
ಸಾಂದರ್ಭಿಕ ಚಿತ್ರ
ಕೃಪೆ: ಎಐ
2025ನೇ ಇಸವಿ ಮುಗಿದು 2026ರ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷವನ್ನು ಬರಮಾಡಿಕೊಳ್ಳುವ ಆಚರಣೆ ಅಂದರೆ ಅದು ಕೇವಲ ಮದ್ಯದ ಪಾರ್ಟಿಯಲ್ಲ. ಆದರೆ, ಪ್ರಸ್ತುತ ದಿನಗಳಲ್ಲಿ ಮದ್ಯ ಇಲ್ಲದೆ ಹೊಸ ವರ್ಷದ ಸಂಭ್ರಮ ಇಲ್ಲ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದನ್ನು ಮರೆಯದಿರಿ.
ಮದ್ಯಪಾನವನ್ನು ಇಲ್ಲಿ ಉತ್ತೇಜಿಸಲಾಗುತ್ತಿಲ್ಲ. ಆದರೆ, ಹೊಸ ವರ್ಷದ ಸಂಭ್ರಮದ ಹೆಸರಿನಲ್ಲಿ ಮದ್ಯದ ಅಮಲಿನಲ್ಲಿ ಮೈಮರೆಯುವ ಯುವ ಸಮುದಾಯಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ಮದ್ಯ ಸೇವಿಸುವಾಗ ಮತ್ತು ಸೇವನೆಯ ಬಳಿಕ ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿಸಿಕೊಡುವ ಸಣ್ಣ ಪ್ರಯತ್ನವಿದು.
ಅನಾಗರೀಕ ವರ್ತನೆ ಸಲ್ಲದು: ಪಾರ್ಟಿ ಮಾಡಿದ ಬಳಿಕ ಮದ್ಯದ ಅಮಲಿನಲ್ಲಿ ಮನುಷ್ಯತ್ವ ಮರೆತು, ಅನಾಗರೀಕರಂತೆ ವರ್ತನೆ ಮಾಡುವುದನ್ನು ತಪ್ಪಿಸಬೇಕು. ಮದ್ಯ ಸೇವಿಸಿದ ಬಳಿಕ ನಮ್ಮಿಂದ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.
ಸಂಭ್ರಮ ನೋವುಂಟು ಮಾಡದಿರಲಿ: ಹೊಸ ವರ್ಷದ ಸಂಭ್ರಮದ ನೆಪದಲ್ಲಿ ಅತಿಯಾಗಿ ಮದ್ಯ ಸೇವಿಸಿ, ಮಿತಿ ಮೀರಿ ವರ್ತಿಸುವುದನ್ನು ತಪ್ಪಿಸಿ. ಮಾತ್ರವಲ್ಲ, ಅತಿಯಾದ ಮದ್ಯ ಸೇವನೆಯಿಂದ ಆರೋಗ್ಯ ಹದಗೆಡುವ ಸಾಧ್ಯತೆ ಇರುವುದರಿಂದ ಒಂದು ದಿನದ ಸಂಭ್ರಮ ನಿಮಗೆ ನೋವು, ಸಂಕಟ, ಉದ್ವೇಗ ಕಾಡದಂತೆ ಸಂಭ್ರಮಿಸುವುದಕ್ಕೆ ನಿಮ್ಮ ಆದ್ಯತೆ ಇರಲಿ.
ಮಿತಿ ಮೀರದಿರಲಿ: ಸ್ನೇಹಿತರು ಪಾರ್ಟಿಗೆ ಆಹ್ವಾನಿಸಿದರೆ, ಅವರು ಕೊಡಿಸುತ್ತಾರೆ ಎಂಬ ಕಾರಣಕ್ಕೆ ಕಂಠಪೂರ್ತಿ ಕುಡಿದು ತೂರಾಡುವುದನ್ನು ತಪ್ಪಿಸಿ. ಮೊದಲು ನಿಮ್ಮ ಮಿತಿಯ ಬಗ್ಗೆ ನಿಮಗೆ ಅರಿವಿರಲಿ.
ವಾಹನ ಚಲಾಯಿಸುವುದರಿಂದ ದೂರವಿರಿ: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು ಎಂಬ ನಿಯಮವಿದೆ. ಕುಡಿದು ವಾಹನ ಚಲಾಯಿಸುವುದು ಕಾನೂನಿನ ಪ್ರಕಾರ ಅಪರಾಧ ಕೂಡ. ಮಾತ್ರವಲ್ಲ, ನಿಮ್ಮ ಜೀವದ ದೃಷ್ಟಿಯಿಂದಲೂ ಕುಡಿದು ವಾಹನ ಚಲಾಯಿಸುವುದನ್ನು ತಪ್ಪಿಸುವುದು ಉತ್ತಮ.
ಕುಡಿದ ಅಮಲಿನಲ್ಲಿ ಅನುಚಿತ ವರ್ತನೆ: ವರ್ಷಾಚರಣೆ ಪಾರ್ಟಿಯ ಬಳಿಕ ಮನಬಂದಂತೆ ವರ್ತಿಸುವುದು ಸಲ್ಲದು. ನಮ್ಮ ಸಂತೋಷಕ್ಕೆ ನೆರೆಹೊರೆಯವರಿಗೆ ತೊಂದರೆಯಾಗುವಂತೆ ಕಿರುಚಾಡುವುದನ್ನು ಮಾಡದಿರಿ.
ಸ್ಥಳದ ಸ್ವಚ್ಛತೆ ಮುಖ್ಯ: ಸ್ನೇಹಿತರ ಮನೆ, ಸ್ವಂತ ಮನೆ ಅಥವಾ ಬೇರೆ ಯಾವುದೇ ಸ್ಥಳವಾಗಿರಲಿ, ಪಾರ್ಟಿ ಮಾಡಿದ ಬಳಿಕ ಸ್ಥಳವನ್ನು ಹಾಳು ಮಾಡದೆ, ಸಾಧ್ಯವಾದಷ್ಟು ಸ್ವಚ್ಛವಾಗಿಡಲು ಪ್ರಯತ್ನಿಸಿ. ಒಂದೊಮ್ಮೆ ನೀವು ಪಾರ್ಟಿ ಮಾಡಿದ ಸ್ಥಳ ಸ್ವಚ್ಛವಾಗಿಲ್ಲದಿದ್ದರೆ, ಪಾರ್ಟಿ ಮುಗಿದ ಬಳಿಕ ಸ್ವಚ್ಛಗೊಳಿಸಿ. ಬಾಟಲಿ, ಕವರ್ ಸೇರಿದಂತೆ ಯಾವುದೇ ವಸ್ತುವನ್ನು ಎಲ್ಲಂದರಲ್ಲಿ ಎಸೆಯುವುದನ್ನು ತಪ್ಪಿಸಿ.
ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ: ಹೌದು, ಸಾರ್ವಜನಿಕ ಸ್ಥಳಗಳಾದ, ರಸ್ತೆ, ಅರಣ್ಯ ಪ್ರದೇಶ, ಶಾಲೆ, ದೇವಸ್ಥಾನಗಳಲ್ಲಿ ಮದ್ಯ ಸೇವನೆ ಮಾಡುವುದನ್ನು ತಪ್ಪಿಸಿ. ಹಾಗೆ ಮಾಡುವುದರಿಂದ ನಮ್ಮ ಸಂಭ್ರಮ ಇನ್ನೊಬ್ಬರ ಬೇಸರಕ್ಕೆ ಕಾರಣವಾಗುತ್ತದೆ.
ಜನಸಂದಣಿಯಿಂದ ದೂರವಿರಿ: ಹೊಸ ವರ್ಷಾಚರಣೆಯನ್ನು ಸಾಧ್ಯವಾದಷ್ಟು ಜನಸಂದಣಿಯಿಂದ ದೂರವೇ ಸಂಭ್ರಮಿಸುವುದು ಮುಖ್ಯ. ಅಧಿಕ ಶಬ್ಧ ಹಾಗೂ ಒತ್ತಡದಲ್ಲಿ ಪಾರ್ಟಿ ಮಾಡುವುದರಿಂದ ಮಾನಸಿಕ ನೆಮ್ಮದಿ ಹದಗೆಡುತ್ತದೆ.
ಯಾರ ಜೊತೆ ಪಾರ್ಟಿ ಮಾಡಬೇಕು ಎಂಬುದರ ಆಯ್ಕೆ: ಸಾಧ್ಯವಾದಷ್ಟು ಆತ್ಮೀಯರು, ಕುಟುಂಬ ಸದಸ್ಯರ ಜೊತೆ ಹೊಸ ವರ್ಷ ಸಂಭ್ರಮಿಸುವುದು ಸೂಕ್ತ. ಯಾರೋ ಪರಿಚಯಸ್ಥರು ಕರೆದರು ಎಂದು ಪಾರ್ಟಿಗೆ ಹೋಗುವುದರಿಂದ ಹೊಂದಾಣಿಕೆಯಾಗದೆ ‘ಮೂಡ್ ಆಫ್’ ಆಗುವ ಸಾಧ್ಯತೆ ಹೆಚ್ಚು.
ಸಮಾನ ಮನಸ್ಕರ ಜೊತೆ ಪಾರ್ಟಿ: ನಮ್ಮ ಮನಸ್ಥಿತಿಗೆ ಹೊಂದಾಣಿಕೆಯಾಗದ ವ್ಯಕ್ತಿಗಳ ಜೊತೆ ಮದ್ಯ ಸೇವಿಸುವುದರಿಂದ ಮಾನಸಿಕ ನೆಮ್ಮದಿ ಹಾಳಾಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಅನಗತ್ಯ ಚರ್ಚೆಗಳು ನಡೆದು ಪಾರ್ಟಿಯಲ್ಲಿ ಗಲಾಟೆಗಳು ನಡೆಯುವ ಸಂಭವ ಇರುತ್ತದೆ. ಹಾಗಾಗಿ ಸಮಾನ ಮನಸ್ಕರ ಜೊತೆ ಪಾರ್ಟಿ ಮಾಡುವುದು ಮುಖ್ಯ.
ಪಾರ್ಟಿ ವೇಳೆ ದುಃಖಕರ ವಿಷಯಗಳ ಹಂಚಿಕೆ: ಹೊಸ ವರ್ಷದ ಪಾರ್ಟಿ ವೇಳೆ ಸಾಧ್ಯವಾದಷ್ಟು ಹೊಸ ವಿಚಾರಗಳ ಚರ್ಚೆ ಇರಲಿ. ಅನಗತ್ಯವಾಗಿ ಪ್ರೇಮ ವೈಫಲ್ಯ, ಕೌಟುಂಬಿಕ ಕಲಹಗಳಂತ ವಿಚಾರಗಳು, ಸ್ನೇಹದಲ್ಲಿ ಬಿರುಕು ಮೂಡಿರುವ ವಿಷಯಗಳ ಚರ್ಚೆಯಿಂದ ದೂರ ಇರುವುದು ಮುಖ್ಯ.
ಮಹಿಳೆಯರಿದ್ದರೆ ಜಾಗೃತಿ ಅಗತ್ಯ: ಪಾರ್ಟಿ ಸಂದರ್ಭದಲ್ಲಿ ನಿಮ್ಮ ಜೊತೆ ಸ್ನೇಹಿತೆಯರು ಅಥವಾ ಕುಟುಂಬದ ಮಹಿಳೆಯರು ಇದ್ದಾಗ ಅವರ ಕುರಿತು ಹೆಚ್ಚು ಜಾಗೃತಿ ವಹಿಸುವುದು ಮುಖ್ಯ. ಮಹಿಳೆಯರು ಜೊತೆ ಇದ್ದಾಗ ಸಾಧ್ಯವಾದಷ್ಟು ಬೇಗ ಪಾರ್ಟಿ ಮುಗಿಸಿ ಮನೆಗೆ ಹೋಗುವುದು ಉತ್ತಮ.
ಶುಭಕೋರುವ ಹೆಸರಿನಲ್ಲಿ ಅನುಚಿತ ವರ್ತನೆ: ಹೊಸ ವರ್ಷಕ್ಕೆ ಶುಭಾಶಯ ವಿನಿಮಯ ಮಾಡಿಕೊಳ್ಳುವ ಹೆಸರಿನಲ್ಲಿ ಮಹಿಳೆಯರ ಜೊತೆ ಅನುಚಿತ ವರ್ತನೆ ಮಾಡದಿರಿ. ಸಾಧ್ಯವಾದಷ್ಟು ಮೈ ಕೈ ಮುಟ್ಟದೆ ಶುಭಾಶಯ ಕೋರುವುದು ಉತ್ತಮ.
ಸಾರ್ವಜನಿಕ ಸಂಚಾರದ ಮಾಹಿತಿ: ವಿಶೇಷವಾಗಿ, ಸಾರ್ವಜನಿಕ ಸಂಚಾರ ಸೇವೆಗಳಾದ, ಸರ್ಕಾರಿ ಬಸ್, ಮೆಟ್ರೊ, ರೈಲ್ವೆ ಸೇವೆಯ ಮಾಹಿತಿ ಮೊದಲೇ ತಿಳಿದಿರುವುದು ಮುಖ್ಯ. ದೂರದ ಊರುಗಳಿಗೆ ಪ್ರಯಾಣ ಮಾಡುವವರು ಮುಂಗಡ ಬುಕಿಂಗ್ ಮಾಡಿಕೊಂಡಿರುವುದು ಸೂಕ್ತ.
ರೆಸಾರ್ಟ್‌ಗಳ ಬುಕಿಂಗ್: ಹೊಸ ವರ್ಷದ ಆಚರಣೆಗೆ ರೆಸಾರ್ಟ್ ಅನ್ನು ಮುಂಗಡವಾಗಿ ಕಾಯ್ದಿರಿಸುವುದು ಮುಖ್ಯ. ಒಂದೊಮ್ಮೆ ಕಾಯ್ದಿರಿಸದೇ ಹೋದರೆ, ಪ್ರವೇಶ ಸಿಗದೆ ಪರದಾಡಬೇಕಾಗಬಹುದು ಅಥವಾ ನಿರಾಸೆಯಾಗಬಹುದು. ಹೀಗಾಗಿ ಹೊಸ ವರ್ಷದ ಯೋಜನೆಗಳ ಕುರಿತು ಮುಂಜಾಗ್ರತೆ ಅತ್ಯಗತ್ಯ.
ಸರ್ಕಾರದ ನಿಯಮ ಪಾಲಿಸಿ: ಹೊಸ ವರ್ಷದ ಸಂಭ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ, ಸರ್ಕಾರ ಹಾಗೂ ಪೊಲೀಸ್ ಇಲಾಖೆ ಹೊರಡಿಸಿರುವ ನಿಯಮಗಳನ್ನು ಪಾಲಿಸುವ ಮೂಲಕ ಸಾರ್ವಜನಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಮುಖ್ಯ.
ಆಲ್ಕೊಹಾಲ್ ಯುಕ್ತ ಪಾನೀಯಗಳಲ್ಲಿರುವ ಸಕ್ರಿಯ ಘಟಕಾಂಶವಾದ ಎಥೆನಾಲ್ ಎಂಬ ಸರಳ ಅಣುವು ದೇಹದ ಮೇಲೆ ಹಲವು ರೀತಿಯ ಪರಿಣಾಮ ಬೀರುತ್ತದೆ. ಇದು ಹೊಟ್ಟೆ, ಮೆದುಳು, ಹೃದಯ, ಪಿತ್ತಕೋಶ ಮತ್ತು ಯಕೃತ್ತಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದು ರಕ್ತದಲ್ಲಿನ ಲಿಪಿಡ್‌ಗಳು (ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳು) ಮತ್ತು ಇನ್ಸುಲಿನ್ ಮಟ್ಟಗಳ ಮೇಲೆ ಹಾಗೂ ಉರಿಯೂತ ಮತ್ತು ಹೆಪ್ಪುಗಟ್ಟುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಮನಸ್ಥಿತಿ, ಏಕಾಗ್ರತೆ ಮತ್ತು ಸಮನ್ವಯವನ್ನು ಸಹ ಬದಲಾಯಿಸುತ್ತದೆ.ಡಾ.ಸುದರ್ಶನ್, ಗಿರಿನಗರ. ಫ್ಯಾಮಿಲಿ ಫಿಸಿಷಿಯನ್
(ವಿಶೇಷ ಸೂಚನೆ: ಇದು ಮದ್ಯಪಾನ ಉತ್ತೇಜಿಸಲು ಬರೆದ ಲೇಖನವಾಗಿರುವುದಿಲ್ಲ. ಬದಲಾಗಿ, ಮಾಹಿತಿಗಾಗಿ ಬರೆದಿರುವ ಲೇಖನ. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.