ADVERTISEMENT

ಆರೋಗ್ಯ: ಕಫಕ್ಕೂ ಚರ್ಮಕ್ಕೂ ಇದೆ ನಂಟು

ಡಾ.ಸತ್ಯನಾರಾಯಣ ಭಟ್ ಪಿ
Published 17 ಫೆಬ್ರುವರಿ 2025, 23:30 IST
Last Updated 17 ಫೆಬ್ರುವರಿ 2025, 23:30 IST
   

ಏಳು ಧಾತುಗಳ ಪೈಕಿ ಮೊದಲನೆಯ ಧಾತು ರಸ. ಅದು ಒಂಟಿಯಾಗಿ ಇರದು. ಸಂಗಡ ಕಫವನ್ನೂ ಸೇರಿಕೊಂಡು ಚರ್ಮದ ಆರೋಗ್ಯ ಮತ್ತು ಸಹಜ ಸ್ಥಿತಿಯನ್ನು ಕಾಪಾಡಿಕೊಳ್ಳುತ್ತದೆ. ಕಫವು ಅತಿರೇಕಾವಸ್ಥೆಗೆ ಹೋದರೆ ಅದು ರಸಧಾತುವನ್ನೂ ಕೆಡಿಸುತ್ತದೆ. ಪ್ರಸಿದ್ಧ ನುಡಿಗಟ್ಟಿನ ಮಾತಿದೆಯಲ್ಲ; ಕೋತಿ ತಾನೊಂದೇ ಕೆಡುವುದಲ್ಲ, ವನವನೆಲ್ಲಾ ಕೆಡಿಸಿತು. ಅಂಥ ನುಡಿಗಟ್ಟು ಖಂಡಿತ ರಸಧಾತು ಮತ್ತು ಕಫ ದೋಷದ ಆಶ್ರಯ ಆಶ್ರಯೀ ಭಾವಕ್ಕೆ ಅತಿ ಸುಂದರ ಉಪಮೆ. ರಸಧಾತುವಿನ ಉತ್ಪತ್ತಿಗೆ ಮೂಲಭೂತ ಕಾರಣ ನಾವುಣ್ಣುವ ಆಹಾರ. ಅದು ನಿಯಮಿತ ರೂಪದ್ದಾಗಿರಲಿ. ನಮ್ಮ ಆಚರಣೆಗಳು ಸಹಜವಾಗಿರಲಿ. ಆಗ ರಸಧಾತು ಮತ್ತು ಕಫದ ಸಮಸ್ಥಿತಿಗೆ ಅನುಕೂಲ; ಚರ್ಮರೋಗಗಳಿಗೂ ಇಂಬಾಗದು.

ಮೊಸರನ್ನು ತಿಂದರೆ ರಸಧಾತು ಹೆಚ್ಚಳ. ಅದು ಅತಿಯಾದರೆ ಕಫದ ಹೆಚ್ಚಳಕ್ಕೆ ಕಾರಣ. ಮೊಸರಿನ ಸಂಗಡ ಬೆಲ್ಲ, ಸಕ್ಕರೆ ಕೂಡಿಸಿ ಸವಿಯುವವರೂ ಇದ್ದಾರೆ. ಅಂತಹ ಆಚರಣೆಯಿಂದ ಕಫ ಮತ್ತು ರಸಧಾತು ಸ್ಥಿತಿಯು ವಿಕೋಪಕ್ಕೆ ತಿರುಗೀತು. ಮೊಸರು ಬಿಡಿರಿ. ಬೆಣ್ಣೆ ತೆಗೆದ ತಾಜಾ ಮಜ್ಜಿಗೆ ಬಳಸಿರಿ. ಕೊಂಚ ನೀರು ಬೆರಸಿಯೋ, ಪುಡಿಮಾಡಿದ ಕಾಳು ಮೆಣಸು, ಹಸಿ ಶುಂಠಿಗೂಡಿಸಿಯೋ ಸೇವಿಸಿದರಾಯಿತು. ಮಜ್ಜಿಗೆಯ ಶೀತಗುಣ ಸಹ ನಿವಾರಣೆ. ಚರ್ಮದ ಸಹಜ ಬಣ್ಣಕ್ಕೆ ಕಳೆ. ಬಿರಿಯುವ, ಸೀಳುವ ತೊಂದರೆ ಕಾಣದು. ನವೆ, ಗಾದರಿಯಂತಹ ಕಾಯಿಲೆಗಳಿಗೆ ತಡೆ. ಸೈಂದುಪ್ಪು ಕೂಡಿಸಿದ ಮಜ್ಜಿಗೆ ಅಮೃತತುಲ್ಯ. ಶಿವರಾತ್ರಿಯ ಉಪವಾಸದ ಸಂದರ್ಭಕ್ಕೆ ಖಂಡಿತ ಇಂತಹ ‘ರೀ–ಹೈಡ್ರೇಷನ್‌’ ವಿಧಾನ ಸೂಕ್ತ. ಲಭ್ಯವಾಗುವ ಒಂದಿನಿತು ಕೊಬ್ಬಿನಂಶ ಶಕ್ತಿಯಾಗಿ ಪರಿವರ್ತಿತ.

ದಿವಾಸ್ವಪ್ನ, ಅಂದರೆ ಹಗಲಿನ ನಿದ್ದೆ; ಜಡತನದ ಮೂಲವಿದು. ಕಫ ಎಂಬುದು ಜಡತನದ ತಾಯಿಬೇರು. ಸ್ಥಿರತೆಯ ಪರ್ಯಾಯ ಸಹ. ಸೌಮ್ಯತನದ ಸ್ಥಿರತೆ ಖಂಡಿತ ನಮಗಿರಲಿ. ಅದು ಅತಿಯಾದರೆ ಜಡತನದ ಹೆಚ್ಚಳ. ಹೊಸ ಹೊಸ ಕಾಯಿಲೆಗಳಿಗಿದು ಹೆದ್ದಾರಿ. ಮಿದುಳೆಂಬ ಬ್ಯಾಟರಿಗೆ ರೀಚಾರ್ಜು ಮಾಡುವ ದೈವಕೃತ ವಿಧಾನ ನಿದ್ದೆ. ಸಕಾಲಿಕ ನಿದ್ದೆಯಿಂದ ಮಿದುಳೆಂಬ ಸಾಫ್ಟ್‌ವೇರ್‌ ನೂರಕ್ಕೆ ನೂರರಷ್ಟು ಚಾರ್ಜ್ ಆಗಿಬಿಡುತ್ತದೆ. ಅಕಾಲಿಕ, ಅಸಹಜ ವಿಧಾನದಿಂದ ಮಿದುಳೆಂಬ ಬ್ಯಾಟರಿಯ ಸವಕಳಿಯೋ ಜೀವಿತಾವಧಿಯೋ ಇಳಿಮುಖ. ನಿಮ್ಮ ಮೊಬೈಲ್ ಬ್ಯಾಟರಿಯ ಲೈಫ್ ಅಷ್ಟೆ ಎಂಬ ಪದ ಮೊಬೈಲ್ ರಿಪೇರಿ ಅಂಗಡಿಯಾತ ತಿಳಿಸುವುದಿಲ್ಲವೇ? ಹಾಗೆಯೇ ದೇಹವೆಂಬ ಯಂತ್ರದ ನಮೂನೆ ಕೂಡ. ಮೊಬೈಲ್ ಬ್ಯಾಟರಿ ಬದಲಾಯಿಸಲಾದೀತು. ಆದರೆ ನಿಮ್ಮ ಮಿದುಳೆಂಬ ಬ್ಯಾಟರಿ ಬದಲಾಯಿಸಲಾದೀತೆ?

ADVERTISEMENT

ಹಗಲು ವೇಳೆಯ ಅನಿಯಮಿತ ನಿದ್ದೆಯಿಂದ ಮಿದುಳಿನ ಅಸಹಜ ಸ್ಥಿತಿಯ ವ್ಯಾಪಾರ; ಹಲವು ಅಂಗಗಳ ಜಡತ್ವಕ್ಕೆ ಕಾರಣ. ಜೀರ್ಣಾಂಗಗಳಲ್ಲಿ ಕೆಲಸದ ಪಾಳಿಯ ಏರು ಪೇರು. ಉಂಡ ಅನ್ನ ಅರಗದು. ಮಲಪ್ರವೃತ್ತಿಗೆ ಕಠಿಣ ಸಮಸ್ಯೆ. ಮಲಗಿದಾಗ ದೇಹದ ಅಂಗಾಂಗಗಳ ಚಟುವಟಿಕೆಗೆ ವಿಶ್ರಾಂತಿಯೇನೋ ದೊರಕೀತು. ಆದರೆ ಅದು ವಿಪರೀತವಾದರೆ ಎಲ್ಲ ಅಂಗಗಳೂ ಮುಷ್ಕರ ಹೂಡಲಾರಂಭ. ಒಟ್ಟಿನಲ್ಲಿ ಜಡತ್ವದ ಇನ್ನೊಂದು ಹೆಸರಾದ ಕಫದೋಷದ ಪಾರಮ್ಯ; ರಸಧಾತುವಿಗೆ ಕೆಡಲು ವಿಪುಲ ಅವಕಾಶ. ಹಿರಿಯರಿಗೆ ಮತ್ತು ಎಳವೆಯ ಹಸುಳೆಗಳಿಗಿದೆ ಹಗಲು ನಿದ್ದೆಯ ಸೌಭಾಗ್ಯ. ಏಕೆಂದರೆ ಅವರಿಗೆ ಕಫ ಮತ್ತು ರಸಧಾತುವಿನ ಆರೋಗ್ಯದಾಯಕ ಸವಲತ್ತುಗಳು ತೀರಾ ಅಗತ್ಯ! ಆದರೆ ಚರ್ಮದ ಕಾಯಿಲೆಗಳಿದ್ದವರು ಮಾತ್ರ ಕುಳಿತ ಭಂಗಿಯ ವಿಶ್ರಾಂತಿ ರೂಪದ ನಿದ್ದೆ ಕೈಗೊಳ್ಳಲು ಆಸ್ಪದವಿದೆ.

ಶಿವರಾತ್ರಿಯ ಸಂಧರ್ಭದ ಉಪವಾಸ ಮತ್ತು ಜಾಗರಣೆಯ ಸಂಗತಿ ಗಮನಿಸಿರಿ. ಹೆಸರುಬೇಳೆಯಂತಹ ಲಘು ಆಹಾರಸೇವನೆಯಿಂದ ನಮಗಿದೆ ಲಾಭ. ಹೆಸರುಬೇಳೆಯನ್ನು ಎಲ್ಲ ಸಂದರ್ಭಗಳಲ್ಲೂ ನಾವು ಅತ್ಯಂತ ಪಥ್ಯತಮ ಆಹಾರ ಎಂದು ಸೇವಿಸಬಹುದು. ಕೋಸಂಬರಿಯಲ್ಲಿದೆ ಅತ್ಯಂತ ಹೆಚ್ಚಿನ ಸಸಾರಜನಕ. ಅದು ಚರ್ಮದ ಆರೋಗ್ಯಕ್ಕೆ ಪೂರಕ. ಲಿಂಬೆ ಬೆರೆಸಿದರೆ ‘ಸಿ ’ಅನ್ನಾಂಗವೂ ಲಭ್ಯ. ಶಿವರಾತ್ರಿಯ ಜಾಗರಣೆಯಲ್ಲಿದೆ ಭಜನೆ, ದೇವತಾರ್ಚನೆಯ ಸಂಭ್ರಮ. ಇದು ಮಿದುಳಿಗೆ ಚೇತೋಹಾರಿ; ಒತ್ತಡವನ್ನು ನೀಗುವ ರಹದಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.