ಮೊಹಮ್ಮದ್ ಶಮಿ
ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ವಿಡಿಯೊ ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೊ ಕೆಳಭಾಗದಲ್ಲಿ ಅವರು ಎನರ್ಜಿ ಡ್ರಿಂಕ್ ಕುಡಿಯುತ್ತಿರುವ ಚಿತ್ರ ಇದೆ. ‘ನಾನು ರೋಝಾ (ರಂಜಾನ್ ಉಪವಾಸ) ಅನ್ನು ಮುರಿದಿದ್ದೇನೆ. ಹಾಗೆ ಮಾಡಲೇಬೇಕೆಂದು ನನ್ನನ್ನು ಒತ್ತಾಯಪಡಿಸಲಾಯಿತು. ಇಲ್ಲದಿದ್ದರೆ ಅವರು ನನ್ನ ವೃತ್ತಿಜೀವನವನ್ನು ನಾಶಪಡಿಸುತ್ತಿದ್ದರು. ನನ್ನನ್ನು ಕ್ಷಮಿಸಿ’ ಎಂದು ಶಮಿ ಹೇಳಿದ್ದಾರೆ ಎಂದು ವಿಡಿಯೊ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಅದು ಸುಳ್ಳು ಸುದ್ದಿ.
ವಿಡಿಯೊ ಅನ್ನು ಇನ್‌ವಿಡ್ ಟೂಲ್ ಮತ್ತು ಗೂಗಲ್ ಲೆನ್ಸ್ ಮೂಲಕ ಪರಿಶೀಲನೆ ಮಾಡಿದಾಗ, ಹಲವರು ಇದೇ ವಿಡಿಯೊ ಅನ್ನು ಹಂಚಿಕೊಂಡಿರುವುದು ಕಂಡುಬಂತು. ಸೂಕ್ಷ್ಮವಾಗಿ ನೋಡಿದಾಗ, ವಿಡಿಯೊದಲ್ಲಿ ತುಟಿ ಚಲನೆಗೂ ಧ್ವನಿಗೂ ಹೊಂದಾಣಿಕೆ ಆಗದೇ ಇರುವುದು ಕಂಡಿತು. ಮತ್ತಷ್ಟು ಹುಡುಕಿದಾಗ, ವಿಡಿಯೊದಲ್ಲಿರುವ ಕುರ್ತಾ ಮತ್ತು ಟೋಪಿಯನ್ನೇ ಶಮಿ ಅವರು ಧರಿಸಿರುವ ಚಿತ್ರಗಳು ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಿಕ್ಕವು. ಚಿತ್ರದ ಜತೆಗೆ ಅವರ ಖಾತೆಯಲ್ಲಿ ಒಂದು ಪೋಸ್ಟ್ (2024ರ ಏ.11) ಇದ್ದು, ಅದರಲ್ಲಿ ಅವರು ‘ಎಲ್ಲರಿಗೂ ಈದ್ ಮುಬಾರಕ್’ ಎಂದು ಶುಭ ಹಾರೈಸಿದ್ದಾರೆ. ಶಮಿ ಅವರು ರಂಜಾನ್ ಉಪವಾಸ ಮುರಿದದ್ದಕ್ಕೆ ಕ್ಷಮೆ ಯಾಚಿಸಿದ ಬಗ್ಗೆ ಎಲ್ಲೂ ಅಧಿಕೃತ ಪುರಾವೆ ಇಲ್ಲ. ಅವರ ಹಳೆಯ ವಿಡಿಯೊ ಅನ್ನು ಬದಲಾಯಿಸಿ, ಸುಳ್ಳು ಪ್ರತಿಪಾದನೆ ಮಾಡಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.