ADVERTISEMENT

ಗಮನಿಸಿ| ಬಿಸಿ ನೀರಿಗೆ ತಣ್ಣೀರು ಬೆರೆಸಿ ಕುಡಿಯಲೇಬಾರದು; ಯಾಕೆ ಗೊತ್ತಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಫೆಬ್ರುವರಿ 2026, 10:10 IST
Last Updated 24 ಫೆಬ್ರುವರಿ 2026, 10:10 IST
<div class="paragraphs"><p>ಎಐ ಚಿತ್ರ</p></div>
   

ಎಐ ಚಿತ್ರ

ಆಹಾರವು ಪ್ರತಿಯೊಂದು ಜೀವಿಯ ಶಕ್ತಿ. ಉತ್ತಮ ಆಹಾರದ ಸೇವನೆ ನಮ್ಮ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಕರಿಸುತ್ತದೆ. ಹಾಗೆಂದ ಮಾತ್ರಕ್ಕೆ ನಾವು ಆಹಾರವನ್ನು ಮನಸ್ಸೊ ಇಚ್ಛೆ ಸೇವಿಸಲು ಸಾಧ್ಯವಿಲ್ಲ. ಆಹಾರವು ಶರೀರದಲ್ಲಿ ಶಕ್ತಿಯಾಗಿ ಕಾರ್ಯನಿರ್ವಹಿಸಬೇಕಾದರೆ ಅದನ್ನು ಆಯುರ್ವೇದದಲ್ಲಿ ಹೇಳಿದ ಪ್ರಕಾರ, ವಿಧಿ ವಿಧಾನಗಳಿಂದ ಸೇವಿಸಬೇಕು. ಆ ನಿಯಮಗಳಲ್ಲಿ ಅತ್ಯಂತ ಪ್ರಮುಖವಾದುದು ಅವಿರುದ್ಧ ಆಹಾರದ ಸೇವನೆ.

ಇಲ್ಲಿ ಆಹಾರ ಎಂದರೆ ಘನ ರೂಪ ಮಾತ್ರ ಅಲ್ಲ, ದ್ರವರೂಪದ ಆಹಾರವು ಹೌದು. ಪ್ರತಿಯೊಂದು ಆಹಾರಕ್ಕೆ ತನ್ನದೆ ಆದ ಗುಣ ಇರುತ್ತದೆ. ಆಯುರ್ವೇದದ ಪ್ರಕಾರ, ಬೇರೆ ಬೇರೆ ತಾಪಮಾನವಿರುವ ನೀರನ್ನು ಬೆರಸುವುದನ್ನು ವಿರುದ್ಧ ಗುಣ ಎನ್ನಲಾಗುತ್ತದೆ. ಈ ಆಹಾರ ಪರಿಕಲ್ಪನೆಯನ್ನು ಆರ್ಯುವೇದದಲ್ಲಿ ಸವಿಸ್ತಾರವಾಗಿ ವಿವರಿಸಿದ್ದಾರೆ. ವಿರುದ್ಧ ಆಹಾರಗಳನ್ನು ಬೆರೆಸುವುದರಿಂದ ಆಹಾರದ ಗುಣದಲ್ಲಿ ಮಾರ್ಪಾಡುಗಳು ಉಂಟಾಗುತ್ತವೆ. ‘ಸರ್ವಾದ ಸರ್ವಾಭಾವನಾಮ್ ಸಾಮಾನ್ಯಮ್ ವೃಧಿಕಾರಣಮ್’ ಎನ್ನುವಂತೆ, ತನ್ನದೆ ಗುಣವನ್ನು ಬೆರೆಸಿದಾಗ ಗುಣ ವೃದ್ಧಿಯಾಗುತ್ತದೆ. ಅದೇ ವಿರುದ್ಧ ಗುಣ ಬೆರೆಸಿದಾಗ ಆ ಆಹಾರದಲ್ಲಿ ಗುಣ ಕ್ಷೀಣವಾಗುತ್ತದೆ. ಇದು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ADVERTISEMENT

ಬಿಸಿನೀರು ಉಷ್ಣ ಗುಣವನ್ನು ಹಾಗೂ ತಣ್ಣೀರು ಶೀತಗುಣವನ್ನು ಹೊಂದಿರುತ್ತದೆ. ತಣ್ಣೀರಿನಲ್ಲಿ ಸ್ವಾಭಾವಿಕವಾಗಿ ಗುರು ಗುಣವಿರುತ್ತದೆ. ಅದನ್ನು ಬಿಸಿ ಮಾಡಿದಾಗ ಲಘುಗುಣವಾಗುತ್ತದೆ. ಬಿಸಿಯಾದ ನೀರಿಗೆ ತಣ್ಣೀರು ಬೆರೆಸಿದಾಗ ಗುಣ ಬದಲಾಗಿ ವಿವಿಧ ಕಾಯಿಲೆ ಬರುವುದಕ್ಕೆ ಕಾರಣವಾಗಬಹುದು. ನೀರನ್ನು ಬಿಸಿ ಮಾಡಿದಾಗ ಅದರಲ್ಲಿರುವ ಬ್ಯಾಕ್ಟೀರಿಯಾ ನಾಶವಾಗುತ್ತದೆ.

ಒಂದು ವೇಳೆ ತಣ್ಣೀರು ಮಿಶ್ರಣ ಮಾಡಿದರೆ ಮತ್ತೆ ಪುನಃ ಬ್ಯಾಕ್ಟೀರಿಯಾ ಉತ್ಪತ್ತಿಯಾಗಿ ಕಾಯಿಲೆ ಬರುತ್ತದೆ. ತಣ್ಣೀರು ವಾತ ಮತ್ತು ಕಫ ದೋಷಗಳನ್ನು ಉಲ್ಬಣಗೊಳಿಸುತ್ತದೆ. ವಾತ ಮತ್ತು ಕಫ ದೋಷ ಇವೆರಡೂ ಹೆಚ್ಚಾದಾಗ ಅಜೀರ್ಣ, ಕೀಲು ನೋವು, ಆತಂಕ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಬಿಸಿ ನೀರು ಪಿತ್ತದೋಷವನ್ನು ಸಮತೋಲನಗೊಳಿಸಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇವೆರೆಡನ್ನು ಬೆರೆಸಿದಾಗ ಗುಣದಲ್ಲಿ ಬದಲಾಗಿ ಅದು ಜೀರ್ಣಕ್ರಿಯೆಯಲ್ಲಿ ಏರುಪೇರು ಉಂಟಾಗುತ್ತದೆ. ಇದರಿಂದ ದೇಹದಲ್ಲಿ ಅಜೀರ್ಣ, ಶೀತ, ಜ್ವರ, ಹೊಟ್ಟೆ ಉಬ್ಬರ ಮುಂತಾದ ಕಾಯಿಲೆಗಳು ಹೆಚ್ಚಾಗುತ್ತದೆ.

ವೈಜ್ಞಾನಿಕವಾಗಿ ಹೇಳುವುದಾದರೆ, ಬಿಸಿ ನೀರನ್ನು ಸೇವಿಸಿದಾಗ ರಕ್ತನಾಳ ವಿಕಸನಗೊಳುತ್ತದೆ ಹಾಗೂ ಜೀರ್ಣಕ್ರಿಯೆಯಲ್ಲಿ ಸಹಾಯ ಉಂಟುಮಾಡುತ್ತದೆ. ತಣ್ಣೀರು ಸೇವನೆಯಿಂದ ರಕ್ತನಾಳ ಸಕುಂಚಿತಗೊಳ್ಳುತ್ತದೆ. ತಕ್ಷಣ ಇವೆರಡೂ ಬೆರೆಸಿದಾಗ ದೇಹದಲ್ಲಿ ಥರ್ಮಲ್ ಶಾಕ್ (ದೇಹದ ಉಷ್ಣತೆಯಲ್ಲಿ ವೈಪರಿತ್ಯ) ಉಂಟಾಗಿ ನಾನಾ ವಿದವಾದ ಕಾಯಿಲೆ ಉಂಟಾಗುತ್ತದೆ. ಶೀತ ಮತ್ತು ಬಿಸಿ ನೀರು ಸ್ನಾನ ಮಾಡಿದಾಗ ನಾನಾ ವಿಧವಾದ ಚರ್ಮದ ಖಾಯಿಲೆ, ಶೀತ, ನೆಗಡಿ ಉಂಟಾಗುತ್ತದೆ.

ಹಾಗಾಗಿ ನೀರು ಕುಡಿಯುವಾಗ ಯಾವಾಗಲೂ ಒಂದೇ ತಾಪಮಾನದ ನೀರನ್ನು ಬಳಸುವುದನ್ನು ರೂಢಿಸಿಕೊಳ್ಳಿ. ಒಂದು ಪೂರ್ಣ ಬಿಸಿ ಅಥವಾ ಸಾಮಾನ್ಯ ತಾಪಮಾನದ ನೀರು ಕುಡಿಯಿರಿ ಅಥವಾ ತಂಪಾದ ನೀರು ಕುಡಿಯಿರಿ. ನೀರು ಅತಿಯಾಗಿ ಬಿಸಿ ಇದ್ದರೆ, ತಣ್ಣೀರು ಬೆರೆಸುವ ಬದಲು ಸ್ವಲ್ಪ ಸಮಯ ಹಾಗೆಯೇ ಬಿಟ್ಟು ಅದು ಉಗುರು ಬೆಚ್ಚಗಾದ ಬಳಿಕ ಕುಡಿಯಿರಿ.

(ಲೇಖಕರು: ಡಾ. ರಾಕೇಶ್, ಸಹಾಯಕ ಪ್ರಾಧ್ಯಾಪಕರು (ಕಾಯಚಿಕಿತ್ಸ ವಿಭಾಗ), ಎಸ್‌ಡಿಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಹಾಸನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.