
ಮನೆಯಲ್ಲಿ ಸಾಕಿದ ಬೆಕ್ಕು ಕಚ್ಚಿ ಮಹಿಳೆಯೋರ್ವರು ರೇಬಿಸ್ ರೋಗಕ್ಕೆ ತುತ್ತಾಗಿ ಮರಣ ಹೊಂದಿದ ಘಟನೆ ಕೆಲವು ತಿಂಗಳುಗಳ ಹಿಂದೆ ಪತ್ರಿಕೆಯಲ್ಲಿ ವರದಿಯಾಗಿತ್ತು. ಹೌದು, ರೇಬಿಸ್ ಒಂದು ಮಾರಣಾಂತಿಕ ರೋಗ. ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನ ಈ ರೋಗದಿಂದ ಮರಣ ಹೊಂದುತ್ತಿದ್ದಾರೆ.
ರೇಬಿಸ್ ಒಂದು ಪ್ರಾಣಿಜನ್ಯ ರೋಗ. ಮುಖ್ಯವಾಗಿ ಮಾಂಸಾಹಾರಿ ಸಸ್ತನಿಗಳಾದ ನಾಯಿ, ಬೆಕ್ಕು, ನರಿ, ಮುಂಗುಸಿ, ತೋಳ ಮೊದಲಾದ ಪ್ರಾಣಿಗಳಲ್ಲಿ ಇದು ಕಂಡು ಬರುತ್ತದೆ. ಸೋಂಕಿತ ಪ್ರಾಣಿಗಳು ಕಚ್ಚಿದಾಗ ವ್ಯಕ್ತಿಗೆ ರೋಗ ಬರುವ ಸಂಭವವಿರುತ್ತದೆ. ಅಮೇರಿಕ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಸೋಂಕಿತ ಬಾವಲಿಗಳು ರೇಬಿಸ್ ಗೆ ಕಾರಣವಾಗಿದ್ದರೆ, ಭಾರತದಲ್ಲಿ ಶೇಕಡಾ 99 ಕ್ಕೂ ಹೆಚ್ಚಿನ ಸಂದರ್ಭಗಳಲ್ಲಿ ನಾಯಿ ಕಡಿತವೇ ಕಾರಣವಾಗಿದೆ.
ರೇಬಿಸ್, ಒಂದು ವೈರಾಣುವಿನಿಂದ ಉಂಟಾಗುವ ರೋಗ. ಈ ರೋಗದಿಂದ ಬಳಲುವ ಪ್ರಾಣಿಗಳ ಲಾಲಾರಸ (ಜೊಲ್ಲು), ಕಣ್ಣೀರು, ಮೂತ್ರ, ವಾಂತಿ ಮತ್ತಿತರ ದೇಹದ ಸ್ರವಿಕೆಯಲ್ಲಿ ವೈರಾಣುಗಳು ಇರುತ್ತವೆ. ರೋಗದಿಂದ ಬಳಲುವ ಪ್ರಾಣಿ ಮನುಷ್ಯನನ್ನು ಕಚ್ಚಿದಾಗ ಅಥವಾ ಗೀರಿದಾಗ ಬಾಯಿಯ ಲಾಲಾರಸದಲ್ಲಿದ್ದ ವೈರಾಣುಗಳು ಅಲ್ಲಿ ಪ್ರವೇಶ ಪಡೆಯುತ್ತವೆ. ಅಲ್ಲಿನ ಅಂಗಾಂಶಗಳಲ್ಲಿ ದ್ವಿಗುಣಗೊಂಡ ವೈರಾಣುಗಳು ನರಗಳ ಮೂಲಕ ಮಿದುಳನ್ನು ತಲುಪುತ್ತವೆ. ಮಿದುಳು ಮತ್ತು ನರಮಂಡಲದ ಮೇಲೆ ಪರಿಣಾಮ ಬೀರುವ ಈ ವೈರಾಣುಗಳು ಪುನಃ ನರಗಳ ಮೂಲಕವೇ ದೇಹದ ಇತರ ಸ್ನಾಯುಗಳು, ಹೃದಯ, ಚರ್ಮ, ಅಡ್ರೆನಲ್ ಗ್ರಂಥಿ ಮತ್ತು ಲಾಲಾರಸ ಗ್ರಂಥಿಗಳನ್ನು ತಲುಪುತ್ತವೆ.
ರೇಬಿಸ್ ರೋಗಕ್ಕೆ ತುತ್ತಾದ ವ್ಯಕ್ತಿಯು ತೀವ್ರತರವಾದ ಸ್ನಾಯು ಸೆಳೆತದಿಂದ ಬಳಲುತ್ತಾನೆ. ಹೈಡ್ರೋಫೋಬಿಯಾ ಎಂದೇ ಗುರುತಿಸಲ್ಪಡುವ ಈ ಕಾಯಿಲೆಯಲ್ಲಿ ನೀರಿನ ಶಬ್ದ ಅಥವಾ ದೃಶ್ಯವೂ ವ್ಯಕ್ತಿಯ ಗಂಟಲು ಹಾಗೂ ಕುತ್ತಿಗೆಯ ಸ್ನಾಯುಗಳನ್ನು ಬಿಗಿಗೊಳಿಸುತ್ತವೆ. ಹಾಗಾಗಿಯೇ ಆತ ನೀರನ್ನು ಕಂಡರೆ ಭಯ ಬೀಳುತ್ತಾನೆ. ಬೆಳಕು ಮತ್ತು ಗಾಳಿಯೂ ಈ ಸ್ನಾಯು ಸೆಳೆತವನ್ನು ಪ್ರಚೋದಿಸಬಲ್ಲದು. ಸಂಪೂರ್ಣ ಸ್ನಾಯುಗಳ ಬಲಹೀನತೆ ಮತ್ತು ಪ್ರಜ್ಞಾಹೀನ ಸ್ಥಿತಿಯನ್ನು ತಲುಪಿ, ಮುಂದಿನ ಮೂರರಿಂದ ಐದು ದಿನಗಳಲ್ಲಿ ವ್ಯಕ್ತಿ ಮರಣ ಹೊಂದುತ್ತಾನೆ. ಹೌದು, ರೇಬಿಸ್‌ಗೆ ಸೂಕ್ತ ಚಿಕಿತ್ಸೆ ಇಲ್ಲ. ಹಾಗಾಗಿಯೇ ನಾವು ಕಾಯಿಲೆ ಬರದಂತೆ ಮುಂಜಾಗ್ರತ ಕ್ರಮಗಳ ಬಗ್ಗೆ ತಿಳಿದಿರಬೇಕು.
ಆದಷ್ಟು ಬೇಗ ಗಾಯವನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಸಾಬೂನನ್ನು ಬಳಸಿ ನಲ್ಲಿಯ ಮೂಲಕ ರಭಸದಿಂದ ಬೀಳುವ ನೀರಿನ ಕೆಳಗೆ ಗಾಯವನ್ನಿರಿಸಿ ಸುಮಾರು ಹದಿನೈದು ನಿಮಿಷಗಳವರೆಗೆ ಸ್ವಚ್ಛಗೊಳಿಸುವುದು ಮುಖ್ಯ. ಈ ರೀತಿ ಮಾಡುವುದರಿಂದ ಅಲ್ಲಿರುವ ವೈರಾಣುಗಳು ನರಗಳ ಮೂಲಕ ದೇಹವನ್ನು ಪ್ರವೇಶಿಸುವ ಮೊದಲೇ ನಶಿಸಿ ಹೋಗುತ್ತವೆ. ನಂತರ ಸಮಯ ವ್ಯಯ ಮಾಡದೇ ಹತ್ತಿರದ ಆಸ್ಪತ್ರೆಗೆ ವ್ಯಕ್ತಿಯನ್ನು ಕರೆದೊಯ್ಯಬೇಕು. ಅಲ್ಲಿ ವೈದ್ಯರು ವೈರಾಣುಗಳಿಗೆಂದೇ ಇರುವ ಸೂಕ್ತ ನಂಜುನಿವಾರಕ ದ್ರಾವಣಗಳನ್ನು ಬಳಸಿ ಗಾಯವನ್ನು ಮತ್ತೊಮ್ಮೆ ಸ್ವಚ್ಛಗೊಳಿಸುತ್ತಾರೆ. ಈ ಗಾಯಗಳನ್ನು ಹೊಲಿಗೆ ಹಾಕಿ ಮುಚ್ಚದಿರುವುದು ಹೆಚ್ಚು ಸೂಕ್ತ. ದೊಡ್ಡ ಗಾಯಗಳಿದ್ದು, ತೀವ್ರ ರಕ್ತ ಸ್ರಾವವಿದ್ದಾಗ ಮಾತ್ರವೇ ರೇಬಿಸ್ ಇಮ್ಮುನೋಗ್ಲೋಬ್ಯುಲಿನ್ ದ್ರಾವಣವನ್ನು ಗಾಯದ ಮೇಲೆ ಸಿಂಪಡಿಸಿ ಆದಷ್ಟು ಕಡಿಮೆ ಹೊಲಿಗೆಗಳನ್ನು ಬಳಸಿ ಗಾಯವನ್ನು ಮುಚ್ಚುತ್ತಾರೆ. ನಂತರ ಗಾಯದ ತೀವ್ರತೆ, ಗಾತ್ರ, ಅದು ದೇಹದ ಯಾವ ಭಾಗದಲ್ಲಿದೆ ( ಕುತ್ತಿಗೆ, ಮುಖ ಹಾಗೂ ಕೈಗಳ ಮೇಲೆ ಆದ ಗಾಯವು ಹೆಚ್ಚು ಅಪಾಯ) ಎಂಬ ಅಂಶಗಳನ್ನು ಗಮನಿಸಿ ವೈದ್ಯರು ಲಸಿಕೆ ಮತ್ತು ರೇಬಿಸ್ ಇಮ್ಯುನೋಗ್ಲೋಬ್ಯುಲಿನ್ ಚುಚ್ಚುಮದ್ದನ್ನು ಸೂಚಿಸುತ್ತಾರೆ. ಅವೆರಡನ್ನೂ ತಪ್ಪದೆ ಹಾಕಿಸಿಕೊಳ್ಳುವುದು ಬಹಳ ಮುಖ್ಯ. ಸಾಮಾನ್ಯವಾಗಿ ಐದು ಲಸಿಕೆಗಳನ್ನು (0,1, 3, 14 ಮತ್ತು 28ನೇ ದಿನ) ಹಾಕಲಾಗುತ್ತದೆ. ಹಿಂದಿನಂತೆ ಹೊಟ್ಟೆಯ ಭಾಗದಲ್ಲಿ ಚರ್ಮದ ಕೆಳಗೆ ಕೊಡುವ ಚುಚ್ಚುಮದ್ದುಗಳು ಈಗ ಬಳಕೆಯಲ್ಲಿಲ್ಲ. ಈಗ ಕೈಗಳಿಗೆ ಲಸಿಕೆಯನ್ನು ಕೊಡಲಾಗುತ್ತದೆ. ಲಸಿಕೆಯ ಬಗೆ ಮತ್ತು ಕಂಪೆನಿಯನ್ನು ಆಧರಿಸಿ ಲಸಿಕೆಯ ಪ್ರಮಾಣ ಮತ್ತು ಸಂಖ್ಯೆಯಲ್ಲಿ ತುಸು ವ್ಯತ್ಯಾಸವಿರಬಹುದು.
ನಾಯಿಗಳ ಆರೈಕೆಯಲ್ಲಿ ತೊಡಗಿ ಅವುಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವವರು, ಪಶುವೈದ್ಯರ ಸಹಾಯಕರು, ರೇಬಿಸ್ ಲಸಿಕೆ ತಯಾರಿಕಾ ಘಟಕದಲ್ಲಿ ಕಾರ್ಯನಿರ್ವಹಿಸುವವರು, ಕಾಡುಗಳಲ್ಲಿ ಕಾರ್ಯ ನಿರ್ವಹಿಸುವ ಪ್ರಕೃತಿ ಶಾಸ್ತ್ರಜ್ಞರು ರೇಬಿಸ್ ಲಸಿಕೆಯನ್ನು ಮೊದಲೇ ಹಾಕಿಸಿಕೊಳ್ಳುವುದು ಉತ್ತಮ. ಆ ಕ್ಷೇತ್ರದಲ್ಲಿ ಉದ್ಯೋಗವನ್ನು ಮುಂದುವರೆಸುತ್ತಿದ್ದ ಸಂದರ್ಭದಲ್ಲಿ ಅವರು ಬೂಸ್ಟರ್ ಚುಚ್ಚುಮದ್ದನ್ನೂ ವೈದ್ಯರ ಸಲಹೆಯ ಮೇರೆಗೆ ಹಾಕಿಸಿಕೊಳ್ಳಬೇಕಾಗುತ್ತದೆ.
ಮುದ್ದಿಗಾಗಿ ನಾಯಿ ಬೆಕ್ಕುಗಳನ್ನು ಸಾಕಿರುವವರು ಕಡ್ಡಾಯವಾಗಿ ಅವುಗಳಿಗೆ ಪಶುವೈದ್ಯರಲ್ಲಿ ಕರೆದೊಯ್ದು ರೇಬಿಸ್ ಲಸಿಕೆಯನ್ನು ನಿಯಮಿತವಾಗಿ ಹಾಕಿಸಬೇಕು. ಅವು ಬೀದಿ ನಾಯಿಗಳ ಸಂಪರ್ಕಕ್ಕೆ ಬರದಂತೆ ಆದಷ್ಟು ಎಚ್ಚರವಹಿಸಬೇಕು.
ಅಪರಿಚಿತ ನಾಯಿ/ ಬೆಕ್ಕು/ ಪ್ರಾಣಿ ಕಚ್ಚಿದಾಗ ಅಥವಾ ಗೀರಿದಾಗ ಲಸಿಕೆ ಕಡ್ಡಾಯ.
ರೇಬಿಸ್ ಲಸಿಕೆಯನ್ನು ಹಾಕಿಸಿಕೊಂಡ ನಾಯಿ ಕಚ್ಚಿದಾಗಲೂ ನೀವು ಲಸಿಕೆಯನ್ನು ಹಾಕಿಸಿಕೊಳ್ಳುವುದು ಒಳ್ಳೆಯದು. ಒಂದು ವೇಳೆ ಆ ನಾಯಿಯು ಮುಂದಿನ ಹತ್ತು ದಿನಗಳವರೆಗೂ ಆರೋಗ್ಯವಾಗಿದ್ದಲ್ಲಿ ನೀವು ವೈದ್ಯರಲ್ಲಿ ಚರ್ಚಿಸಿ ಲಸಿಕೆಯನ್ನು ನಿಲ್ಲಿಸಬಹುದು. ರೇಬಿಸ್ ಒಂದು ಗಂಭೀರ ಮತ್ತು ಮಾರಣಾಂತಿಕ ರೋಗ. ನಾಯಿ ಕಡಿತಕ್ಕೊಳಗಾದಾಗ ಲಸಿಕೆ ಹಾಕಿಸಿಕೊಳ್ಳಲು ಯಾವುದೇ ಸಬೂಬು ಹೇಳದಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.