ಹಿಮಾಲಯದ ಎತ್ತರದ ಶಿಖರಗಳ ನಡುವೆ ಇರುವ ‘ಹರ್ಸಿಲ್ ಕಣಿವೆ’ ಉತ್ತರಾಖಂಡ ರಾಜ್ಯದ ಪ್ರಶಾಂತ ಹಾಗೂ ಅನುಪಮ ಸೌಂದರ್ಯದ ತಾಣ. ಇದು ‘ಗುಪ್ತರತ್ನ’ ಎಂದೇ ಹೆಸರುವಾಸಿಯಾಗಿದೆ. ಈ ಪ್ರವಾಸಿ ತಾಣವು ತನ್ನ ನೈಸರ್ಗಿಕ ಚೆಲುವು, ಹಚ್ಚಹಸಿರಿನ ದೃಶ್ಯ, ದಟ್ಟವಾದ ಪೈನ್ ಕಾಡು ಹಾಗೂ ಪರಿಶುದ್ಧ ನೀರಿನ ಹರಿವಿನಿಂದ ಆಕರ್ಷಿಸುತ್ತದೆ. ಹಿಮಾಚ್ಛಾದಿತ ಬೆಟ್ಟಗಳಿಂದ ಈ ಕಣಿವೆಗೆ ಹರಿದು ಬರುವ ಭಾಗೀರಥಿ ನದಿ ತನ್ನ ಸ್ಪಟಿಕ ಸ್ಪಷ್ಟ ನೀರಿನೊಂದಿಗೆ ಈ ಕಣಿವೆಯಲ್ಲಿ ಪ್ರಕೃತಿಯೊಡನೆ ಬೆಸೆದುಕೊಂಡ ರೀತಿ ಅನನ್ಯವಾದುದು.
ಉತ್ತರಕಾಶಿಯಿಂದ ಗಂಗೋತ್ರಿಗೆ ತೆರಳಿ ಗಂಗಾ ನದಿಯ ಉಗಮ ಸ್ಥಾನಕ್ಕೆ ಭೇಟಿ ನೀಡಿದೆವು. ಅಲ್ಲಿಂದ ಮರಳುವಾಗ ನಮ್ಮ ಟ್ಯಾಕ್ಸಿ ಡ್ರೈವರ್ ಮನಮೋಹಕ ‘ಹರ್ಸಿಲ್ ಕಣಿವೆ’ಯನ್ನು ಭಾರತದ ಸ್ವಿಡ್ಜರ್ಲೆಂಡ್ ಎಂದು ಬಣ್ಣಿಸಿದರು. ಆಗ ನಾವು ಮುಂದಿನ ಪ್ರವಾಸವನ್ನು ಮೊಟಕುಗೊಳಿಸಿ ಕಣಿವೆಯತ್ತ ಪಯಣಿಸಿದೆವು. ಬೆಟ್ಟಗಳ ಅಂಚಿನ ಕಡಿದಾದ ಮಾರ್ಗದಲ್ಲಿ ಜಲಪಾತಗಳು, ತೊರೆಗಳು, ಹಿಮಾವೃತ್ತ ಶಿಖರಗಳ ವಿಹಂಗಮ ನೋಟ ರೋಮಾಂಚನವನ್ನುಂಟು ಮಾಡಿತು. ಆಳೆತ್ತರವಾಗಿ ಬೆಳೆದು ಮೈತುಂಬಿಕೊಂಡ ಸೇಬಿನತೋಟಗಳ ರಮಣೀಯ ದೃಶ್ಯ ಕಣ್ತುಂಬಿಕೊಳ್ಳುತ್ತಿದ್ದಂತೆಯೇ ಸುತ್ತುವ ರಸ್ತೆಯೊಂದಿಗೆ ಹಸಿರುಹಾಸಿನ ಕಣಿವೆಯಲ್ಲಿ ಇಳಿದಾಗ ಕಂಟೋನ್ಮೆಂಟ್ ಪ್ರದೇಶ ಕಾಣುತ್ತದೆ. ಪ್ರವೇಶದ್ವಾರದಲ್ಲಿದ್ದ ದಟ್ಟವಾದ ದೇವದಾರು ಮರಗಳ ಮಧ್ಯದಲ್ಲಿ ಕೆಂಪು ಚಾವಣಿಯ ಕಣಿವೆಯ ಮರದ ಮನೆಗಳಿಗೆ ಹೊಂದಿಕೊಂಡು ಬೆಟ್ಟಗಳ ಬಂಧನದಿಂದ ಭಾಗೀರಥಿ ಶ್ವೇತಧಾರಿಯಾಗಿ ನಾಟ್ಯವಾಡುತ್ತ ಹರಿದು ಬಂದಂತೆ ಭಾಸವಾಗುತ್ತದೆ. ನದಿಯ ಸೇತುವೆ ದಾಟುತ್ತಿರುವಂತೆ ‘ಹರ್ಸಿಲ್ ಕಣಿವೆ’ ಪ್ರದೇಶದ ಪ್ರಶಾಂತ ಸ್ಥಳಕ್ಕೆ ಕಾಲಿಟ್ಟ ಅನುಭವವಾಗುತ್ತದೆ.
‘ಹರ್ಸಿಲ್ ಕಣಿವೆ’ಯು ಈ ರಾಜ್ಯದ ಉತ್ತರಕಾಶಿ ಜಿಲ್ಲೆಯ ಉತ್ತರಕಾಶಿ ಪಟ್ಟಣ ಮತ್ತು ಚಾರ್‌ಧಾಮಗಳಲ್ಲಿ ಒಂದಾದ ಯಾತ್ರಾ ಕ್ಷೇತ್ರ ಗಂಗೋತ್ರಿಯಿಂದ 73 ಕಿಲೋಮೀಟರ್ ದೂರದಲ್ಲಿದ್ದು, ಸಮುದ್ರಮಟ್ಟದಿಂದ 9,000 ಅಡಿ ಎತ್ತರದಲ್ಲಿದೆ. ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್‌ನಿಂದ 280 ಕಿಲೋಮೀಟರ್ ದೂರದಲ್ಲಿದೆ.
ರಮ್ಯ ಗಿರಿಧಾಮ
ಕಣಿವೆಯು ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ನೆಲೆಯಾಗಿದೆ. ಸ್ಥಳೀಯರು ಮುಖ್ಯವಾಗಿ ಭೋಟಿಯಾ ಸಮುದಾಯದವರಾಗಿದ್ದಾರೆ. ವಿಶಿಷ್ಟ ಪದ್ಧತಿಗಳು, ಭಾಷೆ, ಸಾಂಪ್ರದಾಯಿಕ ಉಡುಗೆಗಳಿಂದ ಹೆಸರುವಾಸಿಯಾಗಿರುವ ಇವರ ಸಂಸ್ಕೃತಿಯು ಹರ್ಸಿಲ್ ಗಡಿ ಹಂಚಿಕೊಂಡಿರುವ ಟಿಬೆಟ್‌ನಂತಿದೆ.
ಈ ಕಣಿವೆ ಮರೆಯಲಾಗದ ಅನುಭವ ನೀಡುವ ನೆಮ್ಮದಿಯ ತಾಣವೆಂಬುದು ಅಲ್ಲಿಗೆ ಭೇಟಿ ನೀಡಿದಾಗ ಗೊತ್ತಾಗುತ್ತದೆ. ಉತ್ತರಾಖಂಡದ ಮೋಡಿ ಮಾಡುವ ಸೌಂದರ್ಯಕ್ಕೆ ಸಾಕ್ಷಿಯಾಗಿರುವ ಭಾಗೀರಥಿ ನದಿ ದಂಡೆಯ ಪುಟ್ಟ ಊರಲ್ಲಿರುವ ಹೋಂ ಸ್ಟೇಗಳು ಬೆಚ್ಚಗಿನ ಆತಿಥ್ಯವನ್ನು ನೀಡುತ್ತವೆ. ಕಣಿವೆಯನ್ನು ಅನ್ವೇಷಿಸಲು ಬಯಸುವವರಿಗೆ, ಚಾರಣಿಗರಿಗೆ ಇಲ್ಲಿ ಹೆಚ್ಚು ಅವಕಾಶಗಳಿವೆ. ಪ್ರಕೃತಿಯ ಸೌಂದರ್ಯದ ಸಾಮರಸ್ಯ, ಸಂಸ್ಕೃತಿಯ ಶ್ರೀಮಂತಿಕೆ ಮತ್ತು ಅತ್ಯಾಸಕ್ತಿಯ ಚಾರಣಿಗರಿಗೆ ಹರ್ಸಿಲ್ ಕಣಿವೆ ಪರಿಪೂರ್ಣ ಸ್ಥಳವಾಗಿದೆ. ಈ ಕಣಿವೆಯ ಸುತ್ತಮುತ್ತಲಿನ ಹಳ್ಳಿಗಳಿಗೆ ಭೇಟಿ ನೀಡುವುದು ಹಿಮಾಲಯದ ಗ್ರಾಮೀಣ ಜೀವನದ ಅಧಿಕೃತ ಅನುಭವ ಒದಗಿಸುತ್ತವೆ. ಗಂಗಾ ನದಿಯ ಮೂಲಕ್ಕೆ ಸಾಗುವ ಗೋಮುಖ ತಪೋವನ, ದೋಡಿತಾಲ್, ಧರಾಲಿಯಾ ಚಾರಣ ಮಾರ್ಗ, ಕೇದಾರ್ತಾಲ್ ಟ್ರೆಕ್ಕಿಂಗ್, ಬಾಸ್ಪಾ ಕಣಿವೆ, ಗಂಗೋತ್ರಿಯ ಗಂಗಾದೇವಿಯ ಚಳಿಗಾಲದ ವಾಸಸ್ಥಾನದ ಮುಖ್ವಾಸ್ ಗ್ರಾಮಗಳು ಹಿಮಾಲಯದ ನೈಸರ್ಗಿಕ ಸೌಂದರ್ಯದಿಂದ ಸುತ್ತುವರಿದಿವೆ. ಪರ್ವತ ಪ್ರದೇಶದ ಜನಜೀವನದ ಸಂಪ್ರದಾಯ, ಪಕ್ಷಿ, ಪ್ರಾಣಿ ವೀಕ್ಷಣೆ, ಆಧ್ಯಾತ್ಮಿಕ ಸಾಂತ್ವನ ಬಯಸುವವರಿಗೆ ಇದೊಂದು ಶಾಂತಿಧಾಮ. ಹಿಮಶಿಖರಗಳಿಗೆ ಹತ್ತಿರದಲ್ಲಿರುವ ಈ ತಾಣದಲ್ಲಿ ಶಿಖರಗಳಿಂದ ಇಳಿದು ಬರುವ ಭಾಗೀರಥಿ ನದಿಯ ತೊರೆಗಳ ನಿರಂತರ ಅಲೆಗಳ ನಾದ ಈ ಕಣಿವೆಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.
‘ಹರ್ಸಿಲ್’ ಟಿಬೆಟ್‌ನ ಸ್ವಾಯತ್ತ ಪ್ರದೇಶ ಮತ್ತು ಭಾರತದ ನಡುವಿನ ಹಳೆ ಕಾರವಾನ್ ಹಾದಿಯಲ್ಲಿದೆ. ಭಾರತ-ಚೀನಾ ಗಡಿಯ ಬಳಿಯ ಎಂಟು ಹಳ್ಳಿಗಳ ಸಮೂಹವನ್ನು ಹೊಂದಿದ್ದು, ವಿವಾದಿತ ಭಾರತ-ಚೀನಾ ಗಡಿಗೆ ಸಮೀಪದಲ್ಲಿರುವ ಕಾರಣ ಇದು ಮಿಲಿಟರಿ ಮಹತ್ವವನ್ನು ಪಡೆದಿದೆ. ಈ ಸೇನಾ ಪ್ರದೇಶವು ಗರ್ವಾಲ್ ಸ್ಕೌಟ್ಸ್ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಶಿಬಿರದ ನೆಲೆಯಾಗಿದೆ.
ಸೇಬು ಸೊಬಗು
ಈ ಪ್ರಶಾಂತ ಗಿರಿಧಾಮ ಸೇಬು ಉತ್ಪಾದನೆಗೆ ತುಂಬಾ ಪ್ರಸಿದ್ಧವಾಗಿದೆ. ಬೆಟ್ಟಗಳ ಇಳಿಜಾರಿನ ಕಲ್ಲು ಮಣ್ಣಿನ ಫಲವತ್ತಾದ ನೆಲದಲ್ಲಿ ಸಮೃದ್ಧವಾಗಿ ಬೆಳೆದ ಸೇಬಿನ ತೋಟಗಳನ್ನು ನೋಡುವುದು ಕಣ್ಣಿಗೆ ಹಬ್ಬ. ಈ ಕಣಿವೆಯ ಗ್ರಾಮಗಳಲ್ಲಿ ವಾರ್ಷಿಕ ಹತ್ತು ಸಾವಿರ ಮೆಟ್ರಿಕ್ ಟನ್ ಸೇಬು ಉತ್ಪಾದನೆಯಾಗುತ್ತದೆ. ಇಲ್ಲಿನ ಸೇಬು ಗಿಡಗಳು ಬಹುಕಾಲ ಬಾಳಿಕೆ ಉಳ್ಳವುಗಳಾಗಿದ್ದು, ವಾತಾವರಣದ ಬದಲಾವಣೆ ತಡೆದುಕೊಳ್ಳುವಿಕೆ ಹಾಗೂ ರೋಗನಿರೋಧಕಗಳಾಗಿದ್ದು, ಸೇಬುಗಳು ಸಹ ಬಹುಕಾಲ ಬಾಳಿಕೆ ಬರುತ್ತವೆ. ಇಲ್ಲಿಯ ಸೇಬು ಫಸಲು ಮಾಧುರ್ಯ ಹಾಗೂ ರಸಭರಿತವಾಗಿದ್ದು, ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಯುತ್ತಿದ್ದು ಕೀಟನಾಶಕಗಳಿಂದ ಮುಕ್ತವಾಗಿವೆ. ಸೆಪ್ಟೆಂಬರ್–ಅಕ್ಟೋಬರ್‌ನಲ್ಲಿ ಕೊಯ್ಲು ಮಾಡಲಾಗುತ್ತಿದೆ.
ತನ್ನ ಅದ್ಭುತವಾದ ನೈಸರ್ಗಿಕ ಭೂದೃಶ್ಯಗಳು ಮತ್ತು ಸೇಬಿನತೋಟಗಳಿಗೆ ಹೆಸರುವಾಸಿಯಾದ ಈ ಕಣಿವೆ ಚಲನಚಿತ್ರ ನಿರ್ಮಾಪಕರು, ನಿರ್ದೇಶಕರನ್ನು ಆಕರ್ಷಿಸುವ ಜನಪ್ರಿಯ ತಾಣವಾಗಿದೆ. ಹಲವು ಸಿನಿಮಾಗಳು ಮತ್ತು ವೆಬ್ ಸರಣಿಗಳು ಈ ಕಣಿವೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಚಿತ್ರೀಕರಣ ಮಾಡಿವೆ. ಎಂಬತ್ತರ ದಶಕದಲ್ಲಿ ಬಾಲಿವುಡ್ ನಿರ್ಮಾಪಕ ರಾಜ್ ಕಪೂರ್ ನಿರ್ದೇಶನದ ‘ರಾಮ್ ತೇರಿ ಗಂಗಾ ಮೈಲಿ’ ಸೂಪರ್ ಹಿಟ್ ಚಿತ್ರದ ಹಲವು ಭಾಗಗಳನ್ನು ಹರ್ಸಿಲ್‌ನಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರದ ಹಳ್ಳಿಯಲ್ಲಿದ್ದ ಅಂಚೆ ಕಚೇರಿಯನ್ನು ಇಂದಿಗೂ ನೋಡಬಹುದು. ನಿರ್ದೇಶಕ ಓಮಂಗ್ ಕುಮಾರ್ ನಿರ್ದೇಶಿಸಿದ ವಿವೇಕ್ ಒಬೆರಾಯ್ ಅಭಿನಯದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಯೋಪಿಕ್ ಈ ಕಣಿವೆ, ಗಂಗಾ ಘಾಟ್, ಧರಾಲಿ ಬಜಾರ್, ಮುಖ್ವಾ ಗ್ರಾಮ ಸಂಪರ್ಕಿಸುವ ತೂಗು ಸೇತುವೆ ಬಳಿ ಚಿತ್ರೀಕರಿಸಲಾಗಿದೆ. ಹರ್ಸಿಲ್ ನೆಲೋಂಗ್ ಕಣಿವೆಯು ಟಿಬೆಟ್ ಪ್ರದೇಶದೊಂದಿಗೆ ತನ್ನ ಗಡಿಗಳನ್ನು ಹಂಚಿಕೊಂಡಿರುವ ಹರ್ಸಿಲ್‌ನ ನೆರೆಹೊರೆಯಲ್ಲಿರುವ ಮತ್ತೊಂದು ಪ್ರವಾಸಿ ತಾಣವಾಗಿದೆ.
ತಲುಪುವುದು ಹೇಗೆ?
ಈ ಕಣಿವೆಗೆ ಅತ್ಯಂತ ರಮಣೀಯ ಮಾರ್ಗವೆಂದರೆ ಉತ್ತರಾಖಂಡದ ಪ್ರಮುಖ ನಗರಗಳಾದ ಡೆಹ್ರಾಡೂನ್, ಋಷಿಕೇಶದಿಂದ ರಸ್ತೆ ಮೂಲಕ ತಲುಪಬಹುದು. ಡೆಹ್ರಾಡೂನ್ ರೈಲು ಹಾಗೂ ವಿಮಾನ ನಿಲ್ದಾಣದಿಂದ ಹರ್ಸಿಲ್‌ಗೆ ಟ್ಯಾಕ್ಸಿ ಅಥವಾ ಬಸ್ ಮೂಲಕ ಪ್ರಯಾಣಿಸಬಹುದಾಗಿದೆ. ಹಿಮಾಲಯದ ಸಂಪೂರ್ಣ ನೋಟ, ಪ್ರಕೃತಿಯ ಆಹ್ಲಾದಕರ ವಾತಾವರಣದ ಸವಿ ಸವಿಯಲು ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಪ್ರವಾಸ ಸೂಕ್ತ. ಹಿಮಕ್ರೀಡೆ, ಹಿಮದ ಅದ್ಭುತ ಲೋಕ ವೀಕ್ಷಿಸಲು ಡಿಸೆಂಬರ್‌ನಿಂದ ಫೆಬ್ರುವರಿ ತಿಂಗಳವರೆಗೆ ಭೇಟಿ ನೀಡಬಹುದು. ಸಂಭಾವ್ಯ ಭೂಕುಸಿತ, ಮಳೆಯಿಂದಾಗಿ ರಸ್ತೆ ತಡೆ ಉಂಟಾಗುವ ಸಾಧ್ಯತೆ ಇರುವುದರಿಂದ ಜುಲೈನಿಂದ ಸೆಪ್ಟೆಂಬರ್‌ವರೆಗೆ ಪ್ರವಾಸ ಮಾಡದಿರುವುದು ಒಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.