ADVERTISEMENT

ಗರ್ಭಿಣಿಯರಲ್ಲಿ ಸ್ಟ್ರೆಚ್‌ಮಾರ್ಕ್‌: ಪರಿಹಾರ ಏನು?

ಡಾ.ವೀಣಾ ಎಸ್‌ ಭಟ್ಟ‌
Published 27 ಜನವರಿ 2023, 23:15 IST
Last Updated 27 ಜನವರಿ 2023, 23:15 IST
   

1. ನನಗೆ 27 ವರ್ಷ. ಮೊದಲ ಬಾರಿಗೆ ಗರ್ಭಿಣಿಯಾಗಿದ್ದೇನೆ. ಈಗ ಏಳು ತಿಂಗಳು ನಡೆಯುತ್ತಿದೆ. ನನಗೆ ಮುಖದಲ್ಲಿ ಕಪ್ಪುಕಲೆಗಳು, ಮೊಡವೆ ಜೊತೆಗೆ ಹೊಟ್ಟೆ, ತೊಡೆಗಳಲ್ಲಿ ಸ್ಟ್ರೆಚ್‌ ಮಾರ್ಕ್ ಆಗುತ್ತಿದೆ. ನಾನು ತೋರಿಸುತ್ತಿರುವ ಆಸ್ಪತ್ರೆಯಲ್ಲಿ ಏನೂ ಔಷಧ ಹೇಳಿಲ್ಲ. ಬರೀ ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಮಾತ್ರೆ ತೆಗೆದುಕೊಳ್ಳಲು ಹೇಳಿದ್ದಾರೆ. ಈ ಕಲೆಗಳು ಹೀಗೆ ಉಳಿದು ಬಿಡುತ್ತವೆಯೋನೊ ಎಂಬ ಆತಂಕ. ಇದನ್ನು ತಡೆಗಟ್ಟಬಹುದೇ?

ಉಮಾ, ಬೆಂಗಳೂರು.

ಉತ್ತರ: ಉಮಾ ಅವರೇ ಗರ್ಭಧಾರಣೆಯ ಅವಧಿಯಲ್ಲಿ ಮುಖದಲ್ಲಿ ಕಲೆ, ಮೊಡವೆ, ಚರ್ಮದಲ್ಲಿ ಸ್ಟ್ರೆಚ್‌ಮಾರ್ಕ್‌ಗಳಂತಹ ಬದಲಾವಣೆಗಳು ಸಾಮಾನ್ಯ. ಗರ್ಭಿಣಿಯಾಗಿದ್ದಾಗ ದೇಹದಲ್ಲಿ ಮೆಲನೋಸೈಟ್ ಸ್ಟಿಮ್ಯೂಲೇಟಿಂಗ್ ಮತ್ತು ಪ್ರೊಜೆಸ್ಟ್ರಾನ್ ಹಾರ್ಮೋನುಗಳು ಹೆಚ್ಚಾಗುವ ಕಾರಣ, ಈ ರೀತಿ ಚರ್ಮದ ಮೇಲೆ ಕಲೆಗಳು ಉಂಟಾಗುತ್ತವೆ. ಈ ಹಾರ್ಮೋನುಗಳ ಪ್ರಭಾವದಿಂದ ಸಿಬೇಶಿಯಸ್ ಗ್ರಂಥಿಗಳು ಹೆಚ್ಚು ಪ್ರಚೋದಿಸಲ್ಪಟ್ಟು ಅದರ ಸ್ರಾವ ಹೆಚ್ಚಾಗುತ್ತದೆ. ಈ ಕಾರಣದಿಂದಲೂ ಮೊಡವೆಗಳು ಹೆಚ್ಚು ಕಾಣಿಸಿಕೊಳ್ಳು ತ್ತವೆ. ಈ ಬಗ್ಗೆ ನೀವು ತುಂಬಾ ಚಿಂತಿಸಬೇಡಿ. ಆದರೆ, ನೀವು ಚರ್ಮದ ಸಮಸ್ಯೆ ಪರಿಹಾರಕ್ಕಾಗಿ ಬಳಸುವ ಮುಲಾಮು, ಕ್ರೀಮ್, ಇತ್ಯಾದಿಗಳ ಬಗ್ಗೆ ಎಚ್ಚರಿಕೆವಹಿಸಬೇಕು. ಏಕೆಂದರೆ ಇವುಗಳನ್ನು ಅತಿಯಾಗಿ ಬಳಸಿದಾಗ, ಕೆಲವೊಮ್ಮೆ ಗರ್ಭಸ್ಥ ಶಿಶುವಿಗೂ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ.

ADVERTISEMENT

ಉದಾಹರಣೆಗೆ: ಟ್ರೆಟಿನಾಯಿನ್, ಹೈಡ್ರೋಕ್ವಿನೋನ್, ಅರ್ಬುಟಿನ್ ಇತ್ಯಾದಿ ಅಂಶಗಳಿರುವ ಮುಲಾಮುಗಳನ್ನು ಗರ್ಭಿಣಿಯರು ಬಳಸುವುದು ಬೇಡ. ಕ್ಲಿಂಡಾಮೈಸಿನ್, ಬೆಂಜಾಯಿಲ್ ಪರಾಕ್ಸೈಡ್, ನಿಯಾಮೈಸಿನ್‌ನಂತಹ ಅಂಶಗಳಿರುವ ಕ್ರೀಮ್‌ಗಳನ್ನು ಬಳಸಬಹುದು. ಆದರೂ ವೈದ್ಯರ ಸಲಹೆ ಇಲ್ಲದೇ ಯಾವುದೇ ಔಷಧಗಳನ್ನು ಬಳಸಬೇಡಿ.

ನೀವು ಹೀಗೆ ಮಾಡಬಹುದು: ನಿತ್ಯ 3 ರಿಂದ 4 ಲೀಟರ್ ನೀರು ಕುಡಿಯಿರಿ. ದಿನಕ್ಕೆ 3 ರಿಂದ 4 ಬಾರಿ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಳ್ಳಿ. ರಾತ್ರಿ 7 ರಿಂದ 8 ತಾಸು ಚೆನ್ನಾಗಿ ನಿದ್ರಿಸಿ. ಅಗತ್ಯವೆನಿಸಿದರೆ ಮನೆ ಬಳಕೆಯ ಶುದ್ಧ ಅರಿಶಿನ, ಶ್ರೀಗಂಧ, ಸೌತೆಕಾಯಿ ರಸ, ಆಲುಗಡ್ಡೆ ರಸ.. ಇಂಥವುಗಳನ್ನು ಚರ್ಮಕ್ಕೆ ಲೇಪಿಸಬಹುದು.

ಸ್ಟ್ರೆಚ್‌ಮಾರ್ಕ್, ಶೇ 90ರಷ್ಟು ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಗರ್ಭಸ್ಥ ಶಿಶುವಿನ ಬೆಳವಣಿಗೆಯಿಂದ ಗರ್ಭಕೋಶ ಹಿಗ್ಗುವುದರಿಂದ ಹೊಟ್ಟೆಯಭಾಗ ಹಿಗ್ಗುತ್ತದೆ. ಇದರಿಂದ ಚರ್ಮದಲ್ಲಿರುವ ಕೊಲಾಜೆನ್ ಮತ್ತು ಇಲಾಸ್ಟಿನ್ ಎಂಬ ಅಂಶಗಳು ಅತಿಯಾಗಿ ಹಿಗ್ಗಿ ತುಂಡರಿಸಿದಾಗ ಸ್ಟ್ರೆಚ್‌ಮಾರ್ಕ್‌ಗಳು ಉಂಟಾಗುತ್ತವೆ. ಒಂದೇ ಸಮನೆ ತೂಕ ಹೆಚ್ಚಾದಾಗಲೂ ತೊಡೆ, ಪೃಷ್ಟ, ಸ್ತನಗಳು ಹಾಗೂ ತೋಳಿನ ಭಾಗದಲ್ಲಿ ಇಂಥ ಗುರುತುಗಳು ಕಂಡುಬರಬಹುದು.

ಗರ್ಭಿಣಿಯರಲ್ಲಿ ಆರಂಭದಲ್ಲಿ ಸ್ಟ್ರೆಚ್‌ಮಾರ್ಕ್‌ ಗೆರೆಯ ರೀತಿ ಕಾಣಿಸುತ್ತದೆ. ಹೆರಿಗೆ ವೇಳೆ ನೇರಳೆ ಅಥವಾ ಕಂದುಬಣ್ಣಕ್ಕೆ ತಿರುಗಬಹುದು. ಹೆರಿಗೆಯಾದ ನಂತರ ಬಿಳಿಬಣ್ಣಕ್ಕೆ ತಿರುಗುತ್ತವೆ. 6 ರಿಂದ 12 ತಿಂಗಳವರೆಗೆ ಈ ರೀತಿ ಗುರುತುಗಳಿರುತ್ತವೆ. ನಂತರ ನಿಧಾನವಾಗಿ ಕಡಿಮೆಯಾಗುತ್ತವೆ. ಆದರೆ, ಸಂಪೂರ್ಣ ಮಾಯವಾಗು ವುದಿಲ್ಲ. ಇದು ಕೆಲವರಲ್ಲಿ ಹೆಚ್ಚು, ಇನ್ನು ಕೆಲವರಲ್ಲಿ ಕಡಿಮೆ ಇರುತ್ತದೆ. ಆದರೆ ಇದನ್ನು ತಡೆಗಟ್ಟಲು ಸಾಧ್ಯ ವಿಲ್ಲ. ಏಕೆಂದರೆ ಚರ್ಮದಲ್ಲಿನ ಇಲಾಸ್ಟಿನ್ ಫೈರ್ಸ್‌ ಅಂಶ ಕಡಿಮೆ ಇದ್ದಾಗ ಸ್ಟ್ರೆಚ್‌ಮಾರ್ಕ್ ಹೆಚ್ಚಾಗುತ್ತದೆ. ಇದನ್ನು ಕಡಿಮೆ ಮಾಡಲು ಕ್ರೀಮ್‌, ಲೋಷನ್‌ಗಳಿವೆ ಎಂದು ಜಾಹಿರಾತುಗಳಲ್ಲಿ ತೋರಿಸುತ್ತಾರೆ. ಆದರೆ ಅವುಗಳಿಂದ ಹೆಚ್ಚು ಪ್ರಯೋಜನವಿಲ್ಲ. ಚರ್ಮದ ಆರ್ದ್ರತೆ ಸ್ವಲ್ಪಮಟ್ಟಿಗೆ ಕಾಪಾಡಬಹುದಷ್ಟೇ.

ಚರ್ಮದ ಆರ್ದ್ರತೆ ಕಾಪಾಡಲು ಮೇಲೆ ತಿಳಿಸಿದಂತೆ ನಿತ್ಯ ನೀರು ಕುಡಿಯಬೇಕು. ಹೆಚ್ಚು ವಿಟಮಿನ್ ‘ಸಿ‘ ಅಂಶವಿರುವ ಸೊಪ್ಪು, ತರಕಾರಿ, ಹಣ್ಣುಗಳನ್ನು ತಿನ್ನುಬೇಕು. ಆಗಾಗ್ಗೆ ಉತ್ತಮ ಕೊಬ್ಬರಿಎಣ್ಣೆ/ಎಳ್ಳೆಣ್ಣೆ/ಬಾದಾಮಿ ಎಣ್ಣೆಯನ್ನು ನಿಧಾನವಾಗಿ ಚರ್ಮಕ್ಕೆ ಮಸಾಜ್ ಮಾಡಬಹುದು. ಇದರಿಂದ ಸ್ವಲ್ಪಮಟ್ಟಿಗೆ ಸ್ಟ್ರೆಚ್‌ಮಾರ್ಕ್ ತೀವ್ರತೆ ಕಡಿಮೆ ಮಾಡಬಹುದು. ಆದರೆ, ಸಂಪೂರ್ಣ ತಡೆಗಟ್ಟಲು ಅಥವಾ ಗುಣಪಡಿಸಲು ಸಾಧ್ಯವಿಲ್ಲ.

2. ನಾನು ಮದುವೆಯಾಗುವ ಪ್ರೇಯಸಿಗೆ ಋತುಸ್ರಾವದ ಸಮಸ್ಯೆ ಇದೆ. ಆಕೆಗೆ 2 ತಿಂಗಳು 7 ದಿನವಾದರೂ ಮುಟ್ಟಾಗಿಲ್ಲ. ಆಕೆ ತೂಕ 45 ಕೆಜಿ ಇದೆ. ನಿಯಮಿತ ಋತುಸ್ರಾವಕ್ಕೆ ಪರಿಹಾರ ತಿಳಿಸಿ.

ಹೆಸರು, ಊರು ತಿಳಿಸಿಲ್ಲ.

ಉತ್ತರ: ನಿಮ್ಮ ಪ್ರೇಯಸಿಗೆ ಋತುಸ್ರಾವ ಆಗಿಲ್ಲವೆಂದರೆ ಅವರಲ್ಲಿ ಪಿ.ಸಿ.ಓ.ಡಿ (ಪಾಲಿಸಿಸ್ಟಿಕ್ ಓವೆರಿಯನ್ ಡಿಸೀಸ್) ಸಮಸ್ಯೆ ಇರಬಹುದು. ಶೇ 20ರಷ್ಟು ಮಹಿಳೆಯರಲ್ಲಿ ತೆಳ್ಳಗಿದ್ದರೂ ಪಿ.ಸಿ.ಓ.ಡಿ ಸಮಸ್ಯೆ ಇರಬಹುದು. ಯಾವುದಕ್ಕೂ ನೀವು ತಜ್ಞವೈದ್ಯರನ್ನು ಭೇಟಿಯಾಗಿ. ಸಲಹೆ ಹಾಗೂ ಸೂಚನೆಯನ್ನು ಪಡೆದುಕೊಳ್ಳಿ.

ಪಿ.ಸಿ.ಓ.ಡಿ ಚಿಕಿತ್ಸೆಯಲ್ಲಿ ಜೀವನಶೈಲಿ ಬದಲಾವಣೆ ಬಹಳ ಮುಖ್ಯ. ಈ ಬಗ್ಗೆ ಹಿಂದಿನ ಅಂಕಣಗಳಲ್ಲಿ ತಿಳಿಸಲಾಗಿದೆ. ಪ್ರತಿದಿನ ಕನಿಷ್ಟ ಒಂದು ಗಂಟೆ ದೈಹಿಕ ಚಟುವಟಿಕೆ, ಹೆಚ್ಚು ಪ್ರೊಟೀನ್‌ಯುಕ್ತ ಹಾಗೂ ಕಡಿಮೆ ಶರ್ಖರಪಿಷ್ಠ ಇರುವ ಆಹಾರ ಸೇವಿಸಿ. ರಾತ್ರಿ 6 ರಿಂದ 8 ತಾಸು ನಿದ್ರೆ ಮಾಡಬೇಕು. ಇವೆಲ್ಲಾ ಬಹಳ ಮುಖ್ಯ. ಸಾಧ್ಯವಾದಷ್ಟು ಬೇಗನೆ ಚಿಕಿತ್ಸೆ ಪಡೆಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.