ADVERTISEMENT

ಊಟ, ತಿಂಡಿ ಸ್ಕಿಪ್‌ ಮಾಡೋದ್ರಿಂದ ಮತ್ತೂ ದಪ್ಪ ಆಗ್ತೀರಾ; ಹುಷಾರು! ಇಲ್ಲಿದೆ ಕಾರಣ

ಶಾಂತಿ ಸ್ಯಾಮ್ಯುಯಲ್
Published 28 ಜನವರಿ 2026, 10:32 IST
Last Updated 28 ಜನವರಿ 2026, 10:32 IST
   

ಆಧುನಿಕ ಜೀವನ ಶೈಲಿಯ ಅತಿ ದೊಡ್ಡ ಸಮಸ್ಯೆ ಎಂದರೆ ಬೊಜ್ಜು. ಭಾರತದಲ್ಲಿ ನಾಲ್ಕು ಮಂದಿಯಲ್ಲಿ ಒಬ್ಬರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಇನ್ನು ಮೂರು ದಶಕಗಳಲ್ಲಿ ಅರ್ಧ ಭಾರತ ದಡೂತಿಗಳ ದೇಶವಾಗಲಿದೆ ಎನ್ನುತ್ತದೆ ವೆಲ್‌ನೆಸ್‌ ಕ್ಷೇತ್ರದ ಅಂಕಿ ಅಂಶಗಳು. ಹಾಗಾದರೆ ನಾವು ಭಾರತೀಯರು ಹೀಗೆ ದಿನದಿಂದ ದಿನಕ್ಕೆ ದಪ್ಪಗಾಗುತ್ತಿರುವುದಕ್ಕೆ ಕಾರಣವೇನು? ಯಾವ ಸಂಗತಿಗಳು ನಮ್ಮನ್ನು ಈಪಾಟಿ ದಡೂತಿಗಳನ್ನಾಗಿ ಮಾಡುತ್ತಿದೆ? ಇದಕ್ಕೆ ಪರಿಹಾರವೇನು? ಯಾವ ರೀತಿಯ ಡಯಟಿಂಗ್‌ ಮಾಡಿದರೆ ನಾವು ತೆಳ್ಳಗಾಗಬಹುದು?

ಇಂದಿನ ಮಧ್ಯವಯಸ್ಕ ಜನಾಂಗದ ಮುಂದಿರುವ ಮಿಲಿಯನ್‌ ಡಾಲರ್‌ ಪ್ರಶ್ನೆಗಳಿವು. ನಿಮಗೆ ಹೇಳಿದರೆ ಅಚ್ಚರಿಯಾಗಬಹುದು, ನಾವು ಇಷ್ಟೆಲ್ಲ ಸರ್ಕಸ್‌ ಮಾಡಿದರೂ ನಮ್ಮ ದೇಹದ ತೂಕವೇ ಇಳಿಯುತ್ತಿಲ್ಲ ಯಾಕೆ ಗೊತ್ತಾ? ಡಯಟಿಂಗ್‌ನ ಹೆಸರಿನಲ್ಲಿ ನಾವು ಮಾಡುತ್ತಿರುವ ತಪ್ಪು ಉಪವಾಸ ಕ್ರಮವೇ ನಮ್ಮನ್ನು ಇನ್ನಷ್ಟು ದಪ್ಪ ಮಾಡುತ್ತಿದೆ ಎಂದರೆ ನೀವು ನಂಬಬೇಕು!

‘ಸಾಧ್ಯವೇ ಇಲ್ಲ ಬಿಡಿ, ಉಪವಾಸ ಮಾಡಿದರೆ, ಕಡಿಮೆ ತಿಂದರೆ ದೇಹ ಸೊರಗುತ್ತದೆ. ಇದೇನು ವಿಚಿತ್ರ? ಉಪವಾಸ ಮಾಡಿದ್ದಕ್ಕೇ ದಪ್ಪ ಆಗ್ತಿರೋದು ಅನ್ತೀರಲ್ಲಾ, ನಿಮಗೆಲ್ಲೋ ಭ್ರಮೆ...’ ಬಹುತೇಕರು ಹೀಗೆಯೇ ವಾದ ಮಾಡುತ್ತಾರೆ. ಆದರೆ ಇದು ನೂರಕ್ಕೆ ನೂರು ಸತ್ಯ. ಬಹುತೇಕ ನಮ್ಮ ಬೊಜ್ಜಿನ ಸಮಸ್ಯೆಗೆ ನಾವು ಅನುಸರಿಸುತ್ತಿರುವ ತಪ್ಪು ಡಯಟಿಂಗ್‌ ಪದ್ಧತಿಯೇ ಕಾರಣ. ಇನ್ನೂ ವಿಶೇಷ ಏನು ಗೊತ್ತಾ? ತುಂಬ ಜನ ನಾವು ತಿಂದಿದ್ದರಿಂದಲೇದಪ್ಪ ಆಗುತ್ತಿದ್ದೇವೆ. ನಾವು ಹೀಗೆ ಮಿತಿ ಮೀರಿ ದಪ್ಪಗಾಗಿರುವುದು ಮತ್ತು ದಪ್ಪಗಾಗುತ್ತಲೇ ಹೊಗುತ್ತಿರುವುದಕ್ಕೆ ಮುಖ್ಯ ಕಾರಣ ನಾವು ತಿನ್ನುತ್ತಿರುವುದು. ಹೀಗಾಗಿ ತಿನ್ನೋದನ್ನು ಕಡಿಮೆ ಮಾಡಿದರೆ, ಅಥವಾ ತಿನ್ನೋದನ್ನೇ ಬಿಟ್ಟುಬಿಟ್ಟರೆ ತೆಳ್ಳಗೆ ಆಗಿ ಬಿಡುತ್ತೇವೆ ಎಂದುಕೊಂಡು ಬಿಟ್ಟಿದ್ದಾರೆ. ಇದು ಶುದ್ಧ ಸುಳ್ಳು, ಮತ್ತು ತೀರಾ ಅವೈಜ್ಞಾನಿಕ. ಹಾಗಾದರೆ ಸತ್ಯ ಏನು? ಈ ಪ್ರಶ್ನೆಗೆ ಉತ್ತರ ಹೇಳೋಕೂ ಮುಂಚೆ ಬೊಜ್ಜಿನ ಬಗ್ಗೆ ನಮ್ಮ ಮನಃಸ್ಥಿತಿ ಹೇಗಿದೆ ಅನ್ನೋದನ್ನು ಸೊಲ್ಪ ನೋಡೋಣ.

ADVERTISEMENT

ಬಹುತೇಕ ದಪ್ಪಗಿರುವವರು ಮೊದಲನೆಯದಾಗಿ ತಾವು ದಪ್ಪ ಇದ್ದೇವೆ ಎಂಬುದನ್ನು ಒಪ್ಪಿಕೊಳ್ಳುವುದೇ ಇಲ್ಲ. ‘ಅಯ್ಯೋ ಬಿಡಿ, ಸೊಲ್ಪ ಮೈಕೈ ತುಂಬಿಕೊಂಡು ಇದೀನಿ. ಅದರಿಂದೇನಾಗುತ್ತೆ ಮಹಾ? ಸೊಲ್ಪನೂ ಹೊಟ್ಟೆ (ಗಂಡಸರಾದರೆ) ಇಲ್ದೇ ಇದ್ದರೆ ಏನು ಚೆನ್ನಾಗಿರುತ್ತೆ ಹೇಳಿ? ಆನ್‌ ಪ್ಯಾಂಟ್‌ ಮಾಡಿದರೆ ಸರಿಯಾಗಿ ನಿಲ್ಲೋದೇ ಇಲ್ಲ. ತೀರಾ ಸಣಕಲು ಸಣಕಲು ಇದ್ದರೆ (ಹೆಣ್ಣುಮಕ್ಕಳು) ತಗಡು ಅಂತಾರೆ. ಚೂರಾದ್ರೂ ಉಬ್ಬು ತಗ್ಗು ಕಾಣಬೇಕಪ್ಪ!’ ಎಂಬಿತ್ಯಾದಿ ವಾದ ಮಾಡಿಕೊಂಡೇ ಇರುತ್ತಾರೆ. ಇಂಥವರಿಗೆ ಏನೇ ಟಿಪ್‌ಗಳನ್ನು ನೀಡಿದರೂ, ವೆಲ್‌ನೆಸ್‌ ಸಲಹೆಗಳನ್ನು ನೀಡಿದರೂ ಕೇಳುವುದೇ ಇಲ್ಲ. ತಾವು ಎಲ್ಲವನ್ನೂ ಪಾಲಿಸುತ್ತಿದ್ದೇವೆ ಎಂದೋ, ಅಥವಾ ತಮಗದರ ಅಗತ್ಯವೇ ಇಲ್ಲ ‘ಐ ಆಮ್‌ ಫಿಟ್‌ ಎಂಡ್‌ ಫೈನ್‌‘ ಎಂದೋ ವಾದ ಮಾಡುತ್ತಾರೆ. ಇಂಥವರಿಗೆ ಗೊತ್ತಿಲ್ಲ, ನಲವತ್ತು ತುಂಬುವ ಹೊತ್ತಿಗೆ ಹೀಗೆ ‘ಸೊಲ್ಪ ದಪ್ಪ’ಗಿರೋದೇ ಬಿಪಿ, ಶುಗರ್‌, ಹೃದ್ರೋಗ, ಥೈರಾಯ್ಡ್‌ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂಬುದು.

ಈಗಾಗಲೇ ಹೇಳಿದಂತೆ ನಾಲ್ವರು ಭಾರತೀಯ ವಯಸ್ಕರ ಪೈಕಿ ಒಬ್ಬರಲ್ಲಿ ಬೊಜ್ಜಿನ ಸಮಸ್ಯೆ ಇದೆ ಎನ್ನುತ್ತದೆ ಅಧಿಕೃತ ಸರ್ವೆಯೊಂದು. ವೆಲ್‌ನೆಸ್‌ ಫೌಂಡೇಷನ್‌ ಹಲವು ಪ್ರೋಟೀನ್‌ಯುಕ್ತ ಆಹಾರಗಳ ಕಂಪನಿಗಳ ಜತೆಗೆ ನಡೆಸಿದ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಗಂಡಸರಿಗಿಂತ ಹೆಂಗಸರೇ ಹೆಚ್ಚು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಶೇ 24ರಷ್ಟು ಮಹಿಳೆಯರು ಹಾಗೂ ಶೇ 23ರಷ್ಟು ಪುರುಷರು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದಾರೆ. ದೇಶದ ರಾಜಧಾನಿ ದೆಹಲಿಯಲ್ಲಿ ಶೇ 41ರಷ್ಟು ಮಹಿಳೆಯರು ಬೊಜ್ಜು ಹೊಂದಿದ್ದಾರೆ. 6 ರಿಂದ 16 ವರ್ಷ ವಯಸ್ಸಿನ ಮಕ್ಕಳಲ್ಲಿ ಪೈಕಿ ಶೇ 22.8ರಷ್ಟು ಮಕ್ಕಳಿಗೆ ಬೊಜ್ಜು ಇದೆ. ನಮ್ಮದೇ ರಾಜ್ಯ ಕರ್ನಾಟಕದಲ್ಲಿ ಶೇ 12.8ರಷ್ಟು ಜನರು ಬೊಜ್ಜು ಹೊಂದಿರುವುದಾಗಿ ವರದಿ ತಿಳಿಸಿದೆ.

ಸುಮ್ಮನೇ ಹೆದರಿಸುತ್ತಿಲ್ಲ. ಮುಂದಿನ ಮೂವತ್ತು ವಷರ್ಗಳಲ್ಲಿ ಬಹುತೇಕರಿಗೆ ಒಂದಲ್ಲಾ ಒಂಂದು ರೀತಿಯ ಬೊಜ್ಜಿನಿಂದ ಬರುವ ಸಮಸ್ಯೆ (ಇವು ಕಾಯಿಲೆಗಳಲ್ಲ, ಕಾಯಿಲೆಗೂ ಆರೋಗ್ಯ ಸಮಸ್ಯೆಗೂ ಸಾಕಷ್ಟು ವ್ಯತ್ಯಾಸ ಇದೆ)ಯಿಂದ ಬಳಲುತ್ತಾರೆ. ಇಂಥ ಸಮಸ್ಯೆಗಳು ಪ್ರಾಣಕ್ಕೂ ಕುತ್ತು ತರಬಹುದು. ಕಾರಣ ಇಷ್ಟೆ, ಮೇಲಿನ ಸರ್ವೆಯ ಅಂಕಿ ಅಂಶಗಳನ್ನು ಗಮನಿಸಿದರೆ ಅದು ಹಿಂದಿನ 30 ವರ್ಷಗಳ ಪ್ರಮಾಣಕ್ಕಿಂತ ಐದು ಪಟ್ಟು ಹೆಚ್ಚಾಗಿದೆ. ಅಂದರೆ ಈಗ ನಾಲ್ಕು ಜನರಲ್ಲಿ ಒಬ್ಬರಿಗೆ ಬೊಜ್ಜಿನ ಸಮಸ್ಯೆ ಇದೆ. ಇದು ಹೀಗೆಯೇ ಮುಂದುವರಿದರೆ ಇಬ್ಬರಲ್ಲಿ ಒಬ್ಬರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಾರೆ. 1990ರ ನಂತರ ಜಾಗತಿಕವಾಗಿ ಬೊಜ್ಜಿನ ಪ್ರಮಾಣ ದ್ವಿಗುಣಗೊಂಡಿದೆ. ಸದ್ಯ ಬೊಜ್ಜು ವಿಶ್ವದಾದ್ಯಂತ ಸುಮಾರು ಒಂದು ಶತಕೋಟಿ ಜನರ ಮೇಲೆ ಪರಿಣಾಮ ಬೀರಿದೆ ಎಂದು ವರದಿ ಹೇಳುತ್ತದೆ.

ಹಾಗಾದರೆ ಇಂಥ ಬೊಜ್ಜಿನ ಸಮಸ್ಯೆಗೆ ಕಾರಣವೇನು? ಎಲ್ಲರೂ ದಪ್ಪಗಾಗುತ್ತಿರುವುದಕ್ಕೆ ಕಾರಣವೇನು? ಈ ಪ್ರಶ್ನೆಗೆ ನೇರವಾದ ಉತ್ತರ ನಮ್ಮ ಸೋಕಾಲ್ಡ್‌ ‘ಡಯಟ್‌’. ಅಂದರೆ ನಾವು ತಿನ್ನುವುದನ್ನು ಬಿಡುತ್ತಿರುವುದು, ಇಲ್ಲವೇ ಕಡಿಮೆ ತಿನ್ನುತ್ತಿರುವುದು. ಹೌದು, ತೆಳ್ಳಗಾಗಬೇಕು ಎನ್ನುವ ಭರದಲ್ಲಿ ಬಹುತೇಕರು ಕಡಿಮೆ ತಿನ್ನುವುದು, ಬೆಳಗಿನ ತಿಂಡಿ, ರಾತ್ರಿಯ ಅಥವಾ ಮಧ್ಯಾಹ್ನದ ಊಟ ಬಿಡುವುದು, ಅಥವಾ ದಿನಕ್ಕೆ ಒಂದೇ ಬಾರಿ ಆಹಾರ ಸೇವಿಸುವುದು ಇತ್ಯಾದಿ ರಾಂಗ್‌ ಡಯಟಿಂಗ್‌ ಸಿಸ್ಟಂ ಅನ್ನು ಪಾಲಿಸುತ್ತಿದ್ದಾರೆ. ಇದು ನಮ್ಮನ್ನು ಮತ್ತಷ್ಟು ದಪ್ಪಗಾಗಿಸುತ್ತಿದೆ. ನಿಜವಾಗಿ ಡಯಟ್‌ ಅಂದರೆ ಬ್ಯಾಲೆನ್ಸಡ್‌ ಫುಡ್‌ ಸಿಸ್ಟಂ ಅಥವಾ ಸಮತೂಲಿತ ಆಹಾರ ಸೇವನೆ ಎಂದರ್ಥ. ಆದರೆ ಬಹುತೇಕರು ಡಯಟ್‌ ಎಂದರೆ ಆಹಾರ ಬಿಡುವುದು ಅಥವಾ ಕಡಿಮೆ ತಿನ್ನುವುದು ಎಂದುಕೊಂಡುಬಿಟ್ಟಿದ್ದಾರೆ. ಇದಕ್ಕೆ ಕಾರಣ ಅಂಥವರಿಗೆ ತಾವು ದಪ್ಪವಾಗಿರುವುದು ತಿಂದದ್ದರಿಂದ ಎಂಬ ತಪ್ಪು ಕಲ್ಪನೆ ಇರುವುದು. ಅಸಲಿಗೆ ತಿಂದದ್ದರಿಂದ ಯಾರೂ ದಪ್ಪಗಾಗುವುದಿಲ್ಲ. ಏನು ತಿನ್ನಬೇಕು, ಎಷ್ಟು ತಿನ್ನಬೇಕು, ಯಾವಾಗ ತಿನ್ನಬೇಕು ಎಂಬುದರ ಬಗ್ಗೆ ಸೂಕ್ತ ಮಾಹಿತಿ, ತಿಳಿವಳಿಕೆ ಇಲ್ಲದೇ ಏನೇನೋ ತಿನ್ನುತ್ತಿರುವುದರಿಂದ, ಅಥವಾ ದೇಹಕ್ಕೆ ಏನು ಬೇಕೋ ಅದನ್ನು ತಿನ್ನದೇ ಇದ್ದದ್ದರಿಂದ ಬಹುತೇಕರು ದಪ್ಪವಾಗುತ್ತಿದ್ದಾರೆ.

ಉಪವಾಸ ಮಾಡುವುದರಿಂದ ಅಥವಾ ಆಹಾರ ಸ್ಕಿಪ್‌ ಮಾಡುವುದರಿಂದ ಇನ್ನೂ ದಪ್ಪ ಆಗುತ್ತಾರೆ ಯಾಕೆ ಗೊತ್ತಾ? ಮೊದಲನೆಯದು ದೇಹಕ್ಕೆ ಪ್ರತಿ ನಿತ್ಯ ಎಸೆನ್ಷಿಯಲ್‌ ಆಗಿ (ಅಂದರೆ ಅತ್ಯಗತ್ಯವಾದ) ಒಂದಷ್ಟು ಪೌಷ್ಟಿಕಾಂಶಗಳನ್ನು ಕೊಡಲೇಬೇಕು. ಇವನ್ನು ದೇಹ ತನ್ನೊಳಗೇ ತಾನು ತಯಾರಿಸಿಕೊಳ್ಳುವುದಿಲ್ಲ. ಅವನ್ನು ಆಹಾರದ ಮೂಲಕವೇ ನಾವು ಕೊಡಬೇಕು. ನಾವು ಡಯಟ್‌ ಹೆಸರಿನಲ್ಲಿ ಉಪವಾಸ ಮಾಡಿದಾಗ, ಅಥವಾ ಊಟ ತಿಂಡಿಗಳನ್ನು ಕಾಲಕಾಲಕ್ಕೆ ಕೊಡದೇ ಸ್ಕಿಪ್‌ ಮಾಡಿದಾಗ ದೇಹಕ್ಕೆ ಬೇಕಾದ ನ್ಯೂಟ್ರಿಯಂಟ್‌ಗಳು ಸಹ ಕೊರತೆಯಾಗುತ್ತದೆ. ಅವಿಲ್ಲದೇ ದೇಹದಲ್ಲಿ ಕೆಟ್ಟ ಕೊಬ್ಬಿನ ಶೇಖರಣೆ ಜಾಸ್ತಿಯಾಗುತ್ತ ಹೋಗುತ್ತದೆ. ಇದರಿಂದಲೇ ಉಪವಾಸ ಮಾಡಿದಷ್ಟೂ ನಾವು ದಪ್ಪಗಾಗುವುದು.

ಇನ್ನೊದು ಪ್ರಮುಖ ಸಂಗತಿಯೆಂದರೆ ನಮ್ಮ ದೇಹಕ್ಕೆ ಪ್ರತಿದಿನ ಕನಿಷ್ಠ 1200–1500 ಕ್ಯಾಲೋರಿಗಳು ಬೇಕೇಬೇಕು. ಉಪವಾಸ ಮಾಡಿದರೆ ಅಥವಾ ಆಹಾರ ಸ್ಕಿಪ್‌ ಮಾಡಿದರೆ ಕ್ಯಾಲೋರಿಯ ಕೊರತೆಯಾಗುತ್ತದೆ. ಇಂಥ ಕೊರತೆಯನ್ನು ತುಂಬಿಕೊಳ್ಳಲು ದೇಹ ಹೆಚ್ಚು ಹೆಚ್ಚು ಕೊಬ್ಬನ್ನು ಶೇಖರಿಸಿಟ್ಟುಕೊಳ್ಳಲು ಆರಂಭಿಸುತ್ತದೆ. ಇದರಿಂದ ವ್ಯಕ್ತಿ ಇನ್ನಷ್ಟು ದಪ್ಪಗಾಗುತ್ತ ಹೋಗುತ್ತಾರೆ. ಅಂಥವರು ನೋಡಲಷ್ಟೇ ದಪ್ಪ ಇರುತ್ತಾರೆ ಹೊರತು ಬಲಹೀನರಾಗಿರುತ್ತಾರೆ. ಅವರ ಸ್ನಾಯುಗಳಾಗಲೀ, ಮೂಳೆಗಳಾಗಲೀ ಬೆಳವಣಿಗೆಯನ್ನೇ ಕಾಣುವುದಿಲ್ಲ.

ಆದ್ದರಿಂದ ಬಹಳಷ್ಟು ಜನ ಉಪವಾಸ ಮಾಡಿದರೂ ಅವ ದೇಹ ತೂಕ ಕಡಿಮೆಯೇ ಆಗುವುದಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ವೀಕ್‌ ಆಗುತ್ತಾ, ರೋಗ ನಿರೋಧಕ ಶಕ್ತಿ ಕುಸಿದು ಬೇರೆ ಬೇರೆ ಕಾಯಿಲೆ, ಆರೋಗ್ಯ ಸಮಸ್ಯೆಗೆ ಈಡಾಗುತ್ತಾರೆ. ಹಾಗಾದರೆ ನಾವು ಎಷ್ಟು ತಿನ್ನಬೇಕು, ಯಾವಾಗ ತಿನ್ನಬೇಕು, ಏನನ್ನು ತಿನ್ನಬೇಕು ಎಂಬುದನ್ನು ಇನ್ನೊಂದು ಸಂಚಿಕೆಯಲ್ಲೊ ನೋಡೋಣ. ಅದಕ್ಕೂ ಮೊದಲು, ನೀವು ಅವೈಜ್ಞಾನಿಕ ‘ಡಯಟ್‌’ ಮಾಡುತ್ತಿದ್ದರೆ, ಬ್ರೇಕ್ ಫಾಸ್ಟ್‌ ಸ್ಕಿಪ್‌ ಮಾಡುತ್ತಿದ್ದರೆ , ಕಡಿಮೆ ಪ್ರಮಾಣದಲ್ಲಿ ಊಟ–ತಿಂಡಿ ತಿನ್ನುತ್ತಿದ್ದರೆ ಇವತ್ತಿಂದಲೇ ಅಂಥವನ್ನು ನಿಲ್ಲಿಸಿಬಿಡಿ. ಇಲ್ಲದಿದ್ದರೆ ಒಂದು ಮಾಡಲು ಹೋಗಿ ಮತ್ತೊಂದು ಮೈಮೇಲೆ ಎಳೆದುಕೊಂಡರು ಎಂಬಂತೆ ತೀವ್ರ, ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತೀರ, ಹುಷಾರು!

( ಇದು ಕೇವಲ ಮಾಹಿತಿಗಾಗಿ ನೀಡಿದ ಲೇಖನ. ಇದು ಯಾವುದೇ ರೀತಿಯಲ್ಲೂ ಚಿಕಿತ್ಸಾ ಪದ್ಧತಿ ಅಲ್ಲ. ಇದರಲ್ಲಿರುವ ಮಾಹಿತಿಗಳಿಗೆ ಪ್ರಜಾವಾಣಿ ಹೊಣೆಯಲ್ಲ. ಬದಲಿಗೆ ಎಲ್ಲ ಮಾಹಿತಿಗಳಿಗೆ ಲೇಖಕರೇ ಸಂಫೂರ್ಣ ಜವಾಬ್ದಾರಿ.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.