ADVERTISEMENT

ತಿಂದುಂಡು ಸುಖವಾಗಿ: ದಿನಾ ಅನ್ನ ತಿಂದರೆ ವೇಟ್ ಲಾಸ್ ಆಗಲ್ವಾ? ದಪ್ಪ ಆಗ್ತಾರಾ?

ಶಾಂತಿ ಸ್ಯಾಮ್ಯುಯಲ್
Published 25 ಫೆಬ್ರುವರಿ 2026, 23:30 IST
Last Updated 25 ಫೆಬ್ರುವರಿ 2026, 23:30 IST
   

ಇಂಥದ್ದೊಂದು ಪ್ರಶ್ನೆಯನ್ನು ದಿನದಲ್ಲಿ ಏನಿಲ್ಲವೆಂದರೂ ಹತ್ತು ಬಾರಿ ಎದುರಿಸುತ್ತೇನೆ. ನನ್ನ ಬಳಿ ತೂಕ ಕಡಿಮೆ ಮಾಡಿಕೊಳ್ಳಬೇಕು, ಬೊಜ್ಜು ಕರಗಿಸಬೇಕು ಎಂದು ಬರುವ ಪ್ರತಿಯೊಬ್ಬರೂ ‘ಮೇಡಂ ನಾವು ದಿನಾ ಊಟ ಮಾಡಬಹುದಾ? ನಮಗೆ ಅನ್ನ ತಿನ್ನದೇ ಇರಕ್ಕೆ ಆಗಲ್ಲ, ಒಂದು ಹೊತ್ತಾದರೂ ನಾವು ಮುದ್ದೆ ತಿನ್ನಬೇಕು, ಒಣ ಚಪಾತಿ, ತರಕಾರಿ ತಿನ್ಕೋಂಡು ಬರೀ ಜ್ಯೂಸು ಕುಡ್ಕೊಂಡೇ ಕಳೀಬೇಕು ಅಂದ್ರೆ ಆಗಲ್ಲ.. ಬಟ್‌ ನಮಗೆ ವೇಟ್‌ ಲಾಸ್‌ ಮಾಡಿಸಬಹುದಾ?’ ಹೀಗಂತ ಕೇಳಿಕೊಂಡೇ ಬರ್ತಾರೆ.

ತಪ್ಪು ಅವರದ್ದಲ್ಲ, ಒಂದಷ್ಟು ಮೆಡಿಸಿನ್‌ ಕಂಪನಿಗಳು, ನ್ಯೂಟ್ರೀಷಿಯನ್‌ ಸಪ್ಲಿಮೆಂಟ್‌ ಉತ್ಪಾದಕರ ಲಾಭಿ ಇಂಥ ಸಲ್ಲದ ಭ್ರಮೆಯನ್ನು ನಮ್ಮ ಜನರ ತಲೆಯಲ್ಲಿ ಬಿತ್ತಿಬಿಟ್ಟಿದೆ. ಇದೂ ಸಾಲದ್ದಕ್ಕೆ ಪ್ಯಾಕ್ಡ್ ಆಹಾರ ಪದಾರ್ಥಗಳ ತಯಾರಕರು ಸಹ ಇದಕ್ಕೆ ಕೈ ಜೋಡಿದ್ದಾರೆ. ಇದೊಂದು ರೀತಿಯ ಮಾರ್ಕೆಟಿಂಗ್ ತಂತ್ರ. ಅದಿಲ್ಲದಿದ್ದರೆ ಯಾವುದೇ ಖಾದ್ಯ ತೈಲ ನಿಮ್ಮ ಹೃದಯಕ್ಕೆ ಹಿತವಾಗಿ ಇರದು, ಜೀರೋ ಕ್ಯಾಲೋರಿಯ ಟೀ ಎಂಬುದು ಈ ಜಗತ್ತಿನಲ್ಲಿ ಇರಲಿಕ್ಕೇ ಸಾಧ್ಯವಿಲ್ಲ. ಕಾರ್ಬೋ ಹೈಡ್ರೇಡ್‌ ಇಲ್ಲದ ಆಹಾರ ಈ ಸೃಷ್ಟಿಯಲ್ಲಿ ಇವರೆಗೆ ಬಂದಿಲ್ಲ. ಕೇವಲ ಸಪ್ಲಿಮೆಂಟ್‌ಗಳನ್ನು ತಿಂದೇ ಹೊಟ್ಟೆ ತುಂಬಿಸಿಕೊಳ್ಳಲು ನಾವು ಯಂತ್ರಗಳಲ್ಲ. ಇಂಥವೆಲ್ಲ ಹಾದಿ ತಪ್ಪಿಸುವ ಜಾಹೀರಾತುಗಳಂತೆಯೇ ಅನ್ನ ಬಿಟ್ಟು ತೂಕ ಕಡಿಮೆ ಮಾಡಿಕೊಳ್ಳಬಹುದೆಂಬುದು ಸಹ ಭಾರೀ ಮಿಥ್‌. ನೆನಪಿಡಿ ನಾವು ತಿನ್ನುವ ಅಕ್ಕಿ, ರಾಗಿ, ಗೋಧಿ, ಜೋಳ, ಸಿರಿಧಾನ್ಯಗಳು ಇವೆಲ್ಲವೂ ಕಾರ್ಬೋ ಹೈಡ್ರೇಡ್‌ಗಳೇ. ಕ್ಯಾಲೋರಿಯಲ್ಲಿ, ಗ್ಲೈಸಮಿಕ್‌ ಇಂಡೆಕ್ಸ್‌ ದೃಷ್ಟಿಯಿಂದ ಅಲ್ಪಸ್ವಲ್ಪ ವ್ಯತ್ಯಾಸ ಇರಬಹುದು ಎಂಬುದನ್ನು ಬಿಟ್ಟರೆ, ಇವುಗಳಲ್ಲಿ ಯಾವುದನ್ನು ತಿಂದರೂ ತೂಕದ ದೃಷ್ಟಿಯಿಂದ ಎಲ್ಲವೂ ಬಹುತೇಕ ಒಂದೇ.

ನಾವು ನಿಜವಾಗಿ ಮಾಡಬೇಕಾದುದು ಏನೆಂದರೆ ನಿತ್ಯ ನಾವು ಏನನ್ನು ತಿನ್ನುತ್ತಿದ್ದೇವೋ, ಅದನ್ನು ಒಂದು ಶಿಸ್ತಿಗೆ ಒಳಪಡಿಸಿಕೊಳ್ಳಬೇಕಷ್ಟೇ. ಉದಾಹರಣೆಗೆ ಅನ್ನವನ್ನು ನಾವು ನಿತ್ಯ ಸೇವಿಸುವುದು ಎಂದುಕೊಂಡರೆ, ಅದನ್ನು ಎಷ್ಟು ತಿನ್ನಬೇಕು, ಯಾವಾಗ ತಿನ್ನಬೇಕು, ಹೇಗೆ ತಿನ್ನಬೇಕು ಎಂಬುದನ್ನು ಕಲಿತುಕೊಂಡರೆ ಸಾಕು ನಮ್ಮ ತೂಕ ತನ್ನಿಂದ ತಾನೇ ಕಡಿಮೆ ಆಗುತ್ತದೆ. ಇದನ್ನು ಹೊರತುಪಡಿಸಿ ಕೃತಕ ಅಡ್ಡ ಮಾರ್ಗಗಳ ಮೂಲಕ, ಸುಲಭ ಹಾದಿಯಲ್ಲಿ ಕರಗಿಸುವ ಬೊಜ್ಜು, ಅಷ್ಟೇ ವೇಗದಲ್ಲಿ ಮರಳಿ ನಿಮ್ಮ ದೇಹವನ್ನು ಸೇರುತ್ತದೆ ಎಂಬುದನ್ನು ನೆನಪಿನಲ್ಲಿಡಿ.

ADVERTISEMENT

ಇದಕ್ಕೊಂದು ಸುಲಭ ಸೂತ್ರವನ್ನು ನಾನು ನಿಮಗೆ ಹೇಳಿಕೊಡುತ್ತೇನೆ. ಈ ಉಪಾಯ ನಿಮಗೆ ಗೊತ್ತಾದರೆ, ನೀವು ಯಾವುದೇ ಕೋರ್ಸ್‌ಗೆ ಸೇರದೇ, ಜಿಮ್‌–ವರ್ಕ್‌ಔಟ್‌ಗಳನ್ನು ಮಾಡದೇ, ನ್ಯೂಟ್ರೀಷಿಯನ್‌ ಕ್ಲಬ್‌ಗಳಿಗೆ ಹಣ ಸುರಿಯದೇ, ಯಾವುದೇ ಕೋಚ್‌ಗಳನ್ನು ನೇಮಿಸಿಕೊಳ್ಳದೇ, ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳದೇ ತೂಕ ಕಡಿಮೆ ಮಾಡಿಕೊಂಡು ಆರೋಗ್ಯಕರವಾಗಿ ಬದುಕಬಹುದು.

ನಾವು ನಿತ್ಯ ಸೇವಿಸುವ ಆಹಾರವು ಮುಖ್ಯವಾಗಿ ಮೂರು ಸಂಗತಿಗಳನ್ನು ಒಳಗೊಂಡಿರುತ್ತದೆ. ಮೊದಲನೆಯದು ಸಹಜವಾಗಿ ಕಾರ್ಬೋಹೈಡ್ರೇಡ್‌ ಅಥವಾ ಪಿಷ್ಟ ಪದಾರ್ಥ. ನಮ್ಮ ಪ್ರತಿ ಚಟುವಟಿಕೆಯಲ್ಲೂ ನಮ್ಮನ್ನು ಕೈ ಹಿಡಿದು ಮುನ್ನಡೆಸುವ ಪ್ರೇರಕ ಶಕ್ತಿ. ಕಾರ್ಬೋಹೈಡ್ರೇಟ್‌ನಿಂದಲೇ ನಮ್ಮ ದೇಹಕ್ಕೆ ಶಕ್ತಿ– ಚೈತನ್ಯ ಬರುವುದು. ಇದಿಲ್ಲದೇ ನಾವು ಬದುಕಲೇ ಸಾಧ್ಯವಿಲ್ಲ. ಮನುಷ್ಯ ತಿನ್ನಬಹುದಾದ ಎಲ್ಲದರಲ್ಲೂ ಕಾರ್ಬ್ಸ್‌ ಇದ್ದೇ ಇರುತ್ತದೆ. ಅಂದರೆ, ಹಣ್ಣುಗಳು, ತರಕಾರಿ, ಧಾನ್ಯಗಳು, ಕಾಳುಗಳು...ಹೀಗೆ ಪ್ರತಿಯೊಂದೂ ಪಿಷ್ಟಪದಾರ್ಥವೇ. ಆದರೆ ದವಸ–ಧಾನ್ಯಗಳಲ್ಲಿ ಪಿಷ್ಟದ ಅಂಶ ಹೆಚ್ಚಿರುವುದರಿಂದ ಅವನ್ನು ಪ್ರಧಾನವಾಗಿ ಕಾರ್ಬೋಹೈಡ್ರೇಟ್‌ಗಳೆಂದು ಪರಿಗಣಿಸಲಾಗುತ್ತದೆ. ಇದು ನಾರಿನಂಶ (ಫೈಬರ್‌)ವನ್ನೂ ಒಳಗೊಂಡಿರುತ್ತದೆ. ಹೆಚ್ಚು ಹೆಚ್ಚು ನಾರಿನಂಶವಿರುವ ಕಾರ್ಬ್ಸ್‌ಗಳು ದೇಹಕ್ಕೆ ಹೆಚ್ಚು ಹಿತಕಾರಿ ಮಾತ್ರವಲ್ಲ, ನಮ್ಮ ದೇಹ ತೂಕದ ಸಮತೋಲನ ರಕ್ಷಣೆಯಲ್ಲಿ ಇವುಗಳ ಪಾತ್ರ ಹಿರಿದು.

ಇನ್ನು ಎರಡನೇ ಆಹಾರವೆಂದರೆ ಪ್ರೋಟಿನ್‌. ಇದನ್ನು ನಮ್ಮ ದೇಹದ ಅಗೋಚರ ಶಿಲ್ಪಿ ಎಂದು ಕರೆಯಬಹುದು. ನಮ್ಮ ಪ್ರತೀ ಅಂಗಾಂಗಗಳೂ ರಚನೆಯಾಗಿರುವುದು ಮಾಂಸಖಂಡ ಅಂದರೆ ಮಸಲ್‌ಗಳಿಂದಲೇ. ನಮ್ಮ ಕಣ್ಣಿಗೆ ಕಾಣದ ಅಂದರೆ ದೇಹದೊಳಗೆ ಅವಿತಿರುವ ಕರುಳು, ಜಠರ, ಹೃದಯ, ಶ್ವಾಸಕೋಶ.. ಹೀಗೆ ಆಂತರಿಕ ಆರ್ಗಾನ್‌ಗಳಿರಬಹುದು ಅಥವಾ ಕೈ–ಕಾಲು, ಎದೆ, ತಲೆಯಂಥ ಹೊರಗಿನ ಅಂಗಾಂಗಗಳಿರಬಹುದು ಇವೆಲ್ಲವೂ ನಮಗೆ ನಿರ್ದಿಷ್ಟ ಆಕಾರದಲ್ಲಿ ಇದ್ದರೆ ಅದಕ್ಕೆ ಕಾರಣ ಮಸಲ್‌ಗಳೇ. ಇಂಥ ಮಸಲ್‌ ಸದೃಢವಾಗಿರಲು ಬೇಕಿರುವುದು ಪ್ರೋಟಿನ್‌. ಹೀಗಾಗಿಯೇ ಇದನ್ನು ನಮ್ಮ ದೇಹದ ಶಿಲ್ಪಿ ಎಂದಿದ್ದು. ಕಾಳು–ಬೇಳೆ, ಮೊಟ್ಟೆ–ಮಾಂಸ–ಮೀನು, ಪನೀರ್‌, ಹಾಲು–ಮೊಸರು ಇತ್ಯಾದಿಗಳಲ್ಲಿ ಪ್ರೋಟೀನ್‌ ಹೆಚ್ಚಿರುತ್ತದೆ.

ನಮ್ಮ ಆಹಾರದಲ್ಲಿರುವ ಮೂರನೆಯ ಸಂಗತಿ ಕೊಬ್ಬು. ಬಹುತೇಕ ನಾವು ತಿಂದ ಆಹಾರದಲ್ಲಿ ಉತ್ಪತ್ತಿಯಾಗುವ ಶಕ್ತಿ (ಗ್ಲೂಕೋಸ್‌) ಕ್ಯಾಲರಿಯಾಗಿ ಪರಿವರ್ತನೆಯಾಗುತ್ತದೆ. ಹೀಗೆ ಹೊಮ್ಮಿದ ಕ್ಯಾಲರಿ ಬಳಕೆಯಾದೇ ಉಳಿದದ್ದೆಲ್ಲವೂ ಕೊಬ್ಬು ಆಗಿ ಪರಿವರ್ತನೆಯಾಗಿ ದೇಹದಲ್ಲಿ ಶೇಖರಗೊಳ್ಳುತ್ತದೆ. ಇದೇ ಬೊಜ್ಜು. ಇದು ದೇಹದ ಒಳಗಿನ ಕೊಬ್ಬಿನ ಕಥೆಯಾಯಿತು. ಇದಲ್ಲದೇ ನಾವು ತಿನ್ನುವ ಆಹಾರದಲ್ಲೂ ಕೊಬ್ಬು ಇರುತ್ತದೆ. ಉದಾಹರಣೆಗೆ ಬೆಣ್ಣೆ–ತುಪ್ಪ–ಎಣ್ಣೆ, ಹಣ್ಣುಗಳು, ಸಿಹಿ ಪದಾರ್ಥಗಳೆಲ್ಲವೂ ಕೊಬ್ಬೆ. ನಿತ್ಯದ ಊಟದಲ್ಲಿ ನಮಗೆ ಕೊಬ್ಬೂ ಇರಬೇಕು.

ಹಾಗಿದ್ದರೆ ಇವು ಎಷ್ಟೆಷ್ಟು ಪ್ರಮಾಣದಲ್ಲಿರಬೇಕು? ಹೌದು, ಊಟದ ತಟ್ಟೆಯಲ್ಲಿ ಈ ಮೂರು ಮತ್ತೊಂದರ ಪ್ರಮಾಣ ಬಹು ಮುಖ್ಯ ಸಂಗತಿ. ಇದನ್ನು ಅರಿಯದೇ ಹೋಗದ್ದಕ್ಕೇ ನಾವಿವತ್ತು ಏನಾಗಿದ್ದೇವೋ ಅದು (ದಢೂತಿ) ಆಗಿರುವುದು. ಅದು ಎಷ್ಟಿರಬೇಕೆಂಬುದನ್ನು ಮುಂದಿನ ಲೇಖನದಲ್ಲಿ ಹೇಳುವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.