
ಚಿತ್ರ: ಗೆಟ್ಟಿ
ಚಳಿಗಾಲದಲ್ಲಿ ಗರ್ಭಿಣಿಯರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಶೀತದ ವಾತಾವರಣ ರಕ್ತಪರಿಚಲನೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ತಾಯಿ ಮತ್ತು ಮಗುವಿಗೆ ತೊಂದರೆಯನ್ನುಂಟು ಮಾಡುತ್ತದೆ. ಅದಕ್ಕಾಗಿಯೇ ಚಳಿಗಾಲದಲ್ಲಿ ಗರ್ಭಿಣಿಯರು ಹೆಚ್ಚಿನ ಕಾಳಜಿವಹಿಸಬೇಕು ಎನ್ನುತ್ತಾರೆ ವೈದ್ಯರು.
ಚಳಿಗಾಲವು ಹೇಗೆ ಹಾನಿ ಮಾಡಬಹುದು?
ಗರ್ಭಾವಸ್ಥೆಯಲ್ಲಿ, ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಇದರಿಂದ ದೇಹ ಶೀತ, ಜ್ವರದಂತಹ ಸೋಂಕಿಗೆ ಒಳಗಾಗುತ್ತದೆ. ಚಳಿ ರಕ್ತನಾಳಗಳನ್ನು ಸಂಕುಚಿತಗೊಳಿಸಬಹುದು. ಇದರಿಂದ ರಕ್ತಪರಿಚಲನೆ ನಿಧಾನವಾಗುತ್ತದೆ. ಕೀಲು ನೋವು, ಆಯಾಸ ಕಾಡುವಂತೆ ಮಾಡುತ್ತದೆ. ಅಲ್ಲದೆ ಚಳಿ ಎಂದು ನೀರು ಕುಡಿಯದೇ ಇದ್ದರೆ ನಿರ್ಜಲೀಕರಣವಾಗಿ ಮೂತ್ರ ಸೋಂಕಿಗೆ ಕಾರಣವಾಗಬಹುದು.
ಅವಧಿಪೂರ್ವ ಜನನ: ಚಳಿಗಾಲದ ಒತ್ತಡವು ಮಗುವಿಗೆ ರಕ್ತ ಹರಿವು ಮತ್ತು ಆಮ್ಲಜನಕವನ್ನು ಕಡಿಮೆ ಮಾಡಬಹುದು. ಇದು ಅವಧಿಪೂರ್ವ ಹೆರಿಗೆಗೆ ಕಾರಣವಾಗುತ್ತದೆ.
ಉಸಿರಾಟದ ಸೋಂಕುಗಳು: ರೋಗನಿರೋಧಕ ಶಕ್ತಿಯ ಕೊರತೆಯಿಂದ ಗರ್ಭಾವಸ್ಥೆಯಲ್ಲಿ ಹೃದಯ ಮತ್ತು ಶ್ವಾಸಕೋಶಗಳ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಬಹುದು. ಇದರಿಂದ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.
ನೀರಿನ ಕೊರತೆ: ಚಳಿಗಾಲದಲ್ಲಿ ಶೀತ, ಶುಷ್ಕ ಗಾಳಿ ಬಾಯಾರಿಕೆಯನ್ನು ಕಡಿಮೆ ಮಾಡಬಹುದು. ಇದರಿಂದ ದ್ರವ ಪದಾರ್ಥ ಸೇವನೆ ಕಡಿಮೆಯಾಗಿ ದೇಹದಲ್ಲಿ ನಿರ್ಜಲೀಕರಣ ಉಂಟಾಗುಬಹುದು. ಪರಿಣಾಮ ಅವಧಿಪೂರ್ವ ಹೆರಿಗೆ, ಮಲಬದ್ಧತೆ, ಮೂತ್ರನಾಳದ ಸೋಂಕಿನ ಅಪಾಯಗಳನ್ನು ಹೆಚ್ಚಿಸಬಹುದು.
ಒಣ ಮತ್ತು ಚರ್ಮದ ತುರಿಕೆ : ಚಳಿಗಾಲದಲ್ಲಿ ಬೀಸುವ ತಣ್ಣಗಿನ ಗಾಳಿ ಚರ್ಮವನ್ನು ಒಣಗಿಸಿ ತುರಿಕೆ ಉಂಟಾಗುವಂತೆ ಮಾಡುತ್ತದೆ. ಹೀಗಾಗಿ ಆದಷ್ಟು ಬೆಚ್ಚಗಿನ ಬಟ್ಟೆ ಧರಿಸುವುದು ಒಳಿತು.
ವಿಟಮಿನ್ ಡಿ ಕೊರತೆ: ಚಳಿಗಾಲದಲ್ಲಿ ಸೂರ್ಯನ ಬೆಳಕಿಗೆ ದೇಹವನ್ನು ಒಡ್ಡಿಕೊಳ್ಳದಿದ್ದರೆ ಹೊಟ್ಟೆಯಲ್ಲಿರುವ ಮಗು ಮತ್ತು ತಾಯಿ ಇಬ್ಬರಿಗೂ ವಿಟಮಿನ್ ಡಿ ಕೊರತೆ ಕಾಡಬಹುದು. ಹೀಗಾಗಿ ಎಳೆ ಬಿಸಿಲಿಗೆ ಮೈಒಡ್ಡುವುದು ಮುಖ್ಯವಾಗಿದೆ.
ದೇಹವನ್ನು ಬೆಚ್ಚಗಿಡುವುದು: ಉಣ್ಣೆ ಅಥವಾ ಕಾಟನ್ ಬಟ್ಟೆಗಳು ದೇಹವನ್ನು ಬೆಚ್ಚಗಿಡಲು ಸಹಾಯ ಮಾಡಬಲ್ಲದು.
ಪೌಷ್ಟಿಕ, ಬೆಚ್ಚಗಿನ ಆಹಾರವನ್ನು ಸೇವಿಸಿ: ಚಳಿಗಾಲದಲ್ಲಿ ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್‌ಗಳಿಂದ ಸಮೃದ್ಧವಾದ ಸಮತೋಲಿತ ಆಹಾರದ ಸೇವನೆ ಅತ್ಯಗತ್ಯ. ಸೂಪ್, ಗಂಜಿ ಮತ್ತು ಗಿಡಮೂಲಿಕೆಗಳ ಚಹಾದಂತಹ ಬೆಚ್ಚಗಿನ, ಬೇಯಿಸಿದ ತರಕಾರಿಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಋತುಮಾನದ ಹಣ್ಣು, ತರಕಾರಿ, ಬೀಜ ಮತ್ತು ಕಾಳುಗಳು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡಬಲ್ಲದು.
ವ್ಯಾಯಾಮ ಮತ್ತು ವಿಶ್ರಾಂತಿ: ಗರ್ಭಾವಸ್ಥೆಯಲ್ಲಿ ಸೂಕ್ತ ವ್ಯಾಯಾಮ ಮತ್ತು ವಿಶ್ರಾಂತಿ ಎರಡೂ ಅಗತ್ಯವಾಗಿರುತ್ತದೆ. ತರಬೇತುದಾರರ ನೆರವು ಪಡೆದ ನಂತರ ವ್ಯಾಯಾಮಗಳನ್ನು ಮಾಡಿ. ಅದೇ ರೀತಿ ನಿದ್ದೆಯನ್ನೂ ಸರಿಯಾದ ಸಮಯಕ್ಕೆ ಮಾಡಿ.
ನಿಯಮಿತ ತಪಾಸಣೆ: ಸರಿಯಾದ ಸಮಯಕ್ಕೆ ವೈದ್ಯರನ್ನು ಭೇಟಿ ಮಾಡಿ ನಿಯಮಿತ ತಪಾಸಣೆಯನ್ನು ಮಾಡಿಸಿಕೊಳ್ಳಿ. ಇದರಿಂದ ಗರ್ಭಾವಸ್ಥೆಯಲ್ಲಿ ಕಾಡುವ ರಕ್ತದೊತ್ತಡ, ಮಧುಮೇಹದಂತಹ ಸಮಸ್ಯೆಗಳಿಂದ ದೂರವಿರಬಹುದು. ಅಲ್ಲದೆ ಮಗುವಿನ ಬೆಳವಣಿಗೆ ಮತ್ತು ಒಟ್ಟಾರೆ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಬಹುದು.
ಗರ್ಭಾವಸ್ಥೆಯಲ್ಲಿ ನಿಮ್ಮ ದೇಹವು ಬದಲಾವಣೆಗಳು ಮತ್ತು ಹವಾಮಾನಕ್ಕೆ ಹೊಂದಿಕೊಳ್ಳುತ್ತದೆ. ಆದರೆ, ಇದಕ್ಕೆ ಮಿತಿಗಳಿವೆ. ಹೀಗಾಗಿ ಸರಿಯಾದ ಕಾಳಜಿ ಅಗತ್ಯವಾಗಿರುತ್ತದೆ.
ಲೇಖಕರು: ಡಾ. ಸ್ಮೃತಿ ಡಿ ನಾಯಕ್, ಸಲಹೆಗಾರರು, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಆಸ್ಟರ್ ಆರ್‌ವಿ ಆಸ್ಪತ್ರೆ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.