ADVERTISEMENT

ಗಡಿನಾಡಿನ ಕಿರು ಗಿರಿಧಾಮ ಪೊಸಡಿ ಗುಂಪೆ

ನವೀನ ಕುಮಾರ್ ಜಿ.
Published 31 ಮಾರ್ಚ್ 2024, 0:30 IST
Last Updated 31 ಮಾರ್ಚ್ 2024, 0:30 IST
ಪೊಸಡಿ ಗುಂಪೆಯ ಮೇಲೆ ತುಂತುರು ಮಳೆಯ ಸಿಂಚನ
ಪೊಸಡಿ ಗುಂಪೆಯ ಮೇಲೆ ತುಂತುರು ಮಳೆಯ ಸಿಂಚನ   

ದೂರದಿಂದ ನುಣ್ಣಗೆ ಕಾಣುವ ಗುಡ್ಡಗಳು, ದಾರಿಯುದ್ದಕ್ಕೂ ಹಬ್ಬಿನಿಂತ ಕುರುಚಲು ಕಾಡು, ಗುಡ್ಡದ ತುದಿ ತಲುಪಿದಾಗ ಮಂಜು ಚುಂಬಿಸಿರುವ ಗಿರಿಶ್ರೇಣಿಗಳ ವಿಹಂಗಮ ನೋಟ, ದೂರದಲ್ಲಿ ಕಾಣುವ ಭೋರ್ಗರೆಯುವ ಅರಬ್ಬಿ ಸಮುದ್ರ...

ಇಂತಹ ಹೃನ್ಮನ ತಣಿಸುವ ದೃಶ್ಯಾನುಭವವನ್ನು ಆಸ್ವಾದಿಸಬೇಕಾದರೆ ಕೇರಳದ ಕಾಸರಗೋಡಿನ ಪೊಸಡಿ ಗುಂಪೆಗೆ ಒಮ್ಮೆ ಭೇಟಿ ನೀಡಲೇಬೇಕು.

ಮಂಗಳೂರಿನಿಂದ 48 ಕಿ.ಮೀ. ದೂರದಲ್ಲಿರುವ ಈ ಕಿರು ಗಿರಿಧಾಮವು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಹೊಂದದಿದ್ದರೂ ಸಾಮಾಜಿಕ ಮಾಧ್ಯಮಗಳಲ್ಲಿ ಈ ಕಿರು ಗಿರಿಧಾಮದ ಬಗೆಗಿನ ಮಾಹಿತಿ ಪಡೆದು ಬರುವವರ ಸಂಖ್ಯೆಯೇ ಹೆಚ್ಚು.

ADVERTISEMENT

ತುಳು ಭಾಷೆಯಲ್ಲಿ ‘ಪೊಸ’ ಎಂದರೆ ಹೊಸತು, ‘ಗುಂಪೆ’ ಎಂದರೆ ಗುಡ್ಡ ಎಂದರ್ಥ. ಹೀಗೆ ಪೊಸಡಿ ಗುಂಪೆ ಪದ ರೂಪುಗೊಂಡಿದೆ. ಸಮುದ್ರಮಟ್ಟದಿಂದ ಅಂದಾಜು 1059 ಅಡಿ ಎತ್ತರದಲ್ಲಿರುವ ಮೂರು ಗುಡ್ಡಗಳು ಸೇರಿದಂತಿರುವ ಈ ಗಿರಿಧಾಮವು ಚಾರಣಪ್ರಿಯರಿಗೂ ಮುದ ನೀಡುವ ಸ್ಥಳ. ಚಾರಣ ತೆರಳುವವರು ನೀರು ಮತ್ತು ತಿನಿಸುಗಳನ್ನು ಮರೆಯದೇ ಕೊಂಡೊಯ್ಯಬೇಕು.

ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸಲು ಇಲ್ಲಿಗೆ ಬರುವವರ ಸಂಖ್ಯೆಯೇ ಜಾಸ್ತಿ. ಬೇಸಗೆಯಲ್ಲಿ ಬರುವವರು ಬೆಳಿಗ್ಗೆ ಅಥವಾ ಸಂಜೆ ಹೊತ್ತಿನಲ್ಲಿ ಬಂದರೆ ಉತ್ತಮ. ಇಲ್ಲದಿದ್ದರೆ ಬಿಸಿಲಿನ ಝಳಕ್ಕೆ ಬಸವಳಿಯಬೇಕಾದೀತು.

ಪೊಸಡಿ ಗುಂಪೆಯ ಒಂದು ಬದಿಯಲ್ಲಿ ರಸ್ತೆ ಹಾದುಹೋಗಿರುವುದರಿಂದ ವಾಹನದಲ್ಲಿ ತೆರಳಿ ಒಂದು ಕಿಲೊಮೀಟರ್‌ ಗುಡ್ಡ ಹತ್ತಿದ್ದರೆ ತುದಿಯನ್ನು ತಲುಪಬಹುದು. ನಡೆದು ಆಯಾಸವಾದರೂ ಗುಡ್ಡದ ಮೇಲಿನಿಂದ ಕಾಣುವ ರಮಣೀಯ ದೃಶ್ಯ ದಣಿವನ್ನು ಮರೆಸುತ್ತದೆ.

ಗುಡ್ಡದ ಮೇಲೆ ನಿಂತರೆ ದೂರದ ಮಂಗಳೂರು, ಕುದುರೆಮುಖ ಗಿರಿಶ್ರೇಣಿಗಳು, ಅರಬ್ಬಿ ಸಮುದ್ರವನ್ನು ಕಾಣಬಹುದು. ಮಳೆಗಾಲದಲ್ಲಿ ತುಂತುರು ಮಳೆಯ ನಡುವೆ ಇಲ್ಲಿಗೆ ತೆರಳಿದರೆ ಹಚ್ಚಹಸಿರಿನ ಹುಲ್ಲುಗಾವಲು ಜೊತೆಗೆ ಮೋಡಗಳು ದೂರದ ಶಿಖರಗಳನ್ನು ಚುಂಬಿಸುವ ಮನಮೋಹಕ ದೃಶ್ಯವನ್ನು ಕಣ್ತುಂಬಹುದು.

ಮಂಜೇಶ್ವರ ತಾಲ್ಲೂಕಿನ ಪೈವಳಿಕೆ ಪಂಚಾಯತ್ ವ್ಯಾಪ್ತಿಯಲ್ಲಿ  ಪೊಸಡಿ ಗುಂಪೆಯ ಬಹುಭಾಗವು ನೆಲೆ ನಿಂತಿದೆ. ಇದು ಜೀವವೈವಿಧ್ಯಗಳ ತಾಣವೂ ಹೌದು.

ಹೀಗೆ ಬನ್ನಿ : ಮಂಗಳೂರಿನಿಂದ ಕಾಸರಗೋಡಿಗೆ ತೆರಳುವ ಹೆದ್ದಾರಿಯಲ್ಲಿ ಬರುವ ಬಂದ್ಯೋಡ್‍ನಿಂದ 19 ಕಿಲೊಮೀಟರ್‌ ಒಳರಸ್ತೆಯಲ್ಲಿ ಸಾಗಿದರೆ ಧರ್ಮತ್ತಡ್ಕ ಸಿಗುತ್ತದೆ. ಅಲ್ಲಿಂದ ಪೊಸಡಿ ಗುಂಪೆಗೆ ತೆರಳಬಹುದು.

2003ರಲ್ಲಿ ತೆರೆಕಂಡಿದ್ದ ವಿನಯನ್ ನಿರ್ದೇಶನದ ‘ವಾರ್ ಆ್ಯಂಡ್ ಲವ್’ ಮಲಯಾಳ ಸಿನಿಮಾವು ಈ ಗುಡ್ಡದಲ್ಲಿ ಚಿತ್ರೀಕರಣಗೊಂಡಿದೆ. ಭಾರತ -ಪಾಕಿಸ್ತಾನ ಯುದ್ಧದ ಕಥಾಹಂದರವನ್ನು ಹೊಂದಿರುವ ಈ ಸಿನಿಮಾದಲ್ಲಿ ಬರುವ  ಪಾಕಿಸ್ತಾನದ ಜೈಲಿನ ಸೆಟ್ ಅನ್ನು ಪೊಸಡಿ ಗುಂಪೆಯಲ್ಲಿ ಹಾಕಲಾಗಿತ್ತು.

ಬ್ರಿಟಿಷರಿಗೂ ನಂಟು: ಪೊಸಡಿ ಗುಂಪೆಯ ತುದಿಯಲ್ಲಿ ಬ್ರಿಟಿಷರು ಸ್ಥಾಪಿಸಿರುವ ‘ಗ್ರೇಟ್ ಟ್ರಿಗ್ನಾಮೆಟ್ರಿಕ್ (ಜಿ.ಟಿ) ಸ್ಟೇಷನ್’ ಇತಿಹಾಸದ ಕುರುಹಾಗಿ ಇಂದಿಗೂ ಕಾಣಸಿಗುತ್ತದೆ. ಬ್ರಿಟಿಷ್ ಸರ್ವೇಯರ್ ವಿಲಿಯಂ ಲ್ಯಾಂಬ್ಟನ್ 1802ರಲ್ಲಿ ಈ ಸುಂದರ ತಾಣದಲ್ಲಿ ಜಿ.ಟಿ ಸ್ಟೇಷನ್ ಸ್ಥಾಪಿಸಿದ್ದಾರೆ ಎನ್ನಲಾಗುತ್ತಿದೆ. ಶಿಖರಗಳ ಎತ್ತರವನ್ನು ಸಮೀಕ್ಷೆ ಮಾಡುವುದಕ್ಕಾಗಿ ಇದನ್ನು ಸ್ಥಾಪಿಸಲಾಗಿದೆ.

ದೂರದಿಂದ ಕಾಣುವ ಪೊಸಡಿ ಗುಂಪೆ. ಚಿತ್ರ: ಕೇರಳ ಪ್ರವಾಸೋದ್ಯಮ ಇಲಾಖೆ
ದೂರದಿಂದ ಕಾಣುವ ಪೊಸಡಿ ಗುಂಪೆ  ಚಿತ್ರ: ಜಯಪ್ರಕಾಶ್ 
ಪೊಸಡಿ ಗುಂಪೆಯ ಮೇಲಿನಿಂದ ಕಾಣುವ ಗಿರಿಶ್ರೇಣಿಗಳ ವಿಹಂಗಮ ನೋಟ ಚಿತ್ರ: ಕೇರಳ ಪ್ರವಾಸೋದ್ಯಮ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.