ADVERTISEMENT

ಸಂಕ್ರಾಂತಿ: ಎಳ್ಳು ಆಚರಣೆಗಷ್ಟೇ ಸೀಮಿತವಲ್ಲ, 'ಆರೋಗ್ಯ ಪಾಲನಾ' ಪದ್ಧತಿಯೂ ಹೌದು

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 14:00 IST
Last Updated 11 ಜನವರಿ 2026, 14:00 IST
<div class="paragraphs"><p>ಎಳ್ಳು</p></div>

ಎಳ್ಳು

   

ಚಿತ್ರ ಕೃಪೆ: ಗೆಟ್ಟಿ

ಚಳಿಗಾಲ ಆರಂಭವಾಗುತ್ತಿದ್ದಂತೆ ವಾತಾವರಣದಲ್ಲಿ ತಾಪಮಾನ ಕಡಿಮೆಯಾಗುತ್ತದೆ. ಇದರಿಂದಾಗಿ ಮಾನವನ ದೇಹದಲ್ಲಿ ಜೈವಿಕ ಬದಲಾವಣೆಗಳಾಗುತ್ತವೆ. ಪೋಷಣಾ ಶಾಸ್ತ್ರದ ಪ್ರಕಾರ, ಚಳಿಗಾಲ ಕೇವಲ ಋತುಮಾನದ ಬದಲಾವಣೆಯಾಲ್ಲ. ಇದು ದೇಹಕ್ಕೆ ಶಾಖ ನೀಡಬೇಕಾದ ಸಮಯವಾಗಿದೆ. 

ADVERTISEMENT

ಭಾರತದ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಗಮನಿಸಿದರೆ, ಚಳಿಗಾಲದ ಆಗಮನವು ಎಳ್ಳಿನ ಸುಗ್ಗಿಯೊಂದಿಗೆ ಪ್ರಾರಂಭವಾಗುತ್ತದೆ. ಎಳ್ಳು ಕೇವಲ ಅಲಂಕಾರಿಕ ಪದಾರ್ಥವಲ್ಲ. ಈ ಪುಟ್ಟ ಬೀಜದಲ್ಲಿ ಚಳಿಗಾಲದ ಸಮಸ್ಯೆಗಳನ್ನು ಎದುರಿಸುವ ಪೌಷ್ಟಿಕಾಂಶಗಳ ನಿಧಿಯೇ ಅಡಗಿದೆ. ಜನವರಿಯಲ್ಲಿ ಆಚರಿಸಲಾಗುವ ಮಕರ ಸಂಕ್ರಾಂತಿ ಹcಬ್ಬದಲ್ಲಿ ಎಳ್ಳನ್ನು ಕೇವಲ ಆಚರಣೆ ಸಲುವಾಗಿ ಮಾತ್ರ ಬಳಸುವುದಿಲ್ಲ. ಅದೊಂದು ಹಳೆಯ ಕಾಲದ 'ಆರೋಗ್ಯ ಪಾಲನಾ' ಪದ್ಧತಿಯಾಗಿದೆ.

ಶಾಖ ಒದಗಿಸುವ ಶಕ್ತಿ ಕೇಂದ್ರ

ಎಳ್ಳು ಉತ್ತಮ ಗುಣಮಟ್ಟದ ಫ್ಯಾಟಿ ಆಸಿಡ್ಸ್ ಮತ್ತು ಪ್ರೋಟೀನ್‌ಗಳ ಮೂಲವಾಗಿದೆ. ಚಳಿಗಾಲದಲ್ಲಿ ದೇಹವು ಹೆಚ್ಚಿನ ಶಾಖವನ್ನು ಉತ್ಪಾದಿಸಲು ಅಧಿಕ ಶಕ್ತಿಯನ್ನು ವ್ಯಯಿಸುತ್ತದೆ. ಹಾಗಾಗಿ ಎಳ್ಳು ಸೇವನೆಯಿಂದ ಎಳ್ಳಿನಲ್ಲಿರುವ ಅಪರೂಪದ ಫ್ಯಾಟಿ ಆಸಿಡ್ಸ್ ದೇಹಕ್ಕೆ ನಿರಂತರ ಶಕ್ತಿಯನ್ನು ನೀಡುತ್ತವೆ. ಇದರಿಂದಾಗಿ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಆಲಸ್ಯ ಮತ್ತು ಜಡತ್ವವನ್ನು ನಿವಾರಿಸುತ್ತದೆ.

ಎಳ್ಳಿನಲ್ಲಿರುವ 'ಸೀಸಮಿನ್' ಮತ್ತು 'ಸೀಸಮೋಲಿನ್' ಎಂಬ ಸಂಯುಕ್ತಗಳು ಬಲಿಷ್ಠ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿವೆ. ಬೆಲ್ಲದೊಂದಿಗೆ ಎಳ್ಳನ್ನು ಸೇವಿಸುವುದರಿಂದ ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚಾಗುತ್ತದೆ. ಇದು ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಿ, ರಕ್ತಕ್ಕೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುತ್ತದೆ. ಎಳ್ಳಿನಲ್ಲಿರುವ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕವು ಕೀಲು ನೋವು ಮತ್ತು ಬೆನ್ನಿನ ಬಿಗಿತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಚರ್ಮ ಒಣಗುವ ವಿರುದ್ಧ ರಕ್ಷಣೆ

ಚಳಿಗಾಲದಲ್ಲಿ ಗಾಳಿಯ ತೇವಾಂಶ ಕಡಿಮೆ ಇರುವುದರಿಂದ ಚರ್ಮ ಮತ್ತು ಉಸಿರಾಟದ ನಾಳಗಳು ಒಣಗುತ್ತವೆ. ಎಳ್ಳಿನಲ್ಲಿರುವ ನೈಸರ್ಗಿಕ ತೈಲಗಳು ದೇಹಕ್ಕೆ ಒಳಗಿನಿಂದ 'ಲೂಬ್ರಿಕೇಶನ್' ಅಥವಾ ಮೃದುತ್ವವನ್ನು ನೀಡುತ್ತವೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಆರೋಗ್ಯಕರ ಕೊಬ್ಬಿನಾಂಶದ ಕೊರತೆ ಉಂಟಾದಾಗ ಚರ್ಮ ಒಣಗುವುದು ಮತ್ತು ತುರಿಕೆ ಉಂಟಾಗುತ್ತದೆ.  

ಎಳ್ಳು ಚರ್ಮದಲ್ಲಿ ತೇವಾಂಶವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ಉಸಿರಾಟದ ಸಮಸ್ಯೆಗಳನ್ನು ನಿವಾರಿಸಲು ನೆರವಾಗುತ್ತದೆ. ಏಕೆಂದರೆ ಮೂಗಿನಲ್ಲಿರುವ ಒಣ ಲೋಳೆಯ ಪೊರೆಗಳು ಗಾಳಿಯಲ್ಲಿರುವ ವೈರಸ್ ಮತ್ತು ಬ್ಯಾಕ್ಟೀರಿಯಾಗಳನ್ನು ತಡೆಯುವಲ್ಲಿ ವಿಫಲವಾಗುತ್ತವೆ. ಇದರಿಂದ ಸೋಂಕುಗಳು ತಗಲುವ ಸಾಧ್ಯತೆ ಹೆಚ್ಚಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಕೀಲುಗಳ ನಡುವಿನ ಘರ್ಷಣೆಯನ್ನು ತಡೆಯಲು ಎಳ್ಳು ಸಹಾಯ ಮಾಡುತ್ತದೆ. ಚಳಿಯಿಂದಾಗಿ ಕೀಲುಗಳಲ್ಲಿನ ದ್ರವವು ಕುಗ್ಗಬಹುದು. ಆದರೆ ಎಳ್ಳಿನಲ್ಲಿರುವ ತಾಮ್ರ ಮತ್ತು ಕ್ಯಾಲ್ಸಿಯಂ ಅಂಶಗಳು ಮೂಳೆಯ ಸಾಂದ್ರತೆ ಮತ್ತು ಕೀಲುಗಳ ಆರೋಗ್ಯವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ಮಾನವರಿಗೆ ರಕ್ಷಣೆ ಒದಗಿಸುವ ಹಬ್ಬಗಳು

ಸೂರ್ಯನ ಪಥ ಬದಲಾವಣೆ ಅನ್ನುವುದು ಮಕರ ಸಂಕ್ರಾಂತಿಯ ಸಂಕೇತ. ಆದರೆ ಈ ಬದಲಾವಣೆ ನಡೆಯುವುದು ಚಳಿಗಾಲದ ಶುಷ್ಕತೆ ಗರಿಷ್ಠ ಮಟ್ಟದಲ್ಲಿದ್ದಾಗ. ರೋಗನಿರೋಧಕ ಶಕ್ತಿ ಅತ್ಯಂತ ಕಡಿಮೆ ಇರುವ ಈ ಸಮಯದಲ್ಲಿ, ದೇಹಕ್ಕೆ ಅಗತ್ಯವಿರುವ ಹೆಚ್ಚಿನ ಖನಿಜಾಂಶಗಳನ್ನು ಎಳ್ಳು ಸೇವನೆಯ ಸಂಪ್ರದಾಯವು ಒದಗಿಸುತ್ತದೆ. ಜನವರಿಯ ಈ ಸುಗ್ಗಿ ಹಬ್ಬಗಳು ವರ್ಷದ 'ರೀಸೆಟ್ ಬಟನ್'ನಂತೆ ಕಾರ್ಯನಿರ್ವಹಿಸುತ್ತವೆ. ಈ ಹಬ್ಬಗಳಲ್ಲಿ ತಯಾರಿಸುವ ಆಹಾರಗಳ ಮೂಲಕ ಸತು, ಸೆಲೆನಿಯಮ್ ಮತ್ತು ಮೆಗ್ನೀಸಿಯಮ್ ದೇಹಕ್ಕೆ ಸೇರುತ್ತವೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಟಿ-ಜೀವಕೋಶಗಳ ಉತ್ಪಾದನೆಗೆ ಬಹಳ ಮುಖ್ಯ. 

ಋತುಮಾನಕ್ಕೆ ಅನುಗುಣವಾಗಿ ಹಿರಿಯರು ಸೂಚಿಸಿದ ಆಹಾರ ಪದ್ಧತಿಗಳನ್ನು ನಾವು ನಿರ್ಲಕ್ಷಿಸಿದರೆ ನಮ್ಮ ದೇಹಕ್ಕೆ ಏನಾಗುತ್ತದೆ ಎಂಬುದನ್ನು ನೋಡೋಣ.

  • ಚಯಾಪಚಯ ಕ್ರಿಯೆಯ ಕುಂಠಿತ: ಧಾನ್ಯಗಳಲ್ಲಿ ಅಡಗಿರುವ ಶಾಖೋತ್ಪನ್ನ ಮಾಡುವ ಕೊಬ್ಬಿನಾಂಶ ದೇಹಕ್ಕೆ ಸಿಗದಿದ್ದಾಗ, ದೇಹವು ಶಕ್ತಿಯನ್ನು ಉಳಿಸಲು ತನ್ನ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರ ಪರಿಣಾಮವಾಗಿ ನಿರಂತರ ಆಯಾಸ, ಉತ್ಸಾಹದ ಕೊರತೆ ಕಾಡುತ್ತದೆ. ಚಳಿಗಾಲದ ತಿಂಗಳುಗಳಲ್ಲಿ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಕಷ್ಟವಾಗಬಹುದು. 

  • ಮೂಳೆ ಮತ್ತು ಖನಿಜಾಂಶಗಳ ಸವಕಳಿ: ಚಳಿಗಾಲದಲ್ಲಿ ಸೂರ್ಯನ ಬೆಳಕು ಕಡಿಮೆ ಇರುವುದರಿಂದ ದೇಹದಲ್ಲಿ ವಿಟಮಿನ್ ಡಿ ಪ್ರಮಾಣ ಕಡಿಮೆಯಾಗುತ್ತದೆ. ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ವಿಟಮಿನ್ ಡಿ ಅತ್ಯಗತ್ಯ. ಇದರ ಕೊರತೆಯಾದಾಗ ದೇಹವು ರಕ್ತದಲ್ಲಿನ ಕ್ಯಾಲ್ಸಿಯಂ ಮಟ್ಟವನ್ನು ಸರಿದೂಗಿಸಲು ಮೂಳೆಗಳಿಂದ ಕ್ಯಾಲ್ಸಿಯಂ ಪಡೆಯಲು ಪ್ರಾರಂಭಿಸುತ್ತದೆ. ಎಳ್ಳು ಸಸ್ಯ ಜನ್ಯ ಕ್ಯಾಲ್ಸಿಯಂನ ಅತ್ಯುತ್ತಮ ಮೂಲವಾಗಿದ್ದು, ಮೂಳೆಗಳ ಈ ಸವಕಳಿಯನ್ನು ತಡೆಯಲು ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ಡಿಗೆ ಮಾತ್ರೆಗಳನ್ನು ಅವಲಂಬಿಸುವ ಬದಲು, ಪ್ರತಿದಿನ ಕನಿಷ್ಠ 30 ಗ್ರಾಂ ಎಳ್ಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ

ಲೇಖಕರು: ಸುಪರ್ಣಾ ಮುಖರ್ಜಿ, ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯಟಿಕ್ಸ್, ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.