎಂಬ ಹೆಸರನ್ನು ಕೊಟ್ಟ. ಇಂದಿನ ಸಾಮಾಜಿಕ ಮಾಧ್ಯಮಗಳಲ್ಲಿ ಇದು ಹೊಸ ರೂಪವನ್ನೇ ಪಡೆದುಕೊಂಡಿದೆ. ಜಾಹೀರಾತುಗಳಲ್ಲಿ ಇದ್ದ ನಾವು ‘ಕೊಳ್ಳಬೇಕು’ ಎಂಬ ಹಂಬಲ ಇದೀಗ ಇತರರೊಂದಿಗೆ ‘ಸ್ಪರ್ಧೆ’ಯಾಗಿ ಬದಲಾಗಿದೆ. ‘ಕೊಳ್ಳುವುದು’ ಎಂಬ ಪ್ರಕ್ರಿಯೆ ನೀಡುತ್ತಿದ್ದ ‘ವಸ್ತು’ ಮತ್ತು ‘ಸಮಾಧಾನ’ ಈಗ ಕ್ಷಣಮಾತ್ರದ ‘ಉದ್ವೇಗ’, ಇತರರ ‘ಪ್ರತಿಕ್ರಿಯೆ’ಯ ನಿರೀಕ್ಷೆಗಳಾಗಿ ಮುಂದುವರೆಯುತ್ತಿದೆ. ನಿರಂತರವಾಗಿ ಇತರರೊಂದಿಗೆ ಹೊಲಿಕೆ-ಸ್ಪರ್ಧೆಗಳೇ ಇಲ್ಲಿ ಮುಖ್ಯವಾಗುವ ಅಪಾಯವಿದೆ.
ಸಾಮಾಜಿಕ ಮಾಧ್ಯಮಗಳ ಸಾಮಾನ್ಯ ಪ್ರವೃತ್ತಿಯನ್ನು ಸಾದಾ ಭಾಷೆಯಲ್ಲಿ ಹೇಳಬೇಕೆಂದರೆ, ನಮ್ಮ ತುತ್ತೂರಿಯನ್ನು ನಾವೇ ಊದುವುದು! ಫೋಟೋ ಎಡಿಟ್ ಮಾಡಿ, ‘ಸುಂದರ’ ‘ಪರಿಪೂರ್ಣ’ ಫೋಟೊವನ್ನು ಹಾಕುವುದು, ಸಂತಸ-ಸಂಗತಿ-ಘಟನೆ ಎಲ್ಲವನ್ನು ಸ್ಪರ್ಧೆಯ ಮೇಲೆ ಹಂಚಿಕೊಳ್ಳುವುದು, ಕೊನೆಗೆ ನಾವು ಪ್ರವಾಸ ಮಾಡುತ್ತಿರುವಾಗಲೂ ಫೋಟೊ ತೆಗೆದು ಶೇರ್ ಮಾಡಲಿಲ್ಲವೆಂದರೆ ಆ ಪ್ರವಾಸ ವ್ಯರ್ಥವೆಂದೇ ಭಾವಿಸುವುದು! ಇವುಗಳನ್ನು ನೋಡುತ್ತಾ ಇತರರು ನಮಗಾಗಲಿ, ನಾವು ಬೇರೆಯವರಿಗಾಗಲಿ ಹೆಬ್ಬೆಟ್ಟು ಹಾರ್ಟು ಸ್ಮೈಲಿಗಳನ್ನು ಒತ್ತಿದರೂ, ಅವುಗಳ ಹಿಂದೆ ಬೇರೆ ಭಾವನೆಗಳ ಜೊತೆಗೆ ಕಿಂಚಿತ್ ಅಸೂಯೆಯೂ, ನಾವೂ ಹೀಗೆ ಮಾಡಬೇಕಾಗಿತ್ತು ಎಂಬ ಕಾತುರವೂ ತಪ್ಪುವುದಿಲ್ಲ.
ಫೋಮೋ ಹಿಂದೆ ತಂಗಿ–ತಮ್ಮಂದಿರಾಗಿ ಫೋಬೋ, ಮೋಮೋ, ರೋಮೋ, ಫೋಜಿ, ಜೋಮೋಗಳು ಬಂದುಬಿಟ್ಟಿವೆ! ಇನ್ನೂ ಅತ್ಯುತ್ತಮವಾದದನ್ನು ಕಳೆದುಕೊಳ್ಳುವ ಭಯ (ಫಿಯರ್ ಆಫ್ ಬೆಟರ್ ಆಪ್ಷನ್), ನಾವೇನನ್ನೋ ತಪ್ಪಿಸಿಕೊಳ್ಳುತ್ತಿದ್ದೇವೆ, ಆದರೆ ಅದೇನೆಂದು ನಮಗೆ ಗೊತ್ತಿಲ್ಲ ಎಂಬ ಭಾವನೆ (ಮಿಸ್ಟರಿ ಆಫ್ ಮಿಸ್ಸಿಂಗ್ ಔಟ್), ನಿಜವಾಗಿ ನಾವೇನನ್ನೂ ತಪ್ಪಿಸಿಕೊಂಡಿಲ್ಲ ಎಂಬ ಅರಿವು (ರಿಯಾಲಿಟಿ ಆಫ್ ಮಿಸ್ಸಿಂಗ್ ಔಟ್), ಯಾವ ಪ್ರತಿಕ್ರಿಯೆಯನ್ನು ಗಳಿಸದಿರುವ ಭಯದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಆಸೆಯಿದ್ದರೂ ಹಿಂಜರಿಕೆ (ಫಿಯರ್ ಆಫ್ ಜಾಯ್ನಿಂಗ್ ಇನ್) ಇತ್ಯಾದಿ. ಅದೇ ಫೋಮೊದ ವಿರುದ್ಧ ಭಾವನೆ (ಜಾಯ್ ಆಫ್ ಮಿಸ್ಸಿಂಗ್ ಔಟ್), ಅಂದರೆ ಸಾಮಾಜಿಕ ಮಾಧ್ಯಮದಿಂದ ಹೊರಬಂದಾಗ ‘ಮಿಸ್ ಮಾಡಿಕೊಳ್ಳುತ್ತಿದ್ದೇವೆ’ ಅನ್ನಿಸದ ನಿರಾಳ ಭಾವ.
ನಾವಂದುಕೊಂಡದ್ದಕಿಂತ ಫೋಮೊದ ಪ್ರಮಾಣ ತುಂಬಾ ಹೆಚ್ಚಾಗಿದೆ. ಜಗತ್ತಿನ ಅರ್ಧಕ್ಕಿಂತ ಹೆಚ್ಚು ಹದಿಹರೆಯದ ಮಕ್ಕಳು ಇನ್ಸ್ಟಾ, ಎಕ್ಸ್, ಟಿಕ್ ಟಾಕ್‍ಗಳನ್ನು ಉಪಯೋಗಿಸುತ್ತಾರೆ. ಇದೇ ಮಕ್ಕಳು ತಮ್ಮ ಜೊತೆಯವರೊಂದಿಗೆ ಹೋಲಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚು. ದಿನಕ್ಕೆ ಕನಿಷ್ಠ ನಾಲ್ಕು ಗಂಟೆಗಳಷ್ಟು ಸಮಯವನ್ನು ಅವರು ಕಳೆಯುವುದು ಇದೇ ವೇದಿಕೆಗಳಲ್ಲಿಯೇ. ಫೋಮೊ ಇವರನ್ನು ತನ್ನ ಹಿಡಿತದಲ್ಲಿ ಗಟ್ಟಿಯಾಗಿ ಇರಿಸಿಕೊಳ್ಳುತ್ತದೆ.
ಫೋಮೋ ಹಿಡಿತದಲ್ಲಿ ನಾವು ಯಾರೂ ಸಿಲುಕಬಹುದು , ಸಿಲುಕಿರಬಹುದು ಎಂಬ ಅರಿವೇ ಫೋಮೊದಿಂದ ಹೊರಬರುವ ಮೊದಲ ಹಂತ. ಸಾಮಾಜಿಕ ಮಾಧ್ಯಮ, ಸ್ಮಾರ್ಟ್ ಫೋನ್‌ಗಳಿಂದ ವಾರಕ್ಕೆ ಒಂದು ದಿನ, ದಿನದಲ್ಲಿ ಕೆಲವು ಗಂಟೆಗಳಾದರೂ ದೂರವಿರುವ ಪ್ರಯತ್ನ ‘ಡಿಜಿಟಲ್ ಡಿಟಾಕ್ಸ್’ ಅನ್ನು ಪಾಲಿಸುವುದು ಮತ್ತೊಂದು ಉಪಾಯ. ಬೇರೆಯವರಿಗೆ ನಿಮ್ಮ ಪ್ರಶಂಸೆ ಸೂಚಿಸುವಾಗ ನೇರವಾಗಿ ಕರೆ ಮಾಡುವುದು,ಹೀಗೆ ಮಾಡುವ ಮೂಲಕ ಅವರು ನಿಮಗೆ ಕರೆ ಮಾಡುವಂತೆ ಪ್ರಚೋದಿಸುವುದು ಇನ್ನೊಂದು ವಿಧಾನ. ನಮಗೆ ಏನಿದೆ ಎನ್ನುವ ಬಗ್ಗೆ ತೃಪ್ತಿ, ಯಾವಾಗಲೂ ಹಾಕುವ ಫೋಟೋ ಪರಿಪೂರ್ಣವೇ ಆಗಿರಬೇಕೆಂದಿಲ್ಲ ಎಂಬ ಧೈರ್ಯ, ಇತರರು ಸಂತೋಷವಾಗಿದ್ದಾರೆಂದರೆ ಅದರ ಅರ್ಥ ‘ನಾನು ಸಂತೋಷವಾಗಿಲ್ಲ’ ಎಂದೇನಲ್ಲ ಎಂಬ ಅರಿವು, ಇವು ನಮ್ಮನ್ನು ಫೋಮೊಗೆ ತುತ್ತಾಗದಂತೆ ಕಾಪಾಡುವ ಕೌಶಲಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.