ಎಐ ಚಿತ್ರ
ಮನುಷ್ಯನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ನಿರಂತರವಾಗಿ ಬದಲಾವಣೆಯನ್ನು ಕಾಣುತ್ತಿರುತ್ತಾನೆ ಎಂದು ಮನ:ಶಾಸ್ತ್ರದ ಅಧ್ಯಯನಗಳು ಹೇಳುತ್ತವೆ. ಪೀಳಿಗೆಯಿಂದ ಪೀಳಿಗೆಗೆ ದೈಹಿಕವಾಗಿ, ಮಾನಸಿವಾಗಿ ಹಾಗೂ ಸಾಮಾಜಿಕವಾಗಿ ಬದಲಾವಣೆಯಾಗುವುದು ಸಾಮಾನ್ಯದ ಸಂಗತಿಯಾಗಿದೆ. ಮನುಷ್ಯ ದೈಹಿಕ ಬದಲಾವಣೆಗಳಿಗೆ ಹೊಂದಿಕೊಂಡರೂ ಮಾನಸಿಕ ಬದಲಾವಣೆಗಳಿಗೆ ಹೊಂದಿಕೊಳ್ಳುವುದಕ್ಕೆ ಸಮಯ ಇಡಿಯುತ್ತದೆ.
ಪ್ರತಿಯೊಂದು ಪೀಳಿಗೆಯಲ್ಲಿಯೂ ಕಾಲದಿಂದ ಕಾಲಕ್ಕೆ ವ್ಯಕ್ತಿಗಳ ಜೀವನ ಶೈಲಿ, ಆಲೋಚನಾ ಕ್ರಮಗಳು, ಮೌಲ್ಯಗಳು, ಕಲಿಕಾ ವಿಧಾನಗಳು, ಬದುಕಿನ ಗುರಿಗಳು ಹಾಗೂ ಅವಶ್ಯಕತೆಗಳು ನಿರಂತರವಾಗಿ ಬದಲಾಗುತ್ತಿರುತ್ತವೆ.
ಪ್ರಸ್ತುತದ ಸಮಾಜದಲ್ಲಿ ಹೊಸ ಹೆಸರುಗಳು, ಹೊಸ ಗುಣಲಕ್ಷಣಗಳು, ಹೊಸ ಬದಲಾವಣೆಗಳಾಗಿರುವುದನ್ನು ಗಮನಿಸಬಹುದು.
ವಿವಿಧ ಪೀಳಿಗೆಗಳು ಯಾವುವು?
ಮಿಲೇನಿಯಲ್ ಪೀಳಿಗೆ (Millennials):
1980 ರಿಂದ 1995ರ ನಡುವೆ ಜನಿಸಿದವರು ಈ ಪೀಳಿಗೆಯವರಾಗಿದ್ದಾರೆ. ಇವರು ತಂತ್ರಜ್ಞಾನವನ್ನು ಅಳವಡಿಸಿಕೊಂಡ ಮೊದಲ ಪೀಳಿಗೆಯವರು. ಶಿಕ್ಷಣ, ಉದ್ಯೋಗ, ಹಾಗೂ ಜಾಗತೀಕರಣವು ಇವರ ಬದುಕಿನಲ್ಲಿ ಪ್ರಮುಖ ಪಾತ್ರವಹಿಸಿದೆ.
ಮಾನಸಿಕ ಸಮಸ್ಯೆಗಳು:
ಈ ಪೀಳಿಗೆಯವರಲ್ಲಿ ಖಿನ್ನತೆ, ಆತಂಕ, ಒತ್ತಡ, ಕಿರಿಕಿರಿ, ವೃತ್ತಿಪರತೆಯ ಒತ್ತಡಗಳು ಹಾಗೂ ಸಾಮಾಜಿಕ ಒಂಟಿತನ ಕಾಡುತ್ತವೆ ಎಂದು ಮನಃಶಾಸ್ತ್ರ ಹೇಳುತ್ತದೆ.
ಪರಿಹಾರಗಳು:
ಅರಿವಿನ ವರ್ತನಾ ಚಿಕಿತ್ಸೆ, ಸ್ವ-ಕಾಳಜಿ, ಸಕಾರಾತ್ಮಕ ಆಲೋಚನೆಯುಳ್ಳವರೊಂದಿಗೆ ಹೆಚ್ಚು ಸಮಯ ಕಳೆಯುವುದು, ವ್ಯಕ್ತಿಗಳನ್ನು ಮುಖಾಮುಖಿ ಭೇಟಿಯಾಗುವುದು ಹಾಗೂ ವೃತಿಪರರಿಂದ ಸಲಹೆಗಳನ್ನು ಪಡೆಯಬಹುದು.
ಜನರೇಷನ್ Z (Gen Z):
1996 ರಿಂದ 2010ರ ನಡುವೆ ಜನಿಸಿದವರು ಜನರೇಷನ್ Zಗೆ ಸೇರುತ್ತಾರೆ. ಇವರನ್ನು ’ಡಿಜಿಟಲ್ ನೆಟಿವ್ಸ್’ ಎಂದೇ ಗುರುತಿಸಲಾಗುತ್ತದೆ. ಈ ಪೀಳಿಗೆಯವರು ಅಂತರ್ಜಾಲ, ಸ್ಮಾರ್ಟ್‌ಫೋನ್, ಸಾಮಾಜಿಕ ಮಾಧ್ಯಮವಿಲ್ಲದೆ ಬದುಕುವುದು ಸ್ವಲ್ಪ ಮಟ್ಟಿಗೆ ಕಷ್ಟ. ಇವರ ಜೀವನ ಶೈಲಿ ತಂತ್ರಜ್ಞಾನ, ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಸೃಜನಶೀಲತೆಗಳ ಮೇಲೆ ಪ್ರಭಾವ ಬೀರುತ್ತದೆ.
ಮಾನಸಿಕ ಸಮಸ್ಯೆಗಳು:
ಈ ಪೀಳಿಗೆಯವರಲ್ಲಿ ಖಿನ್ನತೆ (Depression) ಮತ್ತು ಆತಂಕ (Anxiety), ಸೈಬರ್‌ಬುಲ್ಲಿಂಗ್, ಹೋಲಿಕೆ ಸಂಸ್ಕೃತಿ, ವ್ಯಕ್ತಿಗಳೊಂದಿಗೆ ನಿರಂತರ ಸಂಪರ್ಕದಿಂದ ಒತ್ತಡ, ಕೆಲಸ ಮತ್ತು ವೃತ್ತಿಜೀವನದ ಒತ್ತಡ, ಪ್ರತ್ಯೇಕತೆ (Isolation) ಮತ್ತು ಒಂಟಿತನ ಕಾಡುತ್ತದೆ.
ಪರಿಹಾರಗಳು:
ಅರಿವಿನ ವರ್ತನಾ ಚಿಕಿತ್ಸೆ, ಮೈಂಡ್‌ಫುಲ್‌ನೆಸ್ ಆಧಾರಿತ ಚಿಕಿತ್ಸೆಗಳು, ಮುಖಾಮುಖಿ ಭೇಟಿ, ವೃತಿಪರರಿಂದ ಸಲಹೆಗಳನ್ನು ಪಡೆಯಬಹುದು.
ಜನರೇಷನ್ ಆಲ್ಫಾ (Gen Alpha):
2010ರ ನಂತರ ಜನಿಸಿದ ಮಕ್ಕಳು ಈ ಪೀಳಿಗೆಗೆ ಸೇರುತ್ತಾರೆ. ಈ ಪೀಳಿಗೆಯು ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್, ಮತ್ತು ಡಿಜಿಟಲ್ ಶಿಕ್ಷಣಗಳಂತಹ ತಂತ್ರಜ್ಞಾನ ಅಭಿವೃದ್ದಿಯ ಸಮಯದಲ್ಲಿ ಬೆಳೆದಿದ್ದಾರೆ. ಇವರಿಗೆ ತಂತ್ರಜ್ಞಾನ ಮೇಲೆ ಹೆಚ್ಚಿನ ಅವಲಂಬನೆ ಇರುತ್ತದೆ.
ಮಾನಸಿಕ ಸಮಸ್ಯೆಗಳು:
Gen Alpha ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಮಾನಸಿಕ ಸಮಸ್ಯೆಗಳೆಂದರೆ ಪರದೆಯ ಸಮಯದಿಂದ (Screen Time) ಉಂಟಾಗುವ ಆತಂಕ, ಕಲಿಕೆಯ ಒತ್ತಡ ಮತ್ತು ಸಂಬಂಧಗಳ ಕೊರತೆಯಿಂದ ಕಾಡುವ ಒಂಟಿತನ.
ಇದಕ್ಕೆ ಪರಿಹಾರಗಳು:
ಪರದೆ ಸಮಯವನ್ನು ಸೀಮಿತಗೊಳಿಸುವುದು, ಮೈಂಡ್‌ಫುಲ್‌ನೆಸ್‌ನಂತಹ ತಂತ್ರಗಳನ್ನು ಕಲಿಸುವುದು, ಹೊರಗೆ ಆಟವಾಡುವುದು ಅಥವಾ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರೋತ್ಸಾಹಿಸುವುದು.
ಜನರೇಷನ್ ಬೀಟಾ (2025) :
2025 ರ ನಂತರ ಜನಿಸುವ ಮಕ್ಕಳನ್ನು ಜನರೇಷನ್ ಬೀಟಾ ಪೀಳಿಗೆ ಎಂದು ಕರೆಯುತ್ತಾರೆ. ಇವರು ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್ ಮತ್ತು ಡಿಜಿಟಲ್ ಜಗತ್ತಿನಲ್ಲೇ ಬೆಳೆದಿರುವ ಪೀಳಿಗೆಯಾಗಿರುವುದರಿಂದ, ಇವರು ಭವಿಷ್ಯದ ತಂತ್ರಜ್ಞಾನ ಆಧಾರಿತ ಸಮಾಜದ ರೂಪುರೇಷೆ ಗಳನ್ನು ನಿರ್ಧರಿಸುವರು.
ಮಾನಸಿಕ ಸಮಸ್ಯೆಗಳು:
ಈ ಪೀಳಿಗೆಯವರಲ್ಲಿ ಆತಂಕ, ಮೌಲ್ಯ ರಹಿತವಾಗಿರುವುದು, ಕೌಶಲಗಳ ಕೊರತೆ, ನಿರಂತರ ಡಿಜಿಟಲ್ ಅವಲಂಬನೆ ಮತ್ತು AI ಮೇಲೆ ಅತಿಯಾದ ಭರವಸೆ ಇರುತ್ತದೆ. ಇದರಿಂದಾಗಿ ಇವರಲ್ಲಿ ಸೃಜನಶೀಲತೆ ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಕುಗ್ಗಿ ಹೋಗುತ್ತವೆ ಎಂದು ಅಧ್ಯಯನಗಳು ಹೇಳಿವೆ.
ಇದಕ್ಕೆ ಪರಿಹಾರಗಳು:
ಭಾವನಾತ್ಮಕ ಬುದ್ಧಿಮತ್ತೆ (EQ) ಹೆಚ್ಚಿಸುವುದು,ಪರದೆ ಸಮಯವನ್ನು ಸೀಮಿತಗೊಳಿಸುವುದು, ಕುಟುಂಬದೊಂದಿಗೆ ಬೆರೆಯುವಂತೆ ನೋಡಿಕೊಳ್ಳುವುದು ಹಾಗೂ ಆಟಗಳಲ್ಲಿ ಅವರನ್ನು ತೊಡಗಿಸುವುದು ಬಹಳ ಮುಖ್ಯ.
ಹೀಗೆ ಪೀಳಿಗೆಯಿಂದ ಪೀಳಿಗೆಗೆ ಅನೇಕ ವ್ಯತ್ಯಾಸಗಳು, ಬದಲಾವಣೆಗಳು ಹಾಗೂ ಹೊಸತನಗಳು ಕಂಡುಬರುತ್ತವೆ. ಇವು ಮನುಕುಲದ ಬದಲಾವಣೆಗಳಿಗೆ ಸಾಕ್ಷಿ ಎಂದೇ ಹೇಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.