
ಉಗುರು ಕಚ್ಚುವುದು ಸಾಮಾನ್ಯ ಅಭ್ಯಾಸ ಎಂದು ಮೆಲ್ನೋಟಕ್ಕೆ ಅನಿಸುತ್ತದೆ. ಆದರೆ ಉಗುರು ಕಚ್ಚುವುದನ್ನು ಚಟ ಎಂದು ಮನೋವಿಜ್ಞಾನ ಹೇಳುತ್ತದೆ. ಇದು ಮಾನಸಿಕ ಒತ್ತಡ ಹಾಗೂ ಆತಂಕದ ಸೂಚನೆಯಾಗಿರಬಹುದು. ಉಗುರು ಕಚ್ಚುವುದಕ್ಕೆ ಅಸಲಿ ಕಾರಣ ಏನು ಎಂಬುದನ್ನು ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಕಾವ್ಯಾ ಅವರು ತಿಳಿಸಿದ್ದಾರೆ.
ಮಾನಸಿಕ ಒತ್ತಡ ಹಾಗೂ ಆತಂಕದ ವೇಳೆ ದೇಹವು ತಣಿವಿನ ಹುಡುಕಾಟದಲ್ಲಿರುತ್ತದೆ. ಈ ವೇಳೆ ಕೆಲವರು ಹೆಚ್ಚು ಮಾತನಾಡಿದರೆ, ಕೆಲವರು ಮೌನವಾಗುತ್ತಾರೆ. ಇನ್ನೂ ಕೆಲವರು ಉಗುರು ಕಚ್ಚುತ್ತಾರೆ. ಈ ಕ್ರಿಯೆಗಳು ಮನಸ್ಸಿನಲ್ಲಿರುವ ಅಶಾಂತಿಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವ ವಿಧಾನವಾಗಿವೆ ಎಂದು ಮನೋವಿಜ್ಞಾನ ಹೇಳುತ್ತದೆ.
ಮನೋವಿಜ್ಞಾನ ಹೇಳುವುದೇನು?
ಮನೋವಿಜ್ಞಾನದಲ್ಲಿ ಈ ವರ್ತನೆಗೆ ಒನಿಕೊಫೇಜಿಯಾ (ಉಗುರು ಕಚ್ಚುವಿಕೆ) ಎಂದು ಕರೆಯಲಾಗುತ್ತದೆ.
ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ಪ್ರಕಾರ, ಮಗು ತನ್ನ ಜೀವನದ ಮೊದಲ ಹಂತವಾದ ಬಾಯಿಯ ಹಂತದಲ್ಲಿ ತೃಪ್ತಿ ಹೊಂದಿರದಿದ್ದರೆ ಮುಂದಿನ ಜೀವನದಲ್ಲಿ ಉಗುರು ಅಥವಾ ತುಟಿ ಕಚ್ಚುವುದು, ಧೂಮಪಾನದಂತಹ ಚಟಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮನೋವಿಜ್ಞಾನ ಹೇಳುತ್ತದೆ.
ಉಗುರನ್ನು ಕಚ್ಚುವವರ ಸ್ವಭಾವ:
ಉಗುರನ್ನು ಕಚ್ಚುವವರು ಆತಂಕ (Anxious) ಅಥವಾ ಸಂವೇದನಾಶೀಲ (Sensitive) ಸ್ವಭಾವದವರಾಗಿರುತ್ತಾರೆ.
ಚಿಕ್ಕ ಚಿಕ್ಕ ವಿಷಯಗಳಿಗೂ ಗಾಢವಾಗಿ ಚಿಂತಿಸುತ್ತಾರೆ.
ಕೆಲವೊಮ್ಮೆ ಇವರು ಪರಿಪೂರ್ಣತಾವಾದಿಗಳು (Perfectionists) ಆಗಿರಬಹುದು. ಅಂದರೆ ಎಲ್ಲವೂ ಸರಿಯಾಗಿ ನೆಡೆಯಬೇಕೆಂಬ ಒತ್ತಡ ಉಗುರು ಕಚ್ಚುವ ಅಭ್ಯಾಸವನ್ನು ಹೆಚ್ಚಿಸಬಹುದು.
ಒತ್ತಡದ ಸಂದರ್ಭದಲ್ಲಿ ತಮ್ಮ ಭಾವನೆಯನ್ನು ಚಟದ ಮೂಲಕ ಹೊರಹಾಕುತ್ತಾರೆ.
ನಿಯಂತ್ರಿಸುವುದು ಹೇಗೆ?
ಆತ್ಮಜಾಗೃತಿ (Self-awareness): ಯಾವ ಸಂದರ್ಭಗಳಲ್ಲಿ ಉಗುರನ್ನು ಕಚ್ಚುತ್ತೀರಿ ಎಂಬುದನ್ನು ಗಮನಿಸಿ ಆ ಸಂದರ್ಭದಲ್ಲಿ ಉಗುರು ಕಚ್ಚುವುದನ್ನು ತಪ್ಪಿಸಬೇಕು.
ಹೊಸ ಮಾರ್ಗಗಳು: ಒತ್ತಡದ ವೇಳೆ ಆಳವಾದ ಉಸಿರಾಟ, ಧ್ಯಾನ, ಸಂಗೀತ ಅಥವಾ ಚಿತ್ರಕಲೆ ರೂಢಿಸಿಕೊಳ್ಳಿ. ಇವು ಮನಸ್ಸಿಗೆ ಶಾಂತಿ ನೀಡುತ್ತವೆ.
ಸದಾ ಚಟುವಟಿಕೆಯಿಂದ ಇರುವುದರಿಂದಲೂ ಉಗುರು ಕಚ್ಚುವ ಅಭ್ಯಾಸವನ್ನು ಕಡಿಮೆಗೊಳಿಸಬಹುದು ಎಂದು ಮನೋವಿಜ್ಞಾನ ಪ್ರಾಧ್ಯಾಪಕಿ ಕಾವ್ಯಾ ಅವರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.