
ವಿಶ್ವ ಕ್ಯಾನ್ಸರ್ ದಿನ
ಇಂದು ವಿಶ್ವ ಕ್ಯಾನ್ಸರ್ ದಿನ. ವೈದ್ಯೆಯಾಗಿ ಕ್ಯಾನ್ಸರ್ ರೋಗಿಗಳ ಜೊತೆ ನಿತ್ಯವೂ ಒಡನಾಡುವಾಗ ವೈದ್ಯಕೀಯವಾಗಿ ಮತ್ತು ವೈಯಕ್ತಿಕವಾಗಿ ನಾನು ಕಂಡ ಮುಖಗಳು, ಅವರೊಳಗಿನ ವಿಭಿನ್ನ ಕತೆಗಳು ಮತ್ತು ಕ್ಯಾನ್ಸರ್ ಎದುರಿನ ಹೋರಾಟದಲ್ಲಿ ಅವರು ತೋರುತ್ತಿರುವ ಧೈರ್ಯ ಎಲ್ಲವೂ ನನ್ನ ಕಣ್ಣ ಮುಂದೆ ಹಾದು ಹೋಗುತ್ತವೆ. ಪ್ರತಿ ರೋಗಿಯೂ ವಿಭಿನ್ನವಾದ ಅನುಭವವನ್ನು ಹೊತ್ತು ಬರುತ್ತಾರೆ. ಆದರೆ, ಎಲ್ಲರನ್ನೂ ಒಂದುಗೂಡಿಸುವುದು ಒಂದೇ ಭರವಸೆ. ಇನ್ನಷ್ಟು ಕಾಲ ಉಳಿಯುವುದು, ರೋಗದಿಂದ ಗುಣಮುಕ್ತರಾಗುವುದು ಮತ್ತು ಜೀವನವನ್ನು ಮರಳಿ ಹಳಿಗೆ ತಂದುಕೊಳ್ಳುವ ಭರವಸೆಯೇ ಎಲ್ಲರಲ್ಲೂ ಕಾಣುತ್ತದೆ. ಈ ಭರವಸೆ ಮನುಷ್ಯರ ಚೈತನ್ಯವನ್ನು ಮತ್ತಷ್ಟು ಹೆಚ್ಚಿಸುವುದು ಮಾತ್ರವಲ್ಲ, ವಿಜ್ಞಾನದ ಬಲದಲ್ಲಿ ಜೀವಗಳನ್ನು ಉಳಿಸಲು ಪ್ರಯತ್ನಿಸುವ ವೈದ್ಯಕೀಯ ಕ್ಷೇತ್ರದ ಎಲ್ಲರಿಗೂ ಶಕ್ತಿ ತುಂಬುತ್ತದೆ.
ಕ್ಯಾನ್ಸರ್ ಜಗತ್ತು ಎದುರಿಸುತ್ತಿರುವ ಗಂಭೀರವಾದ ಸಮಸ್ಯೆ. ಪ್ರತಿ ವರ್ಷ 2 ಕೋಟಿಯಷ್ಟು ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಲೇ ಇದೆ. ಕ್ಯಾನ್ಸರ್ ರೋಗವು ಈಗ ಪ್ರತಿ ಕುಟುಂಬ, ಪ್ರತಿ ಸಮುದಾಯವನ್ನೂ ಆವರಿಸಿಕೊಳ್ಳುತ್ತಿದೆ. ಇಂತಹ ಗಂಭೀರವಾದ ವಾಸ್ತವದ ಜೊತೆಯಲ್ಲೇ ಸತ್ಯಕ್ಕೆ ಬಲತುಂಬುವ ಅವಕಾಶವೂ ನಮ್ಮ ಮುಂದಿದೆ. ಮುಂಚಿತವಾಗಿ ಪರೀಕ್ಷೆಯ ಮೂಲಕ ರೋಗ ಪತ್ತೆ ಸಾಧ್ಯವಾದರೆ ಹಲವು ಬಗೆಯ ಕ್ಯಾನ್ಸರ್‌ಗಳಿಗೆ ಚಿಕತ್ಸೆ ಸಾಧ್ಯವಿದೆ. ಗುಣಮುಖರಾಗುವ, ಬದುಕಿ ಉಳಿಯುವ ಅವಕಾಶಗಳೂ ದುಪ್ಪಟ್ಟಾಗಿದ್ದು, ಕೆಲವು ಪ್ರಕರಣಗಳಲ್ಲಿ ಈ ಸಾಧ್ಯತೆ ಮೂರುಪಟ್ಟು ಆಗಲೂಬಹುದು. ಆದ್ದರಿಂದ ಜಾಗೃತಿ ಮೂಡಿಸುವ ಕೆಲಸವು ಕ್ಯಾನ್ಸರ್ ಎದುರಿನ ಹೋರಾಟದಲ್ಲಿ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತದೆ.
ಅಪಾಯ ಎನ್ನುವುದು ಒಂದು ನೆರಳಿನಂತಲ್ಲ, ಅದು ಹಲವು ಕಾರಣಗಳ ಒಂದು ಗುಚ್ಛವಿದ್ದಂತೆ. ಅವುಗಳಲ್ಲಿ ಕೆಲವು ನಮ್ಮ ನಿಯಂತ್ರಣದಲ್ಲಿದ್ದರೆ, ಇನ್ನೂ ಕೆಲವು ಇರುವುದಿಲ್ಲ. ಇಂತಹ ಬೃಹತ್ ಸವಾಲನ್ನು ಎದುರಿಸಬೇಕಾದರೆ ನಾವು ಸಮಸ್ಯೆಯನ್ನು ಅತ್ಯಂತ ನಿಖರವಾಗಿ ವಿಶ್ಲೇಷಿಸಬೇಕಾಗುತ್ತದೆ.
ಬದಲಾಯಿಸಲಾಗದವು
ವಯಸ್ಸು: ಬಹುತೇಕ ಕ್ಯಾನ್ಸರ್ ಪ್ರಕರಣಗಳಲ್ಲಿ ರೋಗಿಯ ವಯಸ್ಸು ಅತಿ ಹೆಚ್ಚು ಅಪಾಯಕ್ಕೆ ಕಾರಣವಾಗುತ್ತದೆ. ನಮ್ಮ ಜೀವಕೋಶಗಳ ವಯಸ್ಸು ಮತ್ತು ವಂಶವಾಹಿಗಳಲ್ಲಿ ಆಗಿರಬಹುದಾದ ಬದಲಾವಣೆಗಳು, ವ್ಯತ್ಯಾಸಗಳು ಕ್ಯಾನ್ಸರ್ ಉಲ್ಬಣವಾಗಲು ಕಾರಣವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ನಮಗೆ ವಯಸ್ಸಾದಂತೆಲ್ಲವೂ ನಿಯಮಿತವಾಗಿ ತಪಾಸಣೆಗೆ ಒಳಗಾಗುವ ವಿಷಯದಲ್ಲಿ ಯಾವುದೇ ರಾಜಿಯೂ ಇರಕೂಡದು.
ಆನುವಂಶೀಯತೆ: ಕೆಲವು ಕ್ಯಾನ್ಸರ್ ಪ್ರಕರಣಗಳಲ್ಲಿ ವಂಶವಾಹಿಯಲ್ಲಿನ ಬದಲಾವಣೆಗಳಿಂದಲೇ ಮುನ್ಸೂಚನೆ ದೊರಕಲು ಸಾಧ್ಯವಿದೆ. ಉದಾಹರಣೆಗೆ: ಬಿಆರ್‌ಸಿಎ1/2 ವಂಶವಾಹಿಯಲ್ಲಿನ ಬದಲಾವಣೆಯು ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ವಂಶವಾಹಿಗಳಿಗೆ ಸಂಬಂಧಿಸಿದ ಪರೀಕ್ಷೆಗಳು ಮತ್ತು ತಜ್ಞ ವೈದ್ಯರ ಜೊತೆಗಿನ ಆಪ್ತ ಸಮಾಲೋಚನೆಯು ಕ್ಯಾನ್ಸರ್ ರೋಗದ ಕುರಿತ ಮುನ್ನೆಚ್ಚರಿಕೆ ಹಾಗೂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ನೆರವಾಗುತ್ತವೆ.
ಪ್ರಭಾವ: ಜೀವನಶೈಲಿ ಮತ್ತು ಪರಿಸರ
ತಂಬಾಕು: ಜಗತ್ತಿನಾದ್ಯಂತ ತಡೆಯಬಹುದಾದ ಕ್ಯಾನ್ಸರ್ ಪ್ರಕರಣಗಳ ಹೆಚ್ಚಳದಲ್ಲಿ ತಂಬಾಕು ಸೇವನೆಯ ಪಾತ್ರ ದೊಡ್ಡದು. ಕ್ಯಾನ್ಸರ್ ರೋಗವು ಶ್ವಾಸಕೋಶ ಮಾತ್ರವಲ್ಲ ದೇಹದ ಇತೆರೆಡೆಗಳನ್ನು ಬಾಧಿಸುವುದಕ್ಕೂ ಇದು ಕಾರಣವಾಗುತ್ತದೆ. ತಂಬಾಕು ಉತ್ಪನ್ನಗಳನ್ನು ಜಗಿಯುವುದೇ ಆಗಿರಲಿ, ಧೂಮಪಾನ ಮಾಡುವುದೇ ಆಗಿರಲಿ ಯಾವುದೂ ಮನುಷ್ಯನ ದೇಹಕ್ಕೆ ಸುರಕ್ಷಿತವಲ್ಲ.
ಪಥ್ಯ ಮತ್ತು ತೂಕ ನಿಯಂತ್ರಣ: ಸ್ಥೂಲ ಕಾಯವು 13 ಬಗೆಯ ಕ್ಯಾನ್ಸರ್‌ಗಳಿಗೆ ಕಾರಣವಾಗುತ್ತಿದೆ. ಸ್ಥೂಲಕಾಯದ ವ್ಯಕ್ತಿಗಳ ದೇಹದಲ್ಲಿನ ಅತಿಯಾದ ಉರಿಯೂತ ಮತ್ತು ಹಾರ್ಮೋನುಗಳಲ್ಲಿನ ಬದಲಾವಣೆ ಹಾಗೂ ಹೆಚ್ಚುವರಿ ಕೊಬ್ಬಿನ ಅಂಶಗಳು ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಅಪಾಯವಿರುತ್ತದೆ. ಹಣ್ಣುಗಳು, ತರಕಾರಿ ಮತ್ತು ನಾರಿನ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಈ ಅಪಾಯವನ್ನು ತಗ್ಗಿಸಬಹುದು. ಆದರೆ, ಸಂಸ್ಕರಿತ ಮಾಂಸ ಸೇವನೆಯು ಈ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಮದ್ಯಪಾನ: ನಿರಂತರ ಮತ್ತು ಅತಿಯಾದ ಮದ್ಯ ಸೇವನೆಯು ಕ್ಯಾನ್ಸರ್‌ಕಾರಕ. ಅತಿಯಾದ ಮದ್ಯ ಸೇವನೆಯು ದೇಹದಲ್ಲಿನ ಜೀವಕೋಶಗಳಿಗೆ ಹಾನಿ ಮಾಡುತ್ತದೆ ಮತ್ತು ಅವು ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಹೀರಿಕೊಂಡು, ಅದನ್ನು ಶಕ್ತಿಯಾಗಿ ಪರಿವರ್ತಿಸುವ ಪ್ರಕ್ರಿಯೆಯ ಮೇಲೆ ದುಷ್ಪರಿಣಾಮ ಬೀರುತ್ತದೆ.
ಸೋಂಕುಗಳು: ಎಚ್‌ಪಿವಿ (ಗರ್ಭಕಂಠ, ಬಾಯಿ ಮತ್ತು ಗಂಟಲಿನ ಕ್ಯಾನ್ಸರ್) ಮತ್ತು ಹೆಪಟೈಟಿಸ್ ಬಿ ಮತ್ತು ಸಿ (ಯಕೃತ್ತಿನ ಕ್ಯಾನ್ಸರ್) ವೈರಾಣುಗಳು ಜಗತ್ತಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾನ್ಸರ್ ಪ್ರಕರಣಗಳಿಗೆ ಕಾರಣವಾಗುತ್ತಿವೆ. ಲಸಿಕೆ ಹಾಕಿಸಿಕೊಳ್ಳುವುದು ಮತ್ತು ಚಿಕಿತ್ಸೆ ಪಡೆಯುವುದರಿಂದ ಇಂತಹ ಕ್ಯಾನ್ಸರ್ ಪ್ರಕರಣಗಳನ್ನು ತಡೆಯಲು ಸಾಧ್ಯವಿದೆ.
ಪರಿಸರ: ಆಸ್‌ಬೆಸ್ಟೋಸಿಸ್, ವಿಕಿರಣವನ್ನು ಒಳಗೊಂಡಿರುವ ರೇಡಾನ್ ಅನಿಲ ಅಥವಾ ಕೈಗಾರಿಕಾ ರಾಸಾಯನಿಕಗಳು ಹಾಗೂ ಸೂರ್ಯನಿಂದ ಬರುವ ನೇರಳಾತೀತ ವಿಕಿರಣಗಳಿಗೆ ದೇಹವನ್ನು ದೀರ್ಘಕಾಲ ಒಡ್ಡಿಕೊಳ್ಳುವುದು ಕೂಡ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುತ್ತದೆ.
ಅಪಾಯವೇ ಅಂತ್ಯವಲ್ಲ: ಅಪಾಯದ ಸಾಧ್ಯತೆಗಳು ಒಂದು ಪಾರ್ಶ್ವನೋಟವಷ್ಟೇ. ಈ ಪಾರ್ಶ್ವನೋಟವನ್ನು ಆಧಾರವಾಗಿಟ್ಟುಕೊಂಡು ಕ್ಯಾನ್ಸರ್ ತಪಾಸಣೆಗೆ ಒಳಗಾಗುವ ಮೂಲಕ ರೋಗ ಪತ್ತೆ ಹಾಗೂ ನಿಯಂತ್ರಣ ಕ್ರಮಗಳಿಗೆ ಆದ್ಯತೆ ನೀಡಬೇಕು. ಇದು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಫಲಿತಾಂಶ ಬದಲಿಸಬಲ್ಲ ನಿರ್ಣಾಯಕ ಅಂಶ.
ಆದ್ದರಿಂದ ಕ್ಯಾನ್ಸರ್ ಎಂಬ ದೊಡ್ಡ ಸವಾಲನ್ನು ಮಣಿಸಬೇಕಾದರೆ ಜಾಗೃತಿಯಿಂದ ಕ್ರಿಯೆಯವರೆಗೆ ಎಂಬ ಸೂತ್ರವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂಬುದು ವಿಶ್ವ ಕ್ಯಾನ್ಸರ್ ದಿನದ ಹೊತ್ತಿನಲ್ಲಿ ನನ್ನ ಸಲಹೆ.
ನಿಮ್ಮ ಬಗ್ಗೆ ನೀವು ತಿಳಿಯಿರಿ: ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಇರುವ ಕ್ಯಾನ್ಸರ್ ಅಪಾಯದ ಸಾಧ್ಯತೆಗಳ ಕುರಿತು ಅರಿಯಬೇಕಾದರೆ ಮೊದಲು ಕೌಟುಂಬಿಕ ರೋಗ ಚರಿತ್ರೆಯನ್ನು ವೈದ್ಯರೊಂದಿಗೆ ಪ್ರಾಮಾಣಿಕವಾಗಿ ಹಂಚಿಕೊಳ್ಳಿ. ರೋಗದ ಕುರಿತ ಜ್ಞಾನವೇ ನಿಮ್ಮ ಮೊದಲ ಸುರಕ್ಷಾ ಸಾಧನ ಎಂಬುದನ್ನು ಮರೆಯದಿರಿ.
ವಿಶ್ವಾಸಪೂರ್ವಕವಾಗಿ ಪರೀಕ್ಷಿಸಿಕೊಳ್ಳಿ: ಸ್ತನ, ಗರ್ಭಕಂಠ,ಕರುಳು ಮತ್ತು ಶ್ವಾಸಕೋಶ ಕ್ಯಾನ್ಸರ್‌ಗಳು ಹೆಚ್ಚು ಜನರನ್ನು ಕಾಡುತ್ತವೆ. ಈ ಕಾರಣದಿಂದ ನಿಯಮಿತವಾಗಿ ರೋಗಪತ್ತೆ ಪರೀಕ್ಷೆಗೆ ಒಳಗಾಗಬೇಕು. ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಮುನ್ನವೇ ರೋಗದ ಅಪಾಯ ಸಾಧ್ಯತೆಗಳನ್ನು ಗುರುತಿಸಬಲ್ಲ ಪರೀಕ್ಷೆಗಳು ಲಭ್ಯವಿವೆ. ಅಂತಹ ಪರೀಕ್ಷೆಗಳಿಂದ ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಅವಕಾಶ ದೊರಕುತ್ತದೆ.
ನಿಮ್ಮ ದೇಹದ ಮಾತನ್ನು ಆಲಿಸಿ: ದೇಹದಲ್ಲಿ ಗಡ್ಡೆಗಳು ಕಾಣಿಸಿಕೊಳ್ಳುವುದು, ಅನಿಯಮಿತ ತೂಕ ಇಳಿಕೆ, ದೀರ್ಘಾವಧಿಯವರೆಗೆ ಕಫ, ಅತಿಯಾದ ರಕ್ತಸ್ರಾವ, ಅತಿಯಾದ ಆಯಾಸ ದೇಹವನ್ನು ಬಾಧಿಸಿದಲ್ಲಿ ವಿಳಂಬವಿಲ್ಲದೇ ವೈದ್ಯರನ್ನು ಭೇಟಿಮಾಡಿ, ಪರೀಕ್ಷೆಗೆ ಒಳಗಾಗಿ.
ಉತ್ತಮ ಹವ್ಯಾಸ: ಇದು ನೇರವಾಗಿ ನಿಮಗೆ ಕ್ಯಾನ್ಸರ್ ಎದುರಿಸುವ ಶಕ್ತಿ ತುಂಬುತ್ತದೆ. ತಂಬಾಕು ಸೇವನೆಯಿಂದ ಸಂಪೂರ್ಣವಾಗಿ ದೂರವಿರುವುದು, ಮದ್ಯಪಾನ ತಗ್ಗಿಸುವುದು ಇದರಲ್ಲಿ ಮೊದಲ ಹೆಜ್ಜೆ. ಸಂಪೂರ್ಣ ಪೂಷಕಾಂಶಗಳುಳ್ಳ, ಹೆಚ್ಚು ಪ್ರಮಾಣದ ಸಸ್ಯಜನ್ಯ ಆಹಾರ ಸೇವನೆಗೆ ಆದ್ಯತೆ ಕೊಡಿ. ಎಚ್‌ಪಿವಿ ಮತ್ತು ಹೆಪಟೈಟಿಸ್ ಬಿ ಲಸಿಕೆ ಹಾಕಿಸಿಕೊಳ್ಳಿ.
ನನ್ನ ರೋಗಿಗಳೇ ನನಗೆ ಶಿಕ್ಷಕರು. ವಿಜ್ಞಾನದ ಕಡೆಗಿನ ಪಯಣದಲ್ಲಿ ನೀವು ನಮ್ಮ ಮಾರ್ಗದರ್ಶಕರು, ನಿಮ್ಮ ಚೇತರಿಕೆಯು ಕೇವಲ ರೋಗಪತ್ತೆ ಮತ್ತು ಚಿಕಿತ್ಸೆ ಕುರಿತಷ್ಟೇ ಹೇಳುವುದಿಲ್ಲ. ಅದು ಕ್ಯಾನ್ಸರ್ ವಿರುದ್ಧದ ಧೈರ್ಯಶಾಲಿ ಹೋರಾಟದ ದ್ಯೋತಕವೂ ಹೌದು. “ಅನನ್ಯತೆಯಿಂದ ಒಗ್ಗೂಡಿʼ ಎಂಬ ಈ ವರ್ಷದ ವಿಶ್ವ ಕ್ಯಾನ್ಸರ್ ದಿನದ ಘೋಷವಾಕ್ಯವನ್ನು ನಿಮ್ಮೊಳಗೆ ಇಳಿಸಿಕೊಳ್ಳಿ. ಈ ಹೋರಾಟದ ಹಾದಿ ಒಂದೇ ಇರಬಹುದು, ಆದರೆ ಈ ಹಾದಿಯಲ್ಲಿ ನೀವು ಒಬ್ಬಂಟಿಗಳಲ್ಲ. ನಿಮ್ಮೊಂದಿಗೆ ಹಲವರಿದ್ದಾರೆ.
ಪ್ರಯೋಗಾಲಯಗಳಲ್ಲಿನ ಸಂಶೋಧಕರು, ಆಸ್ಪತ್ರೆಗಳಲ್ಲಿನ ವೈದ್ಯರು ಮತ್ತು ಕ್ಲಿನಿಕಲ್ ಸಿಬ್ಬಂದಿ, ಮನೆಯಲ್ಲಿರುವ ಕುಟುಂಬಗಳು, ಸಮುದಾಯದೊಳಗೆ ಜಾಗೃತಿ ಮೂಡಿಸುತ್ತಿರುವವರು ಎಲ್ಲರೂ ಈ ಹೋರಾಟದಲ್ಲಿ ಒಂದುಗೂಡಿ ಹೆಜ್ಜೆ ಹಾಕಬೇಕಿದೆ. ವೈಜ್ಞಾನಿಕ ಸಾಕ್ಷ್ಯ ಮತ್ತು ಸಹಾನುಭೂತಿಯೊಂದಿಗೆ ಎಲ್ಲರೂ ಒಟ್ಟಾಗಿ ಮುನ್ನಡೆಯಬೇಕಿದೆ.
ಒಗ್ಗಟ್ಟಿನ ಮುನ್ನಡೆಯುವ ಪ್ರತಿಜ್ಞೆಯನ್ನು ಈ ದಿನ ಮಾಡೋಣ. ಕ್ಯಾನ್ಸರ್ ಕುರಿತು ಸರಿಯಾಗಿ ಜಾಗೃತಿ ಮೂಡಿಸಲು, ಧೈರ್ಯದಿಂದ ಅದನ್ನು ನಿಯಂತ್ರಿಸಲು, ಧೃಢವಾದ ಅನುಕಂಪದೊಂದಿಗೆ ಮುನ್ನಡೆಯಲು ಒಗ್ಗೂಡೋಣ. ಅನನ್ಯತೆಯಿಂದ ಒಗ್ಗೂಡಿದ್ದೇವೆ. ಕ್ಯಾನ್ಸರ್ ವಿರುದ್ಧ ಒಂದಾಗಿದ್ದೇವೆ.
ಲೇಖಕಿ: ಡಾ. ಹೇಮಲತಾ ವಿ., ಮೆಡಿಕಲ್ ಅಂಕಾಲಜಿ ವಿಭಾಗದ ಅಸೋಸಿಯೇಟ್ ಕನ್ಸಲ್ಟೆಂಟ್, ಸಾಗರ್ ಆಸ್ಪತ್ರೆ, ಬನಶಂಕರಿ, ಬೆಂಗಳೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.