ADVERTISEMENT

ವೀರಗಲ್ಲಿಗೆ ಈ ಬಾರಿ ಮಳೆ ವಿಘ್ನ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 20:00 IST
Last Updated 13 ಆಗಸ್ಟ್ 2019, 20:00 IST
ಪ್ರತಿಷ್ಠಾಪನೆಗೆ ಸಿದ್ಧವಾದ ವೀರಗಲ್ಲು 
ಪ್ರತಿಷ್ಠಾಪನೆಗೆ ಸಿದ್ಧವಾದ ವೀರಗಲ್ಲು    

ದಕ್ಷಿಣ ಭಾರತದ ಅತಿ ಎತ್ತರದ ಏಕಶಿಲಾ ಸೈನಿಕ ವೀರಗಲ್ಲು ಪ್ರತಿಷ್ಠಾಪನೆ ಕೆಲಸಕ್ಕೆ ಮಳೆ ಅಡ್ಡಿಯಾಗಿದೆ.

ದೇವನಹಳ್ಳಿಯ ಚಪ್ಪರಕಲ್ಲುಬಳಿಯ ಕೊಯಿರಾ ಗ್ರಾಮದ ಕಲ್ಲುಗಣಿಯಿಂದ ತಂದಿರುವ 78 ಅಡಿ ಎತ್ತರ,450 ಟನ್‌ ತೂಕದ ವೀರಗಲ್ಲು ರಾಷ್ಟ್ರೀಯ ಸೈನಿಕರ ಸ್ಮಾರಕ ಉದ್ಯಾನಕ್ಕೆ ಬಂದು ತಿಂಗಳ ಮೇಲಾಗಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ಆಗಸ್ಟ್‌ 15ರೊಳಗಾಗಿ ವೀರಗಲ್ಲು ಆಗಸದೆತ್ತರಕ್ಕೆ ತಲೆ ಎತ್ತಿ ನಿಲ್ಲಬೇಕಿತ್ತು. ಎಂಟು ವರ್ಷಗಳಿಂದ ಒಂದಿಲ್ಲ ಒಂದು ವಿಘ್ನ ಎದುರಿಸುತ್ತ ಬಂದಿರುವ ಸ್ಮಾರಕ ಶಿಲೆಗೆ ಈ ಬಾರಿ ಮಳೆ ಅಡ್ಡಿಯಾಗಿದೆ.

ADVERTISEMENT

ಗುಜರಾತ್‌ ಮೂಲದ ‘ನಬ್ರೋಸ್‌ ಟ್ರಾನ್ಸ್‌ಪೋರ್ಟ್ ಪ್ರೈವೇಟ್‌ ಲಿಮಿಟೆಡ್‌ ಕಂಪನಿ’ವಿಶೇಷವಾಗಿ ವಿನ್ಯಾಸಗೊಳಿಸಿದ 240 ಗಾಲಿಗಳ ಬೃಹತ್‌ ಲಾರಿಯಲ್ಲಿ ವೀರಗಲ್ಲನ್ನು ಗಣಿಯಿಂದಉದ್ಯಾನಕ್ಕೆ ಸಾಗಿಸಿತ್ತು.

ಅದನ್ನು ಪ್ರತಿಷ್ಠಾಪಿಸುವಗುತ್ತಿಗೆಯನ್ನು ಬ್ರಿಟನ್‌ ಮೂಲದ ಫಾಜೋಲಿ (Fagioli) ಕಂಪನಿಗೆ ವಹಿಸಲಾಗಿದೆ. ಭಾರಿ ಭಾರವಾದ ಈ ಶಿಲೆಯನ್ನು ಎತ್ತಿ ನಿಲ್ಲಿಸಲು ಬೇಕಾದ ಹೈಡ್ರಾಲಿಕ್‌ ಲಿಫ್ಟ್‌, ಕ್ರೇನ್‌ ಮತ್ತಿತರ ಬೃಹತ್‌ ಯಂತ್ರೋಪಕರಣಗಳನ್ನು ಕಂಪನಿಯ ಸಿಬ್ಬಂದಿ ಅದಾಗಲೇ ಮುಂಬೈನಿಂದ ತಂದು ಜೋಡಿಸಿಟ್ಟುಕೊಂಡಿದ್ದಾರೆ.

ಎತ್ತಿ ನಿಲ್ಲಿಸುವದೇ ಸವಾಲು!

ಲಾರಿಯಲ್ಲಿದ್ದ ವೀರಗಲ್ಲನ್ನು ಸುರಕ್ಷಿತವಾಗಿ ಎತ್ತಿ ತಂದು ಉದ್ಯಾನದೊಳಗಿನ ನಿಗದಿತ ಸ್ಥಳದಲ್ಲಿಡಲಾಗಿದೆ.ಈಗ ಅದನ್ನು ಎತ್ತಿ ನಿಲ್ಲಿಸುವುದೊಂದೇ ಬಾಕಿ. ಸಮಸ್ಯೆ ಎದುರಾಗಿರುವುದು ಇಲ್ಲಿಯೇ!

ಶಿಲೆಯನ್ನು ಹೊರಗಿನಿಂದ ಗಟ್ಟಿಯಾಗಿ ಹಿಡಿದು ನಿಲ್ಲಿಸಲು ಕಬ್ಬಿಣ ಕಂಬಗಳ ಚೌಕಟ್ಟು‘ಜೆ’ ಸ್ಟ್ರಕ್ಚರ್‌ನ್ನು ಈಗಾಗಲೇ ನಿರ್ಮಿಸಿಟ್ಟುಕೊಳ್ಳಲಾಗಿದೆ. ಆರು ಟನ್‌ ಬಾರ ಎತ್ತುವ ಯಂತ್ರಗಳು ಈಗಾಗಲೇ ಸ್ಥಳದಲ್ಲಿವೆ. ಚೌಕಟ್ಟಿಗೆ ಅಳವಡಿಸಲಾಗಿರುವ ಬೃಹತ್‌ ಹೈಡ್ರಾಲಿಕ್‌ ಜಾಕ್‌ ನೆರವಿನಿಂದ ಕಲ್ಲನ್ನು ನೇರವಾಗಿ ನಿಲ್ಲಿಸುವ ಯೋಜನೆ ತಂತ್ರಜ್ಞರದ್ದು.

ಜಿಗಣಿಯಿಂದ ಎರಡು ‘ಜೆ‘ ಸ್ಟ್ರಕ್ಚರ್‌ ಹೈಡ್ರಾಲಿಕ್‌ ಜಾಕ್‌ ಬರುವುದು ಬಾಕಿ ಇದೆ. ಸಾವಿರ ಟನ್‌ ಎತ್ತುವ ಸಾಮರ್ಥ್ಯವಿರುವ ಜಾಕ್‌ಗಳಿವು. ಅವು ಬಂದ ನಂತರ ಹತ್ತು ದಿನ ಬೇಕಾಗಬಹುದು ಎಂದು ಸ್ಥಳದಲ್ಲಿದ್ದ ಕಂಪನಿಯ ತಂತ್ರಜ್ಞ ಸಿಬ್ಬಂದಿ ಉಮೇಶ್‌ ‘ಮೆಟ್ರೊ’ಗೆ ತಿಳಿಸಿದರು.

ಇಂಥ ಹಲವಾರು ಬೃಹತ್‌ ಯೋಜನೆಗಳನ್ನು ಚಾಕಚಕ್ಯತೆಯಿಂದ ಯಶಸ್ವಿಯಾಗಿ ನಿರ್ವಹಿಸಿದ ಅನುಭವ ಈ ಕಂಪನಿಗಿದೆ.

ಕಿರಿದಾದ ಜಾಗ ಕೆಲಸಕ್ಕೆ ಅಡ್ಡಿ

ಉದ್ಯಾನದಲ್ಲಿ ಕಿರಿದಾದ ಜಾಗ ಕೆಲಸಕ್ಕೆ ಅಡ್ಡಿಯಾಗಿದೆ. ಬೃಹತ್‌ ವಾಹನಗಳು ಓಡಾಡಲು ಜಾಗವಿಲ್ಲ. ಎಲ್ಲ ಕೆಲಸವನ್ನೂ ಒಟ್ಟೊಟ್ಟಿಗೆ ಮಾಡಲು ಸಾಧ್ಯವಾಗುತ್ತಿಲ್ಲ. ಒಂದು ಕೆಲಸ ಆರಂಭವಾದರೆ ಉಳಿದ ಕೆಲಸ ಸ್ಥಗಿತಗೊಳ್ಳುತ್ತಿವೆ. ಇದರಿಂದ ಕೆಲಸ ವಿಳಂಬವಾಗುತ್ತಿದೆ ಎನ್ನುವುದು ಸಿಬ್ಬಂದಿಯ ಅನುಭವದ ಮಾತು.

ಜಿಟಿ,ಜಿಟಿ ಮಳೆಯಿಂದ ನೆಲ ಒದ್ದೆಯಾಗಿದೆ. ನಾವು ಏನಾದರೂ ಅವಸರ ಮಾಡಿ ಕೆಲಸ ಆರಂಭಿಸಿದರೆ ಭಾರವಾದ ಯಂತ್ರೋಪಕರಣ ನೆಲದಲ್ಲಿ ಹುದುಗಿ ಹೋಗುವ ಸಾಧ್ಯತೆ ಇದೆ. ಶಿಲೆಯನ್ನು ಎತ್ತುವಾಗ ಭಾರದಿಂದ ವಾಹನ ವಾಲುವ ಅಪಾಯ ಇದೆ. ಹೀಗಾಗಿ ಮಳೆ ನಿಂತು, ನೆಲ ಸಂಪೂರ್ಣ ಒಣಗಿದ ಮೇಲೆ ಕಾರ್ಯಾಚರಣೆ ಮುಂದುವರಿಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ಸಿಬ್ಬಂದಿ ಸಮಜಾಯಿಷಿ ನೀಡಿದರು.

2011ರ ಜನವರಿಯಲ್ಲಿ ಸಿದ್ಧವಾಗಬೇಕಿದ್ದ ವೀರಗಲ್ಲು ಯೋಜನೆಯಉಸ್ತುವಾರಿಯನ್ನು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ವಹಿಸಿಕೊಂಡಿದೆ. ಒಂದು ವೇಳೆ ಮಳೆ ಬಿಡುವು ನೀಡದಿದ್ದರೆ ವೀರಗಲ್ಲು ಸ್ಥಾಪನೆ ಮತ್ತಷ್ಟು ಮುಂದಕ್ಕೆ ಹೋಗುವ ಸಾಧ್ಯತೆ ಇದೆ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.