ADVERTISEMENT

ಸ್ಪಂದನ | ಥೈರಾಯ್ಡ್‌ ಮಾತ್ರೆ ಸೇವನೆ ನಿಲ್ಲಿಸಿದರೆ ತೊಂದರೆಯೇ?

ಡಾ.ವೀಣಾ ಎಸ್‌ ಭಟ್ಟ‌
Published 26 ಏಪ್ರಿಲ್ 2025, 0:30 IST
Last Updated 26 ಏಪ್ರಿಲ್ 2025, 0:30 IST
   

ಥೈರಾಯ್ಡ್‌ ಮಾತ್ರೆ ಸೇವನೆ ನಿಲ್ಲಿಸಿದರೆ ತೊಂದರೆಯೇ?

ಪ್ರತಿ ಬಾರಿ ಮುಟ್ಟಾದಾಗಲೂ ಏಳೆಂಟು ದಿನ ಸ್ರಾವವಾಗುತ್ತದೆ.  25 ಮೈಕ್ರೋಗ್ರಾಂ ಥೈರಾಯ್ಡ್‌ ಮಾತ್ರೆ ತೆಗೆದುಕೊಳ್ಳುತ್ತಿದ್ದೆ. ಗರ್ಭಿಣಿಯಾಗಿದ್ದಾಗ ನಿಲ್ಲಿಸಿಬಿಟ್ಟೆ. ಈಗ ಮಗುವಿಗೆ ಮೂರು ವರ್ಷಗಳು. ಸ್ಕ್ಯಾನಿಂಗ್ ಮಾಡಿಸಿದ್ದೇನೆ. ಗರ್ಭಕೋಶದಲ್ಲಿ ಏನೂ ತೊಂದರೆ ಇಲ್ಲವೆಂದು ಹೇಳಿದ್ದಾರೆ. ಈಚೆಗೆ ತುಂಬಾ ದಪ್ಪಗಾಗುತ್ತಿದ್ದೇನೆ. ಸುಸ್ತು, ಆಯಾಸ ಉಂಟಾಗಿದ್ದು, ಗರ್ಭಕೋಶವನ್ನೇ ತೆಗೆಸಿಬಿಡಬೇಕೇ?

ಗರ್ಭಕೋಶ ತೆಗೆಸುವ ಅಗತ್ಯವಿಲ್ಲ. ತೂಕ ಹೆಚ್ಚುತ್ತಿರುವುದಕ್ಕೆ ಥೈರಾಕ್ಸಿನ್ ಮಾತ್ರೆ ಸೇವನೆ ನಿಲ್ಲಿಸಿರುವುದು ಕಾರಣವಾಗಿರಬಹುದು. ಯಾವುದಕ್ಕೂ ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟಿ.ಎಸ್.ಎಚ್ ಅಂದರೆ ಥೈರಾಯ್ಡ್‌ ಸ್ಟಿಮ್ಯೂಲೆಟಿಂಗ್ ಹಾರ್ಮೋನನ್ನು ಲ್ಯಾಬ್‌ನಲ್ಲಿ ಪರೀಕ್ಷಿಸಿಕೊಳ್ಳಿ. ಹೈಪೋಥೈರಾಯ್ಡ್‌ ಸಮಸ್ಯೆ ಮುಂದುವರಿದಿರಬಹುದು.  

ADVERTISEMENT

‌40 ವರ್ಷಗಳ ನಂತರ ಮುಟ್ಟಿನ ತೊಂದರೆಗಳಿಗಾಗಿ ವೈದ್ಯರ ಹತ್ತಿರ ಬಂದಾಗಲೇ ಥೈರಾಯ್ಡ್ ಸಮಸ್ಯೆ ಪತ್ತೆಯಾಗುವುದು. ಥೈರಾಯ್ಡ್ ಗ್ರಂಥಿ ಕುತ್ತಿಗೆಯ ಮುಂಭಾಗದಲ್ಲಿರುವ ಅತಿ ಮುಖ್ಯ ನಿರ್ನಾಳ ಗ್ರಂಥಿಯಾಗಿದ್ದು, ಇದರಿಂದ ಸ್ರವಿಸುವ ಹಾರ್ಮೋನುಗಳು ಹಲವು ಚಯಾಪಚಯ ಕ್ರಿಯೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಹಾರ್ಮೋನುಗಳಲ್ಲಿ ಥೈರಾಕ್ಸಿನ್ ಟಿ4 ಮತ್ತು ಟ್ರೈಅಯೋಡೋ ಥೈರೋನಿನ್ ಟಿ3 ಮುಖ್ಯವಾದವುಗಳು. ಇವುಗಳ ಸ್ರಾವವನ್ನು ಮುಂಭಾಗದ ಪಿಟ್ಯುಟರಿಯಿಂದ ಉತ್ಪಾದನೆಯಾಗುವ ಟಿ.ಎಸ್.ಹೆಚ್ ಹಾರ್ಮೋನು ನಿಯಂತ್ರಿಸುತ್ತದೆ. ಥೈರಾಯ್ಡ್‌ ಗ್ರಂಥಿಯಿಂದ ಹಾರ್ಮೋನುಗಳು ಹೆಚ್ಚಾಗಿ ಸ್ರವಿಸುತ್ತಿದ್ದರೆ ಟಿ.ಎಸ್.ಎಚ್ ಕಡಿಮೆಯಾಗುತ್ತದೆ. ಥೈರಾಯ್ಡ್‌ ಸ್ರಾವ ಕಡಿಮೆಯಾದಾಗ ಟಿ.ಎಸ್.ಎಚ್. ಹಾರ್ಮೋನ್ ಮಟ್ಟ ಹೆಚ್ಚಾಗುತ್ತದೆ.

ಥೈರಾಯ್ಡ್ ಹಾರ್ಮೋನ್ ಕಡಿಮೆಯಾಗುವುದನ್ನು ಹೈಪೋಥೈರಾಯ್ಡಿಸಂ ಎನ್ನುತ್ತಾರೆ.ಇದರಲ್ಲಿ ಸುಸ್ತು, ಒಣಚರ್ಮ, ತೂಕ ಏರುವಿಕೆ, ಗಂಟು ನೋವು, ಮಲಬದ್ಧತೆ ಅತಿಯಾದ ರಕ್ತಸ್ರಾವ ಇತ್ಯಾದಿ ಉಂಟಾಗಬಹುದು. ಕೆಲವು ಸಂದರ್ಭಗಳಲ್ಲಿ ಥೈರಾಯ್ಡ್ ಸ್ರಾವ ಹೆಚ್ಚಾದಾಗಲೂ ಬೇಗ ಬೇಗನೆ ಮುಟ್ಟಾಗುವುದು. ತಡವಾಗಿ ಮುಟ್ಟಾಗುವುದು, ಕಡಿಮೆ ಮುಟ್ಟಾಗುವುದು ಆಗಬಹುದು. ಜತೆಗೆ ಉದ್ವೇಗ, ಕೈನಡುಕ, ಎದೆಬಡಿತ ಹೆಚ್ಚುವುದು, ತೂಕ ಕಡಿಮೆ ಆಗಬಹುದು. ಥೈರಾಯ್ಡ್‌ ಗ್ರಂಥಿಯ ಸ್ರಾವ ಕಡಿಮೆ ಇದ್ದಾಗಲೂ ಅಥವಾ ಹೆಚ್ಚಿದಾಗಲೂ ಮುಟ್ಟಿನಲ್ಲಿ ಏರುಪೇರು ಆಗುತ್ತದೆ.

ಯಾಕೆಂದರೆ ಅಂಡೋತ್ಪತ್ತಿ ಸರಿಯಾಗಿ ಆಗದೇ ಪ್ರೊಜೆಸ್ಟಿರಾನ್ ಹಾರ್ಮೋನ್ ಕೊರತೆ ಉಂಟಾಗುತ್ತದೆ. ಜೊತೆಗೆ ಪಿಟ್ಯುಟರಿಯಿಂದ ಉತ್ಪತ್ತಿಯಾಗುವ ಅಂಡಾಶಯದ ಕಾರ್ಯಕ್ಕೆ ಅವಶ್ಯವಾದ ಎಫ್.ಎಸ್.ಎಚ್ ಹಾಗೂ ಎಲ್.ಎಚ್. ಹಾರ್ಮೋನುಗಳ ಸ್ರಾವದಲ್ಲೂ ವ್ಯತ್ಯಾಸ ಉಂಟಾಗುತ್ತದೆ. ತಜ್ಞ ವೈದ್ಯರ ನೆರವು ಪಡೆದು, ಥೈರಾಯ್ಡ್‌ ಹಾರ್ಮೋನು ಸ್ರಾವದ ತೊಂದರೆ ಇದೆಯೇ ಎಂದು ತಿಳಿದುಕೊಳ್ಳಿ. ತೊಂದರೆ ಇದ್ದರೆ ಎಲ್‌–ಥೈರಾಕ್ಸಿನ್ ಮಾತ್ರೆಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಿ. ಅದನ್ನು ನಿಯಮಿತವಾಗಿ ಸೇವಿಸಿ.

ಥೈರಾಯ್ಡ್ ಹಾರ್ಮೋನ್ ಉತ್ಪಾದನೆಗೆ ಅಯೋಡಿನ್ ಅಗತ್ಯ ಇರುವುದರಿಂದ ಅಯೋಡಿನ್ಯುಕ್ತ ಉಪ್ಪನ್ನು ಸೇವಿಸಿ. ಹೈಪೋ ಥೈರಾಯ್ಡಿಸಂ ಇದ್ದಲ್ಲಿ ಕ್ಯಾಬೇಜ್, ಬ್ರಕೋಲಿ, ಕಾಲಿಫ್ಲವರ್, ಟರ್ನಿಪ್, ಹಸಿಈರುಳ್ಳಿ ಸೇವಿಸಬೇಡಿ.

ಸೋಯಾ ಸೇವನೆಯೂ ಹೆಚ್ಚು ಬೇಡ. ಜಂಕ್‌ಫುಡ್ ಹಾಗೂ ಕೃತಕ ಪಾನೀಯಗಳ ಸೇವನೆ ಬೇಡ. ರಾತ್ರಿ ಸರಿಯಾಗಿ ಆರರಿಂದ ಎಂಟು ತಾಸು ನಿದ್ದೆ ಮಾಡಿ. ಯೋಗಾಸನದಲ್ಲಿ ಸರ್ವಾಂಗಸನ, ಭುಜಂಗಾಸನ, ಸೇತುಬಂಧಾಸನ, ಮತ್ಸ್ಯಾಸನ ಉಪಯುಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.