ADVERTISEMENT

Lip Care: ಚಳಿಗಾಲದಲ್ಲಿ ನಿಮ್ಮ ತುಟಿಗಳ ಆರೈಕೆ ಹೀಗಿರಲಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 7:39 IST
Last Updated 12 ಡಿಸೆಂಬರ್ 2025, 7:39 IST
<div class="paragraphs"><p>ಚಿತ್ರ: ಗೆಟ್ಟಿ</p></div>
   

ಚಿತ್ರ: ಗೆಟ್ಟಿ

ಚಳಿಗಾಲದಲ್ಲಿ ತುಟಿ ಒಣಗುವುದು ಹಾಗೂ ಬಿರಿಯುವುದು ಸಾಮಾನ್ಯ. ಶೀತ ಗಾಳಿ ಮತ್ತು ಕಡಿಮೆ ತೇವಾಂಶದಿಂದಾಗಿ ತುಟಿಗಳ ನೈಸರ್ಗಿಕ ತೇವಾಂಶ ಕಳೆದುಕೊಳ್ಳುತ್ತವೆ. ಆದರೆ, ಸರಿಯಾದ ಆರೈಕೆಯಿಂದ ನಿಮ್ಮ ತುಟಿಗಳನ್ನು ಮೃದು ಮತ್ತು ಆರೋಗ್ಯಕರವಾಗಿ ಕಾಪಾಡಿಕೊಳ್ಳಬಹುದಾಗಿದೆ. 

  • ನೀರು ಕುಡಿಯುವುದು: ತುಟಿಗಳ ಆರೋಗ್ಯಕ್ಕೆ ದೇಹದಲ್ಲಿ ಸಾಕಷ್ಟು ನೀರಿನ ಪ್ರಮಾಣ ಇರುವುದು ಅತ್ಯಂತ ಅವಶ್ಯಕ. ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವುದರಿಂದ ತುಟಿ ಒಡೆಯುವುದು ಹೆಚ್ಚು. ಆದ್ದರಿಂದ ದಿನಕ್ಕೆ ಕನಿಷ್ಠ 8 ರಿಂದ 10 ಲೋಟ ನೀರು ಕುಡಿಯುವುದು ಅತ್ಯಗತ್ಯ. 

    ADVERTISEMENT
  • ಲಿಪ್ ಬಾಮ್ ಬಳಕೆ: ಉತ್ತಮ ಗುಣಮಟ್ಟದ ಲಿಪ್ ಬಾಮ್ ಅಥವಾ ತುಟಿಗಳ ಮಾಯ್ಶ್ಚರೈಸರ್ ಬಳಸುವುದು ಮುಖ್ಯ. ಪೆಟ್ರೋಲಿಯಂ ಜೆಲ್ಲಿ, ಮೇಣ, ಶಿಯಾ ಬಟ್ಟರ್, ಕೋಕೋ ಬಟ್ಟರ್ ಮತ್ತು ವಿಟಮಿನ್ ಇ ಇರುವ ಉತ್ಪನ್ನಗಳನ್ನು ಆಯ್ಕೆ ಮಾಡಿ. ವಿಶೇಷವಾಗಿ ಹೊರಗೆ ಹೋಗುವ ಮುನ್ನ ಮತ್ತು ಮಲಗುವ ಮುನ್ನ ಲಿಪ್ ಬಾಮ್ ಹಚ್ಚಬೇಕು. 

ನೈಸರ್ಗಿಕ ಪರಿಹಾರಗಳು: 

  • ಜೇನು: ಜೇನು ನೈಸರ್ಗಿಕ ಮಾಯಿಶ್ಚರೈಸರ್ ಮತ್ತು ಬ್ಯಾಕ್ಟೀರಿಯಾ ನಿರೋಧಕವಾಗಿದೆ. ತುಟಿಗಳಿಗೆ ಜೇನು ತುಪ್ಪ ಹಚ್ಚಿ 15 ನಿಮಿಷ ಬಿಟ್ಟು ನಂತರ ತೊಳೆದರೆ, ತುಟಿಗಳ ಮೃದುತ್ವ ಹೆಚ್ಚುತ್ತದೆ. 

  • ತೆಂಗಿನ ಎಣ್ಣೆ: ತೆಂಗಿನ ಎಣ್ಣೆಯಲ್ಲಿರುವ ಕೊಬ್ಬಿನಾಮ್ಲಗಳು ತುಟಿಗಳನ್ನು ಪೋಷಿಸುತ್ತವೆ. ರಾತ್ರಿ ಮಲಗುವ ಮುನ್ನ ತೆಂಗಿನ ಎಣ್ಣೆ ಹಚ್ಚಿದರೆ ಬೆಳಿಗ್ಗೆ ತುಟಿಗಳು ಮೃದುವಾಗಿರುತ್ತವೆ.

  • ಗುಲಾಬಿ ನೀರು: ಗುಲಾಬಿ ನೀರು ತುಟಿಗಳಿಗೆ ನೈಸರ್ಗಿಕ ಬಣ್ಣ ಮತ್ತು ಮೃದುತ್ವ ಕೊಡುತ್ತದೆ.

ಎಕ್ಸ್‌ಫೋಲಿಯೇಶನ್ (ಸತ್ತ ಕೋಶಗಳನ್ನು ತೆಗೆಯುವುದು): 

ವಾರಕ್ಕೆ ಎರಡು ಬಾರಿ ತುಟಿಗಳನ್ನು ಮೃದುವಾಗಿ ಸ್ಕ್ರಬ್ ಮಾಡುವುದು ಒಳ್ಳೆಯದು. ಸಕ್ಕರೆ ಮತ್ತು ಜೇನು ಬೆರೆಸಿ ಮನೆಯಲ್ಲೇ ಲಿಪ್ ಸ್ಕ್ರಬ್ ತಯಾರಿಸಬಹುದು. ಇದನ್ನು ವೃತ್ತಾಕಾರ ರೀತಿಯಲ್ಲಿ ಮೃದುವಾಗಿ ತುಟಿಗಳ ಮೇಲೆ ಉಜ್ಜಿ, ಬೆಚ್ಚಗಿನ ನೀರಿನಿಂದ ತೊಳೆಯಬೇಕು.

ತಪ್ಪಿಸಬೇಕಾದ ವಿಷಯಗಳು: 

ತುಟಿಗಳನ್ನು ನಾಲಿಗೆಯಿಂದ ಸವರುವ ಅಭ್ಯಾಸವನ್ನು ತಪ್ಪಿಸಿ. ಇದು ಕ್ಷಣಿಕ ಉಪಶಮನ ನೀಡಿದರೂ ಲಾಲಾರಸ ಆವಿಯಾದಾಗ ತುಟಿಗಳು ಇನ್ನಷ್ಟು ಒಣಗುತ್ತವೆ. ಕಠಿಣ ರಾಸಾಯನಿಕಗಳಿರುವ ಲಿಪ್‌ಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ. ಧೂಮಪಾನ ಮತ್ತು ಹೆಚ್ಚು ಕೇಫಿನ್‌ ಸೇವನೆ ತುಟಿಗಳನ್ನು ಒಣಗಿಸುತ್ತವೆ.

ಸೂರ್ಯನಿಂದ ರಕ್ಷಣೆ:

ಚಳಿಗಾಲದಲ್ಲೂ ಸೂರ್ಯನ ಕಿರಣಗಳು ತುಟಿಗಳಿಗೆ ಹಾನಿ ಮಾಡಬಹುದು. ಎಸ್‌ಪಿಎಫ್‌ ಇರುವ ಲಿಪ್ ಬಾಮ್ ಬಳಸುವುದು ಒಳ್ಳೆಯದು. ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ತುಟಿಗಳನ್ನು ರಕ್ಷಿಸುತ್ತದೆ.

ಆಹಾರದಲ್ಲಿ ಪೋಷಕಾಂಶಗಳು

ವಿಟಮಿನ್ ಬಿ, ಕಬ್ಬಿಣ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ತುಟಿಗಳ ಆರೋಗ್ಯಕ್ಕೆ ಅತ್ಯಗತ್ಯ. ಹಸಿರು ತರಕಾರಿ, ಹಣ್ಣು, ಬೀಜ ಮತ್ತು ಒಣಹಣ್ಣುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಈ ಸರಳ ಮಾರ್ಗ ಅನುಸರಿಸುವುದರಿಂದ ಚಳಿಗಾಲದಲ್ಲೂ ನಿಮ್ಮ ತುಟಿಗಳನ್ನು ಮೃದುವಾಗಿಡಲು ಸಹಕಾರಿಯಾಗಿದೆ. 

ಲೇಖಕರು: ಡಾ. ಶಿರೀನ್ ಫರ್ಟಾಡೋ, ಹಿರಿಯ ಸಲಹೆಗಾರರು. ವೈದ್ಯಕೀಯ ಮತ್ತು ಸೌಂದರ್ಯ ಚರ್ಮರೋಗ ಇಲಾಖೆ, ಆಸ್ಟರ್ CMI ಆಸ್ಪತ್ರೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.