
ಗೆಟ್ಟಿ ಚಿತ್ರ
ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡುವುದು ಸವಾಲಿನ ಸಂಗತಿಯಾಗಿದೆ. ಈ ಋತುವಿನಲ್ಲಿ ವಿವಿಧ ರೋಗ ಮತ್ತು ಸೋಂಕುಗಳು ವೇಗವಾಗಿ ಹರಡುತ್ತವೆ. ಆದ್ದರಿಂದ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸುವುದು ಅಗತ್ಯ. ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡಲು ಪೋಷಕರು ಏನೆಲ್ಲಾ ಕ್ರಮಗಳನ್ನು ಪಾಲಿಸಬೇಕು ಎಂಬುದನ್ನು ವೈದ್ಯರಾದ ಡಾ. ಪೂಜಾ ಪಿಳ್ಳೈ ಅವರು ತಿಳಿಸಿದ್ದಾರೆ.
ಮಳೆಗಾಲದಲ್ಲಿ ಮಕ್ಕಳಿಗೆ ಆರೋಗ್ಯ ಸಮಸ್ಯೆಗಳು ಏಕೆ ಹೆಚ್ಚು?
ಮಳೆಗಾಲದಲ್ಲಿ ತೇವಾಂಶ ಹೆಚ್ಚಾಗುವುದರಿಂದ ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳು ವೇಗವಾಗಿ ಬೆಳೆಯುತ್ತವೆ. ಮಳೆನೀರು ನಿಲ್ಲುವ ಸ್ಥಳಗಳಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗುತ್ತದೆ. ತಾಪಮಾನದ ಏರುಪೇರುಗಳು ಮಕ್ಕಳ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತವೆ. ಮಕ್ಕಳು ಬೀದಿ ಬದಿಯ ಆಹಾರ ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿತ ಸಮಸ್ಯೆಗಳು ಉಂಟಾಗುತ್ತವೆ. ಮಳೆನೀರಿನಲ್ಲಿ ಮಕ್ಕಳು ಆಟವಾಡುವುದರಿಂದ ದೇಹಕ್ಕೆ ಸೋಂಕು ತಗುಲುವ ಸಾಧ್ಯತೆ ಇದ್ದು, ಶೀತ, ಜ್ವರಕ್ಕೆ ಕಾರಣವಾಗಬಹುದು.
ಆರೋಗ್ಯ ಸಮಸ್ಯೆಗಳು:
ಜ್ವರ ಮತ್ತು ಶೀತ: ಮಳೆಗಾಲದಲ್ಲಿ ಜ್ವರ ಮತ್ತು ಶೀತ ಸಾಮಾನ್ಯವಾದ ಸಮಸ್ಯೆಗಳಾಗಿವೆ. ವೈರಲ್ ಸೋಂಕಿನಿಂದ ಕೆಮ್ಮುವುದು, ಸೀನುವುದು ಹಾಗೂ ಗಂಟಲು ನೋವು ಉಂಟಾಗುತ್ತದೆ.
ಡೆಂಗ್ಯೂ ಮತ್ತು ಮಲೇರಿಯಾ: ಸೊಳ್ಳೆಗಳ ಮೂಲಕ ಹರಡುವ ಈ ರೋಗಗಳು ಅಪಾಯಕಾರಿಯಾಗಿವೆ. ತೀವ್ರ ಜ್ವರ, ಕೈ ಕಾಲು ನೋವು, ವಾಕರಿಕೆ ಪ್ರಮುಖ ಲಕ್ಷಣಗಳಾಗಿವೆ.
ಹೊಟ್ಟೆಯ ಸಮಸ್ಯೆ: ಕಲುಷಿತ ನೀರು, ಆಹಾರದ ಅತಿಸಾರ, ಟೈಫಾಯಿಡ್, ಹೆಪಟೈಟಿಸ್ ಹರಡುವ ಸಾಧ್ಯತೆಯೂ ಇರುತ್ತದೆ.
ಚರ್ಮದ ಸೋಂಕುಗಳು: ತೇವಾಂಶ ಹೆಚ್ಚಾಗಿರುವುದರಿಂದ ಫಂಗಲ್ ಇನ್ಫೆಕ್ಷನ್ ಹಾಗೂ ಚರ್ಮದಲ್ಲಿ ದದ್ದುಗಳು ಉಂಟಾಗುತ್ತವೆ.
ತಡೆಗಟ್ಟುವ ಮಾರ್ಗಗಳು:
ಸ್ವಚ್ಛತೆಯ ಪಾಲನೆ: ಮಕ್ಕಳಿಗೆ ಆಗಾಗ ಕೈ ತೊಳೆಯುವ ಅಭ್ಯಾಸ ಮಾಡಿಸಿ. ವಿಶೇಷವಾಗಿ ಊಟಕ್ಕೆ ಮುನ್ನ ಮತ್ತು ಶೌಚಾಲಯ ಬಳಸಿದ ನಂತರ ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆಯಬೇಕು.
ಶುದ್ಧ ನೀರು ಮತ್ತು ಆಹಾರ: ಕುದಿಸಿ ಆರಿಸಿದ ನೀರನ್ನು ಕುಡಿಸಿ. ಮನೆಯಲ್ಲಿ ತಯಾರಿಸಿದ ಬಿಸಿ ಆಹಾರ ನೀಡಿ. ಬೀದಿ ಬದಿಯ ತಿಂಡಿ ಹಾಗೂ ಕತ್ತರಿಸಿದ ಹಣ್ಣುಗಳನ್ನು ತಪ್ಪಿಸಿ.
ಸೊಳ್ಳೆಗಳ ನಿಯಂತ್ರಣ: ಮನೆ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಸೊಳ್ಳೆ ಪರದೆ ಅಥವಾ ಮಾಸ್ಕಿಟೋ ರೆಪೆಲ್ಲೆಂಟ್ ಬಳಸುವುದು ಉತ್ತಮ. ಮಕ್ಕಳಿಗೆ ಪೂರ್ಣ ತೋಳಿನ ಬಟ್ಟೆಗಳನ್ನು ಹಾಕಿ.
ಒಣಗಿಸುವುದು ಮುಖ್ಯ: ಮಳೆಯಲ್ಲಿ ನೆನೆದರೆ ತಕ್ಷಣ ಬಟ್ಟೆ ಬದಲಿಸಿ. ಕೂದಲು ಮತ್ತು ದೇಹವನ್ನು ಚೆನ್ನಾಗಿ ಒರೆಸಿ. ಒದ್ದೆಯಾದ ಶೂ, ಬಟ್ಟೆಗಳನ್ನು ಬಳಸಬೇಡಿ.
ರೋಗನಿರೋಧಕ ಶಕ್ತಿ ಹೆಚ್ಚಿಸುವುದು: ಮಕ್ಕಳಿಗೆ ‘ವಿಟಮಿನ್ ಸಿ’ ಭರಿತ ಹಣ್ಣುಗಳು, ಹಾಲು ಹಾಗೂ ಮೊಸರನ್ನು ನೀಡಿ. ಬೆಲ್ಲದ ಶರಭತ್, ತುಳಸಿ ಕಷಾಯ ಬಳಸಬಹುದು.
ಮಳೆಗಾಲದಲ್ಲಿ ತೆಗೆದುಕೊಳ್ಳುವ ಸಣ್ಣ ಎಚ್ಚರಿಕೆಗಳು ದೊಡ್ಡ ಆರೋಗ್ಯ ಸಮಸ್ಯೆಗಳನ್ನು ತಡೆಯಬಲ್ಲವು. ಮಕ್ಕಳಿಗೆ ಸ್ವಚ್ಛತೆಯ ಅಭ್ಯಾಸಗಳನ್ನು ಕಲಿಸುವುದು, ಪೌಷ್ಟಿಕ ಆಹಾರ ನೀಡುವುದು, ಸೂಕ್ತ ಸಮಯದಲ್ಲಿ ವೈದ್ಯಕೀಯ ಸಹಾಯ ಪಡೆಯುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ವೈದ್ಯರಾದ ಡಾ.ಪೂಜಾ ಪಿಳ್ಳೈ ಅವರು ಹೇಳುತ್ತಾರೆ.
(ಡಾ. ಪೂಜಾ ಪಿಳ್ಳೈ, ಸಲಹೆಗಾರ್ತಿ – ಆಂತರಿಕ ವೈದ್ಯಕೀಯ, ಅಸ್ಟರ್ ಸಿಎಂಐ ಆಸ್ಪತ್ರೆ, ಬೆಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.