ADVERTISEMENT

ಕ್ಷೇಮ ಕುಶಲ: ಚಳಿಗಾಳಿಗೆ ಮೈಯೊಡ್ಡದಿರಿ!

ಡಾ.ಸತ್ಯನಾರಾಯಣ ಭಟ್ ಪಿ
Published 18 ನವೆಂಬರ್ 2025, 0:30 IST
Last Updated 18 ನವೆಂಬರ್ 2025, 0:30 IST
   
ಚಳಿಗಾಲ ಆರಂಭವಾಗಿದ್ದು, ದೇಹವನ್ನು ಬೆಚ್ಚಗಿಡಲು ಅಗತ್ಯವಿರುವ ಪೋಷಕಾಂಶಗಳನ್ನು ಸೇವಿಸುವುದು ಒಳಿತು

ನವರಾತ್ರಿಯಲ್ಲಿ ಆರಂಭಗೊಂಡ ಶರದೃತು ಇದೀಗ ಅಮಾವಾಸ್ಯೆಗೆ ಕೊನೆಯಾಗುತ್ತದೆ; ಚಳಿಯ ದಿನಗಳ ಹೇಮಂತ ಋತು ಆರಂಭವಾಗುತ್ತದೆ. ಇನ್ನೆರಡು ತಿಂಗಳು ಚಳಿಗಾಲದ ಕುಳಿರ್ಗಾಳಿಗೆ ಮೈ ಚರ್ಮ ಹೊಂದಿಕೊಳ್ಳುವ ಕಠಿಣ ಸವಾಲು. ಬೀಸುಗಾಳಿ ಕೂಡ ಥಂಡಿ. ಹಾಗಾಗಿ ಉಸಿರಾಟದ ತೊಂದರೆ ಏರುಮುಖ. ಶ್ವಾಸಕೋಶಗಳಲ್ಲಿ ಲೋಳ್ಪದರದ ಉರಿಯೂತದ ದೆಸೆಯಿಂದ ಎಳೆಗೂಸುಗಳಿಗೆ ಘುರಘುರ ಸದ್ದಿನ ತೊಡಕು. ಇಲ್ಲಿದೆ ಈ ಸಮಸ್ಯೆಗಳಿಗೆ ಆಯುರ್ವೇದ ಸಂಹಿತೆಗಳ ಅನುಭವದ ಉಪಚಾರಗಳು:

*ಮೀಯುವ ಹಬ್ಬದ ದೀವಳಿಗೆಯಿಂದ ಆರಂಭವಾಗುವ ಸುದೀರ್ಘ ಕತ್ತಲೆಯ ದಿನಗಳ ಅವಧಿ ಈಗಂತೂ ಹೆಚ್ಚುತ್ತಲೇ ಇದೆ. ಬೇಗ ಉಂಡು ಮಲಗುವ ಅಭ್ಯಾಸವಿದ್ದರಂತೂ ಬೆಳಗಾಗುತ್ತಲೇ ಅತೀವ ಹಸಿವೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ನಾವು ‘ಗುರು’, ಎಂದರೆ ನಿಧಾನವಾಗಿ ಪಚನವಾಗುವ ಆಹಾರವನ್ನು ತಿನ್ನುವುದು ಉತ್ತಮ. ಬೀಸುಗಾಳಿಗೆ ಕಿಚ್ಚು ಹೆಚ್ಚುವಂತೆ ಜಠರಾಗ್ನಿಯೂ ಹೆಚ್ಚುವುದು ಸಹಜ. ಸುಡಲು ಇಂಧನ ಇಲ್ಲವಾದರೆ ಧಾತುಗಳು ಕೂಡ ಪಚನವಾಗುವುದು ಎಂಬ ಎಚ್ಚರಿಕೆಯ ಮಾತು ವಾಗ್ಭಟರದು. ದಕ್ಷಿಣಾಯನ ಋತುಗಳಿಗೆ ಅನ್ವಯವಾಗುವಂತೆ ‘ಗುರುಆಹಾರ’, ಎಂದರೆ ನಿಧಾನವಾಗಿ ಅರಗುವಂತಹ ಆಹಾರ ಸೇವಿಸುವುದು ಸೂಕ್ತ. ಕಡುಬು, ಕಜ್ಜಾಯಗಳು, ಗೋಧಿಯ ಅಡುಗೆಗಳಿಗೆ ಪ್ರಾಶಸ್ತ್ಯ.

*ಭೂಮಿಯು ತಂಪಾಗುವುದು. ‘ಸೋಮ’. ಎಂದರೆ ಚಂದ್ರನ ಶಕ್ತಿ ಈ ಋತುವಿನಲ್ಲಿ ಪ್ರಬಲ. ಮಕರ ಸಂಕ್ರಮಣ ಪರ್ಯಂತ ಸೋಮಶಕ್ತಿಯ ದೆಸೆಯಿಂದ ದೇಹದ ಬಲ ಹೆಚ್ಚು. ಹಾಗೆಂದು ಬೀಸುವ ಕುಳಿರ್ಗಾಳಿಗೆ ಎದುರು ನಡಿಗೆಗೆ ಆಯುರ್ವೇದ ಮನ್ನಣೆ ಕೊಡದು. ಬೆಚ್ಚನೆ ಬಟ್ಟೆ ಧರಿಸಿ, ನಿಧಾನದ ನಡಿಗೆ ಮಾಡುವುದು ಉತ್ತಮ.

ADVERTISEMENT

*ಚರ್ಮದ ಬಿರುಸಿನ ಮತ್ತು ಬಿರುಕಿನ ಸಮಸ್ಯೆ ಈ ದಿನಗಳಲ್ಲಿ ಹೆಚ್ಚು. ಹಾಗಾಗಿ ದೀವಳಿಗೆಗೆ ಶುರುಮಾಡುವ ನೆತ್ತಿ, ಮೈ, ಕೈ, ಕಾಲುಗಳ ಅಭ್ಯಂಜನದಿಂದ ಚರ್ಮದ ಕಾಂತಿ ಮತ್ತು ಆರೋಗ್ಯ ಕಾಪಾಡಲು ಶಕ್ಯ. ಬೆವರದ ಚರ್ಮ
ರಂಧ್ರಗಳಿಗೆ ಹದ ಬಿಸಿ ತೈಲ ಮಾಲೀಶು ಒಳಿತು. ಅನಂತರ ಹದ ಬಿಸಿ ಸ್ನಾನದಿಂದ ಆರೋಗ್ಯ ವೃಧ್ಧಿ.

*ಸಿಹಿ ಮತ್ತು ಹುಳಿರಸದ ಹೇರಳ ಬಳಕೆಯಿಂದ ಹಸಿವಿನ ತೀವ್ರತೆ ಇಳಿಕೆ. ನಿಂಬೆಪಾನಕ, ಮಾದಳ ಹುಳಿರಸದ ಪಾನಕ, ಮುರುಗಲ(ಕೋಕಂ), ವಾಟೆಹುಳಿಯ ಸಾರು, ಷರಬತ್ತು ಕಾಲಕಾಲಕ್ಕೆ ಸೇವಿಸಲಾದೀತು. (ಹುಣಿಸೆಯ ಬದಲಿಗೆ ಟೊಮೆಟೊ ಬಳಸದಿರಿ. ಅದರಲ್ಲಿರುವ ಅತಿ ಯೂರಿಕ್ ಅಮ್ಲವು ಮೂತ್ರಕೋಶದ ಕಲ್ಲು, ಕೀಲುಗಂಟಿನ ಸಮಸ್ಯೆಗೆ ಹೆದ್ದಾರಿ.)

*ಹೇಗಿದ್ದರೂ ಹೊಸ ಧಾನ್ಯಗಳು ಕಟಾವಣೆಯಾಗಿರುವ ಸುಗ್ಗಿಕಾಲ. ಹಾಗಾಗಿ ಅವುಗಳನ್ನು ಬಳಸಲು ಹೇಮಂತ ಋತುವಿನ ಚಳಿದಿನಗಳು ಸೂಕ್ತ. ಹೊಸ ಎಳ್ಳಿನ ಎಣ್ಣೆಯಿಂದ ಮಾಲೀಷು ಉತ್ತಮ.

*ಉದ್ದು ಮತ್ತು ಕಬ್ಬಿನ ಹಾಲಿನ ಭಕ್ಷ್ಯಗಳು ಚಳಿಯ ದಿನಗಳಿಗೆ ಹಿತವಾದವು; ಹೆಚ್ಚು ಕ್ಯಾಲೊರಿಯನ್ನೂ ಒದಗಿಸುತ್ತವೆ.

*ಸಂಜೆಯ ವೇಳೆಯಾಗಲಿ, ಮುಂಜಾನೆಯಾಗಲಿ. ಸ್ನಾನ, ಕೈಕಾಲು ಮುಖ ಉಳಿದ ಪ್ರಕ್ಷಾಳನ ಕೆಲಸಗಳಿಗೂ ಹದ ಬಿಸಿನೀರನ್ನು ಬಳಸುವುದು ಉತ್ತಮ. ಅತಿ ಬಿಸಿ ಬಳಸಿದರೆ ಚರ್ಮದ ಬಿರುಸುತನ ಹೆಚ್ಚಾಗುತ್ತದೆ.

*ವಿರಾಮ ಕಾಲವಿರಲಿ, ಕೆಲಸದ ಪಾಳಿಯಿರಲಿ. ಧರಿಸುವ ಬಟ್ಟೆ ಚರ್ಮದ ಬಿಸಿತನ ಕಾಪಾಡುವ ಅಗತ್ಯವಿದೆ. ನಿರಂತರ ಎ.ಸಿ. ಬಳಕೆಯಿಂದ
ಚರ್ಮಾರೋಗ್ಯಕ್ಕೆ ಹಾನಿ ಖಂಡಿತ.

*ಪ್ರಖರ ಸೂರ್ಯರಶ್ಮಿಯಿಂದ ದೇಹವನ್ನು ಕಾಪಾಡಿಕೊಳ್ಳಿರಿ. ಸಂಜೆಯ ಬಿಸಿಲಿಗೆ ಮೈ ಒಡ್ಡಿರಿ.

*ಮಲಗುವ ಕೋಣೆಯ ಶಾಖ ಕಾಪಾಡಲು ಧೂಪನ ವಿಧಾನ ಉತ್ತಮ. ಅಗ್ಗಿಷ್ಟಿಕೆ, ಎಂದರೆ ಕೆಂಡದ ಕುಂಡದಲ್ಲಿ ಗಂಧ, ಚಂದನ, ರಾಳದ ಪುಡಿ ಉದುರಿಸಿ ಕೋಣೆ ಬೆಚ್ಚನೆ ಇರಿಸುವ ವಿಧಾನ ಒಳಿತು.

*ಎಳೆಯ ಮಕ್ಕಳ ಘುರಘುರ ಸಪ್ಪಳ ಸಹಿತ ಕೆಮ್ಮನ್ನು ಪರಿಹರಿಸಲು ಈ ಉಪಾಯ ಪ್ರಯತ್ನಿಸಿರಿ. ಸೌಟಿನಲ್ಲಿ ಎಳ್ಳೆಣ್ಣೆ ಮತ್ತು ತುಪ್ಪ ಬೆರಸಿ ಬಿಸಿ ಮಾಡಿರಿ. ನೆತ್ತಿ ಮೇಲೆ ಹದ ಬಿಸಿ ಹಚ್ಚಿರಿ. ಕೂಡಲೇ ಮೀಯಿಸಿರಿ. ಬೆಚ್ಚನೆ ಬಟ್ಟೆ ಹಾಕಿ ಮಗುವಿಗೆ ಚೆನ್ನಾಗಿ ಹೊದ್ದು ಮಲಗಿಸಿರಿ. ಮೂಗುಕಟ್ಟುವ ತೊಂದರೆ ಪರಿಹಾರವಾಗುತ್ತದೆ.

*ನಡುರಾತ್ರಿಯ ವೇಳೆ ಯಾರಿಗಾದರೂ ಉಸಿರಾಟದ ತೊಂದರೆ ಕಂಡರೆ ಬಿಸಿಮಾಡಿದ ಎಳ್ಳೆಣ್ಣೆ ಮತ್ತು ಉಪ್ಪಿನ ಮಾಲೀಶನ್ನು ಎದೆ, ಬೆನ್ನಿನ ಭಾಗಕ್ಕೆ ಮಾಡುವುದು ಉತ್ತಮ. ಅನಂತರ ಬಿಸಿನೀರಿನ ಶಾಖದಿಂದ ತುಸು ನಿರಾಳ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.