ADVERTISEMENT

ಬೆಂಗಳೂರಿಗೆ ಹತ್ತಿರವಿರುವ ಈ ಸ್ಥಳಗಳ ಚಾರಣಕ್ಕೆ ಆನ್‌ಲೈನ್ ಬುಕಿಂಗ್ ಮಾಡಲೇಬೇಕು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಡಿಸೆಂಬರ್ 2025, 14:44 IST
Last Updated 16 ಡಿಸೆಂಬರ್ 2025, 14:44 IST
<div class="paragraphs"><p>ಚಾರಣ</p></div>

ಚಾರಣ

   

ಮಂಜು ಮುಚ್ಚಿದ ಹಸಿರು ಗುಡ್ಡಗಳ ನಡುವೆ ನಡೆದು ಸಾಗುವುದೇ ಚೆಂದದ ಅನುಭವ. ಚಾರಣ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರಕೃತಿಯ ನಡುವೆ ಕಡಿದಾದ ದಾರಿಯಲ್ಲಿ ಸಾಗಿ ಗಮ್ಯ ತಲುಪಿದಾಗ ಅಪ್ಪಿಕೊಳ್ಳುವ ತಂಗಾಳಿಯ ಹಿತಾನುಭವ ಅನುಭವಿಸಿದರೆ ಸ್ವರ್ಗ. ಅದರಲ್ಲೂ ಬೆಟ್ಟವೊಂದರ ತುದಿಯಲ್ಲಿ ನಿಂತು ಮೂಡಣದಲ್ಲಿ ಕೆಂಪೇರಿಸಿ ಉದಯಿಸುವ ಬಾಲಸೂರ್ಯನನ್ನು ಕಣ್ತುಂಬಿಕೊಳ್ಳುವುದೇ ಆನಂದ.

ನಿತ್ಯ ಕೆಲಸ ಒತ್ತಡ, ವಾಹನಗಳ ಗೌಜಿಯಿಂದ ದೂರವಾಗಿ ಪ್ರಶಾಂತ ಸ್ಥಳದಲ್ಲಿ ಸಮಯ ಕಳೆಯುವುದಕ್ಕೆ ಅನೇಕ ಬೆಂಗಳೂರಿಗರು ಹತ್ತಿರ ಚಾರಣದ ಜಾಗಗಳಿಗೆ ಹೋಗುತ್ತಾರೆ.

ADVERTISEMENT

ಕೆಲವು ಸ್ಥಳಗಳಲ್ಲಿ ಉಚಿತ ಪ್ರವೇಶವಿದ್ದರೆ, ಇನ್ನೂ ಕೆಲವು ಜಾಗಗಳಲ್ಲಿ ಚಾರಣ ಮಾಡಬೇಕೆಂದರೆ ಒಂದು ದಿನ ಮುಂಚಿತವಾಗಿಯೇ ಆನ್‌ಲೈನ್‌ನಲ್ಲಿ ಬುಕಿಂಗ್‌ ಮಾಡಬೇಕು. ಪ್ರತಿ ವ್ಯಕ್ತಿಗಿಷ್ಟು ಎಂದು ಹಣ ಪಾವತಿಸಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಕರ್ನಾಟಕ ಸರ್ಕಾರದ ಅರಣ್ಯ ವಿಹಾರ ವೆಬ್‌ಸೈಟ್‌ನಲ್ಲಿ ಬುಕಿಂಗ್‌ ಮಾಡಬೇಕು. (ವೆಬ್‌ಸೈಟ್‌ ಲಿಂಕ್–https://aranyavihaara.karnataka.gov.in/)

ಬೆಂಗಳೂರಿಗೆ ಸಮೀಪವಿರುವ ಯಾವ ಜಿಲ್ಲೆಗಳ, ಯಾವ ಜಾಗಕ್ಕೆ ನೋಂದಣಿ ಅಗತ್ಯವಿದೆ, ನೋಂದಣಿ ಹೇಗೆ ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ.

ಬೆಂಗಳೂರು ಗ್ರಾಮಾಂತರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೀವು ಹುಲುಕುಡಿ ಬೆಟ್ಟ ಮತ್ತು ಮಾಕಾಳಿ ದುರ್ಗ ಪ್ರದೇಶಕ್ಕೆ ಚಾರಣ ಮಾಡಬಹುದು.

ಹುಲುಕುಡಿ ಬೆಟ್ಟ: ಬೆಂಗಳೂರಿನಿಂದ 70 ಕಿ. ಮೀ ದೂರದಲ್ಲಿರುವ ಈ ಜಾಗ ಚಾರಣಕ್ಕೆ ಉತ್ತಮವಾಗಿದೆ. ದೇಗುಲ, ಸಣ್ಣ ಕೊಳದಿಂದ ಕೂಡಿರುವ ಈ ಜಾಗ ಪ್ರಶಾಂತ ಅನುಭವವನ್ನು ನೀಡುತ್ತದೆ. ಒಟ್ಟು 7 ರಿಂದ 8ಕಿ.ಮೀ (ಹೋಗಿ ಬರುವ ದೂರ) ಚಾರಣ ಮಾಡಬೇಕಾಗುತ್ತದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 5ರವರೆಗೆ ಚಾರಣಕ್ಕೆ ಅವಕಾಶವಿದೆ.

ಮಾಕಾಳಿ ದುರ್ಗ: 4 ರಿಂದ 5 ಕಿ.ಮೀ ಚಾರಣದ ಮಾರ್ಗವಿರುವ ಮಾಕಾಳಿ ದುರ್ಗ, ಒಂದು ದಿನದಲ್ಲಿ ಬೆಂಗಳೂರಿನಿಂದ ಹೋಗಿಬರಲು ಉತ್ತಮ ತಾಣವಾಗಿದೆ. ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿ ಈ ಜಾಗವಿದೆ. ಬೆಟ್ಟದ ತುದಿಯಲ್ಲಿರುವ ಶಿವನ ದೇವಾಲಯ ಚಾರಣದ ಸುಸ್ತನ್ನು ಮರೆಸುತ್ತದೆ

ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀವು ಕೈವಾರ ಬೆಟ್ಟ ಮತ್ತು ಸ್ಕಂದಗಿರಿಗೆ ಚಾರಣವನ್ನು ಕೈಗೊಳ್ಳಬಹುದು.

ಕೈವಾರ ಬೆಟ್ಟ: ಕೈವಾರ ತಾತಯ್ಯ ಅವರ ಊರಾದ ಕೈವಾರದಲ್ಲಿರುವ ಬೆಟ್ಟ ಚಾರಣಕ್ಕೆ ಹೆಸರುವಾಸಿಯಾಗಿದೆ. ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿರುವ ಈ ಜಾಗ ಸೂರ್ಯೋದಯ ವೀಕ್ಷಣೆಗೆ ಉತ್ತಮವಾಗಿದೆ. ಒಟ್ಟು 4 ಕಿ.ಮೀ ದೂರದ ಚಾರಣ ಇಲ್ಲಿ ಮಾಡಬಹುದು. ಆದರೆ ತುಸು ಕಠಿಣ ಹಾದಿಯಲ್ಲಿ ಸಾಗಬೇಕು.

ಸ್ಕಂದಗಿರಿ ಬೆಟ್ಟ: ಮೋಡಗಳ ಚಲನೆ, ತಣ್ಣನೆಯ ಗಾಳಿ ಇವುಗಳನ್ನು ಅನುಭವಿಸಬೇಕು, ಚಾರಣ ಮಾಡಬೇಕು ಎನ್ನುವುದಾದರೆ ಸ್ಕಂದಗಿರಿಗೆ ಹೋಗಬೇಕು. ಸೂರ್ಯೋದಯ ಚಾರಣಕ್ಕೆ ಇದು ಉತ್ತಮ ಜಾಗವಾಗಿದೆ.

ರಾಮನಗರ ಜಿಲ್ಲೆ

ರಾಮನಗರ ಜಿಲ್ಲೆಯಲ್ಲಿ ಬಿದಿರು ಕಟ್ಟೆ ಮತ್ತು ಸಾವನದುರ್ಗ ಪ್ರದೇಶಗಳಿಗೆ ಚಾರಣ ಮಾಡಬಹುದು.

ಬಿದಿರುಕಟ್ಟೆ: ಬೆಂಗಳೂರಿನಿಂದ 65 ಕಿ.ಮೀ ದೂರದಲ್ಲಿರುವ ಬಿದಿರುಕಟ್ಟೆ ಸ್ಥಳ ಚಾರಣಕ್ಕೆ ಉತ್ತಮ ಸ್ಥಳವಾಗಿದೆ. 5 ಕಿ. ಮೀ ಚಾರಣದ ಮಾರ್ಗವಾಗಿದೆ. ತುಸು ಕಠಿಣ ಹಾದಿಯ ಚಾರಣ ಇದಾಗಿದೆ.

ಸಾವನದುರ್ಗ ಬೆಟ್ಟ: ಏಷ್ಯಾದ ಅತಿದೊಡ್ಡ ಏಕಶಿಲಾ ಬೆಟ್ಟಗಳಲ್ಲಿ ಒಂದಾಗಿರುವ ಸಾವನದುರ್ಗ ಸಾಹಸ ಪ್ರಿಯರಿಗೆ ಮತ್ತು ಪ್ರಕೃತಿ ಆನಂದಿಸುವವರಿಗೆ ನೆಚ್ಚಿನ ತಾಣವಾಗಿದೆ. ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿರುವ ಈ ಬೆಟ್ಟದಲ್ಲಿ 4 ರಿಂದ 5 ಕಿ.ಮೀ ಚಾರಣ ಮಾಡಬೇಕಾಗುತ್ತದೆ. ಸುಮಾರು 2 ಗಂಟೆಯ ಅವಧಿಯನ್ನು ಈ ಚಾರಣ ಬೇಡುತ್ತದೆ.

ಕೋಲಾರ ಜಿಲ್ಲೆ

ಕೋಲಾರ ಜಿಲ್ಲೆಯಲ್ಲಿ ಅಂತರಗಂಗೆ ಬೆಟ್ಟಕ್ಕೆ ಚಾರಣ ಮಾಡಬಹುದು. ಆನ್‌ಲೈನ್‌ ಬುಕಿಂಗ್‌ ಅಗತ್ಯವಾಗಿದೆ.

5 ರಿಂದ 6 ಕಿ.ಮೀ ಚಾರಣ ಮಾಡಬಹುದು. ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿರುವ ಈ ಜಾಗದಲ್ಲಿ ಕಾಶಿ ವಿಶ್ವನಾಥ ದೇಗುಲವಿದೆ. ಇದನ್ನು ದಕ್ಷಿಣ ಕಾಶಿ ಎಂತಲೂ ಕರೆಯುತ್ತಾರೆ. ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ.

ತುಮಕೂರು ಜಿಲ್ಲೆ

ತುಮಕೂರು ಜಿಲ್ಲೆಯಲ್ಲಿ ಚಿನಗ ಬೆಟ್ಟ, ದೇವರಾಯದುರ್ಗ, ರಾಮದೇವರ ಬೆಟ್ಟ, ಸಿದ್ಧರ ಬೆಟ್ಟಕ್ಕೆ ಭೇಟಿ ನೀಡಲು ಆನ್‌ಲೈನ್‌ ಬುಕಿಂಗ್‌ ಮಾಡಿಕೊಳ್ಳಬೇಕು.

ಚಿನಗ ಬೆಟ್ಟ: ಬೆಂಗಳೂರಿನಿಂದ 80 ಕಿ.ಮೀ ದೂರದಲ್ಲಿರುವ ಚಿನಗ ಬೆಟ್ಟದಲ್ಲಿ 4 ಕಿ.ಮೀ. ಚಾರಣ ಮಾಡಬಹುದು. ಇಲ್ಲಿ ಆಂಜನೇಯಸ್ವಾಮಿ ದೇಗುಲವಿದೆ.

ದೇವರಾಯದುರ್ಗ: ವಿಜಯನಗರ ಕಾಲದ ರಾಜರು ಆಳಿದ್ದರು ಎನ್ನಲಾಗುವ ದೇವರಾಯನದುರ್ಗ ಪ್ರದೇಶ ಚಾರಣಕ್ಕೆ ಹೆಸರುವಾಸಿಯಾಗಿದೆ. ನರಸಿಂಹ ದೇವರ ದೇಗುಲವನ್ನು ಇಲ್ಲಿ ಕಾಣಬಹುದು. ಇಲ್ಲಿ 200ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಿ ಮೇಲಕ್ಕೆ ಹೋಗಬೇಕು.

ರಾಮದೇವರ ಬೆಟ್ಟ: ಹಿಂದಿಯ ಶೋಲೆ ಸಿನಿಮಾ ಚಿತ್ರೀಕರಣಗೊಂಡ ರಾಮದೇವರ ಬೆಟ್ಟ ಚಾರಣಕ್ಕೂ ಜನಪ್ರಿಯವಾಗಿದೆ. ಬೆಂಗಳೂರಿನಿಂದ 50 ಕಿ.ಮೀ ದೂರದಲ್ಲಿದೆ. ಸುಮಾರು 7 ಕಿ.ಮೀ ಚಾರಣವನ್ನು ಇಲ್ಲಿ ಮಾಡಬಹುದು.

ಸಿದ್ಧರ ಬೆಟ್ಟ: 3 ರಿಂದ 5 ಕಿ.ಮೀ ಚಾರಣ ಮಾಡಬಹುದಾದ ಸಿದ್ಧರ ಬೆಟ್ಟ ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿದೆ. ಆರಾಮದಲ್ಲಿ ಚಾರಣ ಮಾಡಬಹುದಾದ ಜಾಗ ಇದಾಗಿದೆ.

ಆನ್‌ಲೈನ್‌ನಲ್ಲಿ ನೋಂದಣಿ ಹೇಗೆ?

  • ಕರ್ನಾಟಕ ಸರ್ಕಾರದ ಅರಣ್ಯ ವಿಹಾರ ವೆಬ್‌ಸೈಟ್‌ನಲ್ಲಿ ಬುಕಿಂಗ್‌ ಮಾಡಬೇಕು. (ವೆಬ್‌ಸೈಟ್‌ ಲಿಂಕ್–https://aranyavihaara.karnataka.gov.in/).

  • ಮೊದಲು ನೀವು ಭೇಟಿ ನೀಡಬೇಕಾದ ಸ್ಥಳ ಯಾವ ಜಿಲ್ಲೆಯಲ್ಲಿದೆ ಎನ್ನುವುದನ್ನು ಆಯ್ಕೆ ಮಾಡಿ ನಂತರ ಸ್ಥಳವನ್ನು ಆಯ್ಕೆ ಮಾಡಿ.

  • ಚಾರಣ ಮಾಡುವ ದಿನಾಂಕ ನಮೂದಿಸಿ. ನಂತರ ಎಷ್ಟು ಸೀಟುಗಳು ಲಭ್ಯವಿವೆ ಎನ್ನುವುದನ್ನು ಪರಿಶೀಲಿಸಿಕೊಳ್ಳಿ.

  • ಬಳಿಕ ಚಾರಣದ ಸಮಯವನ್ನು ಆಯ್ಕೆ ಮಾಡಿ, ಬುಕಿಂಗ್‌ ಮಾಡಿ

  • ಬುಕಿಂಗ್‌ ಮಾಡುವಾಗ ಚಾರಣದಲ್ಲಿ ಪಾಲ್ಗೊಳ್ಳುವ ಪ್ರತಿ ವ್ಯಕ್ತಿಯ ಗುರುತಿನ ಸಂಖ್ಯೆ (ಆಧಾರ್, ಪ್ಯಾನ್‌ ಇತರ), ಫೋನ್‌ ನಂಬರ್ ನಮೂದಿಸಬೇಕು.

  • ಕೊನೆಯಲ್ಲಿ ಅಲ್ಲಿ ತೋರಿಸಿದ ಹಣ ಪಾವತಿಸಿದರೆ ಬುಕಿಂಗ್‌ ಆಗುತ್ತದೆ.

ಅರಣ್ಯ ವಿಹಾರ ವೆಬ್‌ಸೈಟ್‌ ಪುಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.