
ಚಿತ್ರ: ಗೆಟ್ಟಿ
ಸ್ತನ ಕ್ಯಾನ್ಸರ್ ಎಂಬುದು ಮಹಿಳೆಯರಲ್ಲಿ ಮಾತ್ರ ಎಂಬ ನಂಬಿಕೆ ಸಾಮಾನ್ಯ. ಆದರೆ ಅದು ಅಪರೂಪವಾದರೂ ಪುರುಷರನ್ನೂ ಕಾಡಲಿದೆ ಎಂಬ ಸಂಗತಿಯನ್ನು ತಜ್ಞರು ಪತ್ತೆ ಮಾಡಿದ್ದಾರೆ.
ಪುರುಷರ ಸ್ತನ ಕ್ಯಾನ್ಸರ್‌ನ ಲಕ್ಷಣಗಳು:
ಗಂಟು ಅಥವಾ ಊತ: ಸ್ತನದಲ್ಲಿ ಅಥವಾ ಎದೆಯ ಮೇಲೆ ನೋವುರಹಿತ ಗಂಟು ಕಂಡುಬರುವುದು ಮೊದಲ ಹಾಗೂ ಪ್ರಮುಖ ಲಕ್ಷಣವಾಗಿದೆ. ಇದು ಸಾಮಾನ್ಯವಾಗಿ ಪುರುಷರ ಎದೆ ತೊಟ್ಟಿನ ಹಿಂಬದಿಯಲ್ಲಿ ಕಾಣಿಸುವಂತದ್ದು.
ತೊಟ್ಟಿನಲ್ಲಿ ಬದಲಾವಣೆಗಳು: ಮೊಲೆತೊಟ್ಟು ಒಳಕ್ಕೆ ಹೋಗುವುದು, ಕೆಂಪು ಬಣ್ಣವಾಗುವುದು, ಅಥವಾ ಚರ್ಮ ಸುಲಿದಂತಾಗುವು.
ಸ್ರವಿಸುವಿಕೆ: ಮೊಲೆತೊಟ್ಟಿನಿಂದ ರಕ್ತ ಅಥವಾ ಇತರ ದ್ರವಗಳು ಸೋರುವುದು.
ಚರ್ಮದ ಬದಲಾವಣೆಗಳು: ಸ್ತನದ ಚರ್ಮದಲ್ಲಿ ಗುಳ್ಳೆ, ಸುಕ್ಕು ಉಂಟಾಗುವುದು.
ಅಪಾಯಕಾರಿ ಅಂಶಗಳು ಮತ್ತು ಪರಿಹಾರ:
ಅಪಾಯಕಾರಿ ಅಂಶಗಳು: ವಂಶಾವಳಿಯ ಇತಿಹಾಸ, ವಯಸ್ಸು, ಹಾರ್ಮೋನ್ ಅಸಮತೋಲನ, ಅಧಿಕ ತೂಕ, ಮದ್ಯಪಾನ, ಮತ್ತು ವಿಕಿರಣ ಒಡ್ಡುವಿಕೆಯಂತಹ ಅಂಶಗಳು ಅಪಾಯವನ್ನು ಹೆಚ್ಚಿಸುತ್ತವೆ.
ಪರಿಹಾರ ಮಾರ್ಗಗಳು: ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳುವುದು, ನಿಯಮಿತ ವ್ಯಾಯಾಮ, ಮದ್ಯಪಾನ ತ್ಯಜಿಸುವುದು ಹಾಗೂ ಸಮತೋಲಿತ ಆಹಾರ ಸೇವಿಸುವುದು ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಂಶಾವಳಿಯಲ್ಲಿ ಕ್ಯಾನ್ಸರ್ ಇತಿಹಾಸವಿದ್ದರೆ ಅನುವಂಶಿಕ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯ.
ಚಿಕಿತ್ಸೆ:
ವೈದ್ಯಕೀಯ ಪರೀಕ್ಷೆ, ಮೆಮೊಗ್ರಫಿ, ಅಲ್ಟ್ರಾಸೌಂಡ್, ಎಂಆರ್‌ಐ, ಮತ್ತು ಬಯಾಪ್ಸಿ ಮೂಲಕ ರೋಗನಿರ್ಣಯ ಮಾಡಲಾಗುತ್ತದೆ. ಬಯಾಪ್ಸಿಯಲ್ಲಿ ಅಂಗಾಂಶದ ಮಾದರಿಯನ್ನು ತೆಗೆದು ಪರೀಕ್ಷಿಸಲಾಗುತ್ತದೆ.
ಚಿಕಿತ್ಸಾ ವಿಧಾನಗಳು: ಕ್ಯಾನ್ಸರ್‌ನ ಹಂತ ಮತ್ತು ಪ್ರಕಾರವನ್ನು ಅವಲಂಬಿಸಿ ಚಿಕಿತ್ಸೆ ನಿರ್ಧರಿಸಲಾಗುತ್ತದೆ.
ಶಸ್ತ್ರಚಿಕಿತ್ಸೆ: ಗೆಡ್ಡೆಯನ್ನು ಅಥವಾ ಸಂಪೂರ್ಣ ಸ್ತನ ಅಂಗಾಂಶವನ್ನು ತೆಗೆದುಹಾಕುವುದು.
ವಿಕಿರಣ ಚಿಕಿತ್ಸೆ: ಕ್ಯಾನ್ಸರ್ ಕೋಶಗಳನ್ನು ನಾಶಮಾಡಲು ಹೆಚ್ಚಿನ ಶಕ್ತಿಯ ಕಿರಣಗಳನ್ನು ಬಳಸಲಾಗುತ್ತದೆ.
ಕೀಮೊಥೆರಪಿ: ಔಷಧಿಗಳ ಮೂಲಕ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲಾಗುತ್ತದೆ.
ಹಾರ್ಮೋನ್ ಚಿಕಿತ್ಸೆ: ಹಾರ್ಮೋನ್ ರಿಸೆಪ್ಟರ್ ಪಾಸಿಟಿವ್ ಕ್ಯಾನ್ಸರ್‌ಗೆ ಈ ಚಿಕಿತ್ಸೆ ನೀಡಬಹುದು.
ಕ್ಯಾನ್ಸರ್ ಕೋಶಕ್ಕೆ ಚಿಕಿತ್ಸೆ: ನಿರ್ದಿಷ್ಟ ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಸಿ ದಾಳಿ ಮಾಡುವ ಆಧುನಿಕ ಔಷಧಿಗಳು.
ಪುರುಷರಲ್ಲಿ ಸ್ತನ ಕ್ಯಾನ್ಸರ್ ಅಪರೂಪವಾದರೂ, ಅದನ್ನು ಗಂಭೀರವಾಗಿ ಪರಿಗಣಿಸಬೇಕು. ತಕ್ಷಣ ಪತ್ತೆ ಹಚ್ಚಿದರೆ ರೋಗನಿರ್ಣಯ ಮತ್ತು ಸೂಕ್ತ ಚಿಕಿತ್ಸೆಯಿಂದ ಗುಣಮುಖರಾಗುವ ಸಾಧ್ಯತೆ ಹೆಚ್ಚು.
(ಡಾ. ಸಿ.ಯು. ಪೂವಮ್ಮ, ಮುಖ್ಯಸ್ಥೆ, ಸ್ತನ ಕ್ಯಾನ್ಸರ್ ಮತ್ತು ಆಂಕೋಪ್ಲಾಸ್ಟಿ, ಆಸ್ಟರ್ ಸಿಎಂಐ ಆಸ್ಪತ್ರೆ, ಬೆಂಗಳೂರು.)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.