
ಪ್ರಾತಿನಿಧಿಕ ಚಿತ್ರ
ಬಹಳಷ್ಟು ಜನರ ಸಮಸ್ಯೆ ಏನು ಗೊತ್ತಾ? ಜಿಮ್‌ಮಾಡ್ತಾ ಇದ್ದಾಗ ಫಿಟ್ಟಾಗಿದ್ದೇ, ಜಾಬ್ ಚೇಂಜ್ ಮಾಡಿ, ವೈಟ್‌ಫೀಲ್ಡ್‌ಗೆ ದಿನಾ ಹೋಗಿಬರೋದ್ರಲ್ಲೇ ಸುಸ್ತಾಗುತ್ತೆ, ಟೈಮೂ ಸಿಗಲ್ಲ. ಹೀಗಾಗಿ ಜಿಮ್‌ಬಿಟ್ಟೆ, ಎರಡೇ ತಿಂಗಳಲ್ಲಿ ಮೊದಲಿಗಿಂತ ದಪ್ಪ ಆಗಿಬಿಟ್ಟಿದೀನಿ...
ಪ್ರೋಟೀನ್‌ಶೇಕ್ ಕುಡಿದು ಬಾಡಿ ನಂಬರ್ಸ್ ಎಲ್ಲವನ್ನೂ ಅಕ್ಯೂರೇಟ್ ಮಾಡಿಕೊಂಡಿದ್ದೆ. ಮನೇಲಿ ಸೊಲ್ಪ ಫೈನಾನ್ಷಿಯಲ್ ಪ್ರಾಬ್ಲಮ್ ಆದಾಗಿಂದ ಶೇಕ್ ತಗೋಳ್ಳಕ್ಕೆ ಪಾಕೆಟ್ ಪರ್ಮಿಟ್ ಮಾಡ್ತಿಲ್ಲ. ಹೀಗಾಗಿ ಒಂದೇ ತಿಂಗಳಲ್ಲಿ ಸಿಕ್ಕಾಪಟ್ಟೆ ಹೊಟ್ಟ ಬಂದ್‌ಬಿಟ್ಟಿದೆ.....
ಡಯೆಟ್(?) ಮಾಡ್ತಿದ್ದಾಗ ಎಷ್ಟು ತೆಳ್ಳಗೆ ಬಳುಕ್ತಾ ಇದ್ದೇ ಗೊತ್ತಾ?...ಮದುವೆ ಸೀಸನ್, ಊರಿಗೆ ಓಡಾಟ, ಮನೆಯಲ್ಲಿ ನೆಂಟರು... ಹೋದಲ್ಲೆಲ್ಲಾ ನಾನು ಅದು ತಿನ್ನಲ್ಲ, ಇದು ಬೇಡ, ಡಯಟ್‌ನಲ್ಲಿದೀನಿ ಅಂದ್ರೆ ವಿಚಿತ್ರವಾಗಿ ನೋಡ್ತಾರೆ. ಜತೆಗೆ ಮಗಳು ಬಾಣಂತನಕ್ಕೆ ಬಂದ ಮೇಲಂತೂ ಯಾವುದನ್ನೂ ಸರಿಯಾಗಿ ಮಾಡಿಕೊಳ್ಳಕ್ಕೆ ಆಗದೇ ಸಿಕ್ಕಾಪಟ್ಟೆ ವೇಯ್ಟ್‌ಗೆಯ್ನ್‌ಆಗಿಬಿಟ್ಟಿದೆ...
ಇದು ಒಬ್ಬಿಬ್ಬರ ಸಮಸ್ಯೆ ಅಲ್ಲವೇ ಅಲ್ಲ. ಕೃತಕವಾಗಿ ತೂಕ ಕಡಿಮೆ ಮಾಡಿಕೊಳ್ಳಲು ಹೋದವರ ಎಲ್ಲರಿಗೂ ಇಂಥ ಒಂದಲ್ಲ ಒಂದು ಕಾರಣ ಇದ್ದೇ ಇರುತ್ತೆ. ಏಕೆಂದರೆ ಎಲ್ಲಕ್ಕಿಂತ ಮೊದಲು ಅವರು ದಪ್ಪ ಆಗಿದ್ದೇ ಜೀವನ ಶೈಲಿಯ ಶಿಸ್ತನ್ನು ಮರೆತದ್ದರಿಂದ. ಹಾಗೋ ಹೀಗೋ ಕಷ್ಟಪಟ್ಟು ಒಂದಷ್ಟು ಜಿಮ್‌ಫೀ, ನ್ಯೂಟ್ರಿಷನ್‌ಕ್ಲಬ್‌ಗೆ ಅಂತೆಲ್ಲ ದುಡ್ಡು ಸುರಿದು ಒಂದಷ್ಟು ತೂಕ ಇಳಿಸಿಕೊಂಡಿರುತ್ತಾರೆ. ಆದರೆ ಇಂಥವೆಲ್ಲ ಶಾಶ್ವತ ಅಲ್ಲವೇ ಅಲ್ಲ. ಯಾಕೆ ಗೊತ್ತಾ? ಹೀಗೆ ಬಲವಂತದಿಂದ ದಿಢೀರನೆ ಇಳಿಸಿಕೊಂಡ ತೂಕ ಅದನ್ನು ಬಿಡುತ್ತಿದ್ದಂತೆಯೇ ಅಷ್ಟೇ ಬೇಗ ಬೌನ್ಸ್‌ಆಗಿರುತ್ತೆ.
ಹಾಗಾದರೆ ಜಿಮ್, ಆರ್ಟಿಫಿಷಿಯಲ್ ಡಯಟಿಂಗ್, ಪ್ರೋಟೀನ್ ಶೇಕ್‌ಗಳನ್ನು ಬಿಟ್ಟ ತಕ್ಷಣ ದೇಹದ ತೂಕ ಮತ್ತಷ್ಟು ಹೆಚ್ಚುವುದು ಯಾಕೆ? ನೋಡೋಣ ಬನ್ನಿ.
ಇದನ್ನು ತಿಳಿದುಕೊಳ್ಳೋಕೂ ಮುಂಚೆ, ನಮ್ಮ ದೇಹ ವ್ಯವಸ್ಥೆ ಬಗ್ಗೆ ಸೊಲ್ಪ ಅರಿವು ಬೇಕು. ಮನುಷ್ಯನ ದೇಹ ಅನ್ನೋದು ಈ ಭೂಮಿಯ ಮೇಲಿನ ಅತ್ಯಂತ ನಾಜೂಕಾದ , ಅಷ್ಟೇ ಅತ್ಯದ್ಭುತವಾದ ಎಂಜಿನಿಯರಿಂಗ್ ಕೌತುಕ. ಇದರ ಹಿಂದೆ ಹಲವಾರು ಸಂಕೀರ್ಣ ಹಾರ್ಮೋನ್, ಮೆಟಾಬಾಲಿಸಮ್ ಪ್ರಕ್ರಿಯೆಗಳು ಸದಾ ಕೆಲಸ ಮಾಡುತ್ತಿರುತ್ತವೆ. ಈ ಹಾರ್ಮೋನ್‌ಎಂದರೇನು? ನಮ್ಮ ದೇಹದಲ್ಲಿ ಯಾವುದೇ ಒಂದು ಸಣ್ಣ ಚಟುವಟಿಕೆ ನಡೆಯುವುದೂ, ನಮ್ಮ ಯಾವುದೇ ಅಂಗಾಂಗಗಳು ಕೆಲಸ ಮಾಡೋದು ಹಾರ್ಮೋನುಗಳ ಸ್ರವಿಸುವಿಕೆಯಿಂದ. ಹಾಗೆ ಹಾರ್ಮೋನ್ ಸ್ರವಿಸಿದ ಬಳಿಕ ಅದರಿಂದ ಪ್ರೇರಿತವಾಗಿ ನಾವು ಯಾವುದೇ ಕೆಲಸ ಮಾಡ್ತೀವಲ್ಲ, ಅದಕ್ಕೆ ಶಕ್ತಿ ಬರೋದು ಮೆಟಬಾಲಿಸಮ್–ಅಂದರೆ ಜೀರ್ಣ ಕ್ರಿಯೆಯಿಂದ. ಇವೆರಡೂ ನಾವು ಯಾವ ಸನ್ನಿವೇಶದಲ್ಲಿ, ಯಾವ ಪರಿಸರದಲ್ಲಿ ಜೀವಿಸುತ್ತಿದ್ದೇವೆ ಅನ್ನೋದರ ಮೇಲೆ ಅವಲಂಬಿತ. ಅದನ್ನೇ ನಾವು ವಿಜ್ಞಾನದ ಭಾಷೆಯಲ್ಲಿ ಮೆಟಾಬಾಲಿಕ್ ಅಡಾಪ್ಟೇಶನ್ (Metabolic Adaptation) ಅಂತ ಕರೆಯೋದು. ಒಂದು ರೀತಿಯಲ್ಲಿ ಇದು ದೇಹದ ಬುದ್ಧಿವಂತ ರಕ್ಷಣಾ ಕ್ರಮ. ಬಹುಶಃ ಇದನ್ನು ಹೀಗೆ ಹೇಳಿದರೆ ಅರ್ಥ ಆಗಬಹುದೇನೋ. ನಾವು ಆರ್ಥಿಕವಾಗಿ ಸಬಲರಾಗಿದ್ದರೆ ಕಷ್ಟಕ್ಕೆ ಆಗಲಿ ಅಂತ ಹಣ ಕೂಡಿಡುವುದಾಗಲೀ, ಉಳಿತಾಯ ಮಾಡುವ ಬಗ್ಗೆಯಾಗಲೀ ಯೋಚಿಸುವುದು ಕಡಿಮೆ. ಬಡತನ ಇದ್ದು, ಆರ್ಥಿಕ ಅನಿಶ್ಚಿತತೆ ಇದ್ದಾಗ ಅಕಸ್ಮಾತ್ ಏನಾದ್ರೂ ಆದರೆ ಬೇಕಾಗುತ್ತೆ ಅಂತ ಒಂದಷ್ಟು ಹಣವನ್ನು ಕೂಡಿಟ್ಟಿರುತ್ತೇವೆ. ಹಾಗೆಯೇ ದೇಹವೂ ಸಹ. ಕ್ಯಾಲೋರಿ ನಿರಂತರ ಪೂರೈಕೆ–ಖರ್ಚು ಆಗುತ್ತಿದ್ದಾಗ ಶೇಖರಣೆ ಬಗ್ಗೆ ಯೋಚಿಸಲ್ಲ. ಒಂದೊಮ್ಮೆ ಅನಿಯಮಿತ ಆಹಾರ ಪದ್ಧತಿ ನಮ್ಮದಾಗಿದ್ದಾಗ ಅಥವಾ ಕ್ಯಾಲೋರಿ ಜಾಸ್ತಿ ಖರ್ಚಾಗುತ್ತಿದ್ದಾಗ ಆಪತ್ಕಾಲಕ್ಕೆ ಎಂದು ಸಂಗ್ರಹಕ್ಕೆ ತೊಡಗುತ್ತದೆ ದೇಹ. ಅದೇ ಕೊಬ್ಬು. ಇದು ತಿರುವು ಮುರುವೂ ಆಗುತ್ತದೆ. ಅಂದರೆ ಅಗತ್ಯಕ್ಕಿಂತ ಹೆಚ್ಚು ಕ್ಯಾಲೋರಿ ಪೂರೈಕೆಯಾದಾಗಲೂ ಸಂಗ್ರಹ ಜಾಸ್ತಿ ಆಗುತ್ತೆ. ಇದೇ ದೇಹ ರಕ್ಷಣಾ ವ್ಯವಸ್ಥೆ– ಮೆಟಾಬಾಲಿಕ್ ಅಡಾಪ್ಟೇಶನ್.
ದೀರ್ಘ ಕಾಲದವರೆಗೆ ವ್ಯಾಯಾಮ, ಅಥವಾ ಕಸರತ್ತು ಮಾಡುತ್ತಾ ನಿರಂತರ ಕ್ಯಾಲೊರಿಯನ್ನು ಕರಗಿಸುತ್ತಿದ್ದಾಗ ಮತ್ತು ಆಹಾರದ ಇನ್‌ಟೇಕ್ ಕಡಿಮೆ ಇದ್ದಾಗ ಅದಕ್ಕೆ ತಕ್ಕಂತೆ ದೇಹ ತನ್ನ ಮೆಟಾಬಾಲಿಕ್ ದರವನ್ನು ಕಡಿಮೆ ಮಾಡಿಕೊಂಡಿರುತ್ತದೆ. ಇದನ್ನು adaptive thermogenesis ಎಂದು ಕರೆಯುತ್ತಾರೆ. ಇದೇ ಬೇಸಿಲ್ ಮೆಟಾಬಾಲಿಕ್ ರೇಟ್ (BMR). ಕ್ಯಾಲರಿ ಕರಗುವ ದರ ಎನ್ನಬಹುದು. ಈ ಹಂತದಲ್ಲಿ ಕಡಿಮೆ ಕ್ಯಾಲೊರಿಯಲ್ಲಿ ಬದುಕಲು ದೇಹ “energy conserving mode” ಗೆ ಹೋಗುತ್ತದೆ. ನಮ್ಮ ಮೊಬೈಲ್ ಚಾರ್ಜ್ ಕಡಿಮೆ ಇದ್ದಾಗ ಬ್ಯಾಟರಿ ಸೇವಿಂಗ್ ಮೋಡ್‌ಗೆ ಹೋದಂತೆಯೇ ಇದು ಸಹ. ಇದರ ಜತೆಗೆ ದೇಹದಲ್ಲಿನ ಕೊಬ್ಬನ್ನು ಕರಗಿಸುವ ಎಂಜೈನ್‌ಗಳ ಬಿಡುಗಡೆಯೂ ನಿಧಾನಗೊಳ್ಳುತ್ತವೆ.
ಇಂತಹ ಪರಿಸ್ಥಿತಿಯಲ್ಲಿ ನಾವು ರೂಟೀನ್ ನಿಲ್ಲಿಸಿದರೆ, ಅಂದರೆ ಜಿಮ್, ವಾಕಿಂಗ್ ಇತ್ಯಾದಿ ನಿಲ್ಲಿಸಿದರೆ ಮೆಟಾಬಾಲಿಸಮ್ ಬೇಗ ಏರೋದಿಲ್ಲ — ಆದರೆ ಆಹಾರದ ಪ್ರಮಾಣ ಏರುತ್ತದೆ. ಪರಿಣಾಮ, ದೇಹದಲ್ಲಿ ಕೂಡಲೇ ಕೊಬ್ಬಿನ ಸಂಗ್ರಹಣ ಹೆಚ್ಚುತ್ತದೆ. ಆಗ ತನ್ನಿಂದ ತಾನೇ ವ್ಯಕ್ತಿ ದಪ್ಪಗಾಗುತ್ತ ಹೋಗುತ್ತಾನೆ. ಇನ್ನೂ ಗಮನಾರ್ಹ ಸಂಗತಿ ಎಂದರೆ ತೆಳ್ಳಗಾಗಲು ನಾವು ಅನುಸರಿಸುತ್ತಿದ್ದ ಯಾವುದೇ ಪದ್ಧತಿಗಳಿರಬಹುದು, ಅದು ಜಿಮ್‌ಗೆ ಹೋಗುವುದಾಗಲೀ, ವ್ಯಾಯಾಮ, ಯೋಗ ಇತ್ಯಾದಿ ಮಾಡುವುದರಿಲಿ, ವಾಕಿಂಗ್–ಜಾಗಿಂಗ್ ಇಂಥವುಗಳ ಸಂದರ್ಭದಲ್ಲಿ ನಮ್ಮ ಜೀವನ ಶೈಲಿಯೂ ಶಿಸ್ತುಬದ್ಧವಾಗಿರುತ್ತದೆ. ಜಿಮ್‌ಇನ್‌ಸ್ಟ್ರಕ್ಟರ್, ಯೋಗ ಗುರು, ಜಾಗಿಂಗ್ ಕೋಚ್... ಇಂಥವರು ಆಯಾ ತೂಕ ಇಳಿಕೆಯ ಪದ್ಧತಿಗಳ ತರಬೇತಿಯ ಜತೆಜತೆಗೇ ನಿಮ್ಮ ದೇಹಕ್ಕೆ ಹೊಂದುವ, ಅಗತ್ಯ ಆಹಾರ ಕ್ರಮಗಳು, ನಿದ್ದೆ–ನೀರು ಇತ್ಯಾದಿಗಳ ಬಗೆಗಿನ ಟೈಮ್‌ಟೇಬಲ್‌ಗಳನ್ನು ನೀಡಿ ಕಡ್ಡಾಯವಾಗಿ ಹೀಗೆಯೇ ಪಾಲಿಸಬೇಕೆಂದು ಕಟ್ಟಪ್ಪಣೆ ಮಾಡಿರುತ್ತಾರೆ. ಇಂಥ ಶಿಸ್ತು ಪಾಲನೆಯನ್ನೂ ಸಹ ಜಿಮ್–ಯೋಗದ ಜತೆಯೇ ನಿಲ್ಲಿಸಿಬಿಡುತ್ತೇವೆ. ಹೀಗಾಗಿ ಇನ್ನಷ್ಟು ದಪ್ಪಗಾಗಿಬಿಡುತ್ತೇವೆ.
ನಿಮಗೆ ಗೊತ್ತಿರಲಿ, ನಮ್ಮ ದೇಹದ ತೂಕದ ಸಮತೋಲನ ಕಾಪಾಡುವಲ್ಲಿ ನೀರಿನ ಪಾತ್ರ ಬಹುಮುಖ್ಯ. ಜಿಮ್‌ನಂಥ ಕಸರತ್ತಿನ ಸಂದರ್ಭದಲ್ಲಿ ನಿಯಮಿತ ನೀರು ಸೇವನೆಯ ಕ್ರಮವನ್ನೂ ಅನುಸರಿಸುವುದರಿಂದ ದೇಹದಲ್ಲಿನ ಕೆಟ್ಟ ನೀರಿನ ಶೇಖರಣೆ ಪ್ರಮಾಣ ಕಡಿಮೆಯಾಗಿರುತ್ತದೆ. ಮತ್ತು ಕೊಬ್ಬನ್ನು ಕರಗಿಸಲು ಇರುವ ಪ್ರಬಲ ಅಸ್ತ್ರವೂ ನೀರೇ ಆಗಿರುತ್ತದೆ. ಆದರೆ ವ್ಯಾಯಾಮ, ದೇಹ ದಂಡನೆಯನ್ನು ಏಕಾಏಕಿ ನಿಲ್ಲಿಸಿದಾಗ ಅನಗತ್ಯ ನೀರಿನ ಸಂಗ್ರಹ (water retention) ದೇಹದಲ್ಲಿ ಹೆಚ್ಚ ತೊಡಗುತ್ತದೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ Glycogen Rebound ಅಥವಾ ದ್ರವ ಪದಾರ್ಥಗಳ ಮರುಕಳಿಸುವಿಕೆ ಎನ್ನುತ್ತಾರೆ. ಇದರಿಂದಲೇ ಜಿಮ್ ಮತ್ತು ಡಯಟ್ ನಿಲ್ಲಿಸಿದ ಕೂಡಲೇದೇಹದ ತೂಕ 2–4 kg ಏರಿಕೆಯಾಗುಬಿಡುತ್ತದೆ. ಮುಖ ಎಲ್ಲ ಊದಿಕೊಂಡಂತೆ ಕಾಣಲಾರಂಭಿಸುತ್ತದೆ. ಎಲ್ಲೆಲ್ಲಿ ಮಸಲ್‌ಗಳು ಊದಿಕೊಳ್ಳುತ್ತಿದ್ದವೋ ಅಲ್ಲೆಲ್ಲಾ ನೀರು ಸೇರಿಕೊಳ್ಳುತ್ತದೆ. ಆಗ ಪಾಲಿಸುತ್ತಿದ್ದ ಆಹಾರ ಶಿಸ್ತು ಅಥವಾ ಡಯಟ್ ತಪ್ಪಿ ನಾವು ಕಾರ್ಬೊಹೈಡ್ರೇಟ್ ಸೇವನೆಯನ್ನೂ ಸಹಜವಾಗಿ ಜಾಸ್ತಿ ಮಾಡಿಕೊಳ್ಳುತ್ತೇವೆ. ಆಗ ಮಸ್ಸಲ್ ಗಳಲ್ಲಿ ಮತ್ತು ಯಕೃತ್ತಿನಲ್ಲಿ glycogen refill ಆಗುತ್ತದೆ. ಶರೀರ ತಕ್ಷಣ ಬಾತುಕೊಂಡಂತೆ, ಊದಿಕೊಂಡಂತೆ ಕಾಣುತ್ತದೆ.
ಹಾಗಾದರೆ ಇದಕ್ಕೆ ಪರಿಹಾರವೇನು? ಮುಂದಿನ ಸಂಚಿಕೆಯಲ್ಲಿ ಚರ್ಚಿಸೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.