ADVERTISEMENT

ತಾಯ್ತನ ಮುಂದೂಡದಿರಿ: ಗರ್ಭಧಾರಣೆಗೆ ಸೂಕ್ತ ವಯಸ್ಸು ಯಾವುದು?

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 7:28 IST
Last Updated 12 ಸೆಪ್ಟೆಂಬರ್ 2025, 7:28 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೃಪೆ: istock images

ವೃತ್ತಿಜೀವನದ ಗುರಿಗಳು, ಆರ್ಥಿಕ ಸ್ಥಿರತೆ ಅಥವಾ ಜೀವನದ ಉದ್ದೇಶಗಳ ಮೇಲೆ ಗಮನ ಕೇಂದ್ರೀಕರಿಸಲು ಗರ್ಭಧಾರಣೆಯನ್ನು ಮುಂದೂಡುತ್ತಿದ್ದೀರಾ? ಇಂದು ಅನೇಕ ದಂಪತಿಗಳು ಇದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಜೀವನದ ಯೋಜನೆಗಳನ್ನು ಸಮಯಕ್ಕೆ ತಕ್ಕಂತೆ ರೂಪಿಸಿಕೊಳ್ಳಬಹುದಾದರೂ, ಫರ್ಟಿಲಿಟಿ (ಗರ್ಭಧಾರಣೆ) ಹಾಗಲ್ಲ. ದೇಹಕ್ಕೆ ತನ್ನದೇ ಆದ ಜೈವಿಕ ಗಡಿಯಾರವಿದೆ. ಸಮಯ ಮೀರಿದರೆ, ದಂಪತಿಗಳಿಗೆ ನೈಸರ್ಗಿಕ ಅಂದರೆ ಸಹಜ ಗರ್ಭಧಾರಣಾ ಸಾಮರ್ಥ್ಯದ ಅವಕಾಶದ ಬಾಗಿಲು ಸದ್ದಿಲ್ಲದೆ ಮುಚ್ಚಿಹೋಗುತ್ತದೆ. ಇದು ಹಲವರ ಅನುಭವಕ್ಕೂ ಬಂದಿದೆ. ಅದರೆ, ಅಷ್ಟೊತ್ತಿಗೆ ಎಲ್ಲವೂ ಕೈ ಜಾರಿರುತ್ತವೆ.

ADVERTISEMENT

ವಯಸ್ಸಿನೊಂದಿಗೆ ಏನು ಬದಲಾಗುತ್ತದೆ?

ತಡವಾದರೂ ಗರ್ಭಧಾರಣೆ ಸಾಧ್ಯವಿದೆ. ಆದರೆ, ಗರ್ಭಧಾರಣೆ ಕಾಲಕ್ಕೆ ತಕ್ಕಂತೆ ಹೇಗೆ ಬದಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು:

  • ಅಂಡಾಣುವಿನ ಗುಣಮಟ್ಟ ಮತ್ತು ಪ್ರಮಾಣ: ಮಹಿಳೆಯರು ಸೀಮಿತ ಅಂಡಾಣುವಿನೊಂದಿಗೆ ಜನಿಸುತ್ತಾರೆ. 20ರ ವಯಸ್ಸಿನ ಆರಂಭದಲ್ಲಿ ಗರ್ಭಧಾರಣಾ ಸಾಮರ್ಥ್ಯವು ಗರಿಷ್ಠವಾಗಿರುತ್ತದೆ, 30ರ ನಂತರ ಕಡಿಮೆಯಾಗಲು ಪ್ರಾರಂಭವಾಗುತ್ತದೆ, 35ರ ನಂತರ ತೀವ್ರವಾಗಿ ಕುಸಿಯುತ್ತದೆ ಮತ್ತು 40ರ ನಂತರ ತೀರಾ ಸೀಮಿತವಾಗುತ್ತದೆ. ಅಂಡಾಣುಗಳ ಸಂಖ್ಯೆ ಮತ್ತು ಅವುಗಳ ಆನುವಂಶಿಕ ಗುಣಮಟ್ಟವು ವಯಸ್ಸು ಹೆಚ್ಚಿದಂತೆಲ್ಲಾ ಕಡಿಮೆಯಾಗುತ್ತದೆ. ಇದು ಗರ್ಭಧಾರಣೆ ಮತ್ತು ಗರ್ಭಾವಸ್ಥೆಯ ಫಲಿತಾಂಶಗಳ ಮೇಲೆ ಪರಿಣಾಮ ಬೀರುತ್ತದೆ.

  • ವೀರ್ಯದ ಆರೋಗ್ಯ: ಪುರುಷರಲ್ಲೂ ವಯಸ್ಸಿಗೆ ಸಂಬಂಧಿಸಿದ ಬದಲಾವಣೆಗಳನ್ನು ಕಾಣಬಹುದು. 40ರ ನಂತರ, ವೀರ್ಯದ ಚಲನಶೀಲತೆ, ಸಂಖ್ಯೆ ಮತ್ತು ಡಿಎನ್ಎ ಗುಣಮಟ್ಟ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಇದು ಬಂಜೆತನ, ಗರ್ಭ ಕಟ್ಟುವಿಕೆಯ ಸಮಸ್ಯೆ ಅಥವಾ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಗರ್ಭಧಾರಣೆಗೆ ಸರಿಯಾದ ವಯಸ್ಸು ಯಾವುದು?

ಸಾಮಾನ್ಯವಾಗಿ ಮಹಿಳೆಯರು 25ರಿಂದ 35 ವರ್ಷಗಳ ನಡುವೆ ಗರ್ಭ ಧರಿಸುವ ಗುರಿಯಿಟ್ಟುಕೊಳ್ಳುವುದು ಸೂಕ್ತ ಎಂದು ವೈದ್ಯರಾಗಿ ನಾವು ಶಿಫಾರಸು ಮಾಡುತ್ತೇವೆ. ಆದರೆ ಪುರುಷರು 40ಕ್ಕಿಂತ ಮೊದಲು ಯೋಜಿಸುವುದು ಒಳ್ಳೆಯದು. ಈ ವಯಸ್ಸು ಸಾಮಾನ್ಯವಾಗಿ ನೈಸರ್ಗಿಕ ಗರ್ಭಧಾರಣೆ, ಆರೋಗ್ಯಕರ ಗರ್ಭಾವಸ್ಥೆಗೆ ಪೂರಕವಾಗಿದೆ ಮತ್ತು ಹೀಗೆ ಮಾಡಿದರೆ ಎದುರಾಗುವ ತೊಂದರೆಗಳ ಪ್ರಮಾಣವಂತೂ ಕಡಿಮೆಯಾಗುತ್ತದೆ.

ತಡ ಮಾಡುವುದು ಏಕೆ ಅಪಾಯಕಾರಿ?

ಗರ್ಭಧಾರಣೆಯನ್ನು ಮುಂದೂಡುವ ದಂಪತಿ, ಈ ಕೆಳಗಿನವುಗಳನ್ನು ಅನುಭವಿಸಬೇಕಾಗಬಹುದು:

  • ತಿಂಗಳುಗಟ್ಟಲೆ ಪ್ರಯತ್ನಿಸಿದರೂ ನೈಸರ್ಗಿಕವಾಗಿ ಗರ್ಭಧರಿಸಲು ಕಷ್ಟವಾಗುವುದು

  • ಗರ್ಭಪಾತ ಮತ್ತು ಕ್ರೋಮೋಸೋಮ್ ಅಸಹಜತೆಗಳ ಅಪಾಯ ಹೆಚ್ಚು

  • ಐವಿಎಫ್, ಐಸಿಎಸ್ಐ ಅಥವಾ ದಾನಿಯ ಅಂಡಾಣುಗಳಂತಹ ಸುಧಾರಿತ ಚಿಕಿತ್ಸೆಗಳ ಅಗತ್ಯತೆ

  • ಪದೇ ಪದೇ ವಿಫಲವಾಗುವ ಗರ್ಭಧಾರಣೆ ಪ್ರಯತ್ನಗಳಿಂದ ಭಾವನಾತ್ಮಕ ಒತ್ತಡ

ದಂಪತಿಗಳು ಹೇಗೆ ತಯಾರಿ ಮಾಡಿಕೊಳ್ಳಬಹುದು?

ವೈಯಕ್ತಿಕ ಅಥವಾ ವೃತ್ತಿಪರ ಕಾರಣಗಳಿಗಾಗಿ ಗರ್ಭಧಾರಣೆಯನ್ನು ಮುಂದೂಡುವ ದಂಪತಿಗಳಿಗೆ, ಫರ್ಟಿಲಿಟಿಯನ್ನು ರಕ್ಷಿಸಲು ಮತ್ತು ನಂತರ ಆರೋಗ್ಯಕರ ಗರ್ಭಾವಸ್ಥೆಯ ಸಾಧ್ಯತೆಗಳನ್ನು ಹೆಚ್ಚಿಸಲು ಕೆಲವು ಯೋಜನಾಬದ್ಧ ಕ್ರಮಗಳನ್ನು ತೆಗೆದುಕೊಳ್ಳಬಹುದು:

  • ಫರ್ಟಿಲಿಟಿ ರಕ್ಷಣೆ: 20ರ ವಯಸ್ಸಿನ ಉತ್ತರಾರ್ಧದಲ್ಲಿ ಅಥವಾ 30ರ ಆರಂಭದಲ್ಲಿ ಅಂಡಾಣು ಅಥವಾ ವೀರ್ಯವನ್ನು ಫ್ರೀಜ್ ಮಾಡುವುದರಿಂದ ನಂತರದ ದಿನಗಳಲ್ಲಿ ಉತ್ತಮ ಅವಕಾಶಗಳನ್ನು ಒದಗಿಸಬಹುದು.

  • ಫರ್ಟಿಲಿಟಿ ಆರೋಗ್ಯ ಪರಿಶೀಲಿಸಿ: ಎಎಂಎಚ್ (ಮಹಿಳೆಯರಿಗೆ) ಮತ್ತು ಸೆಮೆನ್‌ ಅನಾಲಿಸಿಸ್‌ (ಪುರುಷರಿಗೆ) ರೀತಿಯ ಸರಳ ಪರೀಕ್ಷೆಗಳು ನಿಮ್ಮ ಸಂತಾನೋತ್ಪತ್ತಿ ಆರೋಗ್ಯದ ಸ್ಪಷ್ಟ ಚಿತ್ರಣ ಒದಗಿಸಬಹುದು.

  • ಜೀವನಶೈಲಿ ನಿರ್ವಹಣೆ: ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ, ಮತ್ತು ಒತ್ತಡ ಕಡಿಮೆಗೊಳಿಸುವಿಕೆ, ಕಾಲಾನಂತರದಲ್ಲೂ ಫರ್ಟಿಲಿಟಿ ಸಾಧ್ಯತೆಯನ್ನು ಹೆಚ್ಚಿಸಬಹುದು.

ಕುಟುಂಬವನ್ನು ಆರಂಭಿಸಲು 'ಪರಿಪೂರ್ಣ' ಕ್ಷಣ ಎಂಬುದು ಯಾವತ್ತೂ ಇಲ್ಲ. ಆದರೆ, ಪ್ರಕೃತಿ ಅತ್ಯಂತ ಹೆಚ್ಚು ಬೆಂಬಲ ನೀಡುವ ಅವಕಾಶವೊಂದು ಇದ್ದೇ ಇರುತ್ತದೆ. ಈ ಜೈವಿಕ ವಾಸ್ತವಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಮತ್ತು ಸಮಯೋಚಿತ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ, ದಂಪತಿಗಳು ತಮ್ಮ ಜೀವನದ ಗುರಿಗಳು ಮತ್ತು ತಾಯ್ತನದ ಕನಸುಗಳ ನಡುವೆ ಸಮತೋಲನ ಕಂಡುಕೊಳ್ಳಬಹುದು. ಜಾಗೃತಿ ಮತ್ತು ಯೋಜಿತ ಸಿದ್ಧತೆಯಿಂದ ಇದು ಸಾಧ್ಯ.

ಲೇಖಕರು: ನ್ಯಾಷನಲ್ ಸ್ಟ್ರಾಟಜಿ ಗ್ರೂಪ್ ಡೈರೆಕ್ಟರ್ ಮತ್ತು ಸೀನಿಯರ್ ಕ್ಲಿನಿಕಲ್ ಡೈರೆಕ್ಟರ್ (ಫರ್ಟಿಲಿಟಿ ಸ್ಪೆಷಲಿಸ್ಟ್), ನೋವಾ ಐವಿಎಫ್ ಫರ್ಟಿಲಿಟಿ, ಕೋರಮಂಗಲ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.