ADVERTISEMENT

ನಾಲ್ಕನೇ ಒಂದರಷ್ಟು ಭಾರತೀಯ ವಯಸ್ಕರು ಬೊಜ್ಜು ಹೊಂದಿದ್ದಾರೆ: ವರದಿ

ಪಿಟಿಐ
Published 26 ನವೆಂಬರ್ 2025, 9:43 IST
Last Updated 26 ನವೆಂಬರ್ 2025, 9:43 IST
   

ನಾಲ್ವರು ಭಾರತೀಯ ವಯಸ್ಕರ ಪೈಕಿ ಒಬ್ಬರಲ್ಲಿ ಬೊಜ್ಜಿನ ಸಮಸ್ಯೆ ಇದೆ ಎಂದು ದೆಹಲಿಯ 'ಟೋನಿ ಬ್ಲೇರ್ ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಚೇಂಜ್' ನಡೆಸಿದ ಅಧ್ಯಯನ ಬಹಿರಂಗಪಡಿಸಿದೆ.

2019 ರಿಂದ 2021ರ ನಡುವೆ ನಡೆದ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಅಂಕಿ ಅಂಶದ ಪ್ರಕಾರ, ದೆಹಲಿಯಲ್ಲಿ ಶೇ 41ರಷ್ಟು ಮಹಿಳೆಯರು ಬೊಜ್ಜು ಹೊಂದಿದ್ದಾರೆ. ಅದರಂತೆ ಮೇಘಾಲಯದಲ್ಲಿ ಶೇ12ರಷ್ಟು ಮಹಿಳೆಯರು ಬೊಜ್ಜು ಹೊಂದಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಇದಲ್ಲದೆ ದೆಹಲಿಯಲ್ಲಿ 6 ರಿಂದ 16 ವರ್ಷ ವಯಸ್ಸಿನ ಮಕ್ಕಳಲ್ಲಿ ಶೇ 22.8ರಷ್ಟು ಜನರಲ್ಲಿ ಬೊಜ್ಜು ಇದೆ. ಮಹಾರಾಷ್ಟ್ರದಲ್ಲಿಯೂ ಶೇ 13.6ರಷ್ಟು ಜನರು ಬೊಜ್ಜು ಹೊಂದಿರುವುದಾಗಿ ವರದಿ ತಿಳಿಸಿದೆ.

'ಭಾರತದಲ್ಲಿ ಭವಿಷ್ಯದ ಆರೋಗ್ಯ ಭದ್ರಪಡಿಸಿಕೊಳ್ಳುವ ಯಶಸ್ಸಿನ ನಿರ್ಮಾಣ' ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಭಾರತದಲ್ಲಿ ಶೇ 24ರಷ್ಟು ಮಹಿಳೆಯರು ಹಾಗೂ ಶೇ 23ರಷ್ಟು ಪುರುಷರು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದಾರೆ. ಇದು ಈ ಹಿಂದಿನ 30 ವರ್ಷಗಳ ಪ್ರಮಾಣಕ್ಕಿಂತ ಐದು ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದೆ. 

ADVERTISEMENT

1990ರ ನಂತರ ಜಾಗತಿಕವಾಗಿ ಬೊಜ್ಜಿನ ಪ್ರಮಾಣ ದ್ವಿಗುಣಗೊಂಡಿದೆ. ಸದ್ಯ ಬೊಜ್ಜು ವಿಶ್ವದಾದ್ಯಂತ ಸುಮಾರು ಒಂದು ಶತಕೋಟಿ ಜನರ ಮೇಲೆ ಪರಿಣಾಮ ಬೀರಿದೆ ಎಂದು ವರದಿ ಹೇಳುತ್ತದೆ. ಬೊಜ್ಜಿನ ಏರಿಕೆಯ ಪ್ರಮಾಣ ಹೀಗೆ ಮುಂದುವರಿದರೆ, 2050ರ ವೇಳೆಗೆ ಪ್ರಪಂಚದಾದ್ಯಂತ ಅರ್ಧಕ್ಕಿಂತ ಹೆಚ್ಚು ವಯಸ್ಕರು ಅಧಿಕ ತೂಕ ಅಥವಾ ಬೊಜ್ಜು ಹೊಂದುವ ಸಾಧ್ಯತೆ ಇದೆ ಎಂದು ವರದಿ ಬಹಿರಂಗ ಪಡಿಸಿದೆ.

ಈಗಾಗಲೇ ಭಾರತೀಯರಲ್ಲಿ ಬೊಜ್ಜು, ರೋಗವನ್ನು ಹೆಚ್ಚು ಮಾಡುತ್ತಿದೆ. ಜೊತೆಗೆ ಆರ್ಥಿಕತೆಯ ಮೇಲೂ ಒತ್ತಡ ಹೇರುತ್ತಿದೆ ಎಂದು ವರದಿ ಎಚ್ಚರಿಸುತ್ತದೆ.

ಭಾರತದಲ್ಲಿ ಪ್ರತಿ ವರ್ಷ ಬೊಜ್ಜಿಗೆ ಸಂಬಂಧಿಸಿದ ಆರೋಗ್ಯ ಸೇವೆಗಾಗಿ ಸುಮಾರು ₹21.5 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಇದು ದೇಶದ ಆರ್ಥಿಕತೆಯ‌ ಸುಮಾರು ₹28.9 ಸಾವಿರ ಕೋಟಿಗಳಷ್ಟು ಕಡಿಮೆ ಮಾಡುತ್ತದೆ. ಇದು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇಕಡಾ ಒಂದಕ್ಕೆ ಹತ್ತಿರದಲ್ಲಿದೆ ಎಂದು ವರದಿ ಹೇಳುತ್ತದೆ. 

ಸರ್ಕಾರದ ‘ಈಟ್ ರೈಟ್ ಇಂಡಿಯಾ’ ಮತ್ತು ’ಫಿಟ್ ಇಂಡಿಯಾ ಆಂದೋಲನ’ದಂತಹ ಉಪಕ್ರಮಗಳು ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತಿವೆ. ಈ ವರ್ಷ ಪರಿಚಯಿಸಲಾದ ಸಕ್ಕರೆ ಪಾನೀಯಗಳ ಮೇಲೆ ’ಪಾಪದ ತೆರಿಗೆ’ ಹಾಗೂ ರಾಷ್ಟ್ರೀಯ ಬೊಜ್ಜು ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ವರದಿ ಹೇಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.