ADVERTISEMENT

ಜಿಮ್‌ ಮಾಡದೇ, ಪ್ರೋಟೀನ್ ಶೇಕ್ ಕುಡಿಯದೇ ಹೀಗೆ ತೆಳ್ಳಗಾಗಬಹುದು..ಇಲ್ಲಿದೆ ಟಿಪ್ಸ್

ಪ್ರಜಾವಾಣಿ ವಿಶೇಷ
Published 4 ಫೆಬ್ರುವರಿ 2026, 0:30 IST
Last Updated 4 ಫೆಬ್ರುವರಿ 2026, 0:30 IST
   

ಹೆಚ್ಚುವರಿ ತೂಕವನ್ನು ನಾವು ಇಳಿಸಿಕೊಳ್ಳಲೇಬೇಕು, ಅದರಲ್ಲಿ ಯಾವುದೇ ಅನುಮಾನವೇ ಇಲ್ಲ. ಆದರೆ ನಾವು ಯಾಕೆ ತೆಳ್ಳಗಾಗಬೇಕು? ಒಬ್ಬೊಬ್ಬರದು ಒಂದೊಂದು ಕಾರಣ. ನೋಡಲು ಚೆಂದ ಕಾಣಬೇಕು, ದೈನಂದಿನ ಕೆಲಸ ಕಾರ್ಯಗಳು ಸರಾಗವಾಗಿ ಮಾಡಿಕೊಳ್ಳಲು ಆಗಬೇಕು, ನಾನು ಇಷ್ಟಪಟ್ಟ ಡ್ರೆಸ್‌ ಅನ್ನು ನನಗೆ ಹಾಕಿಕೊಳ್ಳಲು ಅನುಕೂಲವಾಗಬೇಕು ಅಥವಾ ವೆಲ್‌ ಡ್ರೆಸ್ಡ್‌ ಆಗಿ ಇರಬೇಕು, ನನ್ನ ಹುಡುಗ/ಹುಡುಗಿಗೆ ನಾನು ಮ್ಯಾಚ್‌ ಆಗಬೇಕು...ಇವಿಷ್ಟೇ ಕಾರಣವಲ್ಲ, ಇತ್ತೀಚಿನ ದಿನಗಳಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಜನ ತೆಳ್ಳಗೆ ಅಥವಾ ದಪ್ಪಗೆ ಆಗಬೇಕೆಂದು ಬಯಸುತ್ತಿದ್ದಾರೆ. ಉದಾಹರಣೆಗೆ ಯಾವುದೋ ಈವೆಂಟ್‌ ಇದೆ, ಸಿನಿಮಾ–ಧಾರಾವಾಹಿ ಕ್ಯಾರೆಕ್ಟರ್‌ಗೆ ಒಂದು ತಿಂಗಳಲ್ಲಿ 10 ಕೆ.ಜಿ ಹೆಚ್ಚು ಮಾಡಿಕೊಳ್ಳಲೇಬೇಕಿದೆ. ಮುಂದಿನ ತಿಂಗಳು ಅಕ್ಕನ ಮದುವೆ ಇದೆ, ಅಷ್ಟರೊಳಗೆ ಒಂದು ಐದು ಕೆ.ಜಿ ಆದ್ರೂ ಇಳಿಸಿಕೊಳ್ಳಬೇಕು. ಬ್ರೇಸರ್‌ ಹಾಕ್ಕೊಂಡ್ರೆ ಚೆನ್ನಾಗಿರಲ್ಲ, ಅದಕ್ಕ ಸೊಲ್ಪ ಹೊಟ್ಟೆ ಕರಗಿಸಬೇಕು... ಹೀಗೆ ತೂಕ ಇಳಿಸಿಕೊಳ್ಳಲು ಹಾಗೂ ಹೆಚ್ಚಿಸಿಕೊಳ್ಳಲು ಜನಕ್ಕೆ ಹತ್ತಾರು ಕಾರಣಗಳು ಸಿಗುತ್ತವೆ.

ನಿಜವಾಗಿ ಯಾರಿಗೂ ನಮ್ಮ ದೇಹದ ತೂಕ ಎಷ್ಟಿರಬೇಕು, ಯಾಕೆ ಅಷ್ಟಿರಬೇಕು ಎಂಬ ಬಗ್ಗೆ ಮಾಹಿತಿಯೇ ಇಲ್ಲ. ತೂಕ ಕಡಿಮೆ ಮಾಡಿಕೊಳ್ಳುವ ಸಂಬಂಧ, ಕೋಚಿಂಗ್‌ ಮತ್ತು ಕೌನ್ಸೆಲಿಂಗ್‌ಗೆ ನನ್ನ ಬಳಿ ಬರುವ ಬಹುತೇಕರು ಸಹ ಇಂಥದ್ದೇ ಕಾರಣಗಳನ್ನು ಹೇಳುವುದಷ್ಟೇ ಅಲ್ಲ, ತಮಗೆ ಇಂತಿಷ್ಟೇ ತೂಕ ಕಡಿಮೆ ಮಾಡಿಕೊಡಿ, ಅಥವಾ ಇಷ್ಟು ಹೆಚ್ಚು ಮಾಡಿಸಿ ಎಂಬ ಬೇಡಿಕೆಯೊಂದಿಗೆ ವ್ಯವಹಾರಕ್ಕೇ ಇಳಿಯುತ್ತಾರೆ. ಹೊರತಾಗಿ ಯಾರಲ್ಲೂ ವೆಲ್‌ನೆಸ್‌ ಬಗೆಗಿನ ಮಾಹಿತಿ ಹೆಚ್ಚಿಸಿಕೊಳ್ಳುವ, ವೈಜ್ಞಾನಿಕವಾಗಿ ತಮ್ಮ ದೇಹದ ತೂಕವನ್ನು ಇಟ್ಟುಕೊಂಡು ಆರೋಗ್ಯಕರ ಬದುಕನ್ನು ಸಾಗಿಸಬೇಕೆಂಬ ಯಾವ ಬಯಕೆಯೂ ಕಾಣುತ್ತಿಲ್ಲ. ನಿಜವಾಗಿ ನಾವು ತೂಕ ಹೆಚ್ಚಿಸಿಕೊಳ್ಳಬೇಕು ಅಥವಾ ಇಳಿಸಿಕೊಳ್ಳುವುದಕ್ಕಿರುವ ಬಹುಮುಖ್ಯ ಕಾರಣ ನಮ್ಮ ಎತ್ತರ. ನಮ್ಮ ಎತ್ತರಕ್ಕೆ ತಕ್ಕಂತೆ ನಾವು ನಮ್ಮ ದೇಹ ತೂಕವನ್ನು ನಿರ್ವಹಿಸಬೇಕು.

ಆದರೆ, ಜನಕ್ಕೆ ಇದಾವುದೂ ಬೇಕಿಲ್ಲದಿರುವುದು ದುರದೃಷ್ಟಕರ. ಅದಕ್ಕೆ ತಕ್ಕಂತೆಯೇ ವೆಲ್‌ನೆಸ್‌ ಉದ್ಯಮವೂ ದುಡಿಯುತ್ತಿದೆ. ಹೇಳಿಕೇಳಿ ಭಾರತದಲ್ಲಿ ಇದು ವಾರ್ಷಿಕ ₹8 ಲಕ್ಷ ಕೋಟಿಯ ವಹಿವಾಟಿನ ಮಾತು. ‘ಸಮಾಜದ ಆರೋಗ್ಯ ಏನಾದರಾಗಲಿ, ನಮಗೆ ಬ್ಯಸಿನೆಸ್‌ ಬರುತ್ತಲೇ ಇರಬೇಕು’ ಎಂಬ ಮನಃಸ್ಥಿತಿಗೆ ಮಂದಿ ದಪ್ಪ ಆದಷ್ಟೂ ಲಾಭವೇ; ಕುರಿ ಕೊಬ್ಬಿದಷ್ಟೂ ಕಟುಕನಿಗೆ ಲಾಭವಲ್ಲವೇ? ಹೀಗಾಗಿ ದಿನಕ್ಕೊಂದು ಹೆಸರಿನಲ್ಲಿ ವೆಲ್‌ನೆಸ್‌ ಕಂಪನಿಗಳು ಹುಟ್ಟಿಕೊಳ್ಳುತ್ತಿವೆ.

ADVERTISEMENT

ಈಗಂತೂ ಸೋಷಿಯಲ್‌ಮೀಡಿಯಾ ಜಮಾನಾ. ಯಾರ್ಯಾರೋ, ಏನೇನೋ ಅಪ್‌ಲೋಡ್‌ಮಾಡುತ್ತಲೇ ಇರುತ್ತಾರೆ. ಅವರು ಯಾರು, ಆಹಾರ–ಆರೋಗ್ಯ ಮತ್ತು ವೆಲ್‌ನೆಸ್‌ ಕ್ಷೇತ್ರದಲ್ಲಿ ಅವರ ಪರಿಣತಿ ಏನು? ನಿಜಕ್ಕೂ ಅವರು ನೀಡುವ ಸಲಹೆಗಳು ವೈಜ್ಞಾನಿಕವಾಗಿ ಮತ್ತು ವೈದ್ಯಕೀಯವಾಗಿ ಸಾಬೀತಾಗಿದೆಯೇ? ಈ ಯಾವುದರ ಬಗ್ಗೆಯೂ ಅಲ್ಲಿ ವಿವರಗಳಿರುವುದಿಲ್ಲ. ಬಹಳಷ್ಟು ಸಲ ಈ ರೀತಿ ಅವೈಜ್ಞಾನಿಕವಾದ ಸಲಹೆಗಳನ್ನು ಪಾಳಿಸಲು ಹೋಗಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ, ಕೆಲವೊಮ್ಮೆ ಜೀವಕ್ಕೂ ಕುತ್ತು ತಂದುಕೊಂಡ ಉದಾಹರಣೆಗಳಿವೆ. ಹೀಗಾಗಿ ನಿಮಗೆ ನಿಜಕ್ಕೂ ಆರೋಗ್ಯಕರವಾಗಿ ತೂಕ ಕಡಿಮೆ ಮಾಡಿಕೊಳ್ಳುವ ಪ್ರಬಲ ಇಚ್ಛಾಶಕ್ತಿಯಿದ್ದರೆ ಮೊಟ್ಟ ಮೊದಲಿಗೆ ಹೀಗೆ ಕಂಡಕಂಡ ಪದ್ಧತಿಗಳನ್ನು ಪಾಲಿಸುವುದನ್ನು, ಫೇಕ್‌ಅಪ್ಡೇಟ್‌ಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಫಾಲೋ ಮಾಡುವುದನ್ನು ನಿಲ್ಲಿಸಿ. ಇದರಿಂದ ಪ್ರಯೋಜನಕ್ಕಿಂತ ಅಪಾಯವೇ ಹೆಚ್ಚು.

ಇನ್ನು ಈಗಿನ ಜೀವನಕ್ರಮ, ಆಹಾರದ ಅಭಿರುಚಿ ಮತ್ತು ಕೃಷಿಯಲ್ಲಿನ ವಿಪರೀತ ರಾಸಾಯನಿಕ ಕ್ರಾಂತಿಯ ಇತ್ಯಾದಿ ಕಾರಣಗಳಿಂದ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರ ಬೆನ್ನಲ್ಲೇ ನಾನಾ ರೀತಿಯ ಆರೋಗ್ಯ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತಿದೆ. ಇದರಿಂದ ಹೊರಬರಲಾಗದೇ ಜನ ಪರಿತಪಿಸುತ್ತಿದ್ದಾರೆ. ಆರೋಗ್ಯಕರವಾಗಿ ಇರಬೇಕು ಮತ್ತು ತಾವು ಫಿಟ್‌ಎಂಡ್‌ ಫೈನ್‌ ಆಗಿರಬೇಕು ಎಂಬ ಬಯಕೆ ಯಾರಿಗೆ ಇರುವುದಿಲ್ಲ ಹೇಳಿ? ಆದರೆ ಇದಕ್ಕಾಗಿ ಏನು ಮಾಡಬೇಕು ಎಂಬುದು ಬೊಜ್ಜಿನಿಂದ ಬಳಲುತ್ತಿರುವ ಶೇ99 ಮಂದಿಗೆ ಗೊತ್ತಿರುವುದಿಲ್ಲ. ಪರಿಣಾಮ ಬಹಳಷ್ಟು ಮಂದಿ ಗೊಂದಲಕ್ಕೆ ಸಿಲುಕಿರುತ್ತಾರೆ. ಜನರ ಇಂಥ ಗೊಂದಲ ಮತ್ತು ಆತಂಕದ ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿರುವ ಬ್ಯುಸಿನೆಸ್‌ ಮೈಂಡ್‌ಸೆಟ್‌ಗಳು, ‘ಸುಲಭದಲ್ಲಿ ತೂಕ ಕಡಿಮೆ ಮಾಡುವ’ ಹೆಸರಿನಲ್ಲಿ ದಂಧೆಗೆ ಇಳಿದಿದ್ದಾವೆ. ತೂಕ ಕಡಿಮೆ ಮಾಡಿಸುವ ಹೆಸರಿನಲ್ಲಿ ವಿಪರೀತ ಎನ್ನುವ ರೀತಿಯಲ್ಲಿ, ಮೋಸದ ಸ್ಕೀಮ್‌ಗಳು ಸಹ ಮಾರುಕಟ್ಟೆಯನ್ನು ಆಳುತ್ತಿವೆ. ಕೋಟ್ಯಂತರ ಮಂದಿಯನ್ನು ಹೀಗೆ ಸುಲಿಗೆ ಮಾಡಲಾಗುತ್ತಿದೆ. ಜೀವನ ಶಿಸ್ತನ್ನು ಪಾಲಿಸಲು ಸಿದ್ಧರಿಲ್ಲದ ಜನರು ತಾವು, ವರ್ಷಗಳ ನಿರ್ಲಕ್ಷ್ಯ, ಯಾಂತ್ರಿಕ ಮತ್ತು ವಿಲಾಸಿ ಜೀವನ ಕ್ರಮದಿಂದಾಗಿ ಹೆಚ್ಚಿಸಿಕೊಂಡ ದೇಹತೂಕವನ್ನು ಕೆಲವೇ ಕೆಲವು ದಿನಗಳಲ್ಲಿ ದಿಢೀರನೆ ಕಡಿಮೆ ಮಾಡಿಕೊಂಡು ಬಿಡಬೇಕು ಎಂಬ ಹುಚ್ಚು ಹಂಬಲಕ್ಕೆ ಬಿದ್ದು ಇಂಥ ಅಗ್ಗದ ತಂತ್ರಗಳ ಮೊರೆ ಹೊಗುತ್ತಿದ್ದಾರೆ. ಪರಿಣಾಮ ಭಾರಿ ಮೊತ್ತದ ಹಣ ಕಳೆದುಕೊಳ್ಳುವ ಜೊತೆಗೆ ಶಾಶ್ವತ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.

ನೆನಪಿಡಿ, ನಿಮ್ಮ ದೇಹ ತೂಕ ಹೆಚ್ಚಾಗಲು ನಿಮ್ಮ ಜೀವನ ಶೈಲಿ ಮತ್ತು ಆಹಾರ ಪದ್ಧತಿಗಳೇ ಕಾರಣವೇ ಹೊರತೂ ಬೇರೆ ಯಾವುದೂ ಅಲ್ಲ. ಹೀಗಾಗಿ ಅವನ್ನು ಬದಲಿಸಿಕೊಳ್ಳುವುದಷ್ಟೇ ಬೊಜ್ಜಿನ ಸಮಸ್ಯೆಗೆ ಪರಿಹಾರವೇ ಹೊರತೂ ಬೇರೆ ಇನ್ನಾವುದರಿಂದಲೂ ಪ್ರಯೋಜನವಿಲ್ಲ. ಮೊದಲು, ಇಂಥ ಅಗ್ಗದ ತಂತ್ರಗಳ ಮೊರೆ ಹೋಗುವುದು, ವೈಜ್ಞಾನಿಕವಾಗಿ ಸಾಬೀತಾಗದ ಪದ್ಧತಿಗಳನ್ನು ಪಾಲಿಸುವುದು, ಕಂಡ ಕಂಡ ಕಂಪನಿಗಳ ಜಾಹೀರಾತು ಪ್ರಚಾರಕ್ಕೆ ಮಾರು ಹೋಗಿ ಅವರ ಸಲಹೆಯ ಮೇರೆಗೆ ದುಭಾರಿ ವೆಚ್ಚದಲ್ಲಿ ಮನಬಂದಂತೆ ಪ್ರೋಟೀನ್‌–ಸಪ್ಲಿಮೆಂಟ್‌ಗಳನ್ನು ಸೇವಿಸುವುದು, ದೇಹದಂಡನೆ, ಉಪವಾಸ, ಕಡಿಮೆ ತಿನ್ನುವುದು, ವಿಪರೀತ ವ್ಯಾಯಾಮ–ಜಿಮ್‌ಮಾಡುವುದು ಇತ್ಯಾದಿಗಳನ್ನು ಮಾಡುತ್ತಿದ್ದರೆ ತಕ್ಷಣ ನಿಲ್ಲಿಸಿಬಿಡಿ. ಅದಿಲ್ಲದಿದ್ದರೆ ಜೀವಕ್ಕೆ ಇವು ಮಾರಕವಾಗಿಬಿಡಬಹುದು.

ಇವ್ಯಾವುದೂ ಬೇಡ, ತೂಕ ಕಡಿಮೆ ಮಾಡಿಕೊಳ್ಳುವ ಸರಳ ಮತ್ತು ಸುಲಭ ಉಪಾಯವನ್ನು ನಿಮಗೆ ಹೇಳಿಬಿಡುತ್ತೇನೆ. ನಾವು ಯಾವ ಕೆಲಸ ಮಾಡಲಿ, ಮಾಡದೇ ಹೋಗಲಿ ನಮಗೆ ಆರೋಗ್ಯಕರ ದಿನಗಳಲ್ಲಿ ಪ್ರತಿನಿತ್ಯ 1200ರಿಂದ 1500 ಕ್ಯಾಲೋರಿಗಳು ಬೇಕೇ ಬೇಕಾಗುತ್ತದೆ. ನಾವು ಮಧ್ಯಾಹ್ನ ಹಾಗೂ ರಾತ್ರಿ ಮಾಡುವ ಸಾಮಾನ್ಯ ಊಟ ಏನಿಲ್ಲವೆಂದರೂ ತಲಾ 750 ಕ್ಯಾಲೋರಿಗಳಿರುತ್ತವೆ. ಬೆಳಗಿನ ತಿಂಡಿ ಕನಿಷ್ಠವೆಂದರೂ 500 ಕ್ಯಾಲೋರಿ. ಅಂದರೆ ಊಟ ತಿಂಡಿಗಳಿಂದಲೇ 2000 ಕ್ಯಾಲೋರಿ ಅಲ್ಲೇ ಆಯಿತು. ದಿನಕ್ಕೆ 500 ಕ್ಯಾಲೋರಿಯಷ್ಟು ನಮ್ಮ ದೇಹದಲ್ಲಿ ಕೊಬ್ಬಾಗಿ ಸಂಗ್ರಹಗೊಳ್ಳುತ್ತಿದೆ. ಇಷ್ಟಕ್ಕೇ ನಮ್ಮ ಇನ್‌ ಟೇಕ್‌ ನಿಲ್ಲುತ್ತಿಲ್ಲವಲ್ಲ, ಮಧ್ಯದಲ್ಲಿ ಕಾಫಿ–ಟೀ–ಜ್ಯೂಸುಗಳು, ಸಂಜೆ ಪಾನಿಪೂರಿ, ಸ್ನ್ಯಾಕ್ಸ್‌ಗಳು, ಆಗಾಗಾ ಅದೂ ಇದೂ ಎಂದು ಬಾಯಾಡುವುದು... ಇವೆಲ್ಲ ಸೇರಿದರೆ 2500 ಕ್ಯಾಲೋರಿ ನಮ್ಮ ದೇಹದೊಳಕ್ಕೆ ಹೋಗುತ್ತಿದೆ. ಹೀಗಾದರೆ ದೇಹ ದಪ್ಪ ಆಗದೇ ಇನ್ನೇನಾಗುತ್ತೇ?

ಹಾಗಾದರೆ ಇದಕ್ಕೆ ಪರಿಹಾರವೇನು? ಸಿಂಪಲ್‌, ಎರಡು ಊಟ ಮತ್ತು ಒಂದು ತಿಂಡಿಗಳನ್ನು ಬಿಟ್ಟು ಮಧ್ಯದಲ್ಲಿ ಏನನ್ನೂ ತಿನ್ನವುದಿಲ್ಲ ಎಂಬ ಪ್ರತಿಜ್ಞೆ ಕೈಗೊಳ್ಳಿ. ಊಟ–ತಿಂಡಿಗಳನ್ನು 1500 ಕ್ಯಾಲೋರಿಗಿಂತ ಕಡಿಮೆ ಆಗುವಂತೆ ಮರು ರೂಪಿಸಿಕೊಳ್ಳಿ. ಅದು ಹೇಗೆ? ಊಟ–ತಿಂಡಿಯಲ್ಲಿ ಕ್ಯಾಲೋರಿ ಬ್ಯಾಲೆನ್ಸ್‌ ಮಾಡೋದು ಹೇಗೆಂಬುದನ್ನು ಮುಂದಿನ ಕಂತಿನಲ್ಲಿ ತಿಳಿಸುವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.