ADVERTISEMENT

ಸಿರಿಧಾನ್ಯದಿಂದ ಸಕ್ಕರೆವರೆಗೆ: ಏನು ಸೇವಿಸಬೇಕು? ಆರೋಗ್ಯಕರ ಮೆನು ಇಲ್ಲಿದೆ

ಡೆಕ್ಕನ್ ಹೆರಾಲ್ಡ್
Published 3 ಅಕ್ಟೋಬರ್ 2025, 10:39 IST
Last Updated 3 ಅಕ್ಟೋಬರ್ 2025, 10:39 IST
   

ಕಾರ್ಬೋಹೈಡ್ರೇಟ್ ಸೇವನೆಯನ್ನು ಶೇ5 ರಷ್ಟು ಕಡಿಮೆ ಮಾಡಿ, ಪ್ರೋಟೀನ್‌ ಸೇವನೆಯನ್ನು ಹೆಚ್ಚಿಸುವುದರಿಂದ ಬೊಜ್ಜು, ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ನಿಯಂತ್ರಿಸಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ. ಇತ್ತೀಚೆಗೆ 'ಭಾರತದಲ್ಲಿ ಕ್ರಮಬದ್ಧ ಆಹಾರ ಪದಾರ್ಥಗಳ ಸೇವನೆ ಮತ್ತು ಸಂಬಂಧಿತ ಜೀರ್ಣಕ್ರೀಯೆ ಅಪಾಯ' ಎಂಬ ಸಂಶೋಧನೆಯಲ್ಲಿ ಹೇಳಿದೆ. 

ಅಕ್ಕಿ ಮತ್ತು ಗೋಧಿ ಎರಡರ ಸೇವನೆ ಜನರಲ್ಲಿ ಮಧುಮೇಹ ಮತ್ತು ಬೊಜ್ಜಿನ ಹೆಚ್ಚಳಕ್ಕೆ ಕಾರಣವಾಗುತ್ತಿವೆ ಎಂದು ದೇಶಾದ್ಯಂತ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದೆ. ಗೋಧಿಯು ಅಕ್ಕಿಗಿಂತ ಆರೋಗ್ಯಕರ ಎಂಬ ಕಲ್ಪನೆ ಸುಳ್ಳು ಎಂಬುದು ಕೂಡ ಈ ಸಂಶೋಧನೆ ಸಾಬೀತುಪಡಿಸಿದೆ.

ಅಧ್ಯಯನದ ಪ್ರಕಾರ, ಭಾರತದಲ್ಲಿ ಒಟ್ಟಾರೆ ಪ್ರೋಟೀನ್‌ ಸೇವನೆಯ ಪ್ರಮಾಣ ಕುಸಿದಿದ್ದು, ದೈನಂದಿನ ಕ್ಯಾಲೊರಿಗಳಲ್ಲಿ ಇದರ ಪ್ರಮಾಣ ಶೇ12 ರಷ್ಟು ಮಾತ್ರ ಇದೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ಇದರ ಪ್ರಮಾಣ ಅತೀ ಹೆಚ್ಚು ಅಂದರೆ ಶೇ14 ರಷ್ಟಿದೆ. ಇದರಲ್ಲಿ ಶೇ9 ರಷ್ಟು ಪ್ರೋಟೀನ್‌ ಸಸ್ಯ ಆಧಾರಿತ ಆಹಾರ ಮೂಲಗಳಿಂದ ಸಿಗುತ್ತಿದೆ.  ಮಾಂಸ ಸೇವನೆಯಿಂದ ಪ್ರೋಟೀನ್‌ ಪಡೆಯುವುದನ್ನು ಕಡಿಮೆಗೊಳಿಸಿ, ಸಸ್ಯ ಹಾಗೂ ಮೊಟ್ಟೆಗಳ ಮೂಲಕ ಪ್ರೋಟೀನ್‌ ಪಡೆಯುವುದನ್ನು ಹೆಚ್ಚಿಸಿಕೊಳ್ಳಬೇಕೆಂದು ತಜ್ಞರು ಸೂಚಿಸಿದ್ದಾರೆ.

ADVERTISEMENT

ಈಶಾನ್ಯ ರಾಜ್ಯಗಳಲ್ಲಿ ಈ ಸಂಶೋಧನೆ ನಡೆಸಲಾಗಿದ್ದು, ಅಲ್ಲಿನ ಜನರು ದಿನ ನಿತ್ಯದ ಆಹಾರದಲ್ಲಿ ಅಕ್ಕಿಯನ್ನು ಹೆಚ್ಚಾಗಿ ಬಳಸುತ್ತಾರೆ. ಅಕ್ಕಿಯಲ್ಲಿ ಸಾಕಷ್ಟು ಪ್ರೋಟೀನ್‌ ಇದ್ದು, ಇದು ಬೊಜ್ಜು ಮತ್ತು ಮಧುಮೇಹವನ್ನು ನಿಯಂತ್ರಣದಲ್ಲಿ ಇಡುತ್ತದೆ ಎಂದು ತಜ್ಞರು ಹೇಳಿದ್ದಾರೆ. 

ಆದಾಗ್ಯೂ, ಅತಿಯಾದ ಪ್ರೋಟೀನ್‌ ಸೇವನೆಯು ಮೂತ್ರಪಿಂಡದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. 'ಅಕ್ಕಿ ಮತ್ತು ಗೋಧಿಯನ್ನು ಪಾಲಿಶ್ ಮಾಡುವುದರಿಂದ ಅವು ವಿಷಕಾರಿಯಾಗಿ ಬದಲಾಗುತ್ತವೆ. ಪಾಲಿಶ್ ಮಾಡಿದ ಅಕ್ಕಿ, ಗೋಧಿಯಲ್ಲಿ ನಾರಿನಾಂಶ ಇರುವುದಿಲ್ಲ. ಇಂದು ನಾವು ಸೇವಿಸುವ ಅಕ್ಕಿ ಕೇವಲ ಪಿಷ್ಟವಾಗಿದೆ' ಎಂದು ಮದ್ರಾಸ್ ಮಧುಮೇಹ ಸಂಶೋಧನಾ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ತಿಳಿಸಿದ್ದಾರೆ.

ಈ ವರದಿಯು ಪ್ರಾದೇಶಿಕ ವ್ಯತ್ಯಾಸಗಳನ್ನು ತೋರಿಸಿದ್ದು, ದಕ್ಷಿಣ, ಪೂರ್ವ ಮತ್ತು ಈಶಾನ್ಯ ಭಾಗಗಳಲ್ಲಿ ಬಿಳಿ ಅಕ್ಕಿ ಪ್ರಧಾನ ಆಹಾರವಾಗಿದ್ದರೆ, ಉತ್ತರ ಮತ್ತು ಮಧ್ಯ ಪ್ರದೇಶಗಳಲ್ಲಿ ಗೋಧಿ ಪ್ರಾಬಲ್ಯ ಹೊಂದಿದೆ. ರಾಗಿ ಬಳಕೆಯಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ.

ಈ ಅಧ್ಯಯನದ ಪ್ರಕಾರ ಹೆಚ್ಚಿನ ಸಕ್ಕರೆ ಸೇವನೆ, ವಿಶೇಷವಾಗಿ ಪದಾರ್ಥಗಳಿಗೆ ಸೇರಿಸಿದ ಸಕ್ಕರೆಯು ಬೊಜ್ಜು ಹೆಚ್ಚಳಕ್ಕೆ ಕಾರಣ ಎಂದು ಗುರುತಿಸಲಾಗಿದೆ. ಭಾರತದ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಜನರು ತಮ್ಮ ದೈನಂದಿನ ಕ್ಯಾಲೊರಿ ಸೇವನೆಯಲ್ಲಿ ಶೇ5 ಕ್ಕಿಂತ ಹೆಚ್ಚು ಸಕ್ಕರೆಯಿಂದ ಪ್ರೋಟೀನ್‌ ಪಡೆಯುತ್ತಿದ್ದಾರೆ ಎಂದು ವರದಿ ಹೇಳಿದೆ. ಕಳಪೆ ಆಹಾರ ಸೇವನೆ, ನಿಷ್ಕ್ರೀಯ ಜೀವನಶೈಲಿ ಸಾಂಕ್ರಾಮಿಕವಲ್ಲದ ರೋಗಗಳ ಹರಡುವಿಕೆಯನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ ಎಂದು ವರದಿಯು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.